ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ ಶೇಖ್ ಷಹಜಹಾನ್ ಅವರ ಮನೆ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಅದೇಶಿಸಿದೆ. ಬಂಧಿತ ಷಹಜಹಾನ್ ಅವರನ್ನು ಸಂಜೆ 4:30ರೊಳಗೆ ಸಿಬಿಐ ಕಸ್ಟಡಿಗೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಇಡಿ ಅಧಿಕಾರಿಗಳ ಮೇಲಿನ ದಾಳಿ ಕುರಿತು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿದೆ. ಷಹಜಹಾನ್ ವಿರುದ್ಧ ದಾಖಲಾಗಿರುವ ನಝತ್ ಪೊಲೀಸ್ ಠಾಣೆಯಲ್ಲಿನ ಎಫ್‌ಐಆರ್ ಸಂಖ್ಯೆ 8 ಮತ್ತು 9 ಹಾಗೂ ಬಂಗಾವ್ ಪೊಲೀಸ್ ಠಾಣೆಯಲ್ಲಿನ ಎಫ್‌ಐಆರ್ ಸಂಖ್ಯೆ 18 ಅನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆದೇಶಿಸಿದೆ.
ಈ ಹಿಂದೆ, ಸಂದೇಶಖಾಲಿ ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಹೈಕೋರ್ಟ್ ರಚಿಸಿತ್ತು. ಮಂಗಳವಾರ, ಎಸ್‌ಐಟಿಯನ್ನು ರದ್ದುಗೊಳಿಸಿರುವ ವಿಭಾಗೀಯ ಪೀಠವು ಸಿಬಿಐ ತನಿಖೆಗೆ ಆದೇಶಿಸಿದೆ. ಆದರೆ, ಹೈಕೋರ್ಟ್ ಅದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಪಡಿತರ ಹಗರಣ ಪ್ರಕರಣದಲ್ಲಿ ಷಹಜಹಾನ್ ಅವರ ಮನೆ ಮೇಲೆ ದಾಳಿ ಮಾಡಲು ಜನವರಿ 5ರಂದು ಹೊರಟಿದ್ದ ಇಡಿ ತಂಡದ ಮೇಲೆ ಷಹಜಹಾನ್ ಅವರ ನೂರಾರು ಬೆಂಬಲಿಗರು ದಾಳಿ ಮಾಡಿದ್ದರು. ದಾಳಿಯಲ್ಲಿ ಮೂವರು ಇಡಿ ಅಧಿಕಾರಿಗಳು ಗಾಯಗೊಂಡಿದ್ದರು. ತಲೆ ಮರೆಸಿಕೊಂಡಿದ್ದ ಷಹಜಹಾನ್, 55 ದಿನಗಳ ಕಾಲ ಪತ್ತೆಯಾಗಿರಲಿಲ್ಲ.
ಅಧಿಕಾರಿಗಳ ಮೇಲಿನ ದಾಳಿಯ ನಂತರ, ಸಂದೇಶ್‌ಖಾಲಿಯಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಅಲ್ಲಿನ, ಬುಡಕಟ್ಟು ಸಮುದಾಯದ ಜನರು ಷಹಜಹಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆರೋಪೊ ಷಹಜಹಾನ್ ಮತ್ತು ಆತನ ಸಹಚರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಲವಂತವಾಗಿ ತಮ್ಮ ಭೂಮಿ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೂವರೆಗೆ, ಷಹಜಹಾನ್ ವಿರುದ್ಧ ಸುಮಾರು 100 ದೂರುಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.