ಸದಾ ಕಾಲ ಕಾಂಗ್ರೆಸ್ ಟೀಕೆ ಮಾಡಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಕೈಗೆ ಮೈಕ್ ಕೊಟ್ಟರೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವುದು ಬಿಟ್ಟರೆ ಅಪ್ಪಿ ತಪ್ಪಿಯೂ ತಮ್ಮ ಸರಕಾರ ಮಾಡಿದ ಸಾಧನೆ ಅವರ ಬಾಯಿಂದ ಬರುವುದಿಲ್ಲ; ಮಾಡಿದರೆ ತಾನೇ ಬರುವುದು!?
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳನ್ನು ನೇರವಾಗಿ ಪರೋಕ್ಷವಾಗಿ ಟೀಕೆ ಮಾಡುತ್ತಾ ಮೋದಿಯವರು ’ವಂಶ ಪಾರಂಪರ್ಯದ ರಾಜಕಾರಣ’ ಎಂದು ಹೀಯಾಳಿಸುತ್ತಾರೆ.
ಕರ್ನಾಟಕದಲ್ಲಿ ಒಂದೇ ಕುಟುಂಬದ ಹತ್ತಾರು ಮಂದಿಗೆ ಟಿಕೆಟ್ ನೀಡಿ ಲೋಕಸಭೆ, ವಿಧಾನಸಭೆ, ರಾಜ್ಯಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್ ಹೀಗೆ ಎಲ್ಲಾ ಕಡೆ ತನ್ನ ಕುಟುಂಬದವರನ್ನು ಸದಸ್ಯರನ್ನಾಗಿ ನಿರಂತರ ಮಾಡುವ ಎಚ್.ಡಿ.ದೇವೇಗೌಡರ ಜಾತ್ಯತೀತ ಜನತಾದಳದೊಂದಿಗೆ ಮೋದಿಯವರ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಈಗ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಮೊದಲ ಬಾರಿ ಶಾಸಕರಾಗಿರುವ ವಿಜಯೇಂದ್ರ ಅವರು ಯಡ್ಯೂರಪ್ಪನವರ ಮಗ ಅಲ್ಲದೇ ಇದ್ದರೆ ಅವರಿಗೆ ಆ ಹುದ್ದೆ ನೀಡುತ್ತಿದ್ದರಾ ಇಲ್ಲವಾ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ಯಡಿಯೂರಪ್ಪನವರ ಇನ್ನೋರ್ವ ಪುತ್ರ ಸಂಸದರಾಗಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಎನ್ಡಿಎ ಅಂದರೆ ’ಅಪ್ಪಮಗ ಜೋಡಿ’ಯಿಂದ ಮುನ್ನಡೆಸಲ್ಪಡುವ ಎರಡು ಪಕ್ಷಗಳ ಮೈತ್ರಿಯೇ ಆಗಿದೆ.
ಎರಡೂ ಪಕ್ಷಗಳ ಕಾರ್ಯಕರ್ತರ ಸ್ವಾಭಿಮಾನವನ್ನು ಅಡವಿಟ್ಟು ಅಧಿಕಾರವನ್ನೆಲ್ಲ ತನ್ನ ಕುಟುಂಬದಲ್ಲೇ ಇಟ್ಟ ಅಪ್ಪ ಮಕ್ಕಳ ಪಕ್ಷಗಳ ಮೈತ್ರಿ ಬಗ್ಗೆ ಮೋದಿಯವರು ಮಾತನಾಡಬಲ್ಲರಾ? ತಾನು ಹೇಳುವುದು ಒಂದಾದರೆ ಮಾಡುವುದು ಇನ್ನೊಂದು ಎಂಬುದಕ್ಕೆ ಈ ಒಂದು ವಿಷಯ ಅಲ್ಲ, ಬಹುತೇಕ ಎಲ್ಲ ವಿಷಯಗಳಲ್ಲಿ ಮೋದಿಯವರಿಗಿಂತ ತಾಜಾ ಉದಾಹರಣೆ ಬೇರೆ ಯಾರಾದರೂ ಇರಲು ಸಾಧ್ಯವೇ ಇಲ್ಲ.
ಇದನ್ನೂ ಓದಿರಿ: ರಾಜಕೀಯ ಲೆಕ್ಕಾಚಾರ ಮತ್ತು ಅಪ್ಪ ಮಕ್ಕಳ ಪಕ್ಷ

ಅಮೃತ್ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ