ದೇವರಾಜ ಅರಸು- ಕರ್ನಾಟಕದ ಒಂದು ವಿಶಿಷ್ಟ ಗ್ರೀಕ್ ದುರಂತಗಾಥೆ

Date:

ದೇವರಾಜ ಅರಸು ಅವರನ್ನು ಹತ್ತಿರದಿಂದ ಬಲ್ಲ ಕರ್ನಾಟಕದ ಅಪರ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿರುವ ವಿ. ಬಾಲಸುಬ್ರಮಣಿಯನ್ ಎಂಬ ರೆಬೆಲ್ ಐಎಎಸ್ ಅಧಿಕಾರಿಯ 'ಕಲ್ಯಾಣ ಕೆಡುವ ಹಾದಿ' ಎಂಬ ಆತ್ಮಕಥನದಿಂದ ಆಯ್ದ ಬರಹವಿದು. ಅವರ ಅಧಿಕಾರಾವಧಿಯ ಕಾಲದ ಕರ್ನಾಟಕ ರಾಜಕೀಯ ಮತ್ತು ಆಡಳಿತ ಈ ಪುಸ್ತಕದಲ್ಲಿ ದಾಖಲಾಗಿದೆ. ಮೂಲ ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಸಂಧ್ಯಾರಾಣಿ ಅನುವಾದಿಸಿದ್ದಾರೆ. ಈ ಕೃತಿ ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ನಾನು ಬಹಳಷ್ಟು ವರ್ಷಗಳ ಕಾಲ ಕೆಲಸ ಮಾಡಿದ ಎರಡನೆಯ ಮುಖ್ಯಮಂತ್ರಿ ದೇವರಾಜ ಅರಸುರವರು. ಅವರು ಶ್ರೀಮತಿ ಇಂದಿರಾಗಾಂಧಿಯವರ ಕಟ್ಟಾ ಬೆಂಬಲಿಗರು. 1972ರ ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ ಇಂದಿರಾ ಕಾಂಗ್ರೆಸ್, 216 ಸದಸ್ಯರ ಅಸೆಂಬ್ಲಿಯಲ್ಲಿ 165 ಸೀಟ್ ಗಳನ್ನು ಗಳಿಸಿ, 24 ಸೀಟ್ ಗಳಿಸಿದ್ದ ಕಾಂಗ್ರೆಸ್(ಒ) ಅನ್ನು ಹೊಸಕಿ ಹಾಕಿತ್ತು. ಆಗ ಮುಖ್ಯಮಂತ್ರಿಯಾದ ಅರಸು ಅವರು ಮುಂದೆ 8 ವರ್ಷಗಳ ಕಾಲ, ಅಂದರೆ ಅವರ ಮಾಜಿ ಶಿಷ್ಯ, ಪೈಲ್ವಾನ್ ಗುಂಡೂರಾವ್ ಅವರನ್ನು ಪದಚ್ಯುತಗೊಳಿಸುವವರೆಗೂ ಮುಖ್ಯಮಂತ್ರಿಯಾಗಿದ್ದರು.

ಅವರ ಕಾಲದಲ್ಲೇ ನಾನು ಶಿವಮೊಗ್ಗ, ಕಲಬುರ್ಗಿ ಮತ್ತು ಬೆಂಗಳೂರು ಜಿಲ್ಲೆಗಳ DC ಮತ್ತು DM ಆಗಿ, ರೇಷ್ಮೆಇಲಾಖೆಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ. ಆಫೀಸಿನ ಕೆಲಸದ ಮೇಲೆ ಅವರನ್ನು ಹಲವು ಸಲ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಮೈಸೂರು ಮಹಾರಾಜರ ಸೇವೆಯಲ್ಲಿದ್ದ ಸಣ್ಣ ಸಮುದಾಯಕ್ಕೆ ಸೇರಿದ ಅರಸು ಅವರು ಕರ್ನಾಟಕ ರಾಜ್ಯದಲ್ಲಿ ಎರಡು ಆರ್ಥಿಕವಾಗಿ ಸದೃಢವಾಗಿದ್ದ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರ ಬಿಗಿಮುಷ್ಟಿಯಿಂದ ಅಧಿಕಾರವನ್ನು ಕಿತ್ತು ಹಿಂದುಳಿದ ವರ್ಗಗಳಿಗೆ(ಓಬಿಸಿ), ಹಿಂದುಳಿದ ಜಾತಿ/ಪಂಗಡಗಳಿಗೆ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗಳಲ್ಲಿ ಪಾಲ್ಗೊಂಡು, ಮೊಟ್ಟಮೊದಲಬಾರಿಗೆ ಅಧಿಕಾರಕ್ಕೆ ಬರುವಂತಹ ದಿಟ್ಟತನದ ಪ್ರಯೋಗ ಮಾಡಿದರು. ಉದಾಹರಣೆಗೆ ವೀರೇಂದ್ರ ಪಾಟೀಲರ ಸ್ವಕ್ಷೇತ್ರವಾದ ಚಿಂಚೋಳಿಯಲ್ಲಿ, ಅನಾಮಿಕರಾಗಿದ್ದ ದೇವೇಂದ್ರಪ್ಪ ಘಾಳಪ್ಪ ಜಮಾದಾರ್ ಎನ್ನುವ ಬೆಸ್ತರ ಸಮುದಾಯಕ್ಕೆ ಸೇರಿದ್ದವರು, ಕಾಂಗ್ರೆಸ್(ಓ)ನ ಲಿಂಗಾಯತ ಸಮುದಾಯದ, ಪಾಟೀಲರ ನೆಂಟರಾಗಿದ್ದ ಅಭ್ಯರ್ಥಿಯನ್ನು 10,000 ಮತಗಳಿಂದ ಸೋಲಿಸಿದ್ದರು. ಅದಕ್ಕೆ ಉಡುಗೊರೆಯಾಗಿ, ಹಲವಾರು ಹಿರಿಯರಿದ್ದರೂ ಸಹ ಈ ಮೊದಲಸಲದ ಶಾಸಕರನ್ನು ಮಂತ್ರಿಯಾಗಿಸಲಾಯಿತು.

ಮೊಟ್ಟಮೊದಲ ಸಲ ನಾನು ಅರಸು ಅವರನ್ನು ಭೇಟಿ ಮಾಡಿದ್ದು ಶಿವಮೊಗ್ಗಾದ ಜಿಲ್ಲಾಧಿಕಾರಿ ಆಗಿದ್ದಾಗ. ನಂತರ 1973ರ ತೀವ್ರ ಬರದ ಸಮಯದಲ್ಲಿ ನನ್ನನ್ನು ಕಲಬುರ್ಗಿಗೆ ವರ್ಗಾಯಿಸಲಾಯಿತು. ನಾನು ಅಲ್ಲಿದ್ದ ಮೂರು ವರ್ಷಗಳೂ ನನಗೆ ಮುಖ್ಯಮಂತ್ರಿಗಳಿಂದ ಸಂಪೂರ್ಣ ಸಹಕಾರ ಸಿಕ್ಕಿತ್ತು. ಇದನ್ನು ಈಗಾಗಲೇ ವಿವರಿಸಿದ್ದೇನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೊಟ್ಟಮೊದಲ ಬಾರಿಗೆ ಜಾತಿ ಸಮೀಕರಣದ ಆಚೆಗೆ ಯೋಚಿಸಿದ ಮುಖ್ಯಮಂತ್ರಿ ಅರಸು ಅವರು. ಜಾತಿ ಆಧಾರಿತ ಗಣತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿದ್ದರೂ ಸಹ, 1986ರ ವೆಂಕಟಸ್ವಾಮಿ ಆಯೋಗ, ಕರ್ನಾಟಕದ 92% ಮನೆಗಳನ್ನು ಸಮೀಕ್ಷೆ ಮಾಡಿ ಈ ಕೆಳಗಿನ ಜಾತಿವಾರು ಗಣತಿಯನ್ನು ಮುಂದಿಟ್ಟಿತ್ತು:

 1. ಲಿಂಗಾಯತರು- 17%
 2. ಒಕ್ಕಲಿಗರು- 12%
 3. ಪರಿಶಿಷ್ಟ ಜಾತಿಗಳು- 17%
 4. ಪರಿಶಿಷ್ಟ ವರ್ಗಗಳು- 7%
 5. ಮುಸ್ಲಿಮರು- 13%
 6. ಕುರುಬರು- 7%
 7. ಮಿಕ್ಕ ಓಬಿಸಿಗಳು- 21%
 8. ಬ್ರಾಹ್ಮಣರು- 3%
 9. ಕ್ರೈಸ್ತರು- 3%
  ಒಟ್ಟು 100

ಇಲ್ಲಿ ಗಮನಿಸಬೇಕಾದುದೆಂದರೆ ಎರಡು ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಸೇರಿದರೂ ಸಹ ಅವರು ಜನಸಂಖ್ಯೆಯ ಮೂರನೆಯ ಒಂದು ಭಾಗಕ್ಕಿಂತ ಕಡಿಮೆ ಇದ್ದಾರೆ. ಮಿಕ್ಕ ಓಬಿಸಿಗಳು, ದಲಿತರು ಮತ್ತು ಮುಸ್ಲಿಮರು ಸೇರಿ ಮೂರನೆಯ ಎರಡು ಭಾಗದಷ್ಟಿದ್ದಾರೆ. ಅರಸು ಅವರ ಕಾರ್ಯತಂತ್ರ ಇದ್ದದ್ದು ಈ ಎರಡನೆಯ ಶಕ್ತಿಯನ್ನು ರಾಜಕೀಯವಾಗಿ ಒಗ್ಗೂಡಿಸುವುದರಲ್ಲಿ. ಹಾಗೆ ನೋಡಿದರೆ ದಲಿತರ ಮತ್ತು ಹಿಂದುಳಿದ ಜಾತಿಗಳ ಹಿತವನ್ನು ಕಾಪಾಡುವುದರಲ್ಲಿ ಮೈಸೂರು ರಾಜ್ಯಕ್ಕೆ ಒಂದು ಇತಿಹಾಸವೇ ಇದೆ. 1947ಕ್ಕೆ ಮೊದಲು ಇಲ್ಲಿ ದಲಿತರನ್ನು ‘ಶೋಷಿತ ಜಾತಿಗಳು’ ಎಂದು ಕರೆಯಲಾಗುತ್ತಿತ್ತು. 1918 ರ ಸುಮಾರಿಗೇ ಮಹಾರಾಜರ ಸರಕಾರ ಜಡ್ಜ್ ಲೆಸ್ಲಿ ಮಿಲ್ಲರ್, ಐಸಿಎಸ್ ಅವರನ್ನು, ಸರಕಾರದ ಆಡಳಿತದಲ್ಲಿ ಬ್ರಾಹ್ಮಣರಲ್ಲದವರ ಪ್ರಾತಿನಿಧ್ಯದ ಬಗ್ಗೆ ವಿಚಾರಣೆ ನಡೆಸಲು ನೇಮಿಸಿತ್ತು. ಆ ಸಮಿತಿ ಸರಕಾರದ ಮೇಲ್ಮಟ್ಟದ ಸ್ಥಾನಗಳಲ್ಲಿ 50% ಮತ್ತು ನಂತರದ ಹಂತಗಳಲ್ಲಿ 75% ಮೀಸಲಾತಿಯನ್ನು ಬ್ರಾಹ್ಮಣರಲ್ಲದವರಿಗೆ ನೀಡಬೇಕು ಎಂದು ವರದಿ ಕೊಟ್ಟಿತ್ತು. ಹೆಚ್ಚಾಗಿ ಸಾರ್ವಜನಿಕಗೊಳ್ಳದ ವಿಷಯ ಎಂದರೆ, ಅದ್ಭುತ ಆಡಳಿತಗಾರ ಮತ್ತು ಮುಂಗಾಣ್ಕೆಯ ಮನುಷ್ಯ ಎಂದು ಕರೆಯಲ್ಪಡುವ, ಮೈಸೂರು ದಿವಾನ್ ಎಂ ವಿಶ್ವೇಶ್ವರಯ್ಯನವರು ಸರಕಾರಿ ಕೆಲಸಗಳಲ್ಲಿ ಹೀಗೆ, ಅರ್ಹತೆಯನ್ನು ಕಡೆಗಣಿಸಿ, ಮೀಸಲಾತಿ ನೀಡಿ ಕೆಲಸಗಾರರನ್ನು ಕೆಲಸಕ್ಕೆ ತೆಗೆದುಕೊಂಡರೆ ಅದು ಸಾರ್ವಜನಿಕ ಆಡಳಿತದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಾರಣಕೊಟ್ಟು ರಾಜೀನಾಮೆ ಕೊಟ್ಟಿದ್ದರು! ಆದರೆ ಸರ್ ಲೆಸ್ಲಿ ಮಿಲ್ಲರ್ ತಮ್ಮ ವರದಿಯಲ್ಲಿ ಹೀಗೆ ಹೇಳಿದ್ದರು:

‘ಕಾರ್ಯಕ್ಷಮತೆ ಎನ್ನುವುದನ್ನು ಹಾಗೆ ಕೇವಲ ಏಕಮಾತ್ರ ಅಥವಾ ಮುಖ್ಯವಾಗಿ ಅಕಾಡೆಮಿಕ್ ಪದವಿಗಳಿಂದಲೇ ಅಳೆಯಲಾಗುವುದಿಲ್ಲ. ಅಲ್ಲದೆ, ಆಡಳಿತದ ಹಲವಾರು ಪ್ರಮುಖ ಶಾಖೆಗಳಲ್ಲಿ ಮಿಕ್ಕ ಗುಣಗಳಾದ ಕರುಣೆ, ಕೆಲಸದಲ್ಲಿನ ಪ್ರಾಮಾಣಿಕತೆ, ಉತ್ಸಾಹ ಮತ್ತು ಸಾಮಾನ್ಯಜ್ಞಾನ ಒಬ್ಬ ಸಮರ್ಪಕ ಅಧಿಕಾರಿಯನ್ನು ರೂಪಿಸಬಲ್ಲವು ಎನ್ನುವುದನ್ನು ನಾವು ಕಡೆಗಣಿಸುವಂತಿಲ್ಲ. ನಾವು ಕಡೆಗಣಿಸಲಾಗದ ವಾಸ್ತವ ಎಂದರೆ ಅಧಿಕಾರಿಯೊಬ್ಬ ತನ್ನ ಕರ್ತವ್ಯ ನಿರ್ವಹಿಸುವಾಗ, ನೇಮಕಾತಿ ಮತ್ತು ಪದೋನ್ನತಿಗಳನ್ನು ಮಾಡುವಾಗ, ಬೇರೆಯವರಿಗಿಂತ ತನ್ನ ಸಮುದಾಯವದವರ ಗುಣಗಳನ್ನು ಗ್ರಹಿಸುವುದು ಆತನಿಗೆ ಸುಲಭ ಎನ್ನುವುದನ್ನು.’ (ಮಿಲ್ಲರ್ : 1919. ಪುಟ 12)

ಮಹಾರಾಜರ ಸರಕಾರದ ಹೆಗ್ಗಳಿಕೆ ಎಂದರೆ, ಅದು ಮಿಲ್ಲರ್ ವರದಿಯನ್ನು ಅನುಷ್ಠಾನಕ್ಕೆ ತಂದಿತು. ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದಾಗ ಪ್ರಮುಖ ಸಮುದಾಯಗಳು ಇದನ್ನು ವಿರೋಧಿಸಿ ಧರ್ಮಕಲಹಗಳನ್ನು ಸಂಘಟಿಸಿದವು. ಇದು ಅಬ್ರಾಹ್ಮಣ ಚಳವಳಿಯನ್ನು ಮುರಿಯಿತು. ನಂತರ 1940 ರಲ್ಲಿ ‘ಮೈಸೂರು ಸರಕಾರ ಕಾಯಿದೆ’ಯನ್ನು ತಂದ ಸರಕಾರ, ಮೈಸೂರು ಪ್ರತಿನಿಧಿ ಸಭೆಯಲ್ಲಿ, ಶೋಷಿತ ಜಾತಿಗಳಿಗೆ 30 ಸ್ಥಾನಗಳನ್ನು, ಅಲ್ಪಸಂಖ್ಯಾತರಿಗೆ 30 ಸ್ಥಾನಗಳನ್ನು, ಉಳಿದ 250 ಸ್ಥಾನಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೂ ಮೀಸಲಿಟ್ಟಿತು. 1940 ರಲ್ಲಿ ದಲಿತರ ಮೀಸಲಾತಿಯನ್ನು ವಿರೋಧಿಸಿದ ಬ್ರಾಹ್ಮಣರು, ಇದರಿಂದ ಸರಕಾರಿ ಸೇವೆಯಲ್ಲಿ ಕೇವಲ ಬ್ರಾಹ್ಮಣರು ಮತ್ತು ಶೋಷಿತ ಜಾತಿಗಳು ಮಾತ್ರ ಇರುವಂತೆ ಆಗುತ್ತದೆ ಎನ್ನುವ ಕಾರಣವನ್ನು ಮುಂದಿಟ್ಟಿದ್ದರು. (Omvedt: 1994: ಪುಟ 269).

ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ್ದ ಅರಸು ಅವರು, ತಾವು ಅಧಿಕಾರಕ್ಕೆ ಬಂದಮೇಲೆ ಪ್ರಬಲ ಜಾತಿಯವರ ಕೈಲಿದ್ದ ಅಧಿಕಾರವನ್ನು ದಲಿತರಿಗೆ ಮತ್ತು ಹಿಂದುಳಿದ ಜಾತಿಯವರಿಗೆ ವರ್ಗಾಯಿಸಲು ಪ್ರಯತ್ನಿಸಿದರು. 1972ರ ಅಸೆಂಬ್ಲಿ ಚುನಾವಣೆಯಲ್ಲಿ 133 ಕ್ಷೇತ್ರಗಳ ಟಿಕೆಟ್ ಗಳನ್ನು ಹಿಂದುಳಿದ ಜಾತಿ/ವರ್ಗ, ಓಬಿಸಿ ಮತ್ತು ಮುಸಲ್ಮಾನರಿಗೆ ನೀಡಲಾಯಿತು. ಅವರಲ್ಲಿ 92 ಜನ ಜಯಶಾಲಿಗಳಾದರು. ಅರಸು ಅವರ ನಾಯಕತ್ವದಲ್ಲಿ ಕಾಂಗ್ರೆಸ್ 165 ಸೀಟ್ ಗಳನ್ನು ಗೆದ್ದಿತ್ತು. 1967ರ ವಿಧಾನಸಭೆಯಲ್ಲಿ 60% ಶಾಸಕರನ್ನು ಹೊಂದಿದ್ದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು 1972ರಲ್ಲಿ 49% ಗಳಿಗೆ ಇಳಿದಿದ್ದವು. ಅವರ ಕ್ಯಾಬಿನೆಟ್ ನ 5 ಹಿರಿಯ ಮಂತ್ರಿಗಳಲ್ಲಿ, ಒಬ್ಬರೂ ಈ ಎರಡೂ ಸಮುದಾಯಗಳಿಗೆ ಸೇರಿರಲಿಲ್ಲ. ಅವರ ಕಟ್ಟಾ ಬೆಂಬಲಿಗರಾಗಿದ್ದವರು ದಲಿತ ಬೆಂಕಿಚೆಂಡು ಬಸವಲಿಂಗಪ್ಪನವರು. ಮುನಿಸಿಪಲ್ ಆಡಳಿತ ಮಂತ್ರಿಯಾಗಿದ್ದ ಅವರು, ಭಾರತದಲ್ಲೇ ಮೊದಲ ಬಾರಿಗೆ ಮಲಹೊರುವ ಪದ್ಧತಿಯನ್ನು ನಿಲ್ಲಿಸಿದರು ಮತ್ತು ಅದು ಆಗಿದ್ದು ಕರ್ನಾಟಕದಲ್ಲಿ. ಉಳುವವನೇ ನೆಲದೊಡೆಯ ಎನ್ನುವಂತಹ ಹಲವು ಭೂಸುಧಾರಣೆಗಳು, ಜೀತಪದ್ಧತಿ ನಿರ್ಮೂಲನ, ಬಡವರು ಅಡಮಾನವಾಗಿ ಇಟ್ಟಿದ್ದ ವಸ್ತುಗಳ ಬಿಡುಗಡೆ, ಮನೆಯಿಲ್ಲದವರಿಗೆ ಮನೆಗಳ ನಿರ್ಮಾಣ, ನೆಲ ಇಲ್ಲದವರಿಗೆ ಮನೆಕಟ್ಟಿಕೊಳ್ಳಲು ನೆಲ, ಬೆಂಗಳೂರಿನ ಹೊರವಲಯದಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ – ಮುಂತಾದವು ಅರಸು ಅವರ ಕೆಲವು ಪ್ರಮುಖ ಸಾಧನೆಗಳು.

ತುರ್ತುಪರಿಸ್ಥಿತಿಯ ನಂತರ ಶ್ರೀಮತಿ ಗಾಂಧಿ ಸಂಸತ್ ಚುನಾವಣೆಗಳಲ್ಲಿ ದಯನೀಯ ಸೋಲು ಅನುಭವಿಸಿದರೂ ಸಹ, ಕರ್ನಾಟಕದಲ್ಲಿ 28 ಕ್ಕೆ 26 ಎಂಪಿಗಳು ಕಾಂಗ್ರೆಸ್ಸಿಗರಾಗಿದ್ದರು. ಇದಕ್ಕೆ ಮುಖ್ಯಕಾರಣ ಉತ್ತರದಂತಲ್ಲದೆ, ಇಲ್ಲಿ ಕುಟುಂಬಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಅರಸುರವರ ಸರಕಾರ ತೋರಿಸಿದ ಸಂಯಮ ಮತ್ತು ಇಪ್ಪತ್ತು ಅಂಶಗಳ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನಕ್ಕೆ ತಂದ ಹಲವಾರು ಪುರೋಗಾಮಿ ಯೋಜನೆಗಳು. ದೇವರಾಜ ಅರಸು ಅವರು ಕರ್ನಾಟಕದ ಕಾಂಗ್ರೆಸ್ ನ ಪ್ರಶ್ನಾತೀತ ನಾಯಕರಾದರು. ಆದರೆ ಕಾಂಗ್ರೆಸ್ಸಿನಲ್ಲಿ ಸಂವಿಧಾನಾತೀತ ಶಕ್ತಿಯಾಗಿ ಬೆಳೆದ ಸಂಜಯ್ ಗಾಂಧಿಯವರಿಗೆ ಡೊಗ್ಗುಸಲಾಮು ಹಾಕುವವರು ಬೇಕಾಗಿದ್ದರು. ಅರಸುರವರು ಹಾಗಿರಲಿಲ್ಲ. ಹಾಗಾಗಿ ಅರಸು, ಎಲ್ಲಾ ರಾಜ್ಯಗಳಲ್ಲೂ ತನ್ನ ಹಿಂಬಾಲಕರನ್ನೇ ಮುಖ್ಯಮಂತ್ರಿಗಳನ್ನಾಗಿಸಿದ್ದ ಸಂಜಯಗಾಂಧಿಯವರ ಕಪ್ಪುಪಟ್ಟಿಯಲ್ಲಿದ್ದರು. ಕರ್ನಾಟಕದಲ್ಲಿ ಸಂಜಗಾಂಧಿ ಅವರ ಆಯ್ಕೆ ಅವರ ಅನುಯಾಯಿ ಗುಂಡೂರಾವ್.  ಇಂದಿರಾಗಾಂಧಿಯವರ ಮೇಲೆ ಸಂಜಯಗಾಂಧಿಗೆ ಇದ್ದ ಪ್ರಭಾವ ವಿವರಿಸಲಸದಳವಾದದ್ದು. ಅದಕ್ಕೆ ಕೆಲವು ವಿವರಣೆಗಳು ಇದ್ದವು: ಕಾಂಗ್ರೆಸ್ ಖಜಾನೆಯ ಸಂಪೂರ್ಣ ಮಾಹಿತಿ ಇದ್ದದ್ದು ಕೇವಲ ಅವರಿಗೆ ಮಾತ್ರ. ವಿಮಾನಾಪಘಾತದಲ್ಲಿ ಅವರು ದುರ್ಮರಣ ಹೊಂದಿದಾಗ, ಅಲ್ಲಿಗೆ ಧಾವಿಸಿದ ಶ್ರೀಮತಿ ಗಾಂಧಿಯವರು ಮೊದಲು ವಿಚಾರಿಸಿದ್ದು ಅವರ ಗಡಿಯಾರದ ಬಗ್ಗೆ, ಏಕೆಂದರೆ ಅದರಲ್ಲಿ ಪಕ್ಷದ ಹಣಕಾಸಿನ ಎಲ್ಲಾ ವಿವರಗಳೂ ಇದ್ದವು ಎನ್ನುವ ಪುಕಾರಿತ್ತು. ಸಂಜಯಗಾಂಧಿ ಪ್ರಭಾವದಿಂದ ಶ್ರೀಮತಿ ಗಾಂಧಿ, ಅರಸುರವರಿಂದ ದೂರ ಕಾಯ್ದುಕೊಳ್ಳತೊಡಗಿದರು. ಅಲ್ಲದೆ ಆ ಸಮಯದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಬೆಳೆಸಿಕೊಂಡ ಅರಸು ಅವರು ಹಿಂದಿಯನ್ನೂ ಕಲಿಯತೊಡಗಿದರು!

ಅರಸು ಅವರ ಕೆಲವು ತರ್ಕಕ್ಕೆ ಸಿಗದ ನಡೆಗಳಲ್ಲಿ ಒಂದು ಅವರ ಅಳಿಯ ಎಂಡಿ ನಟರಾಜ್ ಅವರನ್ನು ಎಂಎಲ್ಸಿ ಮಾಡಿ, ಅವರ ನಾಯಕತ್ವದಲ್ಲಿ ಗೆಸ್ಟಪೋ ಮಾದರಿಯ ಇಂದಿರಾ ಬ್ರಿಗೇಡ್ ಕಟ್ಟಿದ್ದು. ಆಗ ನಟರಾಜ್ ಗೆ ಬಲಗೈ ಆಗಿದ್ದದ್ದು ಗೂಂಡಾ ಜೈರಾಜ್. ಆತ ‘ಗರೀಬಿ ಹಟಾವೋ’ ಎನ್ನುವ ಪತ್ರಿಕೆಯನ್ನು ಸಹ ನಡೆಸುತ್ತಿದ್ದರು. ಅಲ್ಲದೆ, ಅರಸು ಫಂಡ್ ಗಳಿಗಾಗಿ ಅಬಕಾರಿ ಕಂಟ್ರ್ಯಾಕ್ಟರ್ ಗಳ ಮೇಲೆ ಆಧಾರಗೊಂಡಿದ್ದರು. ಯಾವ ಮಟ್ಟಿಗೆ ಎಂದರೆ, ಅಬಕಾರಿ ಕಂಟ್ರ್ಯಾಕ್ಟರ್ ಎಚ್‌ಆರ್ ಬಸವರಾಜ್ ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕೆಂದರೆ, ಆತ ಬರುವ ಬದಲಾಗಿ ಮುಖ್ಯಮಂತ್ರಿಗಳು ಆತನ ಮನೆಗೆ ಹೋಗುತ್ತಿದ್ದರು! 1978 ರಲ್ಲಿ ಆ ಮನುಷ್ಯನನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಯಿತು. ಅಂದರೆ ಅಬಕಾರಿ ಕಂಟ್ರ್ಯಾಕ್ಟರ್ ಗಳನ್ನು ಕರ್ನಾಟಕದ ಗೌರವಾನ್ವಿತ ಹಿರಿಯರು ಎಂದು ಪರಿಗಣಿಸಿದಂತಾಯ್ತು! ಆಗ ಇದ್ದ ಇನ್ನೊಂದು ವ್ಯಾಪಕ ನಂಬಿಕೆ ಎಂದರೆ, ಅರಸು ಅವರು ವೈಯಕ್ತಿಕವಾಗಿ ಭ್ರಷ್ಟರಾಗದಿದ್ದರೂ, ಅವರು ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದವರು ಎನ್ನುವುದು. ಏಕೆಂದರೆ ಅಬಕಾರಿ ಕಂಟ್ರ್ಯಾಕ್ಟರ್ ಗಳು ಆಗಿನ ಕಾಲಕ್ಕೆ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕನಿಗೂ ತಿಂಗಳಿಗೆ 10,000 ರೂ. ಕಾಣಿಕೆ ಕೊಡುವಂತೆ ಅರಸು ವ್ಯವಸ್ಥೆ ಮಾಡಿದ್ದರು. ಆದರೂ ಅವು ಯಾವೂ ಕೆಲಸಕ್ಕೆ ಬರಲಿಲ್ಲ. 1979ರಲ್ಲಿ ಕಾಂಗ್ರೆಸ್ ಪಾರ್ಟಿಯಿಂದ ಅವರನ್ನು ಉಚ್ಛಾಟಿಸಲಾಯಿತು, ಜನವರಿ 1980 ರಲ್ಲಿ ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಇತ್ತರು. 1979ರಲ್ಲಿ ಇಂದಿರಾ ಕ್ಯಾಂಪಿನಿಂದ ಹೊರಹೋದ ಅರಸು ಸ್ಥಳೀಯವಾಗಿ ಕಾಂಗ್ರೆಸ್(ಯು) – Urs – ಸ್ಥಾಪಿಸಿದರು. ಆದರೆ 1980ರ ಸಂಸತ್ ಚುನಾವಣೆಗಳಲ್ಲಿ ಇಂದಿರಾ ಅಭೂತಪೂರ್ವ ಯಶಸ್ಸು ಕಂಡರು. ಆಗ ಅರಸುರವರ ಶಿಷ್ಯನೇ ಆಗಿದ್ದ, ಒಂದೊಮ್ಮೆ ಕುಶಾಲನಗರದ ಬಸ್ ಏಜೆಂಟ್ ಆಗಿದ್ದ ಗುಂಡೂರಾಯರು ಜನವರಿ 1980 ರಲ್ಲಿ, ಅವರೇ ಕೊಚ್ಚಿಕೊಂಡಂತೆ ಕರ್ನಾಟಕದ ಅತ್ಯಂತ ಕಿರಿಯ ಮುಖ್ಯಮಂತ್ರಿ ಆದರು. ತಮ್ಮ ಹಳೆಯ ಗುರುವನ್ನು ‘ಪೇಪರ್ ಹುಲಿ’ ಎಂದು ಅಣಕವಾಡಿದರು.

1982 ರಲ್ಲಿ, ತಮ್ಮ 67 ನೆಯ ವಯಸ್ಸಿನಲ್ಲಿ ದೇವರಾಜ ಅರಸುರವರು ಒಡೆದ ಹೃದಯದೊಂದಿಗೆ ತೀರಿಕೊಂಡರು. ಆತ ಒಂದು ಭಗ್ನಗೊಂಡ ಭವ್ಯ ವಿಗ್ರಹ, ಗ್ರೀಕ್ ದುರಂತದ ನಾಯಕರಿಗೆ ಸವಾಲು ಒಡ್ಡುವಂತಹ ದುರಂತ ಕಥಾನಾಯಕ.

ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಹುಟ್ಟೂರು, ಹುಣಸೂರು ತಾಲೂಕಿನ ಕಲ್ಲಹಳ್ಳಿಗೆ ತೆಗೆದುಕೊಂಡು ಹೋಗಲಾಯಿತು. 185 ಕಿಮೀ ಉದ್ದದ ಪಯಣಕ್ಕೆ 5 ಗಂಟೆಗಳು ಬೇಕಾದವು. ರಸ್ತೆಯ ಅತ್ತಿತ್ತ ಜನ ಸಾಲುಗಟ್ಟಿ ನಿಂತಿದ್ದರಿಂದ ಅಂತಿಮಯಾತ್ರೆ ನಿಧಾನವಾಗಿ ಸಾಗಬೇಕಾಯಿತು. ಆ ಜನಗಳು ಒಂದು ವಿಚಿತ್ರ ಚರ್ಯೆಯನ್ನು ಕೈಗೊಂಡರು – ದೇಹ ಸಾಗುತ್ತಿದ್ದಾಗ ಉದ್ದಕ್ಕೂ ಚಪ್ಪಾಳೆ ತಟ್ಟುತ್ತಿದ್ದರು. ಚಪ್ಪಾಳೆಯೇ? ಅದೇಕೆ? ಅದು ಆ ಜನಗಳು, ದೇವರಾಜ ಅರಸು ತಮಗಾಗಿ ಏನೆಲ್ಲಾ ಮಾಡಿದ್ದರೋ ಅದನ್ನು ಮೆಚ್ಚುತ್ತಾ, ಅದಕ್ಕಾಗಿ ವಂದಿಸುತ್ತಾ, ತಮ್ಮ ಮೆಚ್ಚುಗೆಯನ್ನು ಅತ್ಯಂತ ಅಸಾಂಪ್ರದಾಯಿಕವಾಗಿ, ಆ ಕ್ಷಣಕ್ಕೆ ವ್ಯಕ್ತಪಡಿಸುತ್ತಿದ್ದ ರೀತಿ. ಅವರ ಬದುಕೊಂದು ಗ್ರೀಕ್ ದುರಂತ ಎಂದು ಹೇಳಿದೆನಲ್ಲಾ? ಅಲ್ಲಿ ಸಹ ಪರಮ ಶಕ್ತಿಶಾಲಿ ಟೈಟನ್ ಪ್ರೊಮೇಥಿಯಸ್ ಜನಗಳಿಗೆ ಬೆಂಕಿ ಕೊಟ್ಟು, ಆ ಕಾರಣಕ್ಕಾಗಿ ಗ್ರೀಕ್ ದೇವತೆಗಳ ರಾಜನಾದ ಜಿಯುಸ್ ನಿಂದ ಶಿಕ್ಷಿಸಲ್ಪಡುತ್ತಾನೆ. ಆದರೆ ಅರಸು ಅವರ ವಿಷಯದಲ್ಲಿ ಕಾಳಿಯ ಅವತಾರ ಎಂದು ಕರೆಯಲ್ಪಡುತ್ತಿದ್ದ ಭಾರತದ ದೇವತೆ ಅವರನ್ನು ನಾಶಪಡಿಸಿದಳು. ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎಂದು ಒಂದು ಮಾತಿದೆ. ಅರಸು ಅವರ ಕಡೆಯ ಪಯಣದಲ್ಲಿ ಸಾಲುಗಟ್ಟಿ ನಿಂತು ಚಪ್ಪಾಳೆ ತಟ್ಟುತ್ತಿದ್ದ ಜನ, ಕರ್ನಾಟಕದ ಜನಸಾಮಾನ್ಯರು ಅವರೆಡೆಗೆ ಇಟ್ಟುಕೊಂಡಿದ್ದ ಭಾವನೆಗೆ ಜೀವಂತ ಸಾಕ್ಷಿ. ಅಸಭ್ಯ ಅನ್ನಿಸಿದರೂ ಸಹ ದಾಖಲೆಗೆ ಎಂದು ಇದನ್ನು ಹೇಳಬೇಕಾಗಿದೆ: 1980ರ, ಜೂನ್ 23 ರಂದು ಸಂಜಯಗಾಂಧಿ ವಿಮಾನಾಪಘಾತದಲ್ಲಿ ದುರ್ಮರಣ ಹೊಂದಿದರು. ಛಿಧ್ರಛಿಧ್ರವಾಗಿದ್ದ ಅವರ ದೇಹವನ್ನು ಜೋಡಿಸಲು 8 ಸರ್ಜನ್ನರಿಗೆ 4 ಗಂಟೆಗಳು ಬೇಕಾಯಿತು. (ವಿನೋದ್ ಮೆಹ್ತಾ ಅವರ ‘ದ ಸಂಜಯ್ ಸ್ಟೋರಿ’, 2015) 31 ಅಕ್ಟೋಬರ್ 1984ರಲ್ಲಿ ಇಂದಿರಾಗಾಂಧಿಯವರ ಇಬ್ಬರು ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್, ಒಂದು ಸಬ್ ಮಶೀನ್ ಗನ್ ಮತ್ತು ಒಂದು ಪಿಸ್ತೂಲಿನಿಂದ, ಆಕೆಯನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದರು. ಅವರ ಪೋಸ್ಟ್ ಮಾರ್ಟಮ್ ಮಾಡಿದ ಡಾ. ತೀರಥ್ ದಾಸ್ ಡೋಗ್ರಾ ಅವರ ಪ್ರಕಾರ ಅವರ ದೇಹದಲ್ಲಿ ಸುಮಾರು 30 ಬುಲೆಟ್ ಗಾಯಗಳಿದ್ದವು. ದಾಳಿಮಾಡಿದವರು ಹಾರಿಸಿದ 31 ಗುಂಡುಗಳಲ್ಲಿ, 30 ಅವರನ್ನು ಹೊಕ್ಕಿದ್ದವು; 23 ಅವರ ದೇಹವನ್ನು ಭೇದಿಸಿಕೊಂಡು ಹೋಗಿದ್ದರೆ, 7 ಅವರ ದೇಹದಲ್ಲೇ ಇತ್ತು. ಅವರ ಕಡೆಯ ಯಾತ್ರೆಯಲ್ಲಿ ಯಾರೂ ಚಪ್ಪಾಳೆ ಹೊಡೆಯಲಿಲ್ಲ.

ಒಂದು ಸಲ ‘ಸಂಡೆ’ ನಿಯತಕಾಲಿಕ, ಪಕ್ಷದಲ್ಲಿ ಅವರ ಕರ್ತವ್ಯ ನಿರ್ವಹಣಾ ಶೈಲಿಯ ವಿರುದ್ಧ ಹೆಚ್ಚಾಗುತ್ತಿರುವ ಟೀಕೆಗಳನ್ನು ಕುರಿತು ಪ್ರಶ್ನಿಸಿದಾಗ, ಗುಂಡೂರಾವ್ ಅದಕ್ಕೆ ಉತ್ತರಿಸುತ್ತಾ, ಅದರ ಬಗ್ಗೆ ತಾವೇನೂ ತಲೆಕೆಡಿಸಿಕೊಂಡಿಲ್ಲ, ಏಕೆಂದರೆ ಕಾಂಗ್ರೆಸ್ ಎನ್ನುವುದು ಒಂದು ನಾಟಕ ಕಂಪನಿ ಮತ್ತು ಅದರ ಸೂತ್ರಧಾರಿ ದೆಹಲಿಯಲ್ಲಿದ್ದಾರೆ, ಎಲ್ಲಿಯವರೆಗೂ ಅವರು ತಮ್ಮನ್ನು ಆಡು ಎಂದು ಹೇಳುತ್ತಾರೋ, ಅಲ್ಲಿಯವರೆಗೂ ತಾವು ಆಡುವವರೇ ಮತ್ತು ಯಾರೂ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಜನವರಿ 1983ರಲ್ಲಿ, ಅವರು ಏಕಾಂಗಿಯಾಗಿ, ಅಸೆಂಬ್ಲಿ ಚುನಾವಣೆಗಳಲ್ಲಿ 82 ಸೀಟ್ ಗಳಿಸಿ, ಕಾಂಗ್ರೆಸ್ ಅನ್ನು ಕೆಳಗಿಳಿಸಿದ್ದರು. 22 ಆಗಸ್ಟ್ 1993ರಲ್ಲಿ, ತಮ್ಮ 57 ನೆಯ ವಯಸ್ಸಿನಲ್ಲಿ ಅವರು ಲಂಡನ್ ನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡರು, ಅವರ ಸಾವಿಗೆ ಕೊಟ್ಟ ಅಧಿಕೃತ ಕಾರಣ ಲ್ಯುಕೇಮಿಯಾ. ಹಲವು ತಿಂಗಳುಗಳಿಂದ ಖಾಯಿಲೆಯಲ್ಲಿ ಬಳಲುತ್ತಿದ್ದ ಅವರನ್ನು ಕುಟುಂಬದವರನ್ನು ಹೊರತುಪಡಿಸಿ ಮತ್ಯಾರೂ ನೋಡುವಂತಿರಲಿಲ್ಲ. ಅವರ ದೇಹವನ್ನು ಸಹ ಭಾರತಕ್ಕೆ ತರದೆ, ಅಲ್ಲೇ ಅಂತಿಮ ಸಂಸ್ಕಾರಗಳನ್ನು ನಡೆಸಲಾಯಿತು ಎಂದು ಹೇಳಲಾಯಿತು. ಅವರ ಖಾಯಿಲೆಯ ಸ್ವರೂಪ ಮತ್ತು ಅವರ ಸಾವಿನ ಸುತ್ತಮುತ್ತಲೂ ಇದ್ದ ಗೌಪ್ಯತೆಯನ್ನು ಕುರಿತು ಹಲವಾರು ಊಹಾಪೋಹಗಳಿವೆ. ಇಲ್ಲಿ ನಾನು ಹೇಳಬೇಕೆಂದಿರುವುದು ಇಷ್ಟೇ: ದೇವರಾಜ ಅರಸು ಅವರು ಐದು ಗಂಟೆಗಳ ಕಾಲ, ಬೆಂಗಳೂರಿನಿಂದ ಕಲ್ಲಹಳ್ಳಿಯ ದಾರಿಯುದ್ದಕ್ಕೂ ಕರ್ನಾಟಕದ ಜನರಿಂದ ಚಪ್ಪಾಳೆಯನ್ನು ಪಡೆದುಕೊಂಡರು. ಸಾವಿರಾರು ಜನ ರಸ್ತೆಯ ಎರಡೂ ಕಡೆ ನಿಂತಿದ್ದರು. ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎನ್ನುವ ಮಾತಿಗೆ ಇದಕ್ಕಿಂತಾ ಸಾಕ್ಷಿ ಬೇಕೆ?

ದೇವರಾಜ ಅರಸರ ಮರಣದ ನಂತರ ಕರ್ನಾಟಕದಲ್ಲಿ ಅದೇ ಹಳೆಯ, ಎರಡು ಜಾತಿಗಳ ನಡುವೆ ಅಧಿಕಾರ ಹಂಚಿಕೆ ವಾಪಸ್ ಬಂದಿತು. ಹಿಂದಿರುಗಿ ನೋಡಿ ಪರಾಮರ್ಶೆ ಮಾಡುವಾಗ, ಬಹುಶಃ ಅರಸು ಅವರು ಭಾರತದ ಜನರ ಮನಸ್ಸಿನಲ್ಲಿ ಇಂದಿರಾಗಾಂಧಿಯವರ ಬಗ್ಗೆ ಇದ್ದ ಸ್ಥಾನವನ್ನು ತಪ್ಪಾಗಿ, ಕಡಿಮೆ ಅಂದಾಜು ಮಾಡಿದ್ದರು ಅನ್ನಿಸುತ್ತದೆ. ಸಂಜಯ ಗಾಂಧಿಯವರ ಮಾರಣಾಂತಿಕ ಬಲವಂತದ ಕುಟುಂಬ ಯೋಜನೆ ನಿಂತ ಮೇಲೆ, 1977ರ ಚೌದರಿ ಚರಣ್ ಸಿಂಗರ ‘ಇಂದಿರಾ ಹಠಾವೋ, ಇಂದ್ರಿಯ್ ಬಚಾವೋ’ ಘೋಷಣೆ ಬಲ ಕಳೆದುಕೊಂಡಿತು ಮತ್ತು ಶ್ರೀಮತಿ ಗಾಂಧಿಯವರ ದೀರ್ಘಕಾಲ ಬಾಳಿಕೆಯ ‘ಗರೀಬಿ ಹಠಾವೋ’ ಘೋಷಣೆ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿತು. ಅಷ್ಟೇಕೆ ಸಂಜಯ ಗಾಂಧಿ ಸಹ ಅಮೇಥಿಯಿಂದ 1,28,000 ಓಟುಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದರೆ, ಇಂದಿರಾಗಾಂಧಿ ರಾಯಬರೇಲಿಯಲ್ಲಿ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ವಿರುದ್ಧ 1,73,000 ಓಟುಗಳಿಂದ ಗೆದ್ದರು. ಈ ಸಲ ಜನ ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ಸಾಮೂಹಿಕವಾಗಿ ತಮ್ಮ ನಿಜವಾದ ರಾಜಮಾತೆಗೆ ಓಟ್ ಮಾಡಿದ್ದರು! ನನಗೆ ನಿಸಾರ್ ಅಹಮದ್ ಅವರ ಹರಿತವಾದ ಪದ್ಯ ‘ಕುರಿಗಳು ಸಾರ್ ಕುರಿಗಳು…’ ನೆನಪಾಗುತ್ತದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕೇವಲ ಈ ಮೂರು ಪದಗಳಲ್ಲಿ ಹೇಳಬಹುದು!!

1983 ರಲ್ಲಿ ಗುಂಡೂರಾಯರು ವಿಧಾನಸಭೆ ಚುನಾವಣೆಗಳನ್ನು ಸೋತು, ಬಿಜೆಪಿ ಹೊರಗಿನಿಂದ ಸಹಾಯ ಮಾಡಿ ಜನತಾ ಪಕ್ಷದ ಸರಕಾರವನ್ನು ಅಧಿಕಾರಕ್ಕೆ ತಂದ ನಂತರ 1984 ರಲ್ಲಿ, ಇಂದಿರಾಗಾಂಧಿಯವರ ಮರಣ ಮತ್ತು ರಾಜೀವಗಾಂಧಿಯವರ ಪದಗ್ರಹಣದ ನಂತರ ಮತ್ತೊಂದು ಅಸೆಂಬ್ಲಿ ಚುನಾವಣೆ ಆಯಿತು. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷ ಮತ್ತೆ ಅಧಿಕಾರ ಹಿಡಿಯಿತು. ಅರಸು ಅವರ ನೇತೃತ್ವದಲ್ಲಿ ನಡೆದ 1978ರ ಚುನಾವಣೆಯಲ್ಲಿ ಕ್ರಮವಾಗಿ ಲಿಂಗಾಯತ, ಒಕ್ಕಲಿಗ, ಮುಸಲ್ಮಾನ ಮತ್ತು ಓಬಿಸಿ ಶಾಸಕರ ಸಂಖ್ಯೆ 53, 47, 17 ಮತ್ತು 45 ಇದ್ದರೆ, 1983 ರ ಚುನಾವಣೆಯಲ್ಲಿ ಅಧಿಕಾರ ಹಸ್ತಾಂತರಗೊಂಡು ಅದು 65, 54, 1 ಮತ್ತು 36 ಆಯಿತು. ಅಂದರೆ ಎರಡು ಪ್ರಬಲ ಸಮುದಾಯಗಳ ಪ್ರಾತಿನಿಧ್ಯ 100 ರಿಂದ 119 ಕ್ಕೆ ಏರಿದರೆ, ಮುಸಲ್ಮಾನರು ಮತ್ತು ಓಬಿಸಿ ಸಂಖ್ಯೆ 62 ರಿಂದ 38 ಕ್ಕಿಳಿಯಿತು. ದೇವರಾಜ ಅರಸರ ಪ್ರಯತ್ನ ವ್ಯರ್ಥವಾಯಿತು. ಇಂದಿರಾಗಾಂಧಿಯವರಿಂದ ಪ್ರತ್ಯೇಕಗೊಂಡ ನಂತರ ಅವರು ನಗಣ್ಯವಾಗಿಹೋದರು. ಜನಸಂಖ್ಯೆಯಲ್ಲಿ ಅವರ ಪಾಲು 37% ಇದ್ದರೂ ಸಹ, ಕರ್ನಾಟಕ ಇಂದಿಗೂ ಒಬ್ಬ ಮುಸಲ್ಮಾನ ಅಥವಾ ದಲಿತ ಮುಖ್ಯಮಂತ್ರಿಯನ್ನು ಪಡೆದಿಲ್ಲ. ಕೇವಲ 3% ಇರುವ ಬ್ರಾಹ್ಮಣರು ಸಹ 8 ವರ್ಷಗಳ ಕಾಲ ತಮ್ಮ ಸಮುದಾಯದ ಮುಖ್ಯಮಂತ್ರಿಯನ್ನು ಪಡೆದಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಪ್ರಬಲ ಸಮುದಾಯಗಳ ಕೈಯಿಂದ ಅಧಿಕಾರವನ್ನು ತಪ್ಪಿಸಿ ಅಂಚಿಗೆ ತಳ್ಳಲ್ಪಟ್ಟವರ ಕೈಗೆ ಅಧಿಕಾರ ಸಿಕ್ಕಿದ್ದು ದೇವರಾಜ ಅರಸರ ಕಾಲದಲ್ಲಿ ಮಾತ್ರ. ಫ್ರೆಂಚ್ ಭಾಷೆಯಲ್ಲಿ ಒಂದು ಮಾತಿದೆ – plus ca change, plus c’est la meme chose- ಪರಿಸ್ಥಿತಿಗಳು ಹೆಚ್ಚು ಬದಲಾದಷ್ಟೂ ಅವು ಹೆಚ್ಚು ಮೊದಲಿನಂತೆಯೇ ಇರುತ್ತವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

 1. ಗುಂಡೂರಾವ್ ಅವರ ಶವ ಸಂಸ್ಕಾರ ಕರ್ನಾಟಕದಲ್ಲಿಯೇ ನಡೆದ ನೆನೆಪು ನನಗೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...

ರಾಮನವಮಿ | ‘ಎಎಪಿ ಕಾ ರಾಮ್‌ರಾಜ್ಯ’ ವೆಬ್‌ಸೈಟ್ ಪ್ರಾರಂಭಿಸಿದ ಎಎಪಿ

ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ರಾಮನವಮಿ ದಿನದಂದು 'ಎಎಪಿ ಕಾ...

ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಖಚಿತ, ಕಾಂಗ್ರೆಸ್ ಗೆಲುವು ನಿಶ್ಚಿತ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್...