- ಚಾಮುಂಡಿ ಬೆಟ್ಟಕ್ಕೆ ಸುಗಮ ಸಂಚಾರ ಅನುವು ಮಾಡಿಕೊಡುವ ಹಿನ್ನೆಲೆ
- ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿದ ಮೈಸೂರು ಜಿಲ್ಲಾಡಳಿತ
ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಒದಗಿಸಿಕೊಟ್ಟರೆ, ಇತ್ತ ಮೈಸೂರು ಜಿಲ್ಲಾಡಳಿತ ಪುರುಷರಿಗೂ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿಕೊಟ್ಟಿದೆ.
ಹೌದಾ ಅಂತ ಮೂಗಿನ ಮೇಲೆ ಬೆರಳಿಡಬೇಡಿ. ಏಕೆಂದರೆ ಈ ಯೋಜನೆ ಜಾರಿಯಾಗಿರೋದು ನಿಜ, ಆದರೆ ಅದು ಸೀಮಿತ ಅವಧಿಗೆ ಎನ್ನುವುದು ಗಮನಾರ್ಹ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರಗಳಂದು ಖಾಸಗಿ ವಾಹನಗಳ ಪ್ರವೇಶಕ್ಕೆ ಮೈಸೂರು ಜಿಲ್ಲಾಡಳಿತ ಸಂಪೂರ್ಣ ನಿರ್ಬಂಧ ವಿಧಿಸಿದೆ. ಹೀಗಾಗಿ ಸರ್ಕಾರಿ ಬಸ್ ಗಳಲ್ಲಿ ಭಕ್ತಾದಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲಾ ಭಕ್ತರಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಮಹಿಳಾ ಭಕ್ತರ ಜೊತೆಗೆ ಪುರುಷ ಭಕ್ತಾದಿಗಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂದಹಾಗೆ ಜಿಲ್ಲಾಡಳಿತ ಈ ಯೋಜನೆ ಜಾರಿಗೆ ತರಲು ಕಾರಣವಾಗಿರುವುದು ಖಾಸಗಿ ವಾಹನಗಳ ದಟ್ಟಣೆ, ಅಪಘಾತ ತಡೆ, ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡುವ ಸಲುವಾಗಿ. ಜೂನ್ 23 ರಿಂದ ಜುಲೈ 14ರ ಆಷಾಢ ಶುಕ್ರವಾರ ದಿನಗಳಂದು ಹಾಗೂ ಜುಲೈ 10ರ ವರ್ಧಂತಿ ದಿನದಂದು ಹೆಚ್ಚಿನ ಜನ ಬರುವುದರಿಂದ ಸಂಚಾರ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ?: ಪೊಳ್ಳು ಭರವಸೆ ಕೊಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದೆಷ್ಟು ಸರಿ: ಎಚ್‌ಡಿಕೆ
ಇದರಂತೆ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ವಾಹನಗಳನ್ನ ಲಲಿತ ಮಹಲ್ ಮೈದಾನದಲ್ಲಿ ನಿಲುಗಡೆ ಮಾಡುವಂತೆ ಸೂಚಿಸಿದೆ. ಇಲ್ಲಿಂದ ಜಿಲ್ಲಾಡಳಿತದ ವತಿಯಿಂದ ಮಾಡಿರುವ ಸರ್ಕಾರಿ ಬಸ್ ಗಳಲ್ಲಿ ಭಕ್ತರು ತೆರಳುವಂತೆ ಸೂಚನೆ ನೀಡಲಾಗಿದೆ.
ಬೆಳಗಿನ ಜಾವ 3 ರಿಂದ ರಾತ್ರಿ 10 ಗಂಟೆವರೆಗೂ ಈ ಉಚಿತ ಬಸ್ ಸೌಲಭ್ಯ ಇರಲಿದೆ. ಶಿಷ್ಟಾಚಾರವಿರುವ ಗಣ್ಯರ ಮತ್ತು ಅತೀ ಗಣ್ಯರ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.