ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾ ಮತ್ತು ಮಹಾರಾಷ್ಟ್ರದ ಅಂತಾರಾಜ್ಯ ಗಡಿಯಲ್ಲಿ ಬೆಳಗಾವಿ ಜಿಲ್ಲಾಡಳಿತ 24 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದೆ. ಉಭಯ ರಾಜ್ಯಗಳಿಂದ ಬೆಳಗಾವಿಗೆ ಪ್ರವೇಶಿಸುವ ವಾಹನಗಳ ತಪಾಸಣೆ ಮತ್ತಷ್ಟು ಚುರುಕುಗೊಂಡಿದೆ.
ಬೆಳಗಾವಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ್, “ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ 20 ಮತ್ತು ಗೋವಾ ಗಡಿಯಲ್ಲಿ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಚುನಾವಣಾ ಪ್ರಚಾರ ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.
“ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಬಳಸುತ್ತಿರುವ ಭಿತ್ತಿಪತ್ರಗಳು, ಬ್ಯಾನರ್‌ಗಳು ಸೇರಿದಂತೆ ಅನುಮತಿಯಿಲ್ಲದೆ ಅಳವಡಿಸಿರುವ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ಸಂಬಂಧಪಟ್ಟ ರಾಜಕೀಯ ಮುಖಂಡರಿಂದ ದಂಡ ಮತ್ತು ಶುಲ್ಕ ವಸೂಲಿ ಮಾಡಬೇಕು” ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
“ಸಾಮಾಜಿಕ ಮಾಧ್ಯಮಗಳ ಮೂಲಕ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡುವುದು ಅಥವಾ ಟೀಕೆ ಮಾಡುವುದು, ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚಾರಗಳಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಅಧಿಕಾರಿಗಳು ದೂರವಿರಬೇಕು” ಎಂದೂ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕರ್ನಾಟಕ ಚುನಾವಣೆ | ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಐತಿಹಾಸಿಕ ನಾಯಕರೇ ದಾಳ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ಅವರು ಜಿಲ್ಲೆಯ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ವಿತರಿಸಿದರು. “ಅನುಮತಿ ಇಲ್ಲದೆ ಯಾವುದೇ ಶಾಲೆ ಅಥವಾ ಕಚೇರಿ ಕಟ್ಟಡವನ್ನು ಚುನಾವಣಾ ಉದ್ದೇಶಕ್ಕೆ ಬಳಸುವಂತಿಲ್ಲ. ಒಂದು ವೇಳೆ, ಲೋಪ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ.