- ಸಿದ್ದರಾಮಯ್ಯ ಅವರಿಗೆ ಭರ್ಜರಿ ಸ್ವಾಗತ ಕೋರಿದ ಕ್ಷೇತ್ರದ ಜನತೆ
- 1000 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಾವು ಶಾಸಕರಾಗಿ ಆಯ್ಕೆಯಾದ ಬದಾಮಿ ಕ್ಷೇತ್ರದಲ್ಲಿ ಶುಕ್ರವಾರ ಭರ್ಜರಿ ರೋಡ್ ಶೋ ನಡೆಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬದಾಮಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಭರ್ಜರಿ ಸ್ವಾಗತ ಕೋರಿದರು.
ರಾಮದುರ್ಗ ವೃತ್ತದಿಂದ ಎಪಿಎಂಸಿವರೆಗೆ ನಡೆಸಿದ ರೋಡ್ ಶೋನಲ್ಲಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂಮಳೆಗೈದರು. ಮೆರವಣಿಗೆ ಮೂಲಕ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮದ ವೇದಿಕೆಗೆ ಕರೆದೊಯ್ದು ಅಭಿಮಾನಿಗಳು, ಕಬ್ಬಿನ ಹಾರ ಸಲ್ಲಿಸಿ ಸಂಭ್ರಮಿಸಿದರು. ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಸಿದ್ದರಾಮಯ್ಯ ಅವರನ್ನು ನೋಡಲು ರಸ್ತೆಯ ಎರಡು ಬದಿಯಲ್ಲೂ ಸಾವಿರಾರು ಮಂದಿ ನೆರೆದಿದ್ದರು.
ಬಳಿಕ 228 ಕೋಟಿ ವೆಚ್ಚದ ಬದಾಮಿ ಮತ್ತು ಕೆರೂರ ಸೇರಿದಂತೆ 18 ಗ್ರಾಮಗಳ ಕುಡಿಯುವ ನೀರಿನ ಯೋಜನೆ, 64 ಕೋಟಿ ರೂ.ವೆಚ್ಚದ ಲೋಕೋಪಯೋಗಿ ಇಲಾಖೆಯ ರಸ್ತೆ ಸುಧಾರಣೆ ಕಾಮಗಾರಿಗಳು, 100 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅಂದಾಜು 1000 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು.
ಬದಾಮಿ ಕಡೆ ಒಲವು ತೋರಿದರೆ ಸಿದ್ದರಾಮಯ್ಯ?
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲದ ನಡುವೆ, ಬದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ, ಈಗ ದಿಢೀರ್ ಬದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿರುವುದು ಕುತೂಹಲ ಸೃಷ್ಟಿಸಿದೆ.
ರೋಡ್‌ಶೋ ಮಾಡುವ ಮೂಲಕ ಮತ್ತೆ ಬದಾಮಿಯಿಂದಲೇ ಸ್ಪರ್ಧೆ ಮಾಡಲು ಯೋಚಿಸುತ್ತಿದ್ದಾರಾ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇಂದಿನ ಉದ್ಘಾಟನೆ ಕಾರ್ಯಕ್ರಮದ ನಂತರ ಬದಾಮಿ ಕ್ಷೇತ್ರದ ಆಪ್ತ ವಲಯದಲ್ಲಿ ತಮ್ಮ ಸ್ಪರ್ಧೆಯ ಕುರಿತು ಖಚಿತ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬದಾಮಿಯಿಂದ ಸ್ಪರ್ಧಿಸುವಂತೆ ಆಪ್ತರ ಒತ್ತಾಯ
ಸಿದ್ದರಾಮಯ್ಯ ಅವರು ಬದಾಮಿಯಿಂದಲೇ ಮರಳಿ ಸ್ಪರ್ಧೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ಆಪ್ತರ ಬಳಗ ಸದಾ ಒತ್ತಾಯ ಮಾಡುತ್ತಲೇ ಬಂದಿದೆ. ಇತ್ತೀಚೆಗೆ 300 ಕ್ಕೂ ಹೆಚ್ಚು ಕ್ರೂಸರ್‌ಗಳಲ್ಲಿ ಆಗಮಿಸಿದ್ದ ಕ್ಷೇತ್ರದ ಜನತೆ ಸಿದ್ದರಾಮಯ್ಯ ಅವರನ್ನು ಬದಾಮಿಗೆ ಮರಳಿ ಬರುವಂತೆ ಒಕ್ಕೊರಲಿನಿಂದ ಕೇಳಿಕೊಂಡಿದ್ದರು. ಆ ವೇಳೆ ನಕಾರಾತ್ಮಕವಾಗಿ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ತಾವು ಗೆಲ್ಲುವುದು ಕಷ್ಟ ಎಂದು ಹೈಕಮಾಂಡ್ ಮನವರಿಕೆ ಮಾಡುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡು ಬದಾಮಿಯತ್ತ ಮುಖಮಾಡಿದ್ದಾರೆ.
ಎರಡು ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ
ಸಿದ್ದರಾಮಯ್ಯ ಅವರು ಶುಕ್ರವಾರ ಚಿತ್ರದುರ್ಗದಲ್ಲಿ ಮಾತನಾಡಿ, “ವರುಣಾದಿಂದ ಸ್ಪರ್ಧೆ ಮಾಡಬೇಕು ಎಂದು ಹೈಕಮಾಂಡ್‌ಗೆ ತಿಳಿಸಿರುವೆ. ಹೈಕಮಾಂಡ್ ಹೇಗೆ ಸೂಚಿಸುತ್ತೋ ಹಾಗೆ ನಡೆದುಕೊಳ್ಳುವೆ” ಎಂದಿದ್ದಾರೆ. ಆದರೆ, ಆಪ್ತ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯ ಅವರು ಸುರಕ್ಷತೆ ದೃಷ್ಟಿಯಿಂದ ವರುಣಾದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಜೊತೆಗೆ ಎರಡನೇ ಕ್ಷೇತ್ರವಾಗಿ ಬದಾಮಿಯಿಂದಲೂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕ್ಷೇತ್ರದಲ್ಲಿ ಕೇಳಿಬಂದಿವೆ. ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಎರಡರಲ್ಲೂ ಗೆದ್ದರೆ, ಮಗನ ರಾಜಕೀಯ ಭವಿಷ್ಯಕ್ಕಾಗಿ ವರುಣಾ ಕ್ಷೇತ್ರ ತ್ಯಾಗ ಮಾಡಿ ಬದಾಮಿಯನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.