“ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳಾಗಿವೆ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದರು.
ಕೇರಳದ ಕೋಳಿಕ್ಕೋಡ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ಸಿಪಿಐ(ಎಂ) ನಾಯಕ ಯೆಚೂರಿ ಅವರು ರಾಮನ ವಿಚಾರದಲ್ಲಿ ಕೋಮು ಧ್ರುವೀಕರಣ ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿ ನೀಡಿರುವ ಹೇಳಿಕೆಗಳನ್ನು ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲೇ ಎಡರಂಗವು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುವುದಿಲ್ಲ ಎಂದು ಹೇಳುವ ಕಾಂಗ್ರೆಸ್ ಮತ್ತು ಯುಡಿಎಫ್ ಅನ್ನು ಟೀಕಿಸಿದರು. “ಮೋದಿ ವಿರುದ್ಧ ನಿರಂತರವಾಗಿ ಎಲ್‌ಡಿಎಫ್ ಅದರಲ್ಲೂ ವಿಶೇಷವಾಗಿ ಸಿಪಿಐ(ಎಂ) ವಾಗ್ದಾಳಿ ನಡೆಸುತ್ತಿರುವಾಗ ಎಲ್‌ಡಿಎಫ್ ಮೌನವಾಗಿದೆ ಎಂದು ಕಾಂಗ್ರೆಸ್ ಮತ್ತು ಯುಡಿಎಫ್ ಆರೋಪಿಸುತ್ತಿರುವುದು ವಿಚಿತ್ರವಾಗಿದೆ” ಎಂದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಸುದೀರ್ಘ ಚುನಾವಣೆ ವಿಪಕ್ಷಗಳಿಗೆ ಅನನುಕೂಲ: ಯೆಚೂರಿ
ಸಿಎಎ ವಿರೋಧಿಸಿ ಬಂಧನಕ್ಕೊಳಗಾದ ಮೊದಲ ರಾಜಕೀಯ ನಾಯಕರಲ್ಲಿ ತಾನು ಕೂಡಾ ಒಬ್ಬರು ಎಂದು ಹೇಳಿದ ಯೆಚೂರಿ ಅವರು, 370 ನೇ ವಿಧಿಯ ನಂತರ ಕಾಶ್ಮೀರದಲ್ಲಿ ರಾಜಕಾರಣಿಗಳ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು ಮೊದಲು ಎಡರಂಗ, ಜೊತೆಗೆ ಚುನಾವಣಾ ಬಾಂಡ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಮೊದಲು ಸಿಪಿಐಎಂ ಎಂದು ಕೇಂದ್ರದ ನಿರ್ಧಾರಗಳ ವಿರುದ್ಧ ಸಿಪಿಐಎಂನ ನಡೆಯ ಬಗ್ಗೆ ವಿವರಣೆ ನೀಡಿದರು.
“ಈ ಎಲ್ಲಾ ವಿಷಯಗಳಲ್ಲಿ ಮತ್ತು ಇತರ ಹಲವು ವಿಷಯಗಳಲ್ಲಿ ಬಿಜೆಪಿಯನ್ನು ವಿರೋಧಿಸಿದ ಮೊದಲ ಪಕ್ಷ ಸಿಪಿಐ(ಎಂ). ಹಾಗಿರುವಾಗ ಈ ಎಲ್ಲಾ ಸಂದರ್ಭಗಳಲ್ಲಿ ಬಿಜೆಪಿಯನ್ನು ವಿರೋಧಿಸುವುದಿಲ್ಲ ಎಂದು ನಮ್ಮ ಮೇಲೆ ಆರೋಪ ಮಾಡಿದವರು ಎಲ್ಲಿದ್ದಾರೆ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಸಿಎಎ | ಸುಪ್ರೀಂ ಕೋರ್ಟ್‌ನಲ್ಲಿ ಇಂದು 200ಕ್ಕೂ ಅಧಿಕ ಅರ್ಜಿಗಳ ವಿಚಾರಣೆ
ಜೊತೆಗೆ “ನಮ್ಮ ರಾಜಕೀಯ ನಿಲುವು ಮತ್ತು ನೀತಿಗಳನ್ನು ಖಂಡಿಸಿ, ಪ್ರಚಾರ ಮಾಡಿ. ಆದರೆ ದಾಳಿ ಮಾಡುವುದು, ಸುಳ್ಳು ಪ್ರಚಾರ ಮಾಡುವುದು, ವೈಯಕ್ತಿಕ ದಾಳಿ ನಡೆಸುವ ಕಾರ್ಯವನ್ನು ಮಾತ್ರ ಮಾಡಬೇಡಿ ಎಂದು ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ. ನಾವು ಅಭಿಯಾನದ ಸೌಜನ್ಯವನ್ನು ಕಾಪಾಡಿಕೊಳ್ಳೋಣ” ಎಂದು ವಿನಂತಿಸಿದರು.
ಕೇರಳದಲ್ಲಿ ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.