ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?

Date:

ಬಿಜೆಪಿಯಂತೆಯೇ ಯುಪಿಎ ಸರ್ಕಾರ ಮಾಡಿದ ಪ್ರಮಾದಗಳನ್ನೂ ಮರೆಯಲಾಗದು. ವಾಜಪೇಯಿ ಗವರ್ನಮೆಂಟ್ ತಂದ ತಿದ್ದುಪಡಿಗಳನ್ನೇ ಯುಪಿಎ ಮುಂದುವರಿಸಿತ್ತು…

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಮೂಲಕ ವಿಭಜನಾ ರಾಜಕಾರಣವನ್ನು ಆರಂಭಿಸಿದ್ದ ಬಿಜೆಪಿ ಸರ್ಕಾರ, ಚುನಾವಣೆ ಹೊಸ್ತಿಲಲ್ಲಿ ಮತ್ತೆ ಸಿಎಎ ವಿಚಾರವನ್ನು ಮುನ್ನೆಲೆಗೆ ತಂದಿದೆ. ಇದರ ಜೊತೆಗೆ ಮಾರ್ಚ್  11ರಂದು ಸರ್ಕಾರ ಪ್ರಕಟಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳು ಚರ್ಚೆಗೆ ಗ್ರಾಸವಾಗಿವೆ.

“ಸ್ಥಳೀಯ ಪೂಜಾರಿ ಸಿಎಎ ಅರ್ಹತಾ ಪ್ರಮಾಣಪತ್ರ ನೀಡಬಹುದು” ಎಂದು ಕೇಂದ್ರ ಗೃಹ ಸಚಿವಾಲಯದ ಸಹಾಯವಾಣಿ ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪೌರತ್ವ ಪಡೆಯಲು ಅರ್ಹತಾ ಪ್ರಮಾಣಪತ್ರ ಕಡ್ಡಾಯವಾಗಿದೆ. ಇದಕ್ಕಾಗಿ ಅರ್ಜಿದಾರನ ಖಚಿತತೆಯನ್ನು ಸ್ಥಳೀಯ ಪೂಜಾರಿ ಮಾಡಬಹುದು. ಅರ್ಜಿದಾರ ವಾಸವಿರುವ ಊರಿನ ದೇವಸ್ಥಾನದ ಪೂಜಾರಿ, ಚರ್ಚಿನ ಪಾದ್ರಿ ಅಥವಾ ಇತರ ಧರ್ಮಗಳ ಧರ್ಮಗುರುಗಳು, “ಈ ವ್ಯಕ್ತಿ ನನಗೆ ಗೊತ್ತು, ಇವರು ಈ ಧರ್ಮದವರು, ಮುಂದೆಯೂ ಅದೇ ಧರ್ಮದಲ್ಲಿ ಇರಲಿದ್ದಾರೆ” ಎಂದು ದೃಢೀಕರಿಸಬೇಕು.

ಸಿಎಎ ನಿಯಮಗಳ ಪ್ರಕಾರ, ‘ಪ್ರತಿಷ್ಠಿತ ಸಮುದಾಯ ಸಂಸ್ಥೆ’ ಅರ್ಹತಾ ಪ್ರಮಾಣ ಪತ್ರ ನೀಡಬಹುದು ಎಂದಿದೆ. ಈ ಸಂಸ್ಥೆ ಯಾವುದೆಂದು ತಿಳಿಯಲು ಸಹಾಯವಾಣಿಗೆ ಕರೆ ಮಾಡಿದಾಗ ಈ ಸಂಗತಿ ಹೊರಬಿದ್ದಿದೆ ಎಂದು ’ದಿ ಹಿಂದೂ’ ವರದಿ ತಿಳಿಸಿದೆ.

ಪೂಜಾರಿಯೊಬ್ಬ ಪೌರತ್ವ ಪ್ರಮಾಣೀಕರಿಸುವುದೆಂದರೆ ನಮ್ಮ ಸ್ಥಿತಿ ಎತ್ತ ಕಡೆ ಸಾಗುತ್ತಿದೆ ಎಂಬುದನ್ನು ಯೋಚಿಸಬೇಕು. ಈ ರೀತಿಯ ನಿಲುವು ಮೂರ್ಖತನದ ಪರಮಾವಧಿಯೇ ಸರಿ. ಸರ್ಕಾರಿ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಧಾರ್ಮಿಕ ಸಂಸ್ಥೆಗಳಿಗೆ ವಹಿಸುವುದೇ ನಗೆಪಾಟಲಿನ ವಿಚಾರ.

ಪೂಜಾರಿಯೆಂದರೆ ಇಲ್ಲಿ ಯಾರಾಗಿರುತ್ತಾರೆ? ಧರ್ಮದ ಗುತ್ತಿಗೆಯನ್ನು ಪಡೆದವರಂತೆ ವರ್ತಿಸುವವರು ಯಾರು ಮತ್ತು ತಾರತಮ್ಯವನ್ನು ಉಸಿರಾಡುವ ರೀತಿ ಎಂತಹದ್ದು? ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮಡಿಮೈಲಿಗೆಯನ್ನು ಉಸಿರಾಡುವವರು ನಿರ್ಧರಿಸುವ ಪೌರತ್ವ ನ್ಯಾಯೋಚಿತವೇ? ಸಮಾಜದಲ್ಲಿನ ಜಾತಿಯ ಕಾರಣಕ್ಕೆ ಪೌರತ್ವ ನಿರಾಕರಿಸಿದರೆ ಅದಕ್ಕೆ ಯಾರು ಹೊಣೆ? ಪೂಜಾರಿ, ಪಾದ್ರಿಗಳ ವಿಶ್ವಾಸಾರ್ಹತೆ ಯಾವುದು? ಇವರು ಯಾವ ಆಧಾರದಲ್ಲಿ ಧರ್ಮವನ್ನು ನಿರ್ಧಾರ ಮಾಡುತ್ತಾರೆ? ಆಚರಣೆಯ ಆಧಾರದಲ್ಲೋ, ಆಹಾರದ ಆಧಾರದಲ್ಲೋ? ಯಾವುದು ಇವರ ಮಾನದಂಡ?- ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಪೂಜಾರಿಗಳನ್ನು ಮಧ್ಯವರ್ತಿಗಳೆಂದೂ, ದೇವರು ಮತ್ತು ಭಕ್ತರ ನಡುವಿನ ಬಾಂಧವ್ಯಕ್ಕೆ ಅಂಥವರ ಅಗತ್ಯವಿಲ್ಲ ಎಂದು ಸಾರಿದ ಬಹುದೊಡ್ಡ ಆಧ್ಯಾತ್ಮಿಕ ಪರಂಪರೆ ನಮ್ಮಲ್ಲಿದೆ. ಬುದ್ಧ, ಬಸವಣ್ಣ, ಕುವೆಂಪು ಮೊದಲಾದ ಮಹನೀಯರು ಸಾಂಸ್ಥಿಕ ಧರ್ಮಾಚರಣೆಗಳ ವಿರುದ್ಧ ಸಿಡಿದೆದ್ದರು, ಕಂದಾಚಾರಗಳನ್ನು ಕಟುವಾಗಿ ಟೀಕಿಸಿದರು. ಇಂತಹ ಪರಿವಾರವನ್ನು ಹೊಂದಿರುವ ದೇಶದಲ್ಲಿ ಪೌರತ್ವ ನಿರ್ಧರಿಸುವ ಹಕ್ಕನ್ನು ಪೂಜಾರಿಗೆ ನೀಡಿರುವುದೇ ಹಾಸ್ಯಾಸ್ಪದ ಸಂಗತಿ.

ಮುಖ್ಯವಾಗಿ ಸಿಎಎ, ಎನ್‌ಆರ್‌ಸಿ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿವೆ.  ಹೀಗಾಗಿಯೇ ಭಾರೀ ಹಿಂಸಾಚಾರಗಳು, ಪ್ರತಿಭಟನೆಗಳು ನಡೆದಿದ್ದವು. ’ಜಾತ್ಯತೀತ’ (ಧರ್ಮಾತೀತ) ತತ್ವವನ್ನು ಉಸಿರಾಡುವ ದೇಶವೊಂದು ಧರ್ಮದ ಆಧಾರದಲ್ಲಿ ಪೌರತ್ವವನ್ನು ಕೊಡಲು ಹೊರಟಿದ್ದೇ ಆಘಾತಕಾರಿ ವಿಷಯ. ಹೀಗಾಗಿ ರಾಷ್ಟ್ರಾದ್ಯಂತ ಭುಗಿಲೆದ್ದ ಸಿಎಎ, ಎನ್‌ಆರ್‌ಸಿ ಕಿಚ್ಚು ಕೋವಿಡ್ ಕಾರಣದಿಂದ ತಣ್ಣಗಾಗಿತ್ತು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ನಂತಹ ಕ್ರಮಗಳು ಎಲ್ಲ ಧರ್ಮದ ಜನರನ್ನು ಬಾಧಿಸುವುದು ಸ್ಪಷ್ಟ. ಧರ್ಮದ ಕಾರಣಕ್ಕೆ ನಿರ್ದಿಷ್ಟ ದೇಶಗಳಿಂದ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡುತ್ತೇವೆ ಎಂಬುದು ಮಾನವೀಯ ನೆಲೆಯಲ್ಲೂ ಸರಿ ಎನಿಸದು. ಮುಸ್ಲಿಮರಲ್ಲಿನ ಬಹುಸಂಖ್ಯಾತರ ದಬ್ಬಾಳಿಕೆಗೆ ತುತ್ತಾದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಗಳೂ ಇವೆ. ಅವರನ್ನು ಜಾತ್ಯತೀತ ಮೌಲ್ಯಗಳ ಭಾರತ ಹೇಗೆ ನೋಡಬೇಕು? ಸದರಿ ಮುಸ್ಲಿಂ ದೇಶಗಳಲ್ಲಿ ಹಜಾರಗಳು, ಶಿಯಾ ಪಂಗಡದ ಅಲ್ಪಸಂಖ್ಯಾತರು, ಅಹ್ಮದೀಯರು ಬಹುಸಂಖ್ಯಾತ ಮುಸ್ಲಿಂ ಸಮಾಜದಿಂದ ಕಡೆಗಣನೆಗೆ ಒಳಗಾಗಿದ್ದಾರೆಂದು ಇದೇ ಬಿಜೆಪಿ ಹೇಳುತ್ತದೆ. ಧಾರ್ಮಿಕ ಕಾರಣಕ್ಕೆ ವಲಸೆ ಬರುವವರಿಗಿಂತ ಆರ್ಥಿಕ ಕಾರಣಕ್ಕೆ ವಲಸೆ ಬರುವವರೇ ಹೆಚ್ಚು ಎಂದಿತ್ತು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ. ಹೀಗಿರುವಾಗ ಧರ್ಮದ ಆಧಾರದಲ್ಲಿ ಪೌರತ್ವ ನೀಡಲು ಹೊರಟಿರುವುದಾದರೂ ಏತಕ್ಕೆ?

ಪೌರತ್ವದ ಜೊತೆಗೆ ಎನ್‌ಪಿಆರ್‌, ಎನ್‌ಆರ್‌ಸಿ ಮುಂದಿನ ದಿನಗಳಲ್ಲಿ ಬರಲಿವೆ. ಖಂಡಿತವಾಗಿಯೂ ಇವು ಈ ದೇಶದ 140 ಕೋಟಿ ಜನರನ್ನೂ ಬಾಧಿಸಲಿವೆ. ಸಿಎಎ, ಎನ್‌ಪಿಆರ್‌‌ನಂತಹ ಕ್ರಮಗಳು ಅಂದುಕೊಂಡಷ್ಟು ಸುಲಭವಲ್ಲ. ಪ್ರತಿ ನಾಗರಿಕನೂ ತನ್ನ ಜನನ ಮತ್ತು ವಾಸ ಪ್ರಮಾಣಪತ್ರ, ಆಸ್ತಿ ವಿವರಗಳನ್ನು ಒದಗಿಸಬೇಕಾಗುತ್ತದೆ. ಅಸ್ಸಾಮಿನಲ್ಲಿ ಎನ್‌ಆರ್‌ಸಿ ಜಾರಿಗೆ ಬಂದ ಪರಿಣಾಮ ಸುಮಾರು 11 ಲಕ್ಷ ಹಿಂದೂಗಳು ಹೊರಗುಳಿಯುಂತಾಗಿದೆ. ಈ ನೆಲದಲ್ಲಿ ಹುಟ್ಟಿ ಬೆಳೆದಿದ್ದರೂ ಹೊರಗಿನಿಂದ ಬಂದವರೆಂಬ ಹಣೆಪಟ್ಟಿಯನ್ನು ಹಿಂದೂಗಳಿಗೂ ಹಚ್ಚಬಹುದು, ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಚಿತ್ರಿಸಬಹುದು. ಇದು ವಾಸ್ತವ.

ಬಿಜೆಪಿಯಂತೆಯೇ ಯುಪಿಎ ಸರ್ಕಾರ ಮಾಡಿದ ಪ್ರಮಾದಗಳನ್ನೂ ಮರೆಯಲಾಗದು. ವಾಜಪೇಯಿ ಗವರ್ನಮೆಂಟ್ ತಂದ ತಿದ್ದುಪಡಿಗಳನ್ನೇ ಯುಪಿಎ ಮುಂದುವರಿಸಿತ್ತು. ಇದೆಲ್ಲವೂ ಚಾರಿತ್ರಿಕ ಪ್ರಮಾದಗಳು. ಕಾಂಗ್ರೆಸ್‌ ಪಕ್ಷವೂ ತನ್ನ ತಪ್ಪುಗಳನ್ನು ಪುನರಾವಲೋಕನ ಮಾಡಿಕೊಳ್ಳಲೇಬೇಕು.

ಸಿಎಎಯನ್ನು ಮತ್ತೆ ಪ್ರಸ್ತಾಪಿಸಿ, ಹಿಂದೂಗಳ ಮತಗಳನ್ನು ಧ್ರುವೀಕರಣ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇರುವಂತಿದೆ. ಆದರೆ ಸರ್ಕಾರದ ಈ ಕಸರತ್ತುಗಳು ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಪ್ರಯತ್ನಗಳಂತೆಯೇ ಕಾಣುತ್ತಿವೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...