ಪ್ರಶ್ನೆ ಪತ್ರಿಕೆ ಸೋರಿಕೆ, ಗ್ರೇಸ್ ಅಂಕ, ನಾನಾ ವಿದ್ಯಾರ್ಥಿಗಳಿಗೆ ಅನ್ಯಾಯದ ಆರೋಪಗಳಿಂದ ವಿವಾದಕ್ಕೆ ಸಿಲುಕಿರುವ ‘ನೀಟ್’ ಅನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ಸಿಇಟಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಪ್ರವೇಶಾತಿ ನೀಡಬೇಕೆಂದು ನಿರ್ಣಯದಲ್ಲಿ ಆಗ್ರಹಿಸಿದೆ.
ವಿಧಾನಸಭೆಯಲ್ಲಿ ಬುಧವಾರದಿಂದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮುಡಾ ಹಗರಣದ ವಿಚಾರವಾಗಿ ಗಲಾಟೆ, ಗದ್ದಲ ಮುಂದುವರೆಸಿದ್ದಾರೆ. ಈ ಗದ್ದಲಗಳ ನಡುವೆಯೇ ಸರ್ಕಾರ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಿದೆ.
ವಿಧಾನಪರಿಷತ್ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನೀಟ್ ರದ್ದತಿಗೆ ಆಗ್ರಹಿಸುವ ನಿರ್ಣಯವನ್ನು ಮಂಡಿಸಿದ್ದು, ಪರಿಷತ್‌ನಲ್ಲಿಯೂ ನಿರ್ಣಯ ಅಂಗೀಕಾರವಾಗಿದೆ.
Karnataka Assembly passes resolution against NEET. It was tabled by State Minister of Medical Education & Skill Development, Sharan Prakash Patil.
— ANI (@ANI) July 25, 2024
ನೀಟ್ ವಿರುದ್ಧ ನಿರ್ಣಯ ಮಾತ್ರವಲ್ಲದೆ, ‘ಒಂದು ದೇಶ – ಒಂದು ಚುನಾವಣೆ’ಯ ವಿರುದ್ಧವೂ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಜೊತೆಗೆ, ವಿಧಾನಸಭೆಯಲ್ಲಿ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟುಗಳಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ‘ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ-2006’ಕ್ಕೆ ಕೇಂದ್ರ ಸರ್ಕಾರ ಮಾರ್ಪಾಡುಗಳನ್ನು ತರಬೇಕೆಂದು ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ.