ಭೂ ಸುಧಾರಣಾ ಖಾತೆ ಸಚಿವರಾಗಿ, ಸ್ವಂತ ಭೂಮಿಯನ್ನೇ ಬಿಟ್ಟುಕೊಟ್ಟ ಸುಬ್ಬಯ್ಯ ಶೆಟ್ಟಿ

Date:

Advertisements
ಸೌಮ್ಯ ಸ್ವಭಾವದ ಸುಬ್ಬಯ್ಯ ಶೆಟ್ಟಿಯವರು, ವೃತ್ತಿವಂತ ರಾಜಕಾರಣಿಯಲ್ಲ. ರಾಜಕಾರಣವನ್ನು ಸ್ವಾರ್ಥಕ್ಕೆ ಬಳಸಿಕೊಂಡವರಲ್ಲ. ದೇವರಾಜ ಅರಸರು, ಭೂ ಸುಧಾರಣಾ ಖಾತೆ ಸಚಿವರನ್ನಾಗಿ ಮಾಡಿದಾಗ, ಕಾಯ್ದೆಯನ್ನು ಜಾರಿಗೆ ತರುವಾಗ, ತಮ್ಮ ಒಡೆತನದ ನೂರಾರು ಎಕರೆ ಭೂಮಿಯನ್ನು ಬಿಟ್ಟುಕೊಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟ ಮಹಾನುಭಾವರು.

ದೇವರಾಜ ಅರಸು ಅವರ ಹೆಸರು ಪ್ರಸ್ತಾಪವಾದಾಗಲೆಲ್ಲ, ಭೂ ಸುಧಾರಣೆ ಕಾಯ್ದೆ ನೆನಪಾಗುತ್ತದೆ. ಅರಸು ಮತ್ತು ಭೂ ಸುಧಾರಣೆ ಎಂದಾಕ್ಷಣ ರಾಜ್ಯದ ಜನ ನೆನಪಿಟ್ಟುಕೊಳ್ಳಬೇಕಾದ ಮತ್ತೊಂದು ಹೆಸರು- ಬಿ.ಸುಬ್ಬಯ್ಯ ಶೆಟ್ಟಿ.

ಸುಬ್ಬಯ್ಯ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಕ್ರಬೈಲು ಗ್ರಾಮದವರು. 1972 ಮತ್ತು 1978ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು, ಸುರತ್ಕಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರು. ದೇವರಾಜ ಅರಸು ಅವರ ಸಂಪುಟದಲ್ಲಿ ಭೂ ಸುಧಾರಣಾ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದವರು. ರೈತ ಕೂಲಿಕಾರರು ಕೃಷಿ ಭೂಮಿಯ ಮಾಲೀಕತ್ವ ಹೊಂದುವ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಏಪ್ರಿಲ್ 4, 1934ರಂದು ಜನಿಸಿದ ಸುಬ್ಬಯ್ಯ ಶೆಟ್ಟರು, ಕೃಷಿಕ ಕುಟುಂಬದಿಂದ ಬಂದವರು, ಬಹುಸಂಖ್ಯಾತ ಬಂಟ ಸಮುದಾಯಕ್ಕೆ ಸೇರಿದವರು. ಉಂಡುಟ್ಟು ಉಡಲು ಕೊರತೆ ಇಲ್ಲದ, ಅಪಾರ ಕೃಷಿ ಭೂಮಿ ಹೊಂದಿದ್ದ ಶ್ರೀಮಂತರು. ಶೆಟ್ಟರು ಪ್ರಾಥಮಿಕ ಶಿಕ್ಷಣವನ್ನು ಪಾತೂರು ಎಂಬ ಹಳ್ಳಿಯಲ್ಲಿ ಕಲಿತರು, ನಂತರ ಪ್ರೌಢಶಾಲೆಗೆ ಮಂಗಳೂರಿನ ಸೇಂಟ್ ಅಲೋಸಿಯಸ್ ಕಾಲೇಜು ಸೇರಿದರು. ಇಲ್ಲಿಯೇ ಪಿಯೂಸಿ ಮತ್ತು ಬಿಎಸ್ಸಿ ಪದವಿ ಪಡೆದರು.

Advertisements

ಆ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾಭ್ಯಾಸವೆಂದರೆ, ಅದರಲ್ಲೂ ಕಾನೂನು ಪದವಿಗೆ ದೂರದ ಮದ್ರಾಸಿಗೆ ಹೋಗಬೇಕಾಗಿತ್ತು. ಸುಬ್ಬಯ್ಯ ಶೆಟ್ಟರು ಬಿಎಲ್ ಪದವಿ ಪಡೆಯಲು ಮದ್ರಾಸಿಗೆ ತೆರಳಿದರು. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನ ಇಂಟೆಲಿಜೆನ್ಸ್ ಬ್ಯೂರೊ ಸದಸ್ಯರಾಗಿ ಕೆಲಸ ಮಾಡಿದ್ದರು. ಮರಳಿ ತವರಿನತ್ತ ಮುಖ ಮಾಡಿ ಸೂರ್ಯನಾರಾಯಣ ಅಡಿಗ ಮತ್ತು ವೈಕುಂಠ ಬಾಳಿಗರ ಜ್ಯೂನಿಯರ್ ಆಗಿ ವಕೀಲಿ ವೃತ್ತಿ ಆರಂಭಿಸಿದರು. ಜನಸಂಪರ್ಕ ಸಾಧಿಸಿ, ಜನಪ್ರಿಯ ವಕೀಲರಾಗಿ ಹೆಸರು ಮಾಡಿದರು. 1969ರಲ್ಲಿ ರಾಜಕಾರಣಕ್ಕೆ ಧುಮುಕಿದರು.

1969- ರಾಜ್ಯ ರಾಜಕಾರಣದ ಪರ್ವ ಕಾಲ. ಕಾಂಗ್ರೆಸ್ ಇಬ್ಭಾಗವಾದ ಕಾಲ. ಆಗ, ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ಸಿಗೆ ದೇವರಾಜ ಅರಸು ಕನ್ವೀನರ್ ಆಗಿದ್ದರು. ದೇವರಾಜ ಅರಸು ಅವರ ಶಿಷ್ಯರಾಗಿ ರಾಜಕಾರಣಕ್ಕೆ ಇಳಿದ ಸುಬ್ಬಯ್ಯ ಶೆಟ್ಟರು, ಅವರ ಮಾರ್ಗದರ್ಶನದಲ್ಲಿ ರೂಪುಗೊಂಡವರು. ಎರಡು ಬಾರಿ ಶಾಸಕರಾಗಿ, ಅರಸು ಸಂಪುಟದಲ್ಲಿ ಭೂ ಸುಧಾರಣೆ, ಇಂಧನ ಮತ್ತು ವಾರ್ತಾ, ವಿದ್ಯಾ ಖಾತೆಗಳ ಮಂತ್ರಿಯಾಗಿ ಹೆಸರು ಮಾಡಿದವರು. ‘ಉಳುವವನೆ ಹೊಲದೊಡೆಯ’ನನ್ನಾಗಿಸುವ ಭೂ ಸುಧಾರಣೆ ಕಾಯ್ದೆ ತರುವಲ್ಲಿ ಅರಸು ಕಂಡ ಕನಸನ್ನು ನನಸು ಮಾಡುವಲ್ಲಿ ಸುಬ್ಬಯ್ಯ ಶೆಟ್ಟರ ಶ್ರಮ ಸ್ಮರಣೀಯ.

ರಾಜ್ಯ ಸರಕಾರ ಕೊಡಮಾಡುವ 2014ರ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿರುವ ಸುಬ್ಬಯ್ಯ ಶೆಟ್ಟರು, ಬೆಂಗಳೂರಿನ ನಂದಿದುರ್ಗದ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಕಳೆದ ಕೆಲ ವರ್ಷಗಳಿಂದ ಪಕ್ಷರಹಿತ ರಾಜಕಾರಣಿಯಾಗಿ, ರಾಜಕೀಯ ಚಿಂತಕರಾಗಿ, ಕಳೆದ ಕಾಲವ ನೆನಪು ಮಾಡಿಕೊಳ್ಳುವುದಕ್ಕಷ್ಟೇ ಸೀಮಿತರಾಗಿದ್ದರು. ಆತ್ಮೀಯರೊಂದಿಗಷ್ಟೇ ಮಾತು-ಕತೆಯಾಡುತ್ತಿದ್ದರು. ಇತ್ತೀಚೆಗೆ ಪತ್ನಿ ಶಾಲಿನಿ ಶೆಟ್ಟಿ ನಿಧನರಾಗಿ, ಖಿನ್ನತೆಗೊಳಗಾಗಿದ್ದರು. ಅನಾರೋಗ್ಯಪೀಡಿತರಾಗಿದ್ದರು. ಮಾ. 10ರಂದು, ತಮ್ಮ 91ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಸೌಮ್ಯ ಸ್ವಭಾವದ ಶೆಟ್ಟರು, ವೃತ್ತಿವಂತ ರಾಜಕಾರಣಿಯಲ್ಲ. ರಾಜಕಾರಣವನ್ನು ಸ್ವಾರ್ಥಕ್ಕೆ ಬಳಸಿಕೊಂಡವರಲ್ಲ. ಅಧಿಕಾರದಲ್ಲಿದ್ದಾಗ ಅಹಂಕಾರದಿಂದ ಮೆರೆಯಲಿಲ್ಲ. ಜನಸೇವೆಯನ್ನು ಮರೆಯಲಿಲ್ಲ. ದೇವರಾಜ ಅರಸರು, ಭೂ ಸುಧಾರಣಾ ಖಾತೆ ಸಚಿವರನ್ನಾಗಿ ಮಾಡಿದಾಗ, ಕಾಯ್ದೆಯನ್ನು ಜಾರಿಗೆ ತರುವಾಗ, ತಮ್ಮ ಒಡೆತನದ ನೂರಾರು ಎಕರೆ ಭೂಮಿಯನ್ನು ಬಿಟ್ಟುಕೊಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟ ಮಹಾನುಭಾವರು. ಇತಿಹಾಸದ ಪುಟಗಳಲ್ಲಿ ದಾಖಲಾದವರು.

ಇದನ್ನು ಓದಿದ್ದೀರಾ?: ದೇವರಾಜ ಅರಸು- ಕರ್ನಾಟಕದ ಒಂದು ವಿಶಿಷ್ಟ ಗ್ರೀಕ್ ದುರಂತಗಾಥೆ

ಇಂತಹ ಸುಬ್ಬಯ್ಯ ಶೆಟ್ಟರನ್ನು ಖುದ್ದು ಕಂಡು ಮಾತನಾಡಿಸಲು 2015ರಲ್ಲಿ, ಅವರ ಮನೆಗೆ ತೆರಳಿದ್ದೆ. ದೇವರಾಜ ಅರಸು ಮತ್ತು ಭೂ ಸುಧಾರಣೆ ಕಾಯ್ದೆ ಕುರಿತು ಮಾತನಾಡಬೇಕು, ಅವರೊಂದಿಗಿನ ಒಡನಾಟವನ್ನು ವಿವರಿಸಿ ಎಂದಾಗ, ಒಂದು ಕ್ಷಣ ಮೌನಕ್ಕೆ ಜಾರಿದರು. ನಂತರ ‘ಈಗ ಏಕೆ ಬೇಕು’ ಎಂದರು. 2015ಕ್ಕೆ ಅರಸರಿಗೆ ನೂರು ವರ್ಷ ತುಂಬುತ್ತದೆ. ಅದರ ನೆಪದಲ್ಲಿ, ನಿಮ್ಮಂತಹ ಒಡನಾಡಿಗಳನ್ನು ಮಾತಿಗೆಳೆಯೋಣ ಎಂದಾಗ, ನಿಧಾನವಾಗಿ ನೆನಪಿನ ಸುರಳಿ ಬಿಚ್ಚಿಟ್ಟರು. ಒಂದೊಂದು ಮಾತನ್ನೂ ಮುತ್ತಿನಂತೆ ತೂಗಿ, ಮುತ್ತಿಗಿಂತಲೂ ಮಿಗಿಲು ಎನ್ನುವ ಮೂಲಕ ಅರಸರನ್ನು ಅಟ್ಟಕ್ಕೇರಿಸಿದರು.

”ದೇವರಾಜ ಅರಸರನ್ನು ನಾನು ನೋಡಿದ್ದು 1969ರಲ್ಲಿ. ಬೆಂಗಳೂರಿನಲ್ಲೊಂದು ಸಭೆ ಕರೆದಿದ್ದರು. ನಾನು ಆ ಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿಂದ ಶುರುವಾದ ಅವರೊಂದಿಗಿನ ಒಡನಾಟ, ಅವರು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯುವತನಕ, ಸುಮಾರು 11 ವರ್ಷಗಳ ವರೆಗೆ ಮುಂದುವರೆದಿತ್ತು. 1972ರಲ್ಲಿ ಮೊದಲ ಬಾರಿಗೆ ನಾನು ಶಾಸಕನಾಗಿ ಆಯ್ಕೆಯಾದಾಗ ನಮ್ಮದೇ ಸರಕಾರ ಅಧಿಕಾರದಲ್ಲಿತ್ತು. ಆದರೆ ನಾನು ಮಂತ್ರಿಯಲ್ಲ. ಅರಸರ ಮೊದಲ ವರ್ಷದ ಆಡಳಿತ ಅಷ್ಟು ಸರಿ ಇರಲಿಲ್ಲ. ಕಾಂಗ್ರೆಸ್ ಪಕ್ಷದೊಳಗೇ ಇದ್ದ ನಮ್ಮಂತಹ ಕೆಲ ಸಮಾನಮನಸ್ಕ ಬಂಡಾಯಗಾರರು ಅರಸರ ಆಡಳಿತವನ್ನು ಕಟುವಾಗಿ ಟೀಕಿಸುತ್ತಿದ್ದೆವು. ಆದರೆ ಅರಸು ಬೇಸರ ಮಾಡಿಕೊಳ್ಳುತ್ತಿರಲಿಲ್ಲ.

”ನಾನು ಅವರಿಗಿಂತ 20 ವರ್ಷ ಚಿಕ್ಕವ. ವಯಸ್ಸಿನ ಅಂತರವನ್ನು ಮರೆತು, ‘ಏನು ಮಾಡಬೇಕು ಹೇಳಿ’ ಎಂದು ಕಿವಿಗೊಟ್ಟು ಕೇಳುತ್ತಿದ್ದರು. ಅವರೊಂದಿಗೆ ಮಾತನಾಡುತ್ತ ಕುಳಿತರೆ ಹೊತ್ತು ಹೋಗುವುದೇ ಗೊತ್ತಾಗುತ್ತಿರಲಿಲ್ಲ. ಅವರ ನಿಷ್ಕಲ್ಮಶ ಪ್ರೀತಿ, ವಯಸ್ಸಿನ ಅಂತರ ಮರೆತು ಬೆರೆಯುತ್ತಿದ್ದ ಬಗೆ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡುತ್ತಿತ್ತು. ಆ ದಾರಿಯಲ್ಲಿ ನಡೆಯುವಂತೆ ನಮ್ಮನ್ನೂ ಪ್ರೇರೇಪಿಸುತ್ತಿತ್ತು.

”1973ರಲ್ಲಿ ಅರಸರು ನನ್ನನ್ನು ಭೂ ಸುಧಾರಣಾ ಖಾತೆಯ ಮಂತ್ರಿ ಮಾಡಿದರು. ರಾಜಕಾರಣಕ್ಕೇ ಹೊಸಬ, ಗೆದ್ದಿರುವುದು ಅದೇ ಮೊದಲ ಸಲ. ‘ನಿಮ್ಮಲ್ಲಿ ಆ ಶಕ್ತಿ ಮತ್ತು ಬುದ್ಧಿ ಇದೆ, ನಿಮ್ಮ ಕೈಯಲ್ಲಿ ಸಾಧ್ಯವಿದೆ ಮಾಡಿ…’ ಎಂದು ಪ್ರೋತ್ಸಾಹಿಸಿದರು. ಮಂತ್ರಿ ಕುರ್ಚಿಯಲ್ಲಿ ಕೂರಿಸುವ ಮುನ್ನ ದೇವರಾಜ ಅರಸರು, ‘ನಿಮಗೆ ಜಮೀನು ಎಷ್ಟಿದೆ’ ಎಂದಿದ್ದರು. ಪುತ್ತೂರಿನ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಪಿತ್ರಾರ್ಜಿತವಾಗಿ ಬಂದ 200 ಚಿಲ್ಲರೆ ಎಕರೆ ಜಮೀನಿತ್ತು. ಜತೆಗೆ ನನ್ನ ಪತ್ನಿ ಕಡೆಯಿಂದ ಬಂದಿದ್ದ ಆಸ್ತಿಯೂ ಅಪಾರವಾಗಿತ್ತು. ಅನುಕೂಲಸ್ಥ ಬಂಟ ಜನಾಂಗದ ಜಮೀನುದಾರರು ಎಂದು ಜನ ನಮ್ಮನ್ನು ಗುರುತಿಸಿದ್ದರು. ಹಾಗಾಗಿ, ಯಾವುದನ್ನೂ ಮರೆಮಾಚದೆ ಅವರ ಮುಂದಿಟ್ಟಿದ್ದೆ.

”’ಸುಬ್ಬಯ್ಯ ಶೆಟ್ಟರೇ, ಡೈಮಂಡ್ ಕಟ್ಸ್ ಡೈಮಂಡ್ ಎನ್ನುವುದರ ಅರ್ಥ ಗೊತ್ತೇನ್ರಿ ನಿಮಗೆ’ ಎಂದು ಪ್ರಶ್ನಿಸಿದ್ದರು. ನಂತರ ಅವರೇ, ‘ಕಟ್ಟುನಿಟ್ಟಾಗಿ ಭೂಸುಧಾರಣಾ ಕಾನೂನನ್ನು ಜಾರಿಗೆ ತನ್ನಿ; ನಿಸ್ಸಂಕೋಚದಿಂದ, ನಿರ್ದಾಕ್ಷಿಣ್ಯದಿಂದ ಶತಶತಮಾನಗಳಿಂದ ಶೋಷಣೆಗೊಳಗಾದ ಗೇಣಿದಾರನಿಗೆ ನ್ಯಾಯ ದೊರಕಿಸಿಕೊಡಿ…’ ಎಂದರು. ಇದು ಅರಸರು ಮಂತ್ರಿಯಾದ ನನಗೆ ಹೇಳಿದ ಮೊದಲ ಮಾತು.

”’ಉಳುವವನೆ ಹೊಲದೊಡೆಯ’ ಎಂಬ ಘೋಷವಾಕ್ಯದೊಂದಿಗೆ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಮಿತಿ ರಚನೆ, ಚರ್ಚೆ, ಕಾನೂನಾತ್ಮಕ ಕ್ರಮಗಳ ಚಟುವಟಿಕೆಗಳು ಶುರುವಾದವು. ಭೂಮಿಯನ್ನು ವಾಪಸ್ ಕೊಡಿ ಅನ್ನುವುದು, ಅದನ್ನು ತಮ್ಮ ಕೈ ಕೆಳಗೆ, ಗೇಣಿದಾರರಾಗಿ ಕೆಲಸ ಮಾಡುತ್ತಿರುವವರಿಗೆ ಕೊಡಿ ಎನ್ನುವುದು ಸಾಮಾನ್ಯವಾದ ಸಂಗತಿಯೇ? ಮೇಲ್ಜಾತಿಯ ಜನರಿಂದ, ಭೂ ಮಾಲೀಕರಿಂದ ಭಾರೀ ವಿರೋಧ ವ್ಯಕ್ತವಾಯಿತು. ಅದರಲ್ಲೂ ಕರಾವಳಿ ಭಾಗದ ಬಲಾಢ್ಯ ಬಂಟ ಸಮುದಾಯ, ಅದು ನನ್ನ ಗೆಲ್ಲಿಸಿದ ಸಮುದಾಯ, ನನ್ನ ವಿರುದ್ಧವೇ ತಿರುಗಿಬಿತ್ತು. ನನ್ನ ಮೇಲೆ ಹಲ್ಲೆ ಮಾಡಿತು. ಸೇಮಿತ ಎಂಬ ಬಜ್ಪೆಯ ವ್ಯಕ್ತಿಯನ್ನು ಕೊಲ್ಲಿಸಿರುವುದಾಗಿ ನನ್ನ ಮೇಲೆಯೇ ಆಪಾದನೆ ಹೊರಿಸಿತು.

ಇದನ್ನು ಓದಿದ್ದೀರಾ?: ಎಸ್.ಎಂ ಕೃಷ್ಣ: ನಾಡು ಕಂಡ ವರ್ಣರಂಜಿತ ರಾಜಕಾರಣಿಯ ಯುಗಾಂತ್ಯ

”ಅಸೆಂಬ್ಲಿಯಲ್ಲಿ, ವಿರೋಧ ಪಕ್ಷದಲ್ಲಿದ್ದ ಎ.ಕೆ. ಸುಬ್ಬಯ್ಯನವರು ಮೊದಲಿಗೆ ನನ್ನ ಮೇಲೆ ಟೀಕಾಸ್ತ್ರಗಳನ್ನು ಪ್ರಯೋಗಿಸಿ ಅಸ್ಥಿರಗೊಳಿಸಲೆತ್ನಿಸಿದರೂ, ತದನಂತರ ಸತ್ಯ ಅರಿತು ಮೆಚ್ಚಿ ಮಾತನಾಡಿದರು. ಕಂದಾಯ ಮಂತ್ರಿಗಳಾದ ಹುಚ್ಚುಮಾಸ್ತಿಗೌಡರು ನನ್ನ ಬೆಂಬಲಕ್ಕೆ ನಿಂತರು. ಮೇಲ್ವರ್ಗದ ಭೂ ಮಾಲೀಕರಿಂದ ಭೂಮಿಯನ್ನು ಸರಕಾರಕ್ಕೆ ಪಡೆದು ಒಕ್ಕಲುತನ ಮಾಡುತ್ತಿದ್ದವರಿಂದ ಡಿಕ್ಲರೇಷನ್ ಫಾರಂ-7ರಿಂದ ಒಡೆತನಕ್ಕೆ ಅರ್ಜಿ ಸ್ವೀಕರಿಸಿ, ಭೂ ನ್ಯಾಯ ಮಂಡಳಿ ರಚಿಸಿ ಅದರ ಮೂಲಕ ಭೂಮಿ ವಿತರಿಸುವ ಕೆಲಸಕ್ಕೆ ಕೈಹಾಕಿದ್ದಾಯಿತು. ರಾಜ್ಯದ ನಾನಾ ಮೂಲೆಗಳಿಂದ ಪ್ರಬಲ ವಿರೋಧ ವ್ಯಕ್ತವಾಯಿತು. ಮೇಲ್ಜಾತಿಯ ಶ್ರೀಮಂತರ ದಬ್ಬಾಳಿಕೆ ಜೋರಾಯಿತು. ಆದರೆ ಬಹುಸಂಖ್ಯಾತ ಬಡವರು, ಭೂರಹಿತರು ಸರಕಾರದ ಪರವಾಗಿದ್ದರು. ನಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದು, ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದರು. ಭೂ ಸುಧಾರಣೆ ಕಾಯ್ದೆ ಕರಾವಳಿ ಭಾಗದಲ್ಲಿಯೇ ಹೆಚ್ಚಾಗಿ ಯಶಸ್ಸು ಕಂಡಿದ್ದು ದೇವರಾಜ ಅರಸರಿಗೆ ಸಂತಸ ತಂದಿತ್ತು. ಅವರ ಡೈಮಂಡ್ ಕಟ್ಸ್ ಡೈಮಂಡ್ ಅಕ್ಷರಶಃ ನಿಜವಾಗಿತ್ತು.

”ದೇವರಾಜ ಅರಸರ ಚಿಂತನಾ ಕ್ರಮಗಳೇ ಬೇರೆ. ಹೇಳಿದ್ದನ್ನು ಮಾಡಿ ತೋರಿಸಿದರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು, ಬಡವರಿಗೆ ಭೂಮಿಯ ಒಡೆತನ ನೀಡುವ ಮೂಲಕ ದನಿ ಮತ್ತು ಧೈರ್ಯ ನೀಡಿದರು. ಭೂ ಒಡೆತನ ಎನ್ನುವುದು ಬಡವರಿಗೆ ಸಮಾಜದಲ್ಲಿ ಸ್ಥಾನಮಾನ ತಂದುಕೊಟ್ಟಿತು. ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಿತು. ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿತು. ಆ ಮೂಲಕ ದೇವರಾಜ ಅರಸರು ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಶ್ರೀಮಂತ-ಬಡವ ಎಂಬ ತಾರತಮ್ಯವನ್ನು ಹೊಡೆದುಹಾಕಿದರು. ಅರಸು ಅವರ ಇಚ್ಛಾಶಕ್ತಿ ಜನರಲ್ಲಿ ನಂಬಿಕೆ ಹುಟ್ಟಿಸಿತು. ಬಡವರು ಸಹಜವಾಗಿಯೇ ಅರಸರನ್ನು ನಂಬಿದರು, ಬೆಂಬಲಿಸಿದರು. ಸಾಮಾಜಿಕ ಬದಲಾವಣೆಯ ಹರಿಕಾರ ಎಂಬ ಬಿರುದನ್ನೂ ಕೊಟ್ಟರು” ಎಂದರು.

ಸುಬ್ಬಯ್ಯ ಶೆಟ್ಟಿ ದೇವರಾಜ ಅರಸು 1

ಇವತ್ತು ರಾಜಕಾರಣವೆನ್ನುವುದು ಹತ್ತಾರು ಕೋಟಿ ಸುರಿದು ಸಾವಿರಾರು ಕೋಟಿಗಳನ್ನು ಗಳಿಸುವ ಉದ್ಯಮವಾಗಿದೆ. ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವಂತಾಗಿದೆ. ಅಧಿಕಾರಸ್ಥರ ದರ್ಪ, ದುರಹಂಕಾರ ಮೇರೆ ಮೀರಿದೆ. ನೈತಿಕತೆ, ಮೌಲ್ಯ, ಸಿದ್ಧಾಂತ ಭಾಷಣಕ್ಕೆ ಸೀಮಿತವಾಗಿದೆ.

ಆದರೆ, ಇದೇ ನಾಡಿನಲ್ಲಿ ಭೂ ಸುಧಾರಣಾ ಖಾತೆ ಸಚಿವರಾಗಿ ನೂರಾರು ಎಕರೆ ಭೂಮಿಯನ್ನು ಉಳುವವರಿಗೇ ಬಿಟ್ಟುಕೊಟ್ಟ ಸುಬ್ಬಯ್ಯ ಶೆಟ್ಟಿಯವರಂತಹ ಮಾನವಂತರು, ದಾನವಂತರು ಇದ್ದರು. ಲೆಕ್ಕವಿಲ್ಲದಷ್ಟು ಕುಟುಂಬಗಳನ್ನು ಬಡತನದಿಂದ ಬಚಾವು ಮಾಡಿದರು. ಸಾಮಾಜಿಕ-ಆರ್ಥಿಕ ಚಲನಶೀಲತೆಗೆ ಕಾರಣಕರ್ತರಾದ ಸುಬ್ಬಯ್ಯ ಶೆಟ್ಟರು… ಚಿರಸ್ಮರಣೀಯರು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X