ರಾಮನಗರ ಜಿಲ್ಲೆಯಲ್ಲಿ ರಾಮನ ಹೆಸರಿದೆ. ಭೂಮಿ ಇರುವವರೆಗೂ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಹೆಸರು ತೆಗೆಯುವವರು ಸರ್ವನಾಶ ಆಗುತ್ತಾರೆ. 2028ರ ಒಳಗಾಗಿ ಜಿಲ್ಲೆಗೆ ಮತ್ತೆ ರಾಮನಗರ ಹೆಸರು ಬರುತ್ತದೆ. ಅದನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಗಣಿಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, “ಯಾವುದೇ ಕಾರಣಕ್ಕೂ ರಾಮನಗರದಿಂದ ರಾಮನ ಹೆಸರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಿಂದೆ, ರಾಮನಗರ ಜಿಲ್ಲೆಯನ್ನು ರಚನೆ ಮಾಡಿ, ಹೆಸರಿಟ್ಟಾಗ ಯಾರೂ ತಕರಾರು ಮಾಡಲಿಲ್ಲ. ಈಗ, ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಿಸುವ ರಾಜಕಾರಣ ಮಾಡುತ್ತಿದ್ದಾರೆ” ಎಂದು ಹೆಸರು ಹೇಳದೆಯೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
“ರಾಜ್ಯದಲ್ಲಿರುವ ಸರ್ಕಾರ ಮೊದಲು ಕಾನೂನು-ಸುವ್ಯವಸ್ಥೆಯಲ್ಲಿ ಸರಿ ಮಾಡಬೇಕು. ರಾಮನಗರ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಮೊದಲು ನೋಡಬೇಕು. ಹೆಸರು ಬದಲಾವಣೆಯಿಂದ ಭೂಮಿಗೆ ಬೆಲೆ ಬರುವುದಿಲ್ಲ” ಎಂದು ಹೇಳಿದ್ದಾರೆ.