ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ಗೂಂಡಾ, ರೌಡಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆಂದು ಕಿಡಿಕಾರಿರುವ ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಹನೂರು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯತೀಂದ್ರ ಮಾತನಾಡುತ್ತ, “ಗುಜರಾತ್‍ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂತಹವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ, “ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ” ಎಂಬಂತೆ ಹೇಗಾದರೂ ಮಾಡಿ ಬಿಜೆಪಿಯ ರಾಷ್ಟ್ರೀಯ ನಾಯಕರ ವಿರುದ್ಧ ಮಾತನಾಡಿದರೆ ರಾತ್ರೋರಾತ್ರಿ ದೊಡ್ಡ ನಾಯಕ ಆಗಬಹುದು ಎನ್ನುವ ಭ್ರಮೆಯಲ್ಲಿ ಮುಖ್ಯಮಂತ್ರಿಗಳ ಸುಪುತ್ರ ಯತೀಂದ್ರ ಇದ್ದಂತಿದೆ” ಎಂದು ಟೀಕಿಸಿದ್ದಾರೆ.
“ಲೋಕಸಭೆ ಚುನಾವಣೆ ಎದುರಿಸಲು ಯಾವುದೇ ವಿಷಯವಿಲ್ಲದೆ ತಮ್ಮ ತವರು ಜಿಲ್ಲೆ ಮೈಸೂರಿನಲ್ಲೇ ಹೀನಾಯ ಸೋಲಾಗುವ ಹತಾಶೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರಿಗೆ ಮತಿಭ್ರಮಣೆ ಆದಂತಿದ್ದು ಹುಚ್ಚಾಪಟ್ಟೆ ಮಾತನಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ಸಿ ಟಿ ರವಿ ಪ್ರತಿಕ್ರಿಯಿಸಿ, “ಕೇವಲ ಅಪ್ಪನ ಅಧಿಕಾರ, ಹಣ ಬಲದ ಮೇಲೆ ಸಾರ್ವಜನಿಕ ಕ್ಷೇತ್ರಕ್ಕೆ ಬಂದವರಿಗೆ ಕೆಳ ಹಂತದಿಂದ ಬೆಳೆದು ಬಂದ ರಾಷ್ಟ್ರೀಯ ನಾಯಕರ ಬಗ್ಗೆ ತಿಳಿಯುವುದಾದರೂ ಹೇಗೆ ಸಾಧ್ಯ? ಯತೀಂದ್ರ ಸಿದ್ದರಾಮಯ್ಯ ಯಾರು? ಯತೀಂದ್ರ ಅವರ ಐಡೆಂಟಿಟಿಯಾದರೂ ಏನು” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?
ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಯತೀಂದ್ರ ವಿರುದ್ಧ ಹರಿಹಾಯ್ದಿದ್ದು, “ಹಲೋ ಅಪ್ಪಾ ಖ್ಯಾತಿಯ ಯತೀಂದ್ರ ಅವರು ತಮ್ಮ ತಂದೆಯಂತೆ ಸುಳ್ಳು ಹೇಳಿ ಅಪಪ್ರಚಾರ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಶ್ಯಾಡೋ ಸಿಎಂ ಅವರಿಗೆ ಕಾಂಗ್ರೆಸ್ ಗೂಂಡಾಗಳ ಪಟ್ಟಿ ಬೇಕಿದ್ದರೆ ಹೇಳಿ, ಅಂಚೆ ಕಚೇರಿ ಮೂಲಕ ಕಳುಹಿಸಿಕೊಡುತ್ತೇವೆ” ಎಂದು ಲೇವಡಿ ಮಾಡಿದೆ.
“370 ಕಾಯಿದೆಯನ್ನು ರದ್ದು ಮಾಡಿ ದೇಶವನ್ನೇ ಒಟ್ಟುಗೂಡಿಸಿದ ಎದೆಗಾರಿಕೆ ನಮ್ಮ ಗೃಹ ಸಚಿವ ಅಮಿತ್ ಶಾ ಅವರದ್ದು. ಇಂಥ ಗೃಹ ಸಚಿವರ ಬಗ್ಗೆ ಎಲುಬಿಲ್ಲದ ನಾಲಿಗೆಯ ಬಚ್ಚಾ ಮಾತನಾಡುತ್ತಿದ್ದಾನೆ.
ಅಸಲಿ ಗೂಂಡಾಗಳು ಇರುವುದು ಕಾಂಗ್ರೆಸ್‌ದಲ್ಲಿಯೇ, ಆ ದಿನಗಳ ಕೊತ್ವಾಲ್ ಶಿಷ್ಯ ಡಿಸಿಎಂ ಡಿಕೆ ಶಿವಕುಮಾರ್ ಯಾರು? ಕೊಲೆ ಆರೋಪದ ಮೇಲೆ ಗಡಿಪಾರು ಆಗಿರುವ ಶಾಸಕ ವಿನಯ್ ಕುಲಕರ್ಣಿ ಯಾರು? ಯುಬಿ ಸಿಟಿಯಲ್ಲಿ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಯಾರು? ಸಿದ್ದರಾಮಯ್ಯ ವಿರುದ್ಧ ನಿಗಿನಿಗಿ ಕೆಂಡಕಾರುವ ಹರಿಪ್ರಸಾದ್ ಯಾರು? ಮೊದಲು ಉತ್ತರಿಸಿ!” ಎಂದು ವಾಗ್ದಾಳಿ ನಡೆಸಿದೆ.
