ಕೆಂಗಲ್ ಹನುಮಂತಯ್ಯನವರ ಕಾಲದಿಂದ ಇಲ್ಲಿಯವರೆಗೆ ತಂದೆ ಬದುಕಿರುವುವಾಗಲೇ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಇತಿಹಾಸ ಕರ್ನಾಟಕದಲ್ಲಿ ಇದೆಯೇ? ಆದರೆ, ಕುಮಾರಸ್ವಾಮಿ ಅದನ್ನು ಮಾಡಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಇತಿಹಾಸದಲ್ಲಿ ತಂದೆ ಬದುಕಿರುವಾಗಲೇ ಮಗ ಮುಖ್ಯಮಂತ್ರಿಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ತೀರಿಕೊಂಡ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದರು. ಆದರೆ, ದೇವೇಗೌಡರು ಇದ್ದಾಗಲೇ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.
“ದೇವೇಗೌಡರನ್ನು ಹೊರತುಪಡಿಸಿದರೆ ಕುಮಾರಸ್ವಾಮಿ ಏನು? ನಾನೇನಾದರೂ ಎಚ್.ಡಿ ದೇವೇಗೌಡರ ಮಗನಾಗಿದ್ದರೆ ನನ್ನ ರಾಜಕೀಯ ಭವಿಷ್ಯ ಇವತ್ತೇ ಕೊನೆಯಾದರೂ ಸಹ ಅವರಿಗೆ ನೋವು ಕೊಟ್ಟು ರಾಜಕಾರಣ ಮಾಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.
“ಕುಮಾರಸ್ವಾಮಿ ಯಾರಿಗೂ ಹೇಳದೆ-ಕಳದೆ ಅಮಿತ್ ಶಾ ಜೊತೆ ಸೇರುತ್ತಾರೆಂದರೆ ಬಿಜೆಪಿ ಮತ್ತು ಜೆಡಿಎಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಷಡ್ಯಂತ್ರ ಹೆಣೆಯುತ್ತಿದೆ” ಎಂದು ಆರೋಪಿಸಿದ್ದಾರೆ.