ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನ್ನನ್ನು ಬೆಂಗಳೂರಿಗೆ ಆಹ್ವಾನಿಸಿ, ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.
ಪತ್ರದಲ್ಲಿ ಮುಖ್ಯಮಂತ್ರಿಯವರೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆಯ ರೂವಾರಿ ಎಂಬುದನ್ನು ತಿಳಿದು ಹರ್ಷ ವ್ಯಕ್ತಪಡಿಸಿದ್ದು, ಈ ಶಾಲೆಗಳಿಂದ ಅನೇಕ ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿ, ಬಾಳಿಗೆ ದಾರಿದೀಪವಾಗಿವೆ ಎಂದು ಬಣ್ಣಿಸಿದ್ದಾಳೆ.
ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತಾ ಪತ್ರ ಬರೆದಿದ್ದಾರೆ.
ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಂಕಿತಾರನ್ನು ಬೆಂಗಳೂರಿಗೆ ಕರೆಸಿಕೊಂಡು ಸನ್ಮಾನಿಸಿ, ಆಕೆಯ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಧನ… pic.twitter.com/le2lB9sGNY
— DIPR Karnataka (@KarnatakaVarthe) June 13, 2024
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಂಕಿತಾಳನ್ನು ಬೆಂಗಳೂರಿಗೆ ಆಹ್ವಾನಿಸಿ, ಸನ್ಮಾನಿಸಿದ್ದಲ್ಲದೆ, ಮುಂದಿನ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿಯೂ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಅಂಕಿತಾ ಮುಖ್ಯಮಂತ್ರಿಗಳಗೆ ತನ್ನ ಮನದಾಳದಿಂದ ಅಭಿನಂದನೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾಳೆ.
ಅಂಕಿತಾ ಸಿಎಂಗೆ ಬರೆದ ಪತ್ರದಲ್ಲಿ ಏನಿದೆ?
ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಮಾಡುವ ಸಾಷ್ಟಾಂಗ ನಮಸ್ಕಾರಗಳು. ಈ ಬಾರಿ ಅಂದರೆ 2023-24ನೇ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ (ಶೇ.100) ಸ್ಥಾನ ಬಂದಿದ್ದು, ಇಡೀ ರಾಜ್ಯಕ್ಕೆ ಸಂತಸಕರವಾದ ಸಂಗತಿಯಾಗಿದೆ. ಅದರಲ್ಲೂ ಪ್ರತೀ ಬಾರಿ ಫಲಿತಾಂಶ ಎಂದೊಡನೆ ದಕ್ಷಿಣ ಕರ್ನಾಟಕದೆಡೆ ಮುಖ ಮಾಡುತ್ತಿದ್ದ ಜನರ ದೃಷ್ಟಿ ಈ ಬಾರಿ ಬದಲಾಯಿತು. ಉತ್ತರ ಕರ್ನಾಟಕದ ಒಟ್ಟು ಸಾಮಾನ್ಯ ಹುಡುಗಿಯೂ ಸಹ ತಾನಂದುಕೊಂಡಿದ್ದನ್ನು ಸಾಧಿಸಬಲ್ಲಳು ಎಂದು ಆರಿಸಿಕೊಟ್ಟಿದ್ದಕ್ಕೆ ತುಂಬಾ ಹೆಮ್ಮೆ ಇದೆ
ನನ್ನನ್ನು ಬೆಂಗಳೂರಿಗೆ ಆಹ್ವಾನಿಸಿ, ತಮ್ಮ ಸ್ವ-ಗೃಹದವರೆಗೂ ಕರೆದು ಸನ್ಮಾನಿಸಿ, ಅಭಿನಂದಿಸಿ ನನ್ನ ಮುಂದಿನ ಓದಿನ ಭವಿಷ್ಟಕ್ಕೆ ನೆರವು ನೀಡಿದ್ದೀರಿ. ಅಷ್ಟೇ ಅಲ್ಲದೇ, ತುಂಬು ಹೃದಯದಿಂದ ನನ್ನನ್ನು ಸತ್ಕರಿಸಿ, ಹರಸಿ, ಆಶೀರ್ವದಿಸಿದ್ದೀರಿ. ನಿಮ್ಮಿಂದಲೇ ಪ್ರಾರಂಭವಾದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು. ಈ ಸಂಸ್ಥೆ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೆಳ್ಳಿಗೇರಿಯಲ್ಲಿ ನಾನು ಓದಿದ್ದು. ಈ ಎಲ್ಲ ವಸತಿ ಶಾಲೆಗಳ ಪ್ರಾರಂಭಿಕ ಕಾರಣೀಭೂತರು ತಾವೆಂದು ತಿಳಿದು ಬಹಳ ಸಂತಸವಾಗಿದೆ. ಸಾಕಷ್ಟು ಸುವ್ಯವಸ್ಥೆಯುಳ್ಳ ಈ ಶಾಲೆಗಳು ಸರ್ಕಾರಿ ಶಾಲೆಗಳು ಎಂದು ಸಾಕಷ್ಟು ಜನರಿಗೆ ಇವುಗಳ ಬಗ್ಗೆ ತಪ್ಪು ಕಲ್ಪನೆಯಿರುತ್ತದೆ. ಈ ಶಾಲೆಗಳಿಂದ ಸಾಕಷ್ಟು ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿ, ಬಾಳಿಗೆ ದಾರಿದೀಪವಾಗಿವೆ.
ನಿಮ್ಮನ್ನು ಭೇಟಿ ಆಗುವುದು ಎಂದರೆ ಜನಸಾಮಾನ್ಯರಿಗೆ ಎಟುಕದ ಮಾತು. ಅಂತಹ ಸೌಭಾಗ್ಯ ನಮಗೆ ಒದಗಿ ಬಂದಿರುವುದಕ್ಕೆ ಬಹಳ ಸಂತೋಷವಿದೆ. ನಿಮ್ಮ ಆಶೀರ್ವಾದ ನನ್ನೊಂದಿಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
