- ʼಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲʼ
- ʼ30 ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆʼ
ಇತರ ಸಮುದಾಯಗಳಿಗೆ ಅನ್ಯಾಯವಾಗದಂತೆ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಉದ್ಘಾಟನಾ ಮತ್ತು ಹರಧ್ಯಾನ ಮಂದಿರ ಶಂಕುಸ್ಥಾಪನಾ ಕಾರ್ಯ ನೆರವೇರಿಸಿ ಮಾತನಾಡಿದರು
“ವಚನಾನಂದ ಸ್ವಾಮೀಜಿಗಳು ಸೈದ್ಧಾಂತಿಕವಾಗಿ ಮಾರ್ಗದರ್ಶನ ಮಾಡಿದ್ದಾರೆ. ಭಿನ್ನಮತ ವ್ಯಕ್ತವಾದಾಗ, ಎಲ್ಲರಿಗೂ ಮನವರಿಕೆ, ಮಾರ್ಗದರ್ಶನ ಮಾಡಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿಗಳ ದಿಟ್ಟ ಹೋರಾಟದಿಂದ ಸಮಾಜ ಹಾಗೂ ಸರ್ಕಾರದ ಜಾಗೃತಿ ಮೂಡಿಸಲು ಸಾಧ್ಯವಾಯಿತು” ಎಂದರು.
ಯಾರಿಗೂ ಹೆದರುವುದಿಲ್ಲ
ಗುರುಗಳು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಸ್ವಂತ ಚಿಂತನೆ ಬದ್ಧತೆ ಅವರಿಗಿದೆ. ನಮ್ಮ ಸ್ವಂತ ಚಿಂತನೆಯಿಂದ ಈ ಕೆಲಸ ಮಾಡಲಾಗಿದೆ. ಯಾವುದೇ ರೋಲ್ ಕಾಲ್ ಅಥವಾ ಒತ್ತಡದಿಂದ ಈ ಕೆಲಸ ಮಾಡಿಲ್ಲ. ಇದನ್ನು ಜಾರಿಗೆ ತರಲು ಯಾರಿಗೂ ಹೆದರುವುದಿಲ್ಲ” ಎಂದರು.
ಚುನಾವಣಾ ಲಾಭಕ್ಕಾಗಿ ಅಲ್ಲ
ದೀನದಲಿತರ, ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾವಂತರಾಗಿ, ಸ್ವಾಭಿಮಾನದ ಬದುಕು ಬದುಕಬೇಕು. ಇದು ಕರ್ನಾಟಕದ ಅಭಿವೃದ್ಧಿಯ ಪ್ರಶ್ನೆ. ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ. ನಾವು ಭದ್ಧತೆಯಿಂದ ನಂಬಿರುವ ವಿಚಾರಗಳ ಬಗ್ಗೆ ಕೆಲಸ ಮಾಡಿದ್ದು, ಆತ್ಮಸಾಕ್ಷಿಯಾಗಿ ಕೆಲಸ ಮಾಡಲಾಗಿದೆ. ಇದು 30 ವರ್ಷಗಳ ಬೇಡಿಕೆಯಾಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ” ಎಂದರು.
ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ
ಕರ್ನಾಟಕದಲ್ಲಿ ರೈತಾಪಿ ವರ್ಗಕ್ಕೆ ಬೆಲೆ ದೊರೆಯಬೇಕೆಂಬ ಉದ್ದೇಶ ನಮ್ಮದು. ರೈತ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯದ 11ಲಕ್ಷ ವಿದ್ಯಾರ್ಥಿಗಳಿಗೆ 818 ಕೋಟಿ ರೂ. ಒದಗಿಸಲಾಗಿದೆ. ರೈತ ಕಾರ್ಮಿಕ ಮಹಿಳೆಗೆ ಪ್ರತಿ ತಿಂಗಳು ಒಂದು ಸಾವಿರ ರೂ.ನೀಡುವ ಯೋಜನೆ ಘೋಷಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 2 ಸಾವಿರ ಕೋಟಿ ಗಳನ್ನು 57 ಲಕ್ಷ ರೈತರಿಗೆ ನೀಡಲಾಗುತ್ತದೆ. ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ ನೀಡಿ ದೇಶಕ್ಕೆ ಸಲ್ಲುವ ಕೆಲಸ ಮಾಡಲಾಗಿದೆ” ಎಂದರು.