ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

Date:

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ ಸಾಹೇಬರ ಸಂವಿಧಾನಕ್ಕೆ ಹಣೆ ಹೊತ್ತಿ ನಮಸ್ಕರಿಸಿದ್ದಾರೆ. ಇನ್ನಾದರೂ ಈ ದೇಶವನ್ನು, ಜನರನ್ನು, ಬಹುತ್ವವನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಲಿ, ಒಳಿತು ಮಾಡಲಿ, ಹೊಸ ಮನುಷ್ಯರಾಗಲಿ.

ಬಹುಪಕ್ಷೀಯ ವ್ಯವಸ್ಥೆ ನಮ್ಮ ಪ್ರಜಾಪ್ರಭುತ್ವದ ಬುನಾದಿ. ಕೇಂದ್ರದಲ್ಲಿ ಅಂತಹ ಬಹುಪಕ್ಷಗಳ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಒಕ್ಕೂಟದ ಲೋಕಸಭೆಯ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿಯವರು, ದೇಶದ 16ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. ಸಂಖ್ಯಾಬಲವಿದೆ, ಬಹುಮತವಿಲ್ಲ. ವ್ಯಕ್ತಿಕೇಂದ್ರಿತ ವ್ಯವಸ್ಥೆ ಹಿಂದೆ ಸರಿದು ಒಕ್ಕೂಟ ವ್ಯವಸ್ಥೆಗೆ ಮನ್ನಣೆ ಸಿಕ್ಕಿದೆ. ‘ನಾನು’ ಎಂಬುದನ್ನು ‘ನಾವು’ ಹಿಂದಕ್ಕೆ ಸರಿಸಿದೆ. ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾದ ಮೋದಿಯವರು ಕೊಂಚ ಮಾಗಿದಂತೆ; ಸಹಿಷ್ಣು ಗುಣವನ್ನು ರೂಢಿಸಿಕೊಂಡಂತೆ ಕಾಣುತ್ತಿದ್ದಾರೆ. ಅದೂ ಕೂಡ ಅಭಿನಯವೋ ಅಥವಾ ವೇದಿಕೆಗೆ ತಕ್ಕ ವೇಷವೋ, ಮುಂದಿನ ದಿನಗಳೇ ಹೇಳಬಲ್ಲವು, ಇರಲಿ.

ಗುಜರಾತಿನ ಮೋಧ್ ಗಂಛಿ ತೇಲಿ ಜಾತಿಯ ಬಡಕುಟುಂಬದಲ್ಲಿ 1950ರಲ್ಲಿ ಜನಿಸಿದ ಮೋದಿ, ಬಾಲ್ಯದಲ್ಲಿಯೇ ಆರೆಸೆಸ್‌ ಸಂಪರ್ಕಕ್ಕೆ ಸಿಲುಕಿದವರು. ಎಬಿವಿಪಿ ಕಾರ್ಯಕರ್ತನಾಗಿ ಸಾರ್ವಜನಿಕ ಬದುಕಿಗೆ ತೆರೆದುಕೊಂಡವರು. ಬದುಕಿನುದ್ದಕ್ಕೂ ಕಠಿಣ ಹಾದಿ ಸವೆಸಿದವರು. ಸಂಘಟನೆ, ಸೇವೆ, ಸುತ್ತಾಟಗಳ ಮೂಲಕ ಜನರೊಂದಿಗೆ ಬೆರೆತು ಬೆಳೆದವರು. ಅಡ್ವಾಣಿಯವರ ಶಿಷ್ಯರಾಗಿ ರಾಜಕೀಯ ಅನುಭವ ಗಳಿಸಿದವರು. ಹಿಂದಿ ಹಾಗೂ ಮಾತೃಭಾಷೆ ಗುಜರಾತಿಯಲ್ಲಿ ಮನಮುಟ್ಟುವಂತೆ ಮಾತನಾಡಿ ದೇಶದ ಜನರ ಮನ ಗೆದ್ದವರು. ಪಂಚಾಯ್ತಿ ಮಟ್ಟದಿಂದ ಪ್ರಧಾನಿಯವರೆಗೆ ಹಂತ ಹಂತವಾಗಿ ಬೆಳೆದು ಜನನಾಯಕರಾದವರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿಯವರಲ್ಲಿ ಮೆಚ್ಚಬಹುದಾದ ಇಂತಹ ಹಲವಾರು ಗುಣಗಳಿವೆ. ಜೊತೆಗೆ ಅವರು ದಣಿವರಿಯದ ಕೆಲಸಗಾರ. ಸಂಘಟನಾ ಚತುರ. ಅದ್ಭುತ ಮಾತುಗಾರ. ವಿಶಾಲ, ವೈವಿಧ್ಯಮಯ ದೇಶದ ಜನಮಾನಸದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಅರಿತವರು. ಸ್ಪರ್ಧಾತ್ಮಕವೂ ದೋಷಪೂರ್ಣವೂ ಆಗಿರುವ ಇಂದಿನ ರಾಜಕಾರಣ ಬೇಡುವ ಕೆಲವು ಸಾಮರ್ಥ್ಯಗಳನ್ನು ಚಾಣಾಕ್ಷತನದಿಂದ ರೂಢಿಸಿಕೊಂಡವರು. ರಾಜಕಾರಣದೊಂದಿಗೆ ಧರ್ಮವನ್ನು ನಾಜೂಕಾಗಿ ಬೆರೆಸಿದವರು. ರಾಜಕಾರಣವನ್ನು ಉದ್ಯಮವನ್ನಾಗಿ ಪರಿವರ್ತಿಸಿದವರು. ಅವೆಲ್ಲವುಗಳನ್ನು ಬಳಸಿಕೊಂಡು ಬೃಹತ್ ಬೆಟ್ಟವಾಗಿ ಬೆಳೆದು ನಿಂತವರು.

ಹಾಗೆಯೇ ರೈಲ್ವೇ ಸ್ಟೇಷನ್‌ನಲ್ಲಿ ಚಹಾ ಮಾರಿದ್ದು, ಮೊಸಳೆಯೊಂದಿಗೆ ಹೋರಾಡಿದ್ದನ್ನು ಇತಿಹಾಸದ ಪುಟಗಳಲ್ಲಿ ಸೇರುವಂತೆ ನೋಡಿಕೊಂಡವರು. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು, ಅದನ್ನು ಸಾಬೀತುಪಡಿಸಲು ಬೇಕಾದ ಸರ್ಟಿಫಿಕೇಟ್‌ ಮತ್ತು ಸಹಪಾಠಿಗಳು ಇಲ್ಲದಿದ್ದರೂ, ಸಂಭಾಳಿಸಿ, ಸಮರ್ಥಿಸಿಕೊಂಡವರು. ಮದುವೆಯಾಗಿ ಮಡದಿ ಇದ್ದು ಮುಚ್ಚಿಟ್ಟರೂ, ಅದನ್ನು ದೇಶಸೇವೆಗಾಗಿ ಕುಟುಂಬ ತೊರೆದ ದೇಶಭಕ್ತ ಎಂದು ಹೇಳಿಕೊಂಡವರು. ಇವೆಲ್ಲವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು ಬೆಳೆದವರು.

ಭಾರತೀಯ ಜನತಾ ಪಕ್ಷ 2014ರಲ್ಲಿ 282 ಸ್ಥಾನಗಳನ್ನು ಗೆದ್ದಿತ್ತು, 2019ರಲ್ಲಿ 303 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿತ್ತು. ಬಹುಮತದ ಬಲದಿಂದ ಪ್ರಧಾನಿಯಾದ ಮೋದಿಯವರು, ಆ ಸಂದರ್ಭದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ರಚಿತ ಸಂವಿಧಾನಕ್ಕೆ ಹಣೆ ಹೊತ್ತಿ ನಮಸ್ಕರಿಸಿದ್ದರು. ಆ ಮೂಲಕ ಸಂವಿಧಾನವನ್ನು ಗೌರವಿಸುವುದಾಗಿ ದೇಶಕ್ಕೆ ಸಾರಿದ್ದರು. ಆ ನಂತರ ಅವರ ಆಡಳಿತದ ಮೂಲಕ ಅಡಿಗಡಿಗೂ ಸಂವಿಧಾನವನ್ನು ಉಲ್ಲಂಘಿಸುತ್ತಲೇ ಬಂದರು. ಈ ಚುನಾವಣೆಯ ಸಂದರ್ಭದಲ್ಲಿ ಸಂವಿಧಾನ ಬದಲಿಸುವ ಮಾತುಗಳನ್ನಾಡುವ ದಾರ್ಷ್ಟ್ಯವನ್ನೂ ತೋರಿದರು. ಆ ಬಹುಮತ ಅವರಿಗೆ ಅಮಲೇರಿಸಿತ್ತು. ಸಾಮಾನ್ಯಮನುಷ್ಯ ಎನ್ನುವುದನ್ನು ಮರೆಸಿತ್ತು. ಸರ್ವಾಧಿಕಾರಿ ಪ್ರವೃತ್ತಿ ಬೆಳೆಯಲು ಅನುವು ಮಾಡಿಕೊಟ್ಟಿತ್ತು. ಆತ್ಮಸ್ತುತಿ ಅತಿಗೆ ಹೋಗಿತ್ತು. ಆಡಳಿತ ವ್ಯಕ್ತಿಕೇಂದ್ರಿತವಾಗಿತ್ತು.

ಅಷ್ಟೇ ಅಲ್ಲ, ಮೋದಿಯವರಿಗೆ 70-80 ಜನರ ಮಂತ್ರಿಮಂಡಲವಿದೆ ಎಂಬುದೇ ಮರೆತುಹೋಗಿತ್ತು. ಸರ್ಕಾರವೆಂದರೆ ಮೋದಿ ಎಂಬಂತಾಗಿತ್ತು. ಸರ್ಕಾರದ ಗ್ಯಾರಂಟಿ ಮೋದಿ ಗ್ಯಾರಂಟಿಯಾಗಿ ಪರಿವರ್ತನೆಗೊಂಡಿತ್ತು. ಆ ಮೂಲಕ ಬಹುತ್ವ ಭಾರತವನ್ನು, ಭಾರತೀಯ ಸಂಸದೀಯ ವ್ಯವಸ್ಥೆಯನ್ನು ಅಣಕಿಸಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ಅಸಲಿಗೆ, ಮೋದಿ ಬಂದಿದ್ದು ಹಿಂದುಳಿದ ವರ್ಗದಿಂದ, ಬಡತನದಿಂದ. ಭಾರತವೆಂದರೆ, ಬಹುಜನರೆಂದರೆ ಆ ಬಡವರೇ. ಆದರೆ ಅಧಿಕಾರಕ್ಕೇರಿದ ಮೋದಿಯವರು, ಆ ವರ್ಗದವರಾದ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರನ್ನು ಪ್ರಜ್ಞಾಪೂರ್ವಕವಾಗಿಯೇ ಮರೆತರು. ಮೇಲ್ಜಾತಿಯವರನ್ನು ಮೆಚ್ಚಿಸಲು ಮೈಗೆಲ್ಲ ನಾಮ ಬಳಿದುಕೊಂಡು ಬಣ್ಣದ ವೇಷ ಹಾಕಿದರು. ಬರೀ ಮಾತಿನಿಂದ ಬಡವರ ಹೊಟ್ಟೆ ತುಂಬಿಸಲು ನೋಡಿದರು.

ಅಧಿಕಾರ ಮೋದಿಯವರನ್ನು ಮಹಾತ್ಮರನ್ನಾಗಿಸಿತ್ತು, ಪರಮಾತ್ಮ ಎಂದು ಹೇಳಿಸಿತ್ತು. ಸುತ್ತಮುತ್ತಲಿದ್ದವರ ನಡೆ-ನುಡಿಯಲ್ಲಿ ಅದು ಆಗಲೇ ಆಚರಣೆಗೆ ಬಂದಿತ್ತು. ಅಸಲಿಗೆ, ಮೋದಿಯವರು ಆಕಾಶದಿಂದ ಉದುರಿದವರಲ್ಲ. ನಮ್ಮ-ನಿಮ್ಮಂತೆಯೇ ಸಾಮಾನ್ಯ ಮನುಷ್ಯರು. ಮಹಾನ್‌ ವ್ಯಕ್ತಿಗಳನ್ನೂ ಚಿಕಿತ್ಸಕ ದೃಷ್ಟಿಯಿಂದ ನೋಡಬೇಕಿದೆ. ದೇವರನ್ನಾಗಿ ಮಾಡುವುದನ್ನು, ನೋಡುವುದನ್ನು ನಿಲ್ಲಿಸಬೇಕಿದೆ.

ಪ್ರಜಾಪ್ರಭುತ್ವದಲ್ಲಿ ಪರಮಾತ್ಮನಿಗೇನು ಕೆಲಸ ಎಂದು ಎಚ್ಚೆತ್ತುಕೊಂಡ ಮತದಾರ ಪ್ರಭುಗಳು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 240 ಸ್ಥಾನಗಳನ್ನು ಕರುಣಿಸಿದ್ದರು. ಆದರೂ ಒಕ್ಕೂಟದ ಬಲದಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ.

ಪ್ರಧಾನಿಯಾದ ಕ್ಷಣದಲ್ಲಿ, ‘ಜನರ ಜೀವನವನ್ನು ಸುಧಾರಿಸುವಲ್ಲಿ ಒತ್ತು ನೀಡುತ್ತೇನೆ. 140 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ. ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಚಿವರೊಂದಿಗೆ ಕೆಲಸ ಮಾಡುತ್ತೇನೆ’ ಎಂದು ಮತ್ತೆ ಭರವಸೆಯ ಮಾತುಗಳನ್ನಾಡಿದ್ದಾರೆ.

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ ಸಾಹೇಬರ ಸಂವಿಧಾನಕ್ಕೆ ಹಣೆ ಹೊತ್ತಿ ನಮಸ್ಕರಿಸಿದ್ದಾರೆ. ಇನ್ನಾದರೂ ಈ ದೇಶವನ್ನು, ಜನರನ್ನು, ಬಹುತ್ವವನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಲಿ, ಒಳಿತು ಮಾಡಲಿ, ಹೊಸ ಮನುಷ್ಯರಾಗಲಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬದಲಾಗುವ ಸಾಧ್ಯತೆ ಕಡಿಮೆ,, ಅಕಸ್ಮಾತ್ ಚಾರ್ ಸೌ ಪಾರ ಆಗಿದ್ದರೆ,,,ದೇಶದ ಕಥೆ ದೇವರೇ ಕಾಪಾಡಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...