ಗದಗ ಸೀಮೆಯ ಕನ್ನಡ | ‘ಏನ್‌ ಬೇ… ಅವ್ವ-ಮಗಳು ಸೇರಿ ಚಂದಪ್ಪನ ಮ್ಯಾಲೆ ಜಾಗಾ ಖರೀದಿಗ ಹೊಂಟಿರೇನ್‌?’

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

"ಹೌದ ತಂಗಿ... ಸೂರ್ಯಾನ ಮ್ಯಾಲೆ ರಾಕೆಟ್‌ ಬಿಟ್ಟ ಅಲ್ಲೇನ್‌ ಐತಿ ಅಂತ ತಿಳಕೋತಾರಂತ. ಅವ್ಹಾ ಅಷ್ಟ ದೂರ ಇದ್ರೂ ಇಷ್ಟ ಜಳಾ ಇಟ್ಟತಿ, ಇನ್ನ ಪಾಪ ಆ ರಾಕೇಟ್‌ ಗತಿ ಏನನ್ವ! ಇನ್ನೂ ಚಂದಪ್ಪನ ಮ್ಯಾಲೆ ತಂಪ ಐತಿ, ರಾಕೇಟ್‌ ಅಲ್ಲೆ ಆರಾಮ್‌ ಇರ್ತಾವು..."

ಮಳಿ ಹೋಗಿ ಹೊಳ್ಳಿ ಬ್ಯಾಸಗಿ ಆದಂಗ ಆಗೇತಿ. ಸ್ವಲ್ಪ ಹೊರಗಿನ ಗಾಳಿಗೆ ಕುಂದ್ರೂನು ಅಂತ ಹೊರಗ ಬಂದ್ಯಾ. ಪಂಚಮಿ ಜೋಕಾಲಿ ಇನ್ನು ಹಂಗ ಇತ್ತು. ಆಹಾ… ಜೋಕಾಲ್ಯಾಗ ಜೀಕೂನೂ ಮಜಾ ಬರ್ತೇತಿ ಅಂತ ಕುಂದ್ರೂದ್ರಾಗ ನಮ್ಮ ಅಕ್ಕ, “ಅವ್ವಿ… ಕೆಲಸಿಲ್ಲ ಏನ್‌ ಆರಾಮ ಕುಂತಿಯಲ್ಲ?” ಅಂದ್ಲು. “ಇಲ್ಲಬೇ ಅಕ್ಕ… ಐತಿ ಒಳಗ ಭಾರೀ ಝಳಾ ಇಟ್ಟೇತವಾ. ಅದಕ, ಹೊರಗ ಬಂದೇನಿ,” ಅಂದೆ.

“ಹುಂ… ಗಿಡದ ಜೋಕಾಲಿ ಆಡಬೇಕಿಲ್ಲೊ… ಸಣ್ಣ ಹುಡ್ರ ಜೋಕಾಲ್ಯಾಗ ಕುಂತಿಯಲ್ಲಾ… ಚಿಕ್ಕಮ್ಮ ಏನ್‌ ಮಾಡಾಕತ್ತಾಳ?” “ಚಿಕ್ಕಮ್ಮ… ಏನ್‌ ಮಾಡಾಕತ್ತಿವಾ?” ಅನಕಂತ ಒಳಗ ಹೋದ್ಲು. ನಮ್ಮವ್ವ ಟಿ.ವಿ ನೋಡಕಂತ ಪಡಸಾಲ್ಯಾಗ್‌ ಕುಂತಿದ್ಲು. “ಬಾರಬೇ… ಯಾಕ… ಇಲ್ಲೇ ಅದೇನಿ,” ಅಂದ್ಲು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕೆಲಸ ಆತನ್ವಾ? ಏನ್‌ ನೋಡಾತ್ತಿರೀ ಟಿವ್ಯಾಗ?” ಅನ್ನೊದ್ರಾಗ ಟಿವಿಯೊಳಗಿಂದ ಸೊಂಡ ಬಂತು – ‘ಸೂರ್ಯ ಶಿಕಾರಿಗೆ ಆದಿತ್ಯ ಎಲ್‌1’ ಅಂತ. “ಹುಂ… ಮತ್‌ ಸೂರ್ಯನ ಮ್ಯಾಲೆ ರಾಕೇಟ್‌ ಬಿಡಾಕತ್ತಾರೇನ್ರಿ ಚಿಕ್ಕಮ್ಮ? ಮನ್ನೆರ ಚಂದ್ರನ ಮ್ಯಾಲೆ ಬಿಟ್ಟಾರ. ಇಪ್ಪಟೆಕ ಸೂರ್ಯಾನ ಮ್ಯಾಲೆ ಹೋಗೊದಾ?” ಅಂದ್ಲು.

“ಹೌದ ತಂಗಿ… ಸೂರ್ಯಾನ ಮ್ಯಾಲೆ ರಾಕೆಟ್‌ ಬಿಟ್ಟ ಅಲ್ಲೇನ್‌ ಐತಿ ಅಂತ ತಿಳಕೋತಾರಂತ. ಅವ್ಹಾ ಅಷ್ಟ ದೂರ ಇದ್ರೂ ಇಷ್ಟ ಜಳಾ ಇಟ್ಟತಿ, ಇನ್ನ ಪಾಪ ಆ ರಾಕೇಟ್‌ ಗತಿ ಏನನ್ವ! ಸೂರ್ಯನ ಹತ್ರ ಹೊಕ್ಕಿದ್ದಂಗ ಕರಗಿದ್ರ… ಹೆಂಗ್? ಇನೂ ಚಂದಪ್ಪನ ಮ್ಯಾಲೆ ತಂಪ ಐತಿ, ರಾಕೇಟ್‌ ಅಲ್ಲೆ ಆರಾಮ್‌ ಇರ್ತಾವು…”

“ಅಲ್ವಾ ಚಿಕ್ಕಮ್ಮ… ಚಂದಪ್ಪನ ಮ್ಯಾಲೆ ಬಂಗಾರದ್ವ ಗುಡ್ಡನ ಅದಾವಂತವಾ, ಅದಕ ನಮ್ಮ ದೇಶದೋರ ರಾಕೇಟ್ ಬಿಟ್ಟಾರಂತ. ಅದು ಬಂಗಾರ ತಗೊಂಡ ಬರ್ತೇತನ್ವ…?”

“ಹ್ಹಾ ಯವ್ವಾ… ಅಲ್ಲೆಲ್ಲೇ ಗುಡ್ಡಾತರ್ತಿ? ಬರಿ ತೆಗ್ಗ ಅದಾವ. ಟಿವ್ಯಾಗ ತೋರ್ಸಾಕತ್ತಿದ್ರಲ್ಲ; ದೊಡ್ಡ-ದೊಡ್ಡ ಕೆರಿನ ಅದಾವ. ಅಲ್ಲಿನ ಮಣ್ಣಾಗ ಬಂಗಾರ್ ಬೆಳ್ಳಿ, ಕಬ್ಬಣ, ತಾಮ್ರ ಎಲ್ಲಾ ಐತೆಂತ. ನಮ್ಮ ದೇಶದಾಗ ಏನ್‌ ಸಿಗತೆತಲ್ಲ ಅವೆಲ್ಲಾ ಅಲ್ಲಿ ಅದಾವಂತ ನೋಡು…”

“ಹುಂ, ಇರಬೇಕ್ರಿ ಚಿಕ್ಕಮ್ಮ… ಅಲ್ವಾ, ನಮಗ ದಿನಕ್ ಒಮ್ಮೆ ಚಂದಪ್ಪ ಬರ್ತಾನ. ಆದ್ರ‌, ಚಂದಪ್ಪನ ಮ್ಯಾಲೆ ಹೋಗಾಕ ಅಷ್ಟ ದಿನಾ ಯಾಕ ಬೇಕ? ಒಂದ ದಿನದ ದಾರೆಲ್ಲೇನ್‌ ಅದು?” ಅಂತ ಕೇಳಿದ್ಲು ನಮ್ಮ ಅಕ್ಕ.

“ಹೌದ ನೋಡ ತಂಗಿ… ಆದ್ರ, ಚಂದಪ್ಪ ನಮ್ಮಿಂದ ಎಷ್ಟ ಕಿಲೋಮೀಟರ್‌ ದೂರ ಅದಾನಂತ್ವ? ಅದು ನಮ್ಮ ಭೂಮಿನ ಸುತ್ತಿ-ಸುತ್ತಿ ಚಂದಪ್ಪನ ಮ್ಯಾಲ ಹೊಕ್ಕೇತೆಂತ್ವಾ… ದಿನಾ ಹೋಗಿ ಬರಂಗಿದ್ದಿದ್ರ ನಮ್ಮ ಮಂದಿ ಬಿಟ್ಟಾರೇನು! ಅಲ್ಲಿನೂ ಹೊಲಾ-ಮನಿ ಖರೀದಿ ಮಾಡ್ತಿದ್ರು…” ಹಿಂಗ್‌ ಅಂತಿದ್ದಂಗ ನಮ್ಮ ಅಕ್ಕ, “ಹೌದ ನೋಡ್ರಿ ಚಿಕ್ಕಮ್ಮ,” ಅಂದ್ಲು. ಇಬ್ರೂ ಜೋರ್‌ ನಕ್ಕರು.

ಅಷ್ಟೊತ್ತಿಂದ ಇವರ ಮಾತ ಕೇಳಾಕತ್ತಿದ್ದ ನಾನು ಒಳಗ ಬಂದು, “ಏನ್‌ ಬೇ… ಅವ್ವ-ಮಗಳು ಸೇರಿ ಚಂದಪ್ಪನ ಮ್ಯಾಲೆ ಜಾಗಾ ಖರೀದಿಗ ಹೊಂಟಿರೇನ್‌,” ಅಂದ್ಯಾ.

ಅದಕ ನಮ್ಮ ಅವ್ವ, “ಅಲ್ಲೇನ ನೀರ್‌ ಇಲ್ಲಂತ, ಗಾಳಿಲ್ಲಂತ ನೋಡ್… ದೇವರ ಸೃಷ್ಟಿ‌ ಹೆಂಗ್‌ ಐತಿ. ನಾವ ಪುಣ್ಯೆ ಮಾಡಿವಿ; ದೇವರು ನಮ್ಮ ಭೂಮಿ ಮ್ಯಾಲೆ ಎಲ್ಲಾ ಅನಕೂಲ ಮಾಡಿ ಕೊಟ್ಟು ಆರಾಮ್‌ ಇಟ್ಟಾನ…” ಅಂದ್ಲು

“ಬೇ… ನಮ್ಮ ಭೂಮಿ ಸುತ್ತ ಓಝೋನ್‌ ಪದರ ಅಂತ ಐತಿ. ಅದ ಇರದಕ್ಕ ನಮ್ಮ ಭೂಮಿ ಮ್ಯಾಲೆ ಪರಿಸರ ಸೃಷ್ಟಿ ಆಗೇತಿ. ದೇವರಂತ ಇಕಿಗೆ…!” ಅಂದ್ಯಾ.

ನಮ್ಮ ಅಕ್ಕ, “ಹೌದಾ ಅವ್ವಿ… ನಮಗಷ್ಟ ಈ ಗಾಳಿ, ನೀರು, ಮಾಡ, ದನಾ-ಕರ ಇರೋದನು. ಹೊರಗಿನ ಜಗತ್ತಿನ್ಯಾಗ ಇಂತಾವೇನು ಇಲ್ಲನು ಹಂಗಾದ್ರ?” ಅಂದ್ಲು.

“ಇರಬೋದ್ವಾ… ಇನ್ನೂ ನಮ್ ವಿಜ್ಞಾನಿಗಳಿಗೆ ಅದನ ಪತ್ತೆ ಮಾಡಾಕ ಆಗಿಲ್ಲ. ಅದಕ ಚಂದ್ರಯಾನ, ಮಂಗಳಯಾನ, ಸೂರ್ಯಯಾನ ಅಂತ ಹೇಳಿ ರಾಕೇಟ್‌ ಬಿಡಾಕತ್ತಾರ…” ಅನ್ನೊದ್ರಾಗ ನಮ್ಮ ಅವ್ವ, “ನೋಡು… ಅಷ್ಟ ರಾಕೇಟ್‌ ವಿಜ್ಞಾನಿಗಳ ಬಿಟ್ಟಾರಂದ್ರ, ಸುಮ್ಮನ ಹೋಗ್ಯಾವ ಏನ್‌ ಅವು ಅಲ್ಲಿಮಟ? ದೇವರ ದಯೇ ಅದೆಲ್ಲಾ… ವಿಜ್ಞಾನಿಗಳ ದೇವರ ಹತ್ರ ಹೋಗಿ, ನಮ್ಮ ರಾಕೇಟನ ಚಂದಪ್ಪನ ಮ್ಯಾಲೆ ಆರಾಮಾಗಿ ಇಳಸಪ್ಪ ಅಂತ ಕೇಳಕೊಂಡಾರ. ಆ ವಿಜ್ಞಾನಿಗಳಕಿಂತ ದೊಡ್ಡಕಿ ಅದಿ ಏನ್‌ ನೀ…” ಅಂದು ನನ್ನ ಜಬರ್ಸಿಬಿಟ್ಲು.

“ಆತ ಬಿಡವಾ… ನಾ ನಿಮ್ಮ ದೇವರಿಗೆ ಏನು ಅಂದಿಲ್ಲ…” ಅಂದು ಓಳಗ ಹೋದೆ. ಮತ್‌ ನಮ್ಮ ಅವ್ವ ಚಾಲೂ ಮಾಡಿದ್ಲು; “ಅಯ್ಯ… ಇವರು ದಿನಕ್ಕೊಂದು ಹಿಂಗ್‌ ರಾಕೆಟ್‌ ಬಿಟ್ರ, ಪಾಪ ಸೂರ್ಯನ ಗತಿ ಏನು?” ಅಂತ…

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಅಶ್ವಿನಿ ಮ ಮೇಲಿನಮನಿ
ಅಶ್ವಿನಿ ಮ ಮೇಲಿನಮನಿ
ಪತ್ರಕರ್ತೆ. ಕರ್ನಾಟಕದ ಯಾವ ಸೀಮೆಯಲ್ಲಿದ್ದರೂ ಸ್ವಾಭಾವಿಕವಾಗಿ ತನ್ನ ಸೀಮೆಯ ಕನ್ನಡವನ್ನಷ್ಟೇ ಮಾತಾಡುವ ಅಪ್ಪಟ ಕನ್ನಡತಿ.

1 COMMENT

  1. ತೆರೆಮರೆಗೆ ಸುರಿಯುತ್ತಿರುವ ಗ್ರಾಮೀಣ ಸೊಗಡಿನ ವಾಗ್ಝರಿಗೆ ಧನ್ಯವಾದಗಳು…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...