- ‘ಚುನಾವಣೆಯಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದರಿಂದ ತಂದೆಯ ಗೆಲುವು’
- ಚುನಾವಣಾ ಆಯೋಗ ಗಂಭೀರವಾಗಿ ಈ ಪ್ರಕರಣ ಗಮನಿಸಲಿ: ಬೊಮ್ಮಾಯಿ
ಮತದಾರರಿಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದರಿಂದಲೇ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಮತಗಳು ಬಂದು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು ಸಿಎಂ ಸಿದ್ದರಾಮಯ್ಯ ಅವರ ಡಾ. ಯತೀಂದ್ರ ಅವರು ಹೇಳಿರುವ ಬಹಿರಂಗ ಹೇಳಿಕೆ ಈಗ ಎಲ್ಲಡೆ ಸದ್ದು ಮಾಡುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರು ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನುವ ಅರ್ಥದಲ್ಲಿ ಡಾ. ಯತೀಂದ್ರ ಅವರು ನೀಡಿರುವ ಹೇಳಿಕೆ ನಿಜವಾಗಿದ್ದರೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ, “ಯತೀಂದ್ರ ಅವರು ಹೇಳಿದ್ದು ನಿಜವಾಗಿದ್ದರೆ, ಅದನ್ನು ಚುನಾವಣಾ ಆಯೋಗ ಗಂಭೀರವಾಗಿ ಗಮನಿಸಬೇಕಾಗುತ್ತದೆ. ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಒಂದು ಚುನಾವಣಾ ತಕರಾರು ಅರ್ಜಿ ಇದೆ” ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯ ವಿರುದ್ಧ ಒಂದು ಚುನಾವಣಾ ತಕರಾರು ಅರ್ಜಿ ಇದೆ. ಅವರ ಪುತ್ರನ ಹೇಳಿಕೆಗೆ ಸಾಕ್ಷ್ಯಾಧಾರ ಇದ್ದರೆ ಆಯೋಗ ಇದನ್ನು ಪರಿಗಣಿಸಲಿ. ಚುನಾವಣೆಯಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚುವುದು ಅಪರಾಧವಾಗಲಿದೆ” ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ’ಈ ದಿನ’ ಸಂಪಾದಕೀಯ| 2029ರ ಕನಸಿಗೆ ಈಗಲೇ ‘ಟೋಪಿ’ ಹೊಲಿದ ಮೋದಿ ಮಂತ್ರವಾದಿ
ಏನಿದು ವಿವಾದ? ಯತೀಂದ್ರ ಹೇಳಿದ್ದೇನು?
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಮಡಿವಾಳ ಸಮುದಾಯ ಭವನದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, “ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲಲು ಮಡಿವಾಳ ಸಮುದಾಯದ ನಂಜಪ್ಪ ದೊಡ್ಡ ಪಾತ್ರ ಇದೆ. ಸಾವಿರಾರು ಜನರನ್ನು ಸೇರಿಸಿ ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಿದ್ದಾರೆ. ಎರಡು ಮೂರು ಬಾರಿ ಡೇಟ್ ಕ್ಯಾನ್ಸಲ್ ಆದರೂ ಪಟ್ಟು ಬಿಡದೆ ಸಿದ್ದರಾಮಯ್ಯರ ಕೈಯಲ್ಲೇ ಕೊಡಿಸಿದರು. ಆ ಕಾರ್ಯಕ್ರಮ ಯಶಸ್ವಿಯಾಯಿತು, ದೊಡ್ಡ ಪ್ರಮಾಣದಲ್ಲಿ ಮತ ಪಡೆದರು. ಮಡಿವಾಳ ಸಮುದಾಯ ಹೆಚ್ಚಿನ ಬೆಂಬಲ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ” ಎಂದು ತಿಳಿಸಿದ್ದರು.
ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಸಿಎಂ, ತಾವು ಸ್ಪರ್ಧಿಸಿದ ವರುಣ ಕ್ಷೇತ್ರದಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದೇ ಚುನಾವಣೆ ಗೆಲ್ಲಲು ಸಹಕಾರಿ ಆಯ್ತು ಎಂದು ಪುತ್ರ ನೀಡಿರುವ ಹೇಳಿಕೆ ವಿವಾದ ಕಿಡಿ ಹೊತ್ತಿಸಿದೆ.