ಕೋವಿಡ್ ಸಂದರ್ಭವಾಗಿದ್ದ 2019ರಿಂದ 2021ರವರೆಗೆ ಮಾತ್ರ ಸರ್ಕಾರವು ಈ ಯೋಜನೆಗೆ ಕಡಿಮೆ ಅನುದಾನ ನೀಡಿದೆ. ಈ ವೇಳೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ ಎಂಬುದು ವಾಸ್ತವ. ಆದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತ್ರ ಈ ಮಾಹಿತಿಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆ, ಸೋಷಿಯಲ್ ಮೀಡಿಯಾದಲ್ಲಿ 'ಸುಳ್ಳು ಸುದ್ದಿ' ಹರಡಿಸಿದ್ದಾರೆ.
‘ಸ್ವಾವಲಂಬಿ ಸಾರಥಿ ಯೋಜನೆ’ ಎಂಬ ಕರ್ನಾಟಕ ಸರ್ಕಾರದ ಯೋಜನೆಯೊಂದರ ಬಗ್ಗೆ ದುರುದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯ ಜೊತೆಗೆ ಕೋಮು ಪ್ರಚೋದನೆ ನೀಡಿರುವ ಆರೋಪದ ಮೇಲೆ ಸದ್ಯ ‘ಆಜ್‌ತಕ್ ಚಾನೆಲ್’ ಹಾಗೂ ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿಯವರ ಮೇಲೆ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.
‘ಸ್ವಾವಲಂಬಿ ಸಾರಥಿ ಯೋಜನೆ’ಯ ಬಗ್ಗೆ ಸುಳ್ಳು ಹರಡಿ ಟ್ವೀಟ್ ಮಾಡಿದ್ದೇ ಮೊದಲು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ.
ಈ ಟ್ವೀಟ್‌ನಲ್ಲಿ, “ಈ ಯೋಜನೆಯು ಮುಸ್ಲಿಮರಿಗಾಗಿ ಇರುವ ಯೋಜನೆ ಎಂದು ಉಲ್ಲೇಖಿಸುತ್ತಾ ‘ಸಿದ್ದರಾಮಯ್ಯ ಸರ್ಕಾರ ಧರ್ಮಾಧಾರಿತ ಯೋಜನೆ ಜಾರಿಗೊಳಿಸಿದೆ” ಎಂದು ತೇಜಸ್ವಿ ಸೂರ್ಯ ತಪ್ಪು ಮಾಹಿತಿ ಹರಡಿದ್ದರು. ಆ ಬಳಿಕ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಐಟಿ ಸೆಲ್, ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಕೂಡ ನಡೆಸಿತ್ತು. ಈಗ ‘ಡಿಲೀಟ್’ ಮಾಡಿದ್ದಾರೆ.
ಗಾಂಪರ ಗುಂಪಿನ ಎಳೆಯ ಸದಸ್ಯ @Tejasvi_Surya ಅವರೇ,
— Karnataka Congress (@INCKarnataka) September 9, 2023
ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ?
ಅಭಿವೃದ್ಧಿ ಎನ್ನುವುದು ಜನ ಕೇಂದ್ರಿತವಾಗಿರಬೇಕಲ್ಲವೇ?
ಬಡ ಜನರ ಬದುಕು ಹಸನಾಗುವುದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳಲಾಗದಿರುವುದೇಕೆ?
ದಲಿತರ ಏಳಿಗೆಗೂ ಆಕ್ಷೇಪ,
ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೂ ಆಕ್ಷೇಪ ಮಾಡುವ ನಿಮ್ಮ… pic.twitter.com/valsbEPJa4
ಈ ದಿನ.ಕಾಮ್ ಕಂಡುಕೊಂಡ ವಾಸ್ತವ ಏನು?

ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕಿಗೆ ಆಟೋ, ಗೂಡ್ಸ್, ಟ್ಯಾಕ್ಸಿ ಖರೀದಿಗೆ ಶೇ.50 ರಷ್ಟು ಅಂದರೆ ಗರಿಷ್ಟ 3 ಲಕ್ಷದವರೆಗೆ ಸಬ್ಸಿಡಿ ನೀಡುವ ‘ಸ್ವಾವಲಂಬಿ ಸಾರಥಿ ಯೋಜನೆ’ಗೆ ಸಂಬಂಧಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ) ಇತ್ತೀಚೆಗೆ ಅರ್ಜಿ ಆಹ್ವಾನಿಸಿತ್ತು.
ಈ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲಿ ಇದರ ಇತಿಹಾಸವನ್ನು ಕೆಣಕಲು ಈ ದಿನ.ಕಾಮ್ ತಂಡ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಕೇಂದ್ರ ಕಚೇರಿಗೆ ಭೇಟಿ ನೀಡಿತು.
ಈ ವೇಳೆ ಸಂಪೂರ್ಣ ಮಾಹಿತಿ ನೀಡಿದ ನಿಗಮದ ನಿರ್ದೇಶಕ ಮೊಹಮ್ಮದ್ ನಝೀರ್, “ಈ ಯೋಜನೆ ಕೇವಲ ಕೆಎಂಡಿಸಿ ಮಾತ್ರವಲ್ಲದೇ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲೂ ಜಾರಿಗೆ ಬಂದಿದೆ” ಎಂದು ಮಾಹಿತಿ ನೀಡಿದರು.

ಕೆಎಂಡಿಸಿ ನಿರ್ದೇಶಕ ಮೊಹಮ್ಮದ್ ನಝೀರ್
“ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲದೆ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಅನುಷ್ಠಾನದಲ್ಲಿದೆ. ಈ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿ ಮಾಡಿದ್ದಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲೂ ಜಾರಿಯಲ್ಲಿತ್ತು ಎಂದು” ತಿಳಿಸಿದರು.
“ನಮ್ಮ ನಿಗಮದಲ್ಲಿ ಯೋಜನೆಗೆ ಚಾಲನೆ ಸಿಕ್ಕಿದ್ದು 2017-18ರಲ್ಲಿ. ಆಗ ಸಿದ್ದರಾಮಯ್ಯ ಸರ್ಕಾರವು ಇದನ್ನು ಹೊಸ ‘ಸ್ವ ಉದ್ಯೋಗ’ಕ್ಕೆ ‘ಸಾಲ ಸೌಲಭ್ಯ’ ನೀಡುವ ಉದ್ದೇಶದಿಂದ ನಿರುದ್ಯೋಗಿಗಳಿಗೆ ಈ ಯೋಜನೆಯನ್ನು ಪರಿಚಯಿಸಿತ್ತು. ‘ಸಹಾಯಧನ ಯೋಜನೆ’ ಎಂದಷ್ಟೇ ಇದಕ್ಕೆ ಹೆಸರಿತ್ತು. ಪ್ರಾರಂಭದಲ್ಲಿ ಶೇ.33 ಸಹಾಯಧನವಿತ್ತು. ಈಗ ಅದನ್ನು ಶೇ.50ಕ್ಕೆ ಹೆಚ್ಚಿಸಿ, ‘ಸ್ವಾವಲಂಬಿ ಸಾರಥಿ ಯೋಜನೆ’ ಎಂದು ಹೆಸರಿಟ್ಟಿದ್ದೇವೆ” ಎಂದು ನಝೀರ್ ಮಾಹಿತಿ ನೀಡಿದರು.
ಈ ಯೋಜನೆಗೆ ಈ ವರೆಗೆ ಸರ್ಕಾರ ನೀಡಿದ ಅನುದಾನವೆಷ್ಟು?
ಟ್ಯಾಕ್ಸಿ,ಗೂಡ್ಸ್ , ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿಗಾಗಿ ನೀಡುವ ಈ ಸಹಾಯಧನ ಸೌಲಭ್ಯ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ-ಷೆಡ್ಯೂಲ್ಡ್ ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕೆಎಂಡಿಸಿ ಕೇಂದ್ರ ಕಚೇರಿ
ಈ ಯೋಜನೆಗೆ ಸರ್ಕಾರವು 2017-18ರಲ್ಲಿ 15 ಕೋಟಿ(ಕಾಂಗ್ರೆಸ್ ಸರ್ಕಾರದ ಅವಧಿ), 2018-19ರಲ್ಲಿ 19 ಕೋಟಿ(ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ), 2019-20ರಲ್ಲಿ 4.5 ಕೋಟಿ(ಬಿಜೆಪಿ ಸರ್ಕಾರ), 2020-21ರಲ್ಲಿ 3.87 ಕೋಟಿ(ಬಿಜೆಪಿ ಸರ್ಕಾರ), 2021-22ರಲ್ಲಿ 10 ಕೋಟಿ(ಬಿಜೆಪಿ ಸರ್ಕಾರ), 2022-23ರಲ್ಲಿ 15 ಕೋಟಿ(ಬಿಜೆಪಿ ಸರ್ಕಾರ) ಹಾಗೂ ಈಗಿನ ಸಿದ್ದರಾಮಯ್ಯ ಸರ್ಕಾರವು 2023-24ರ ಅವಧಿಗೆ ಈ ಯೋಜನೆಗೆ 10 ಕೋಟಿ ಮೀಸಲಿಟ್ಟಿದೆ. ಈ ಎಲ್ಲ ಅಧಿಕೃತ ಅಂಕಿ-ಅಂಶಗಳನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಈ ದಿನ.ಕಾಮ್‌ಗೆ ನೀಡಿದೆ.
ಕೋವಿಡ್ ಸಂದರ್ಭವಾಗಿದ್ದ 2019ರಿಂದ 2021ರವರೆಗೆ ಮಾತ್ರ ಸರ್ಕಾರವು ಈ ಯೋಜನೆಗೆ ಕಡಿಮೆ ಅನುದಾನ ನೀಡಿದೆ. ಈ ವೇಳೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ ಎಂಬುದು ವಾಸ್ತವ. ಆದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತ್ರ ಈ ಮಾಹಿತಿಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆ, ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ.
YouTube live video of Sudhir Choudhary isn't available on Aaj Tak Channel now. Reason? 🤔 https://t.co/mFydT0CMen pic.twitter.com/y6I5OWLeBl
— Mohammed Zubair (@zoo_bear) September 12, 2023
ಅಲ್ಲದೇ, ಈ ಸುಳ್ಳು ಸುದ್ದಿಗೆ ‘ಕೋಮು ಮಸಾಲೆ’ ಸೇರಿಸಿ, ಆಜ್‌ತಕ್ ವಾಹಿನಿಯ ಮೂಲಕ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಪ್ರಸಾರ ಮಾಡಿದ್ದಾರೆ. ಸಮಾಜದಲ್ಲಿ ಕೋಮು ಭಾವನೆ ಕೆರಳುವಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಿತ್ತು. ಈಗ ಕೆಎಂಡಿಸಿಯ ಸಹಾಯಕ ಅಧಿಕಾರಿ ಶಿವಕುಮಾರ್ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಕೆಎಂಡಿಸಿಯ ಇತಿಹಾಸ ಏನು?
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಮೊದಲು ಸ್ಥಾಪಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ (ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು ಪುನರ್ ನಾಮಕರಣಗೊಂಡಿದೆ) ವಹಿಸಲಾಗಿತ್ತು.

ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಿಗೆ ಸಾಲಸೌಲಭ್ಯವನ್ನು ಒದಗಿಸುತ್ತಿತ್ತು. ಹೀಗಿದ್ದರೂ, ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿದ್ದ ಯೋಜನೆಗಳು ಮತೀಯ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತಿಲ್ಲ ಎಂಬ ಅಂಶವನ್ನು ಗಮನಿಸಿ ಮತ್ತು ರಾಜ್ಯದ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸುವ ಸಲುವಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಏಕೈಕ ಉದ್ದೇಶದಿಂದ ಆಗಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗ್ಡೆಯವರ ನೇತೃತ್ವದ ಸರ್ಕಾರವು ದಿನಾಂಕ 07.02.1986ರಂದು ‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ’ ಎಂಬ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿತ್ತು.
ನಿಗಮದ ನೋಂದಾಯಿತ ಕಚೇರಿ ಬೆಂಗಳೂರಿನಲ್ಲಿದ್ದು, ಇದರ ಜಿಲ್ಲಾ ಕಚೇರಿಗಳು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿದೆ.