ಧರ್ಮಾಧಾರಿತ ಮೀಸಲಾತಿ | ಅವರು ಸುಳ್ಳು ಹೇಳ್ತಾನೇ ಇರ್ತರೆ, ನೀವು ಸತ್ಯ ಹೇಳ್ತಾನೇ ಇರ್ಬೇಕು!

Date:

Advertisements
ರಾಜ್ಯ ಸರ್ಕಾರ ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಧರ್ಮಾಧಾರಿತವಲ್ಲ ಎನ್ನುವುದು ಗೊತ್ತಿದ್ದರೂ, ದತ್ತಾತ್ರೇಯ ಹೊಸಬಾಳೆಯಂತಹ 'ವಿದ್ವಾಂಸ'ರು ಸುಳ್ಳು ಹೇಳುತ್ತಲೇ ಇರುತ್ತಾರೆ. ಅದಕ್ಕಾಗಿ ಸತ್ಯ ಗೊತ್ತಿರುವವರು, ಪುಟ್ಟಣ್ಣ ಕಣಗಾಲರ 'ಪಡುವಾರಳ್ಳಿ ಪಾಂಡವರು' ಚಿತ್ರದ ಕೊನೆಯ ದೃಶ್ಯದಂತೆ, 'ಅವರು ಬರ್ತಾನೇ ಇರ್ತರೆ, ನೀವು ಓಡಿಸ್ತಾನೇ ಇರ್ಬೇಕು' ಎನ್ನುವುದನ್ನು ಜ್ಞಾಪಿಸುತ್ತಲೇ ಇರಬೇಕು.   

‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಅಂಗೀಕರಿಸಲಾಗಿಲ್ಲ. ಯಾರಾದರೂ ಇದನ್ನು ಮಾಡುತ್ತಿದ್ದರೆ, ಅದು ಸಂವಿಧಾನ ಶಿಲ್ಪಿಗೆ ವಿರುದ್ಧವಾದುದಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಹೊಸಬಾಳೆಯವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ. 4ರಷ್ಟು ಮೀಸಲು ನೀಡಿರುವ ಬಗ್ಗೆ ಟೀಕಿಸಿದ್ದಾರೆ. ಸಮರ್ಥನೆಗೆ ಬಾಬಾ ಸಾಹೇಬರನ್ನು ಗುರಾಣಿಯಂತೆ ಬಳಸಿಕೊಂಡಿದ್ದಾರೆ. ಅಂದರೆ ಮುಸ್ಲಿಮರನ್ನು ಹಣಿಯುವುದು ಹಾಗೂ ದಲಿತರನ್ನು ಓಲೈಸುವುದು. ರಾಜ್ಯ ಕಾಂಗ್ರೆಸ್ ಕ್ರಮವನ್ನು ಖಂಡಿಸುವುದು ಹಾಗೂ ಅಂಬೇಡ್ಕರ್ ಸಂವಿಧಾನವನ್ನು ಒಪ್ಪಿಕೊಳ್ಳುವ ನಾಟಕವಾಡುವುದು. ಅಸಲಿಗೆ, ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲಿಕ್ಕೆ’ ಎಂದವರಲ್ಲವೇ ಇವರು?

ಹೌದು, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಅಂಗೀಕರಿಸಿಲ್ಲ. ಆದರೆ ದತ್ತಾತ್ರೇಯ ಹೊಸಬಾಳೆಯವರು, ಇದಷ್ಟನ್ನು ಮಾತ್ರ ಹೇಳುತ್ತಾರೆಯೇ ಹೊರತು, ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿರುವುದನ್ನು ಹೇಳುವುದಿಲ್ಲ. ಸೇರಿಸಿದವರು ಯಾರು, ಯಾವಾಗ ಎಂಬ ಸತ್ಯದತ್ತ ಗಮನ ಹರಿಸುವುದಿಲ್ಲ.

Advertisements

ಏಕೆಂದರೆ, ಅವರ ಗಮನವಿರುವುದು ಮುಸ್ಲಿಮರ ಮೇಲೆ ಮಾತ್ರ. ಹಾಗಾಗಿಯೇ 2024-25ರ ರಾಜ್ಯ ಬಜೆಟ್‌ನಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ‘ಅಲ್ಪಸಂಖ್ಯಾತ’ರಿಗೆ ಶೇ. 4ರಷ್ಟು ಮೀಸಲು ನೀಡಲಾಗಿರುವುದನ್ನು ಅವರು ‘ಮುಸ್ಲಿಮರು’ ಎಂದೇ ಪರಿಗಣಿಸುತ್ತಾರೆ. ಸರ್ಕಾರ ಸ್ಪಷ್ಟವಾಗಿ ಅಲ್ಪಸಂಖ್ಯಾತರು ಎಂದು ಹೇಳುತ್ತಿದೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರಷ್ಟೇ ಅಲ್ಲ; ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿ, ಸಿಖ್ ಹೀಗೆ ಎಲ್ಲರೂ ಸೇರುತ್ತಾರೆ.

ಅಸಲಿಗೆ ರಾಜ್ಯ ಸರ್ಕಾರ, ಅಲ್ಪಸಂಖ್ಯಾತರಿಗೆ ಶೇ. 4ರಷ್ಟು ಮೀಸಲಾತಿ ನೀಡುವುದರ ಜೊತೆಗೆ, ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದ ಸಮುದಾಯದ ಗುತ್ತಿಗೆದಾರರಿಗೂ ರೂ. 2 ಕೋಟಿ ವೆಚ್ಚದ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ತೀರ್ಮಾನ ತೆಗೆದುಕೊಂಡಿದೆ. ಸರ್ಕಾರದ ಈ ತೀರ್ಮಾನ ಸಂವಿಧಾನಬದ್ಧವಾಗಿದೆ. ಅಂಬೇಡ್ಕರ್ ನಿಲುವಿಗೆ ಹತ್ತಿರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪ್ರವರ್ಗ–1, 2ಎ ಮತ್ತು 2ಬಿ ಸಮುದಾಯದ ಗುತ್ತಿಗೆದಾರರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ಅಭಿವೃದ್ಧಿಗೆ ಮೀಸಲಾತಿ ಒದಗಿಸುವುದು ಅನಿವಾರ್ಯ. ನಮ್ಮ ಸರ್ಕಾರ ಅದನ್ನು ಮಾಡಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಅದನ್ನು ಮರೆಮಾಚುವ ದತ್ತಾತ್ರೇಯ ಹೊಸಬಾಳೆಯವರು, ‘ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ನೀಡಿದ್ದ ಧರ್ಮಾಧಾರಿತ ಮೀಸಲಾತಿ ಕೋರ್ಟ್‌ಗಳಲ್ಲಿ ಬಿದ್ದು ಹೋಗಿದೆ’ ಎಂದು ಹೇಳುತ್ತಾರೆ. ಅದೇ ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಟಿಡಿಪಿ, ಮುಸ್ಲಿಮರಿಗೆ ಘೋಷಿಸಿರುವ ಸರ್ಕಾರಿ ಯೋಜನೆಗಳ ಬಗ್ಗೆ ಜಾಣಮೌನ ವಹಿಸುತ್ತಾರೆ.

ಇದನ್ನು ಓದಿದ್ದೀರಾ?: ವಕ್ಫ್‌ ತಿದ್ದುಪಡಿ ಮಸೂದೆಗೆ ನಾಯ್ಡು, ನಿತೀಶ್‌ ಬೆಂಬಲ; ಮುಸ್ಲಿಂ ಸಮುದಾಯ ಶಾಶ್ವತವಾಗಿ ದೂರ!

ದತ್ತಾತ್ರೇಯ ಹೊಸಬಾಳೆಯವರು ಮೇಲ್ಜಾತಿಗೆ ಸೇರಿದವರು, ಆರ್‍ಎಸ್ಎಸ್ ಎಂಬ ಸನಾತನ ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವವರು. ಅವರು ಸುಳ್ಳು ಹೇಳಲಿಕ್ಕೆ ಸಾಧ್ಯವೇ ಇಲ್ಲ ಎಂದು ಭಾವಿಸುವ ಇಂದಿನ ಪತ್ರಕರ್ತರು, ಅವರು ಹೇಳಿದ್ದನ್ನು ಯಥಾವತ್ ವರದಿ ಮಾಡುತ್ತಾರೆ. ಅವರೂ ಕೂಡ, ತಮಗಿರುವ ಪ್ರಿವಿಲೇಜನ್ನು- ಅನುಕೂಲವನ್ನು- ದುರುಪಯೋಗಪಡಿಸಿಕೊಂಡು, ಸುಳ್ಳನ್ನೇ ಸತ್ಯವೆಂದು ಎದೆಯುಬ್ಬಿಸಿ ಹೇಳುತ್ತಾರೆ.  

ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು, ನಿಜ. ಆದರೆ ಕರ್ನಾಟಕದಲ್ಲಿ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನಕ್ಕೊಳಪಡಿಸಿ ಅವರನ್ನು ‘ಹಿಂದುಳಿದ ವರ್ಗ’ ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ಪೂರ್ವದ ನಾಲ್ವಡಿ ಕೃಷ್ಣರಾಜ ಒಡೆಯರ್ ನೇಮಿಸಿದ ಮಿಲ್ಲರ್ ಆಯೋಗದಿಂದ ಹಿಡಿದು, ಸ್ವಾತಂತ್ರ್ಯಾನಂತರದ ಹಾವನೂರು, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಆಯೋಗದ ಆದಿಯಾಗಿ, ಇಂದಿನ ಎಲ್ಲಾ ಆಯೋಗಗಳು ಮುಸ್ಲಿಮರನ್ನು ‘ಹಿಂದುಳಿದ ವರ್ಗ’ ಎಂದೇ ಕರ್ನಾಟಕದಲ್ಲಿ ಗುರುತಿಸಿರುವುದು.

70ರ ದಶಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರು ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದರು. ಅದನ್ನು ವಿರೋಧಿಸಿದ ಕೆಲವರು ಕೋರ್ಟ್ ಮೆಟ್ಟಿಲು ಹತ್ತಿ ಪ್ರಶ್ನಿಸಿದರು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ‘ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಇಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರ್ಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ’ ಎಂದು ಪ್ರತಿಪಾದಿಸಿತ್ತು.

ಸಂವಿಧಾನದ ಅನುಚ್ಛೇದ 15(4) ಮತ್ತು 16(4) ರ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುತ್ತಾರೆ. ಇಲ್ಲಿ ಜಾತಿ, ಮತ, ಧರ್ಮ ಎಂಬುದಕ್ಕಿಂತಲೂ ಇದೊಂದು ‘ವರ್ಗ’ ಎಂದು ಗುರುತಿಸಲ್ಪಡುತ್ತಾರೆ. ಆದ್ದರಿಂದಲೇ ‘ಹಿಂದುಳಿದ ವರ್ಗಗಳ ಆಯೋಗ’ ಎನ್ನುತಾರೆಯೇ ಹೊರತು ‘ಹಿಂದುಳಿದ ಜಾತಿಗಳ’ ಅಥವಾ ‘ಹಿಂದುಳಿದ ಮತಗಳ’ ಆಯೋಗ ಎನ್ನುವುದಿಲ್ಲ.

ಇದನ್ನು ಬಲ್ಲವರಾಗಿದ್ದ, ಕಾನೂನು ಪಂಡಿತರಾದ ವೀರಪ್ಪ ಮೊಯ್ಲಿಯವರು 1994ರಲ್ಲಿ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡಿದರು. ಆನಂತರ ಮುಖ್ಯಮಂತ್ರಿಗಳಾದ ದೇವೇಗೌಡರು ಅದನ್ನು ಮುಂದುವರೆಸಿದರು. ಅದನ್ನು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಸರ್ಕಾರಗಳು ಕೂಡ ಮುಂದುವರೆಸಿವೆ. ಮುಸ್ಲಿಮರನ್ನು ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ರಿಲಿಜಿಯಸ್ ಮೈನಾರಿಟಿ ಎಂದು ಯಾರೂ ಗುರುತಿಸಿಲ್ಲ. ಅಷ್ಟೇ ಅಲ್ಲ, ಈ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮುಸ್ಲಿಮರಷ್ಟೇ ಅಲ್ಲ; ಕ್ರೈಸ್ತರು, ಜೈನರು, ಬೌದ್ದರು, ಪಾರ್ಸಿಗಳು, ಸಿಖ್ಖರು ಕೂಡ ಇದ್ದಾರೆ. ಅದು ರಾಜ್ಯವನ್ನು ಆಳಿದ ನಾಯಕರಿಗೆ ತಿಳಿಯದ ವಿಷಯವಲ್ಲ. ಇಲ್ಲಿಯವರೆಗೆ ಯಾರೂ ವಿರೋಧ ಮಾಡಿದ್ದೂ ಇಲ್ಲ.

ಆದರೆ, ಆರ್‍ಎಸ್ಎಸ್ ಕೈಗೊಂಬೆಯಾಗಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ, ಮುಸ್ಲಿಮರ ಮೀಸಲಾತಿಯನ್ನು ತೆಗೆದು ಹಾಕುವ ನಿರ್ಧಾರವನ್ನು ಕೈಗೊಂಡಿತ್ತು. ಮುಸ್ಲಿಮರ ಮೀಸಲಾತಿಯನ್ನು ಕಿತ್ತು, ಒಕ್ಕಲಿಗರಿಗೂ ಲಿಂಗಾಯತರಿಗೂ ಹಂಚಲು ಹವಣಿಸಿತ್ತು. ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿ, ಬಿಜೆಪಿ ಸರ್ಕಾರಕ್ಕೆ ಬುದ್ಧಿ ಹೇಳಿತ್ತು. ಇಂತಹ ನಡೆಯೇ ನಿಜವಾದ ಸಂವಿಧಾನ ವಿರೋಧಿ. ಸಮುದಾಯಗಳ ನಡುವೆ ಸಾಮರಸ್ಯ ಕದಡುವ ಕೃತ್ಯ.

2025ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಈ ಸಂವಿಧಾನ ವಿರೋಧಿ ನಿಲುವು ಮತ್ತು ಷಡ್ಯಂತ್ರ ಜಾರಿಯಲ್ಲಿತ್ತು. ಪ್ರಧಾನಿ ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ‘ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಸಂವಿಧಾನ ವಿರೋಧಿ, ದಲಿತ ವಿರೋಧಿ’ ಎಂದು ಉಗ್ರ ಭಾಷಣ ಮಾಡಿದ್ದರು. ಮಾಧ್ಯಮಗಳು-ಪತ್ರಕರ್ತರು ಅದಕ್ಕೆ ಆದ್ಯತೆ ನೀಡಿ ಪ್ರಚಾರ ನೀಡಿದ್ದರು. ದಲಿತರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟಿದ್ದರು ಸಾಮರಸ್ಯದಿಂದ ಬದುಕುತ್ತಿದ್ದ ಸಮುದಾಯಗಳ ನಡುವೆ ದ್ವೇಷಾಸೂಯೆ ಬಿತ್ತಿದ್ದರು. ಕೋಮು ಗಲಭೆ ಸೃಷ್ಟಿಸಿದ್ದರು. ಅದರ ಬಲದಿಂದ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಗದ್ದುಗೆ ಏರಿದರು.

ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಿಂದ ಹೊರಗುಳಿದಿದೆ. ಏನಾದರೂ ಮಾಡಿ ಮತ್ತೆ ಅಧಿಕಾರಕ್ಕೇರಬೇಕೆಂಬ ಹವಣಿಕೆಯಲ್ಲಿದೆ. ಅದಕ್ಕಾಗಿ ‘ಧರ್ಮಾಧಾರಿತ ಮೀಸಲಾತಿ’ಯ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಸಾಲದು ಎಂದು ಆರ್‍ಎಸ್ಎಸ್‌ನ ದತ್ತಾತ್ರೇಯ ಹೊಸಬಾಳೆಯವರ ಕಡೆಯಿಂದ ‘ಧರ್ಮಾಧಾರಿತ ಮೀಸಲಾತಿ’ಯ ಬಾಣ ಬಿಡಿಸುತ್ತಿದೆ. ವಿಪರ್ಯಾಸವೆಂದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ‘ನಮ್ಮ ವರಿಷ್ಠರಾದ ಎಚ್.ಡಿ. ದೇವೇಗೌಡರು ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ಒದಗಿಸಿದ್ದಾರೆ. ಆದ್ದರಿಂದ, ಈ ಹೋರಾಟದಲ್ಲಿ ನಾವು ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಕೇಂದ್ರ ಬೃಹತ್ ಕೈಗಾರಿಕೆ, ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ಜೆಡಿಎಸ್ ಅಚಲ ನಿಲುವು’ ಎಂದು ಒತ್ತಿ ಹೇಳಿದ್ದಾರೆ.

ಇದನ್ನು ಓದಿದ್ದೀರಾ?: ಮುಸ್ಲಿಮರಿಗೆ ಶೇ.4 ಗುತ್ತಿಗೆ ಮೀಸಲು | ಜೆಡಿಎಸ್ ನಿಲುವು ಸ್ಪಷ್ಟಪಡಿಸಿದ ಹೆಚ್ ಡಿ ಕುಮಾರಸ್ವಾಮಿ

ರಾಜ್ಯ ಸರ್ಕಾರ ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಧರ್ಮಾಧಾರಿತವಲ್ಲ ಎನ್ನುವುದು ಗೊತ್ತಿದ್ದರೂ, ದತ್ತಾತ್ರೇಯ ಹೊಸಬಾಳೆಯಂತಹ ‘ವಿದ್ವಾಂಸ’ರು ಮುಸ್ಲಿಮರ ಮೇಲೆ ವಿನಾಕಾರಣ ದ್ವೇಷ ಕಾರುತ್ತಲೇ ಇರುತ್ತಾರೆ. ತಮ್ಮ ಸಮರ್ಥನೆಗೆ ಬಾಬಾ ಸಾಹೇಬರನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಲೇ ಸಾಗುತ್ತಾರೆ. ಅದಕ್ಕಾಗಿ ಸತ್ಯ ಗೊತ್ತಿರುವವರು, ಪುಟ್ಟಣ್ಣ ಕಣಗಾಲರ ‘ಪಡುವಾರಳ್ಳಿ ಪಾಂಡವರು’ ಚಿತ್ರದ ಕೊನೆಯ ದೃಶ್ಯದಂತೆ, ‘ಅವರು ಬರ್ತಾನೇ ಇರ್ತರೆ, ನೀವು ಓಡಿಸ್ತಾನೇ ಇರ್ಬೇಕು’ ಎನ್ನುವುದನ್ನು ಜ್ಞಾಪಿಸುತ್ತಲೇ ಇರಬೇಕು.   

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X