ಬಲಾಢ್ಯ ಸಮುದಾಯಗಳನ್ನು ನೆಚ್ಚಿಕೊಂಡು ಕರ್ನಾಟಕ ಕಾಂಗ್ರೆಸ್ ಉಳಿದಿಲ್ಲ ಎಂಬುದು ವಾಸ್ತವ. ಅಹಿಂದ ಸಮುದಾಯಗಳಿಗೆ ಆಶಾಕಿರಣವಾಗಿರುವ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಾಗಲೇ ಕಾಂಗ್ರೆಸ್ ಉಳಿಗಾಲ ಎಂಬುದನ್ನು ಲಕ್ಷ್ಮಣ್ ಅಂಥವರು ಸದಾ ನೆನಪಿಡಲಿ.
2018ರ ಜೂನ್ ತಿಂಗಳು. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಂ.ಲಕ್ಷ್ಮಣ್ ಸೋತಿದ್ದರು. ಚುನಾವಣಾ ರಾಜಕಾರಣದಲ್ಲಿ ಅದು, ಅವರ ನಾಲ್ಕನೇ ಸಲದ ಸೋಲಾಗಿತ್ತು. ಅಂದು ಅವರು ನಡೆಸಿದ ಪತ್ರಿಕಾಗೋಷ್ಠಿ ಕಣ್ಣಿಗೆ ಕಟ್ಟಿದಂತಿದೆ. ಶಿಕ್ಷಕರು ಕೂಡ ಜಾತಿ, ಹಣ ನೋಡಿ ಮತ ಹಾಕುತ್ತಾರೆಂಬ ದುಗುಡ ಲಕ್ಷ್ಮಣ್ ಅವರಿಗಿತ್ತು. ಶಿಕ್ಷಕರ ಹಿತಾಸಕ್ತಿಗಾಗಿ ನಿಷ್ಠುರವಾಗಿ ಹೋರಾಡುತ್ತಿದ್ದರೂ ಅವರಿಗೆ ಗೆಲುವು ದಕ್ಕಿರಲಿಲ್ಲ.
ಬಹಳ ನೊಂದಿದ್ದ ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿ, “ಸುಮ್ಮನೆ ಇದ್ದಿದ್ದರೆ ಹೆಂಡತಿ, ಮಕ್ಕಳು ಬೀದಿಪಾಲು ಆಗುತ್ತಿರಲಿಲ್ಲ. ಶಿಕ್ಷಕರಾದವರೂ ಜಾತಿ ಆಧಾರದ ಮೇಲೆ, ಆಮಿಷಗಳಿಗೆ ಒಳಗಾಗಿ ಮತ ಹಾಕಿರುವುದು ನೋವು ತಂದಿದೆ. ಚುನಾವಣೆ ಮರೆತು ನನ್ನ ಜೀವನ ರೂಪಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದೇನೆ. ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ. ಮತ್ತೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಶಿಕ್ಷಕರ ಪರವಾದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಪಕ್ಷದ ಕಾರ್ಯಕರ್ತನಾಗಿ ಇದ್ದುಬಿಡುತ್ತೇನೆ” ಎಂದು ಭೂಮಿ ತಾಯಿಗೆ ಸಾಷ್ಟಾಂಗ ನಮಸ್ಕರಿಸಿ ಹೊರಟು ಹೋಗಿದ್ದರು.
ಪಕ್ಷದ ವಕ್ತಾರರಾಗಿ ಅಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಮಾಡಿರುವ ಪತ್ರಿಕಾಗೋಷ್ಠಿಗಳು, ಮೈಸೂರು- ಕೊಡಗು ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪ್ರತಾಪ ಸಿಂಹರನ್ನು ದಾಖಲೆ ಸಹಿತ ಬೆತ್ತಲು ಮಾಡುತ್ತಿದ್ದ ರೀತಿ, ಜನಪರವಾದ ನಿಲುವುಗಳನ್ನು ವ್ಯಕ್ತಪಡಿಸುವಲ್ಲಿ ತನ್ನದೇ ಪಕ್ಷ ಮೌನವಾಗಿದ್ದರೂ ಪೊಲೀಸರನ್ನು ಪ್ರಶ್ನಿಸುವ ದಿಟ್ಟತನ- ಎಲ್ಲವೂ ಲಕ್ಷ್ಮಣ್ ಅವರಿಗೊಂದು ಗಟ್ಟಿತನವನ್ನು ತಂದುಕೊಟ್ಟಿದ್ದು ಸುಳ್ಳಲ್ಲ. ಲಕ್ಷ್ಮಣ್ ಅವರ ತೀಕ್ಷ್ಣ ಪ್ರತಿಕ್ರಿಯೆಗಳ ಬಾಣವನ್ನು ಎದುರಿಸಲಾಗದೆ ಪ್ರತಾಪ ಸಿಂಹ ಕೋರ್ಟ್ ಮೆಟ್ಟಿಲೇರಿ ‘ತಡೆಯಾಜ್ಞೆ’ ತಂದಿದ್ದೂ ನಡೆದಿತ್ತು.
ಅಂತಹ ಲಕ್ಷ್ಮಣ್ ಅವರಿಗೆ ಕಾಂಗ್ರೆಸ್ ಪಕ್ಷ ಈ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿತು. ಚಾಮರಾಜ ವಿಧಾನಸಭೆ, ಪದವೀಧರ ಕ್ಷೇತ್ರ, ಎರಡು ಸಲ ಶಿಕ್ಷಕರ ಕ್ಷೇತ್ರದಿಂದ ಸೋತಿರುವ ಲಕ್ಷ್ಮಣ್ ಟಿಪಿಕಲ್ ಜಾತಿವಾದಿ ರಾಜಕಾರಣಿಯಂತೆ ವರ್ತಿಸಿದ ಉದಾಹರಣೆಗಳಂತೂ ಇಲ್ಲ. ಹುಟ್ಟಿನಿಂದ ಒಕ್ಕಲಿಗರಾದರೂ ಜಾತಿಯಿಂದ ಬರಬಹುದಾದ ಫ್ಯೂಡಲ್ ಗುಣ ಅವರಲ್ಲಿ ಇದ್ದಂತೆ ಕಾಣುವುದಿಲ್ಲ. ಅವರ ಮಾತುಗಳಲ್ಲಿ ತೀಕ್ಷ್ಮಣೆ, ಪ್ರಾಮಾಣಿಕತೆ ಕದಲದೆ ಇರುವುದರಿಂದ ಅನೇಕರಿಗೆ ಇಷ್ಟವಾಗುತ್ತಾರೆ. ಆದರೆ ಇತ್ತೀಚೆಗೆ ಅವರು ಆಕ್ರೋಶದಿಂದ ಆಡಿರುವ ಕೆಲವು ಮಾತುಗಳು ದುಡುಗವನ್ನು ಹುಟ್ಟಿಸುತ್ತವೆ. ಕಾಂಗ್ರೆಸ್ಸಿಗೆ ಮತ ಹಾಕಿರುವ ಮತದಾರರ ಸಂದೇಶವನ್ನು ಲಕ್ಷ್ಮಣ್ ಮರೆತರೋ ಅನಿಸಿದೆ.
ಮೈಸೂರು ಭಾಗದ ರಾಜಕಾರಣ ಲಕ್ಷ್ಮಣ್ ಅವರಿಗೆ ಗೊತ್ತಿರದ ಸಂಗತಿಯೇನೂ ಅಲ್ಲ. ಸಿದ್ದರಾಮಯ್ಯನವರು ಜೆಡಿಎಸ್‌ಗೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಸೇರಿದಾಗಲೇ ಮೈಸೂರು ಜಿದ್ದಾಜಿದ್ದಿನ ಜಾತಿ ರಾಜಕಾರಣಕ್ಕೆ ಒಳಗಾಯಿತು. ಇಲ್ಲಿ ಜಾತಿ ಮೇಲರಿಮೆ ಬಲವಾಗಿ ದಶಕವೇ ಉರುಳಿತು. ಇಲ್ಲಿ ನಡೆಯುವ ರಾಜಕೀಯ ಕದನಗಳು ಸಿದ್ದರಾಮಯ್ಯ v/s ಜಾತಿ ಪ್ರತಿಷ್ಠೆ ಎಂಬುದನ್ನು ಕಳೆದ ಹಲವು ಚುನಾವಣೆಗಳು ಸಾಬೀತು ಮಾಡಿವೆ. ಪ್ರತಾಪ ಸಿಂಹ ಎರಡು ಸಲ ಸಂಸದನಾಗಿ ಆಯ್ಕೆಯಾಗಿದ್ದರ ಹಿಂದೆ ಇದ್ದದ್ದು ಮೋದಿ ಅಲೆ ಮಾತ್ರವಲ್ಲ, ದೇವೇಗೌಡರ ಆಶೀರ್ವಾದವೂ ಸೇರಿತ್ತು ಎಂಬುದನ್ನು ರಾಜಕಾರಣದ ಅ, ಆ, ಇ, ಈ ಬಲ್ಲವರೆಲ್ಲರಿಗೂ ಗೊತ್ತಿದೆ. ಜೆಡಿಎಸ್- ಬಿಜೆಪಿ ಮೈತ್ರಿಯಿಂದಾಗಿ ಬಲಾಢ್ಯ ಸಮುದಾಯಗಳಿಗೆ ಸಂತೋಷವಾಯಿತೇ ಹೊರತು, ಸಮಸ್ಯೆಯೇನೂ ಆಗಲಿಲ್ಲ ಎಂಬುದನ್ನು ಫಲಿತಾಂಶ ಎತ್ತಿ ಹಿಡಿದಿದೆ.
“ಸಿದ್ದರಾಮಯ್ಯನವರನ್ನು ಎಷ್ಟು ಸಲ ತವರು ಜಿಲ್ಲೆಯಲ್ಲೇ ಅವಮಾನಿಸುತ್ತೀರಿ? ಇಷ್ಟು ಸ್ಯಾಡಿಸ್ಟ್ ನೇಚರ್ ಏಕೆ? ಕೆಲವು ಗ್ರಾಮಗಳಲ್ಲಿ ಒಕ್ಕಲಿಗರೇ ಸಂಪೂರ್ಣ ಇದ್ದರೂ ಕಾಂಗ್ರೆಸ್ಸಿಗೆ ಎರಡಂಕಿಯ ಮತ ಬಂದಿಲ್ಲ” ಎಂದು ಲಕ್ಷ್ಮಣ್ ಹೇಳಿರುವ ಮಾತು ಪ್ರಜ್ಞಾವಂತ ನಾಗರಿಕರನ್ನು ಕಲಕುವ ಜೊತೆಗೆ, ಜಾತಿ ಸಮೀಕರಣದಲ್ಲಿ ಎಡವಿದ್ದೆಲ್ಲಿ ಎಂಬುದನ್ನು ಮೈಸೂರು ಕಾಂಗ್ರೆಸ್ಸಿಗರು ಅರಿತುಕೊಳ್ಳಬೇಕಿದೆ. ಆದರೆ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಆಡಿರುವ ಮಾತೊಂದು ಆಘಾತಕಾರಿಯಾದುದಾಗಿದೆ. “ಬಿಜೆಪಿಯವರು ಗ್ಯಾರಂಟಿಗಳನ್ನು ವಿರೋಧಿಸಿದ್ದರು. ಜನ ಬಿಜೆಪಿಗೆ ಮತ ಹಾಕಿದ್ದಾರೆ. ಆ ಮೂಲಕ ಗ್ಯಾರಂಟಿಗಳು ಬೇಡ ಎಂಬ ಸಂದೇಶ ನೀಡಿದ್ದಾರೆ. ಸರ್ಕಾರ ಗ್ಯಾರಂಟಿ ನಿಲ್ಲಸಲು ಯೋಚಿಸಬಹುದು” ಎಂದು ಮನವಿ ಮಾಡಿದ್ದಾರೆ ಲಕ್ಷ್ಮಣ್. ಆದರೆ ಅವರು ಕೆಲವು ವಾಸ್ತವಗಳನ್ನು ಮರೆಮಾಚಿದ್ದಾರೆ ಅನಿಸುತ್ತಿದೆ.
ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಯಲ್ಲಿ ಗೆದ್ದದ್ದು ಒಂದೇ ಸ್ಥಾನ. ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಎದುರಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದದ್ದು ಶೇ. 31.88 ಮತಪ್ರಮಾಣ. ಪುಲ್ವಾಮದ ಹೆಸರಲ್ಲಿ ಚುನಾವಣೆಗೆ ಹೋದ ಬಿಜೆಪಿ ಶೇ. 51.38ರಷ್ಟು ಮತ ಪಡೆದು 25 ಕ್ಷೇತ್ರಗಳಲ್ಲಿ ಗೆದ್ದಿತು. ಕಾಂಗ್ರೆಸ್- ಜೆಡಿಎಸ್ ಮೈತ್ರಿಯನ್ನು ಮೇಲ್ಜಾತಿ ಮೇಲರಿಮೆ ಒಪ್ಪಿದ್ದಂತೆ ಕಾಣಿಸಲಿಲ್ಲ. ಅಹಿಂದ ಸಿದ್ಧಾಂತವನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಜೊತೆಯಲ್ಲಿ ಜೆಡಿಎಸ್ ಮುಸುಕಿನ ಗುದ್ದಾಟವನ್ನು ನಡೆಸುತ್ತಲೇ ಇತ್ತು. ಅಂತಿಮವಾಗಿ ಎರಡು ಪಕ್ಷಗಳು ಒಂದೊಂದು ಕ್ಷೇತ್ರ ಗೆದ್ದುಕೊಂಡು ಸೋತವು. ಜೆಡಿಎಸ್ 7 ಸೀಟುಗಳನ್ನು ಮೈತ್ರಿಯಲ್ಲಿ ಪಡೆದಿದ್ದರೂ ಯಶಸ್ಸು ಪಡೆಯಲಿಲ್ಲ. ರಾಜ್ಯಕ್ಕೆ ಕುಮಾರಸ್ವಾಮಿ, ಕೇಂದ್ರಕ್ಕೆ ಮೋದಿ ಎಂಬಂತಿರುವ ಸಾಂಪ್ರದಾಯಿಕ ಜೆಡಿಎಸ್ ಮತದಾರರ ಒಲುವು ಬಿಜೆಪಿ ಕಡೆಯೇ ಇತ್ತು. ಈ ಚುನಾವಣೆಯಲ್ಲಿ ಮೂರು ಕ್ಷೇತ್ರ ಪಡೆದು ಎರಡಲ್ಲಿ ಜೆಡಿಎಸ್ ಗೆದ್ದಿರುವಲ್ಲಿ ಬಿಜೆಪಿಯನ್ನು ಬಲಾಢ್ಯರ ಹಿತಕಾಯುವ ಪಕ್ಷವಾಗಿ ಜೆಡಿಎಸ್ ಮತದಾರರೂ ನೋಡುತ್ತಾರೆಂಬುದನ್ನು ಸ್ಪಷ್ಟಪಡಿಸಿದೆ. ಕಳೆದ ಚುನಾವಣೆಗಿಂತ ಹೆಚ್ಚಿನ ಹುಮ್ಮಸ್ಸು ಈಗ ಜೆಡಿಎಸ್ ಪಾಳಯದಲ್ಲಿ ಕಾಣುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ ಹೊಸ ಮನುಷ್ಯರಾಗುವರೇ?
ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ಮತಗಳು ಸ್ಪಷ್ಟವಾಗಿ ಕಾಂಗ್ರೆಸ್ ಕಡೆ ವಾಲಿದ್ದರಿಂದ ಜೆಡಿಎಸ್ ನೆಲಕಚ್ಚಿತ್ತು. ಬಿಜೆಪಿ ಮತ್ತು ಜೆಡಿಎಸ್ಸಿನ ಸಾಂಪ್ರದಾಯಿಕ ಮತದಾರರು ಒಂದೆಡೆಯಾದರೆ ಫಲಿತಾಂಶದಲ್ಲಿ ಆಗುವ ಬದಲಾವಣೆಯನ್ನು ಈ ಚುನಾವಣೆ ಎತ್ತಿ ತೋರಿಸಿದೆ. ಬಹುಶಃ ಮುಂದಿನ ದಿನಗಳಲ್ಲಿ ಜೆಡಿಎಸ್- ಬಿಜೆಪಿಯ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಹಾಲು- ಜೇನು ಬೆರೆತಂತಹ ವಾತಾವರಣ ಮೈತ್ರಿಯಿಂದ ಬಂದೊದಗಿದೆ. ಚುನಾವಣೆಗಳು ನಡೆಯುವುದೇ ಜಾತಿ ಸಮೀಕರಣದ ಮೇಲೆ ಹೊರತು ಅಭಿವೃದ್ಧಿಯ ಮಾನದಂಡದಲ್ಲಿ ಅಲ್ಲ ಎಂಬುದು ಮತ್ತಷ್ಟು ಬಲವಾಗುತ್ತದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ನಿಲ್ಲಬೇಕೆಂದು ಯೋಚಿಸಿದರೆ ಆತ್ಮಘಾತುಕತನವೂ ಆಗುತ್ತದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದದ್ದು ಶೇ. 31.88 ಮತಗಳು. ಆದರೀಗ ಶೇ. 45.43ರಷ್ಟು ಮತ ಗಳಿಕೆ ಮಾಡಿದೆ. ಬಿಜೆಪಿ- ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿ ಪಡೆದದ್ದು ಶೇ. 46 ಮತಗಳು. ಜೆಡಿಎಸ್ ಪಾಲು ಸೇರಿ ಮೈತ್ರಿಯ ಒಟ್ಟು ಮತಗಳಿಕೆ ಶೇ.51.66. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನದ್ದು ಸಣ್ಣ ಅಂತರ. ಮೈತ್ರಿಯ ಮತಪ್ರಮಾಣದಿಂದ ಬಿಜೆಪಿ 17 ಕ್ಷೇತ್ರದಲ್ಲಿ ಗೆದ್ದಿದೆ. ಆದರೆ ಒಂದು ಕ್ಷೇತ್ರದಲ್ಲಿದ್ದ ಕಾಂಗ್ರೆಸ್ 9ಕ್ಕೇರಿದ್ದು ಯಾರ ಸಾಮರ್ಥ್ಯದಿಂದ? ಇದೇ ಬಡಜನರ ಮತಗಳಿಂದ ಅಲ್ಲವೇ? ಅಹಿಂದ ಮತಗಳು ಈಗಲೂ ಕಾಂಗ್ರೆಸ್ ಕೋಟೆಯಲ್ಲಿ ಭದ್ರವಾಗಿವೆ ಎಂಬುದನ್ನು ಮರೆಯಬಾರದು. ಶೇ. 13.32ರಷ್ಟು ಮತಗಳು ಕಾಂಗ್ರೆಸ್‌ಗೆ ಹೆಚ್ಚಾಗಿದೆ. ಇದು ಸಾಮಾನ್ಯ ಸಾಧನೆಯಂತೂ ಅಲ್ಲ. ಕಳೆದರಡು ಲೋಕಸಭಾ ಚುನಾವಣೆಗಳಿಗೆ ಹೋಲಿಸಿ, ಈಗಿನ ಫಲಿತಾಂಶವನ್ನು ನೋಡಿದರೆ ಕಾಂಗ್ರೆಸ್ ಪರ ಈಗಲೂ ಈ ನಾಡಿನ ಜನ ದೊಡ್ಡಸಂಖ್ಯೆಯಲ್ಲಿದ್ದಾರೆ ಎಂಬುದನ್ನು ತಿಳಿಯಬೇಕು.
ಬಲಾಢ್ಯ ಸಮುದಾಯಗಳನ್ನು ನೆಚ್ಚಿಕೊಂಡು ಕರ್ನಾಟಕ ಕಾಂಗ್ರೆಸ್ ಉಳಿದಿಲ್ಲ ಎಂಬುದು ವಾಸ್ತವ. ಅಹಿಂದ ಸಮುದಾಯಗಳಿಗೆ ಆಶಾಕಿರಣವಾಗಿರುವ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಾಗಲೇ ಕಾಂಗ್ರೆಸ್ ಉಳಿಗಾಲ ಎಂಬುದನ್ನು ಲಕ್ಷ್ಮಣ್ ಅಂಥವರು ಸದಾ ನೆನಪಿಡಲಿ. ಸ್ವತಃ ಮೋದಿಯೇ ಮುಸ್ಲಿಮರ ವಿರುದ್ಧ ಸುಳ್ಳುಗಳ ಮೂಲಕ ದಲಿತ ಮತ್ತು ಒಬಿಸಿಗಳನ್ನು ಎತ್ತಿ ಕಟ್ಟಲು ಯತ್ನಿಸಿದ್ದು ಏಕೆಂಬುದು ಸ್ಪಷ್ಟವಾಗಿದೆ. ಬಿಜೆಪಿ- ಜೆಡಿಎಸ್ಸಿನ ಸಾಂಪ್ರದಾಯಕ ಮತಗಳು ಅಲುಗಾಡುವುದಿಲ್ಲ, ಅನಿವಾರ್ಯವಾಗಿ ಕಾಂಗ್ರೆಸ್ ತಳಪಾಳವನ್ನು ಒಡೆಯಬೇಕೆಂದು ಮೋದಿ ನಿಶ್ಚಿಯಿಸಿರುವುದನ್ನು ಕಾಂಗ್ರೆಸ್ಸಿಗರು ಮರೆಯದಿರಲಿ.
-ಪಿಪೀಲಿಕ
