ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್‍ನ ಒಡೆತನವನ್ನು ಪಡೆದುಕೊಂಡ ಬಳಿಕ ಸದಾ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಲೇ ಇದೆ. ಈ ಎಲ್ಲ ಬೆಳವಣಿಗೆಯ ನಡುವೆಯೇ ಟ್ವಿಟ್ಟರ್‍ಗೆ ಪರ್ಯಾಯವಾಗಿ, ಅದೇ ರೀತಿಯಲ್ಲಿರುವ ಹೊಸ ಆ್ಯಪ್ ಅನ್ನು ಬಿಡುಗಡೆಗೊಳಿಸಲು ಫೇಸ್‌ಬುಕ್ ಮಾತೃಸಂಸ್ಥೆ ‘ಮೆಟಾ’ ಮುಂದಾಗಿದೆ.
‘ಥ್ರೆಡ್’ ಎಂಬ ಹೆಸರಿನ ಈ ಹೊಸ ಆ್ಯಪ್, ಜುಲೈ 6ರಂದು ಬಿಡುಗಡೆಯಾಗುವ ಸುದ್ದಿ ಹರಿದಾಡಿದೆ. ಈ ಸುದ್ದಿ ಟ್ವಿಟರ್‍ಗೆ ಹೊಸ ತಲೆನೋವಾಗುವ ಸಾಧ್ಯತೆ ಇದೆ.
ಈ ಹೊಸ ಆ್ಯಪ್ ಅನ್ನು ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಲಿಂಕ್ ಮಾಡುವ ಮೂಲಕ ಉಪಯೋಗಿಸಬಹುದು ಮತ್ತು ಇನ್‌ಸ್ಟಾದ ಯೂಸರ್ ನೇಮ್ ಅನ್ನೇ ‘ಥ್ರೆಡ್’ನಲ್ಲೂ ಮುಂದುವರೆಸಬಹುದು. ಆದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ. ಬದಲಾಗಿ ಆ್ಯಪಲ್‌ನ ಆ್ಯಪ್ ಸ್ಟೋರ್‌ನ ಪಟ್ಟಿಯಲ್ಲಿ ಇದು ಕಾಣಿಸಿಕೊಂಡಿದೆ.
ಟೆಸ್ಲಾ ಸಿಇಒ ಕೂಡ ಆಗಿರುವ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇದರ ನುಡವೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ದಿನೇ ದಿನೇ ಹೊಸ ಹೊಸ ನಿಯಮ ತಂದು ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿ ಖಾತೆದಾರರನ್ನು ಕಳೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಟ್ವಿಟ್ಟರ್ ಪ್ರತಿ ನಿತ್ಯ ನಿಗದಿತ ಪೋಸ್ಟ್‌ಗಳ ವೀಕ್ಷಣೆ ಮಾಡುವ ಮಿತಿಯನ್ನು ಕೂಡ ಹೇರಿತ್ತು. ಈ ಎಲ್ಲ ಬೆಳವಣಿಗೆಗಳ ಲಾಭವನ್ನು ಪಡೆಯಲು ಮಾರ್ಕ್ ಝುಕರ್‍ಬರ್ಗ್ ಮಾಲೀಕತ್ವದ ಮೆಟಾ ಸಂಸ್ಥೆ ಹೊಸ ಆ್ಯಪ್ ಬಿಡುಗಡೆ ಮಾಡಲು ಸಜ್ಜಾಗಿದೆ.