ಶಾಂತವೇರಿ ಗೋಪಾಲಗೌಡರು… ಈಗಲೂ ಇದ್ದಾರೆ

Date:

Advertisements
ಸಮಾಜವಾದಿ ಹೋರಾಟವನ್ನು ಕರ್ನಾಟಕಕ್ಕೆ ಪರಿಚಯಿಸಿದ ಶಾಂತವೇರಿ ಗೋಪಾಲಗೌಡರು ಸರಳ ಸಜ್ಜನರು. ಪ್ರಖರ ಮಾತುಗಳಿಂದ ವಿಧಾನ ಮಂಡಲದ ಕಲಾಪಗಳಲ್ಲಿ ಯಾರೂ ಅಳಿಸದ ಇತಿಹಾಸವನ್ನೇ ನಿರ್ಮಿಸಿದವರು. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ, ಅವರ ಜನ್ಮದಿನದ ನೆಪದಲ್ಲಿ, ನೆನಪು ಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ... 

ಸೈದ್ಧಾಂತಿಕ ರಾಜಕಾರಣವನ್ನು, ಸಮಾಜವಾದಿ ಹೋರಾಟವನ್ನು ಕರ್ನಾಟಕಕ್ಕೆ ಪರಿಚಯಿಸಿದ ಶಾಂತವೇರಿ ಗೋಪಾಲಗೌಡರು ನಾಡು ಕಂಡ ಮಹಾನ್ ವ್ಯಕ್ತಿ. ಜನಪರ ಹೋರಾಟಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನುಭಾವ. ಇಂತಹ ಗೋಪಾಲಗೌಡರು ಸಾಮಾಜಿಕ ಚಳವಳಿಗಳು ಸ್ತಬ್ಧಗೊಂಡಾಗ, ರಾಜಕಾರಣ ಹಾದಿತಪ್ಪಿದಾಗ, ಚುನಾವಣೆಗಳು ಉದ್ಯಮವಾಗಿರುವಾಗ ನೆನಪಾಗುವುದು ಸಹಜ, ನೆನಪು ಮಾಡಿಕೊಳ್ಳಬೇಕಾದ್ದು ಸೂಕ್ತವೂ ಕೂಡ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗದ ರೈತ ಕುಟುಂಬದಲ್ಲಿ, ಮಾರ್ಚ್ 14, 1923 ರಂದು ಜನಿಸಿದ ಗೋಪಾಲಗೌಡರದು ಬಡ ಕುಟುಂಬ. ಕಡು ಕಷ್ಟದ ಬದುಕು. ಆದರೆ ಅವರೊಳಗಿದ್ದ ಅರಿವಿನ ಹಸಿವು ಅವರನ್ನು ವಿದ್ಯಾವಂತರನ್ನಾಗಿ, ಹೋರಾಟಗಾರರನ್ನಾಗಿ, ಜನಪರ ವ್ಯಕ್ತಿಯನ್ನಾಗಿ, ರಾಜಕಾರಣಿಯನ್ನಾಗಿ, ಮನನೀಯ ವ್ಯಕ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಮಾಡಿತು.

ಗಂಭೀರ ಮುಖಭಾವದ ಗೋಪಾಲಗೌಡರು ಬಿಳಿ ಖಾದಿ ಜುಬ್ಬ, ಕಚ್ಚೆಪಂಚೆ ಧರಿಸುತ್ತಿದ್ದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ. ಆದರೆ ಸಮಾಜ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಆಡಳಿತ, ಆರ್ಥಿಕತೆಯಂತಹ ಹಲವು ವಿಷಯಗಳನ್ನು ಆಳವಾಗಿ ಓದಿಕೊಂಡಿದ್ದರು. ಅವುಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಖಚಿತ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಸತ್ಯ ಹೇಳುವುದರಲ್ಲಿ ಸಂಕೋಚವಿರದ ಗೌಡರ ಮಾತಿಗೆ ಮಾಂತ್ರಿಕ ಶಕ್ತಿಯಿತ್ತು. ಆಳುವ ಸರಕಾರವನ್ನು ಅಲ್ಲಾಡಿಸುವಂತಹ, ವೈರಿಯೂ ಒಪ್ಪುವಂತಹ ವಿಚಾರಧಾರೆ ಗೌಡರದಾಗಿತ್ತು.

Advertisements

ಸ್ವಾತಂತ್ರ್ಯ ಹೋರಾಟದ ಕಿಚ್ಚು ಮತ್ತು ಕೆಚ್ಚನ್ನು ತುಂಬಿಕೊಂಡಿದ್ದ ಶಾಂತವೇರಿ ಗೋಪಾಲಗೌಡರು ಸಹಜವಾಗಿಯೇ ಸಮಾಜವಾದದ ಬಗ್ಗೆ ಒಲವುಳ್ಳವರಾಗಿದ್ದರು. ಜೆಪಿ, ಲೋಹಿಯಾರ ಪ್ರಭಾವಕ್ಕೊಳಗಾದ ಗೋಪಾಲಗೌಡರು ಹೊಸ ಹುರುಪನ್ನು, ಪ್ರಖರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಕಾಗೋಡು ಸತ್ಯಾಗ್ರಹ, ರೈತ ಸಂಘಟನೆಗಳಂತಹ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಗೌಡರನ್ನು ಬೆಂಬಲಿಸಲು, ಅವರ ಜನಪರ ಹೋರಾಟಕ್ಕೆ ಶಕ್ತಿ ತುಂಬಲು ಜೆಪಿ, ಲೋಹಿಯಾರಂತಹ ಸಮಾಜವಾದಿ ಹಿರಿಯ ನಾಯಕರು ಕರ್ನಾಟಕಕ್ಕೂ ಬಂದರು.

ಇದನ್ನು ಓದಿದ್ದೀರಾ?: ನಿಷ್ಕಪಟ ಮನಸಿನ ಜನನಾಯಕ ಎನ್.ಡಿ ಸುಂದರೇಶ್ – ಒಂದು ನೆನಪು

ನೋಡು ನೋಡುತ್ತಿದ್ದಂತೆ ನಾಯಕರಾಗಿ ಬೆಳೆದ ಗೋಪಾಲಗೌಡರನ್ನು ರಾಜಕೀಯ ರಂಗ ಕೈಬೀಸಿ ಕರೆಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ರಾಜಕೀಯ ಚಟುವಟಿಕೆಗಳು ಚುರುಕಾದಂತೆ, ಸಮಾಜವಾದಿಗಳು ಸಹ ರಾಜಕೀಯ ರಂಗದಲ್ಲಿ ಗುರುತಿಸಿಕೊಳ್ಳತೊಡಗಿದರು.

ಗೋಪಾಲಗೌಡರು ಬದುಕಿದ್ದು ಕೇವಲ ನಲವತ್ತೊಂಬತ್ತು ವರ್ಷಗಳು ಮಾತ್ರ. ಚುನಾವಣೆಗೆ ಸ್ಪರ್ಧಿಸಿದ್ದು ನಾಲ್ಕು ಬಾರಿ. ಅದರಲ್ಲೂ ಮೂರು ಬಾರಿ ಗೆದ್ದು ಒಂದು ಸಲ ಸೋತಿದ್ದರು. ಈ ನಾಲ್ಕೂ ಸಲವೂ ಅವರ ಬಳಿ ಠೇವಣಿ ತುಂಬಲು ಸಹ ಹಣವಿರಲಿಲ್ಲ. ಮತದಾರರೇ ಮುಂದಾಗಿ ದೇಣಿಗೆ ಸಂಗ್ರಹಿಸಿ ಚುನಾವಣಾ ವೆಚ್ಚವನ್ನು ಭರಿಸುತ್ತಿದ್ದರು.

ಗೋಪಾಲಗೌಡರು ಕೇವಲ ಜನಬೆಂಬಲದಿಂದಲೇ ಬಲಾಢ್ಯರ ವಿರುದ್ಧ ಸ್ಪರ್ಧಿಸಿ ಮೂರು ಬಾರಿ ಗೆದ್ದಿದ್ದರು. ಅವರ ಆ ಕಾಲದ ಚುನಾವಣೆ, ಖರ್ಚಾಗುತ್ತಿದ್ದ ಹಣ, ಅವರ ಭಾಷಣ, ಪ್ರಚಾರ ಶೈಲಿ ಇಂದಿಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮನೆಮಾತಾಗಿದೆ. 

ಗೋಪಾಲಗೌಡರೆಂದೂ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲಿಲ್ಲ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಭಾಷಣ ಮಾಡಲಿಲ್ಲ. ಮೂರು ಬಾರಿ ಗೆದ್ದರೂ ಯಾವುದೇ ಸನ್ಮಾನ ಸ್ವೀಕರಿಸಲಿಲ್ಲ. ಅನ್ಯಾಯವನ್ನು ಸಹಿಸುವ ಜಾಯಮಾನ ಅವರದ್ದಲ್ಲವೇ ಅಲ್ಲ.
ಬದಲಿಗೆ ಸಮಾಜಪ್ರಜ್ಞೆಯ ತರುಣ ಸಮೂಹವನ್ನು ತಮ್ಮ ವಿಚಾರಧಾರೆಯತ್ತ ಸೆಳೆದರು. ಕರ್ನಾಟಕದಲ್ಲಿ ರಾಮಮನೋಹರ ಲೋಹಿಯಾ ಸಮಾಜವಾದಿ ಪಕ್ಷವನ್ನು ಸಂಘಟಿಸಿದರು. ಆ ಮೂಲಕ ಸಮಾಜದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ಮುಂದಾದರು. ಜನತೆಯ ಆಶೋತ್ತರಗಳ ಈಡೇರಿಕೆಗಾಗಿ ಪ್ರತಿಭಟನೆ, ಚಳವಳಿ, ಸತ್ಯಾಗ್ರಹಗಳನ್ನು ನಡೆಸಿದರು. ಸೆರೆಮನೆ ವಾಸವನ್ನೂ ಅನುಭವಿಸಿದರು.

ಸಾಹಿತಿಗಳ ಒಡನಾಟ, ಆಳವಾದ ಅಧ್ಯಯನದಿಂದ ಉತ್ತಮ ಭಾಷಣಕಾರರಾಗಿದ್ದ ಗೋಪಾಲಗೌಡರಿಗೆ ಹಿಂದಿ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿತ್ತು. ಹಿಂದಿಯಲ್ಲಿ ಸೊಗಸಾಗಿ ಭಾಷಣ ಮಾಡುತ್ತಿದ್ದ ಗೋಪಾಲಗೌಡರು ಉತ್ತರ ಭಾರತದಲ್ಲಿಯೂ ಪ್ರಸಿದ್ಧಿ ಪಡೆದಿದ್ದರು.

1952ರಿಂದ 1972 ರವರೆಗೆ ವಿಧಾನಸಭಾ ಸದಸ್ಯರಾಗಿದ್ದ ಗೋಪಾಲಗೌಡರು ವಿಧಾನಸಭೆಯಲ್ಲಿ ನಿಷ್ಠುರವಾದಿಗಳ ಅಗ್ರಪಂಕ್ತಿಯಲ್ಲಿದ್ದರು. ತಮ್ಮ ಪ್ರಖರ ಮಾತುಗಳಿಂದ ವಿಧಾನ ಮಂಡಲದ ಕಲಾಪಗಳಲ್ಲಿ ಯಾರೂ ಅಳಿಸದ ಇತಿಹಾಸವನ್ನೇ ನಿರ್ಮಿಸಿದರು. ಆ ನಂತರ ಆರೋಗ್ಯ ಕೈ ಕೊಟ್ಟಿದ್ದರಿಂದ ತಮ್ಮ ಸ್ಪರ್ಧಾಕ್ಷೇತ್ರವನ್ನು ಕೋಣಂದೂರು ಲಿಂಗಪ್ಪನವರಿಗೆ ಬಿಟ್ಟುಕೊಟ್ಟು, ಸಮಾಜ ಚಿಂತನೆಯಲ್ಲಿಯೇ 1972ರಲ್ಲಿ ತೀರಿಕೊಂಡರು.

ಶಾಂತವೇರಿ ಗೋಪಾಲಗೌಡ 1

ಶಾಂತವೇರಿ ಗೋಪಾಲಗೌಡರು ಶಿವಮೊಗ್ಗದಲ್ಲಷ್ಟೇ ಅಲ್ಲ, ಕರ್ನಾಟಕದಲ್ಲಿ ಇನ್ನೂ ಜೀವಂತಜ್ವಾಲೆಯಾಗಿ ಉರಿಯುತ್ತಲೇ ಇದ್ದಾರೆ. ಅದರ ದ್ಯೋತಕವಾಗಿ ಈ ಕೆಟ್ಟ ಭ್ರಷ್ಟ ವ್ಯವಸ್ಥೆಯಲ್ಲಿಯೂ ಒಳ್ಳೆಯವರು, ಯೋಗ್ಯರು, ಮಾನವಂತರು ತಮ್ಮ ಇತಿ-ಮಿತಿಗಳಲ್ಲಿಯೇ ಪ್ರಶ್ನೆಗಳನ್ನು ಎತ್ತಲು, ಜನಪರ ಹೋರಾಟಗಳಲ್ಲಿ ಭಾಗಿಯಾಗಲು, ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರುತ್ತಿದ್ದಾರೆ.  ಗೋಪಾಲಗೌಡರನ್ನೂ ಜೀವಂತವಾಗಿಟ್ಟಿದ್ದಾರೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X