ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಬಳಸುವ ವಿಚಾರವಾಗಿ ಸರ್ಕಾರ ನೀಡಿದ್ದ ಆದೇಶದ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೆಲ ಸಂಘಪರಿವಾರದ ಮಂದಿ ಅಪಪ್ರಚಾರ ನಡೆಸಲು ವಿಫಲ ಯತ್ನದ ಬಳಿಕ, ಸಂಪ್ರದಾಯದಂತೆ ಇಂದು ಅರಿಶಿನ-ಕುಂಕುಮ ಬಳಸದೆಯೇ ಸಿಎಂ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಸರಳ ಪೂಜೆ ನೆರವೇರಿಸಲಾಯಿತು.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ಕೊಠಡಿಯಲ್ಲಿ ಬಣ್ಣ ಬಣ್ಣದ ಹೂವುಗಳನ್ನು ಮಾತ್ರ ಸಿಂಗರಿಸಿ, ಅರಿಶಿನ, ಕುಂಕುಮ ಬಳಸದೆಯೇ ಪೂಜೆ ಮಾಡಲಾಗಿದೆ.
ಏನಿದು ಬೆಳವಣಿಗೆ?
ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಬಳಸುವ ವಿಚಾರವಾಗಿ ಅಕ್ಟೋಬರ್ 18ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಈ ಆದೇಶದಲ್ಲಿ, ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಈ ಆದೇಶ ಹೊರಡಿಸಿತ್ತು. ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ಸಿದ್ದರಾಮಯ್ಯ ಸರ್ಕಾರ ಕೂಡ ಪಾಲಿಸಿತ್ತು.
ಆದರೆ ಈ ಆದೇಶವನ್ನೇ ಟ್ವೀಟ್ ಮಾಡುವ ಮೂಲಕ ಅಪಪ್ರಚಾರ ನಡೆಸಿ, ಸಿಎಂ ಸಿದ್ದರಾಮಯ್ಯನವರು ಹಿಂದೂ ವಿರೋಧಿ ಎಂದು ಪರೋಕ್ಷವಾಗಿ ಬಿಂಬಿಸಿ, ಅದಕ್ಕೆ ಕೋಮು ಆಯಾಮ ನೀಡಲು ಹೊರಟಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ತೀವ್ರ ಮುಖಭಂಗವಾಗಿತ್ತು.