- ಸೌದಿ ಅರೆಬಿಯ ನಿರ್ಧಾರದಿಂದ ಇಂಧನ ಕೊರತೆ
- ಭಾರತದ ತೈಲ ಆಮದು ಪ್ರಮಾಣ 33 ಪಟ್ಟು ಹೆಚ್ಚಳ
ತೈಲ ಉತ್ಪಾದನೆ ಕಡಿತಗೊಳಿಸಲು ರಷ್ಯಾ ಸೇರಿದಂತೆ ಸೌದಿ ಅರೆಬಿಯ ಹಾಗೂ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಸ್ಥೆ (ಒಪಿಎಸಿ) ನಿರ್ಧರಿಸಿವೆ.
ಸೌದಿ ಮತ್ತು ಇತರ ದೇಶಗಳ ಈ ತೀರ್ಮಾನದಿಂದ ಭಾರತಕ್ಕೆ ಹೊರೆಯಾಗುವ ಸಾಧ್ಯತೆ ಇದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಭಾರತದ ತೈಲ ಆಮದು ಹೆಚ್ಚಾಗಲಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ಹೇಳಿದ್ದಾರೆ.
“ಸೌದಿ ಅರೆಬಿಯ, ರಷ್ಯಾ, ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಸ್ಥೆ ಮೊದಲಾದವು ತೈಲ ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಐಇಎ ವಿಶ್ಲೇಷಣೆ ಮತ್ತು ತೈಲ ಮಾರುಕಟ್ಟೆಗಳನ್ನು ಅಂದಾಜಿಸುವ ಪ್ರತಿಯೊಂದು ಸಂಸ್ಥೆಯ ವಿಶ್ಲೇಷಣೆಯನ್ನು ಗಮನಿಸಿದಾಗ ಈ ವರ್ಷದ ದ್ವಿತೀಯಾರ್ಧದಲ್ಲಿ ತೈಲ ಮಾರುಕಟ್ಟೆಗಳಲ್ಲಿ ಹೆಚ್ಚು ಕೊರತೆ ಉಂಟಾಗಲಿದೆ” ಎಂದು ಫಾತಿಹ್ ಅವರು ಮಂಗಳವಾರ (ಏಪ್ರಿಲ್ 11) ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಭಾರತ ಇಂಧನ ಆಮದುದಾರ ರಾಷ್ಟ್ರ. ದೇಶದಲ್ಲಿ ಬಳಸುವ ಹೆಚ್ಚಿನ ಇಂಧನ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಫಾತಿಹ್ ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪ್ರಮುಖ ರಾಷ್ಟ್ರಗಳ ತೈಲ ಉತ್ಪಾದನೆ ಕಡಿತಗೊಳಿಸುವ ನಿರ್ಧಾರ ಭಾರತದ ಆರ್ಥಿಕತೆ ಮತ್ತು ಅದರ ಗ್ರಾಹಕರ ಮೇಲೆ ನೇರವಾಗಿ ಹೊರೆ ಉಂಟು ಮಾಡಲಿದೆ ಎಂದು ಅವರು ಹೇಳಿದರು.
ಮುಂಬರುವ ವರ್ಷಗಳಲ್ಲಿ ತೈಲ ಬೆಲೆಗಳ ಏರಿಕೆ ಮತ್ತು ಪೂರೈಕೆ ಭದ್ರತಾ ಕೊರತೆಯ ಕಾಳಜಿಗಳ ಮೇಲೆ ಒತ್ತಡ ಉಂಟಾಗಲಿದೆ. ಏಕೆಂದರೆ ಈಗ ಹೆಚ್ಚಿನ ದೇಶಗಳು ತಮ್ಮದೇ ಆದ ನೈಸರ್ಗಿಕ ಅನಿಲವನ್ನು ಉತ್ಪಾದಿಸಿ ರಫ್ತು ಮಾಡುತ್ತಿವೆ. ಇದು ಮಾರುಕಟ್ಟೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಶೇಖರಣೆಗೆ ಕಾರಣವಾಗುತ್ತದೆ ಎಂದು ಫಾತಿಹ್ ವಿವರಿಸಿದರು.
ಐರೋಪ್ಯ ಒಕ್ಕೂಟವು ತೈಲ ಸೇರಿದಂತೆ ರಷ್ಯಾದ ಉತ್ಪನ್ನಗಳನ್ನು ದೂರವಿಟ್ಟಿದೆ. ಇದರಿಂದ ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ ಭಾರತ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರಮುಖ ದೇಶವಾಗಿ ಪರಿಗಣಿಸಲ್ಪಟ್ಟಿದೆ.
ಮತ್ತೊಂದೆಡೆ ಭಾರತ ರಷ್ಯಾದಿಂದ ತನ್ನ ಕಚ್ಚಾ ತೈಲ ಆಮದುಗಳ ರಿಯಾಯಿತಿ ದರದಲ್ಲಿ ಖರೀದಿಯ ಪ್ರಮಾಣ ಹೆಚ್ಚಿಸಿತು. ಡೀಸೆಲ್ ಮತ್ತು ವಿಮಾನ ಇಂಧನದಂತಹ ಸಂಸ್ಕರಿಸಿದ ತೈಲದ ರೂಪದಲ್ಲಿ ಐರೋಪ್ಯ ರಾಷ್ಟ್ರಗಳಿಗೆ ಹಿಂಬಾಗಿಲ ಪ್ರವೇಶವನ್ನು ಸಕ್ರಿಯಗೊಳಿಸಿತು.
“ಇಂಧನ ಉತ್ಪಾದನೆಯನ್ನು ಸೌದಿ ಅರೆಬಿಯ ಮತ್ತು ಇತರ ರಾಷ್ಟ್ರಗಳು ಕಡಿತಗೊಳಿಸಿದರೂ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತದ ನಿರ್ಧಾರ ಕಾನೂನುಬದ್ಧ ಹೆಜ್ಜೆ. ಭಾರತವು ವ್ಯಾಪಾರ ಮತ್ತು ಹಣಕಾಸು ನಿಯಮದ ವಿಷಯದಲ್ಲಿ ಅಂತಾರಾಷ್ಟ್ರೀಯ ನಿಯಮಗಳು ಮತ್ತು ನಿಯಂತ್ರಣ ಅನುಸರಿಸುತ್ತಿದೆ” ಎಂದು ಫಾತಿಹ್ ಬಿರೋಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಸೇನಾ ಠಾಣೆ ಮೇಲೆ ದಾಳಿ; ನಾಲ್ವರು ಯೋಧರು ಹುತಾತ್ಮ
“ಭಾರತವು ಪಾರದರ್ಶಕ ರೀತಿಯಲ್ಲಿ ಇತರರಿಗಿಂತ ಕಡಿಮೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ಅದು ಲಾಭ ಪಡೆಯುತ್ತಿದೆ. ಇದು ಖಂಡಿತವಾಗಿಯೂ ಕಾನೂನುಬದ್ಧ ಹೆಜ್ಜೆ” ಎಂದು ಫಾತಿಹ್ ತಿಳಿಸಿದರು.
ಜನವರಿಯಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತದ ತೈಲ ಆಮದು ಕಳೆದ ವರ್ಷಕ್ಕೆ ಹೋಲಿಸಿದರೆ 33 ಪಟ್ಟು ಹೆಚ್ಚಾಗಿದೆ.