ಪ್ರತಿ ಮತಗಟ್ಟೆಯ ಮತದಾನದ ಅಂಕಿಅಂಶಗಳನ್ನು ಒದಗಿಸುವ ಫಾರ್ಮ್ 17ಸಿ ಪ್ರತಿಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಚುನಾವಣಾ ಪ್ರಕ್ರಿಯೆಯ ನಡುವೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ಫಾರ್ಮ್ 17ಸಿ ಪ್ರತಿ ಬೂತ್ ಮಟ್ಟದ ಮತದಾನ ಅಂಕಅಂಶಗಳನ್ನು ಹೊಂದಿರುತ್ತದೆ. ಆ ಫಾರ್ಮ್ಅನ್ನು ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಪ್ರಟಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಅರ್ಜಿ ಸಲ್ಲಿಸಿತ್ತು.
ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ಫಾರ್ಮ್ 17ಸಿ ಅನ್ನು ಪ್ರಕಟಿಸಲು ಸೂಚನೆ ನೀಡಲು ನಿರಾಕರಿಸಿದೆ. ವಿಚಾರಣೆಯನ್ನು ಮುಂದೂಡಿದೆ.
“ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಸ್ತಕ್ಷೇಪ ಮಾಡದಿರಲು ನ್ಯಾಯಾಲಯ ಬಯಸುತ್ತದೆ. ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಗಳನ್ನುಂಟು ಮಾಡಲಾಗದು. ಆಯೋಗದ ಮೇಲೆ ವಿಶ್ವಾಸ ಇರಿಸೋಣ” ಎಂದು ಪೀಠವು ಹೇಳಿದೆ.