ಮೂರು ತಲೆಮಾರುಗಳನ್ನು ಪೊರೆದ, ಪೋಷಿಸಿದ ಗೌಡರ ಕುಟುಂಬದ ವಿಶ್ವಾಸಾರ್ಹ ಕಣ್ಣೀರಿಗೆ ಇಷ್ಟೆಲ್ಲ ಶಕ್ತಿ ಇದೆಯೇ? ಆ ಕಣ್ಣೀರಿಗೆ ಇಷ್ಟೆಲ್ಲ ಆಸ್ತಿ ಗಳಿಸುವ ತಾಕತ್ತಿದೆಯೇ? ಇದು ನಿಖಿಲ್ ಕುಮಾರಸ್ವಾಮಿಯವರ ದುರದೃಷ್ಟವೇ ಅಥವಾ ಇವರನ್ನು ಪಡೆದ ನಾಡಿನ ಜನತೆಯ ಅದೃಷ್ಟವೇ!?
‘ಸತತ ಎರಡು ಚುನಾವಣೆಗಳಲ್ಲಿ ಸೋತಿರುವ ನಾನು ಏನು ತಪ್ಪು ಮಾಡಿದ್ದೇನೆಂದು ಗೊತ್ತಾಗುತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನಾಗಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರ-ವಿರೋಧದ ಚರ್ಚೆಯ ವಸ್ತುವಾಗಿದೆ. ಜನಸಾಗರ ನೋಡಿ ನಿಖಿಲ್ ಕಣ್ಣೀರು ಸಹಜ ಎಂದು ಹಲವರು ಅವರ ಪರ ವಹಿಸಿ ಮಾತನಾಡಿದರೆ; ಕಣ್ಣೀರು ಹಲವರ ಗೇಲಿಗೆ ಬಳಕೆಯಾಗಿದೆ.
ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಅವರ ವಂಶದ ಕುಡಿಯಾದ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ನಿಂದಿಸಿರುವುದನ್ನು ನಾವು ಖಂಡಿಸಬೇಕು. ಮಾಜಿ ಪ್ರಧಾನಿ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿ ಮಗ ಆಗಿರುವುದೇ ನನ್ನ ದುರದೃಷ್ಟ ಎಂದು ಹೇಳುವ ಮೂಲಕ ಆ ಇಬ್ಬರು ಹಿರಿಯರ ಕೊಡುಗೆಯನ್ನೇ ನಿಖಿಲ್ ಅವಮಾನಿಸಿದ್ದಾರೆ. ಇದು ಪಿತೃದ್ರೋಹಕ್ಕೆ ಸಮ ಎಂದಿದ್ದಾರೆ.
ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆಯ ಕಣದಲ್ಲಿ ಹೀನಾಯವಾಗಿ ಸೋತರೂ ತನ್ನನ್ನು ಮತ್ತೆ ಚನ್ನಪಟ್ಟಣದಲ್ಲಿ ಅಭ್ಯರ್ಥಿ ಮಾಡಿದ್ದು ತಾನು ಮೊಮ್ಮಗ/ಮಗ ಅನ್ನುವ ಅದೃಷ್ಟದ ಕಾರಣಕ್ಕೆ ಎಂಬುದು ಆತನಿಗೆ ನೆನಪಿರಬೇಕಿತ್ತು ಎಂದು ಎಚ್ಚರಿಸಿದ್ದಾರೆ.
2023ರ ಅಫಿಡವಿಟ್‌ನಲ್ಲಿ 77 ಕೋಟಿ ಇದ್ದ ತನ್ನ ಆಸ್ತಿ, 2024ರ ಅಫಿಡವಿಟ್‌ನಲ್ಲಿ 113 ಕೋಟಿಗೆ ಹೇಗೆ ಏರಿತು ಅನ್ನುವುದರ ಕನಿಷ್ಠಜ್ಞಾನವಾದರೂ ಇರಬೇಕಿತ್ತು ಎಂದು ಬುದ್ಧಿ ಮಾತು ಹೇಳಿದ್ದಾರೆ.
ಒಂದೇ ವರ್ಷದಲ್ಲಿ ಈಪಾಟಿ ಏರಿಕೆಯಾಗಲಿಕ್ಕೆ ದೊಡ್ಡವರ ಆಶೀರ್ವಾದ ಎಷ್ಟು ಮುಖ್ಯ ಅನ್ನುವ ಅರಿವಾದರೂ ಇರಬೇಕಿತ್ತು. ತನ್ನ ಅದೃಷ್ಟವನ್ನೇ ದುರದೃಷ್ಟ ಅನ್ನುವುದು ಯಾವ ಸೀಮೆ ಸಂಸ್ಕೃತಿ? ಇಂತಹ ಪಿತೃನಿಂದನೆಗೆ ನಮ್ಮ ಬಲವಾದ ಆಕ್ಷೇಪಣೆ ಇದೆ ಎಂದು ಬೇಸರಿಸಿಕೊಂಡವರೂ ಇದ್ದಾರೆ.
ಇನ್ನು ಕೆಲವರು ಕಣ್ಣೀರು ಅವರ ಮನೆ ದೇವರು, ಕುಟುಂಬ ಕಲೆ, ಅದು ಕಲಾವಿದರ ಕುಟುಂಬ ಎಂದೆಲ್ಲ ಬಣ್ಣಿಸುತ್ತಿದ್ದಾರೆ. ಕಣ್ಣೀರಿಗೆ ಬೆಲೆ ಇಲ್ಲವಾ- ಖಂಡಿತ ಇದೆ. ಇಲ್ಲದಿದ್ರೆ ತಾತ ಪ್ರಧಾನಿ, ತಂದೆ ಮುಖ್ಯಮಂತ್ರಿ ಆಗುತ್ತಿದ್ದರಾ ಎಂದು ತರ್ಕಬದ್ಧ ಪ್ರಶ್ನೆಗಳನ್ನೆತ್ತಿದ್ದಾರೆ. ಹಾಗೆಯೇ, ಕೆಲವರು ಅದು ಅಂತಾರಾಷ್ಟ್ರೀಯ ಮಟ್ಟದ ನಟರ ವಂಶ ಎಂದರೆ; ಇವನೊಬ್ಬ ಅವರಪ್ಪನಂತೆ ಗೋಸುಂಬೆ, ಊಸರವಳ್ಳಿ ಎಂದವರೂ ಇದ್ದಾರೆ.
ನಿಖಿಲ್ ಹಾಗೆ ಹೇಳಿದ್ದರಲ್ಲಿ ತಪ್ಪೇನಿದೆ? ಅವನು ಆ ಕುಟುಂಬದಲ್ಲಿ ಹುಟ್ಟಿರದಿದ್ದರೆ, ಇಷ್ಟು ಹೊತ್ತಿಗೆ ಭಾರತದ ಪ್ರಧಾನಿಯಾಗಿರುತ್ತಿದ್ದ, ಪಾಪ ಎಂದು ವ್ಯಂಗ್ಯವಾಡಿದವರೂ ಇದ್ದಾರೆ.
ಆನ್‌ಲೈನ್ ಯುಗದಲ್ಲಿ, ಎಲ್ಲರ ಕೈಯಲ್ಲೂ ಆಂಡ್ರಾಯ್ಡ್ ಫೋನ್ ಇರುವ ಹೊಸಗಾಲದಲ್ಲಿ ಟ್ರೋಲ್, ರೀಲ್ಸ್, ಶಾರ್ಟ್ಸ್, ಸ್ಟೇಟಸ್, ಮೀಮ್ಸ್, ವ್ಲಾಗ್, ಪ್ರ್ಯಾಂಕ್, ಸ್ನ್ಯಾಪ್ ಚಾಟ್ ಎಂಬ ‘ಅಸ್ತ್ರ’ಗಳ ಮೂಲಕ ಇನ್ಸ್ಟಾಗ್ರಾಂ, ವಾಟ್ಸಾಪ್, ಫೇಸ್‌ಬುಕ್, ಎಕ್ಸ್, ಯೂಟ್ಯೂಬ್‌ಗೇರಿಸಿ, ಆಕಾಶಕ್ಕಾರಿಸಿ- ಕೇವಲ ಲೈಕ್‌ಗಾಗಿ, ಕಾಮೆಂಟ್‌ಗಾಗಿ, ಕಾಸಿಗಾಗಿ ಕಾಯುವವರ ಕಾಲವಿದು. ಅಷ್ಟಕ್ಕಾಗಿಯೇ ವೈಯಕ್ತಿಕ ಬದುಕನ್ನು ಬೆತ್ತಲು ಮಾಡಿಕೊಳ್ಳುವವರಿದ್ದಾರೆ. ನಗಿಸಬೇಕೆಂದು ಹೋಗಿ ನಗೆಪಾಟಲಿಗೀಡಾಗುವವರಿದ್ದಾರೆ. ಆನ್‌ಲೈನ್‌ನಲ್ಲಿ ಪ್ರೀತಿಸಿ, ಮದುವೆಯಾಗಿ, ವಿಚ್ಛೇದನ ಮಾಡಿಕೊಂಡವರೂ ಇದ್ದಾರೆ. ಆನ್‌ಲೈನ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ, ಅದನ್ನು ಹಾಗೆಯೇ ನೋಡುಗರೆದೆಗೆ ದಾಟಿಸುವ ಧೈರ್ಯವಂತರೂ ಇದ್ದಾರೆ. ನೀವು ಕಂಡು ಕೇಳರಿಯದ ಕ್ಯಾಟಗರಿಯ ‘ಪ್ರತಿಭಾವಂತ’ರೆಲ್ಲ, ಈಗ ಈ ಆನ್‌ಲೈನ್ ಕಾಲದಲ್ಲಿ ಕಾಣಸಿಗುತ್ತಿದ್ದಾರೆ.
ಇಂತಹ ಕಾಲದಲ್ಲಿ, ಕೇವಲ ‘ಜಾಗ್ವಾರ್’ ಎಂಬ ಒಂದು ಸಿನೆಮಾಕ್ಕೆ 65 ಕೋಟಿ ಖರ್ಚು ಮಾಡಿ ‘ನಟ’ ಎನಿಸಿಕೊಂಡಿದ್ದ ನಿಖಿಲ್ ಕುಮಾರಸ್ವಾಮಿ, ಚುನಾವಣೆಗೆ ಸ್ಪರ್ಧಿಸಿ, ಜನರ ಮುಂದೆ ನಿಂತಾಗ- ಜನ ಸುಮ್ಮನಿರುತ್ತಾರೆಯೇ? ಆತ ಸಿನೆಮಾ ಸ್ಟಾರ್ ಮತ್ತು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳ ಕುಟುಂಬದ ಕುಡಿ ಎಂಬ ಕಾರಣಕ್ಕೆ ಸ್ಟಾರ್ ವ್ಯಾಲ್ಯೂ ಬರುತ್ತದೆ. ಸಾರ್ವಜನಿಕ ಬದುಕಿನಲ್ಲಿ ಆತನ ನಡೆ-ನುಡಿ ಎಲ್ಲವೂ ಕ್ಯಾಮರಾಗಳಲ್ಲಿ ಸೆರೆಯಾಗುತ್ತದೆ. ಆ ಕ್ಷಣವೇ ಅದೆಲ್ಲವೂ ಆಕಾಶಕ್ಕೆ ತುಂಬುತ್ತದೆ.
ಹೊರಗಿನ ಪ್ರಪಂಚ ಹೀಗಿರುವಾಗಲೇ, ನಿಖಿಲ್ ಕುಮಾರಸ್ವಾಮಿಯವರು ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಚಾರದ ವೇಳೆ ಕಣ್ಣೀರು ಹಾಕಿದ್ದಾರೆ. ನಿಖಿಲ್ ಓಡಾಡುವ ಮೂರೂವರೆ ಕೋಟಿಯ ರೇಂಜ್ ರೋವರ್ ಕಾರು, ವಾಸಿಸುವ ವೈಭವೋಪೇತ ಬಂಗಲೆಗಳ ಅಂದಾಜು ಕೂಡ ಗೊತ್ತಿಲ್ಲದ ಹಳ್ಳಿಯ ಬಡವರು, ‘ಅಳಬ್ಯಾಡ ಬುಡಪ್ಪ, ನಾವ್ ಗೆಲ್ಲುಸ್ತೀವಿ’ ಎಂದು ಸಮಾಧಾನ ಮಾಡಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ಗೊಂಬೆಗಳ ನಾಡಾದ ಚನ್ನಪಟ್ಟಣದಲ್ಲಿ ಮಾಜಿ ನಟರ ಸ್ಟಾರ್ ವಾರ್
ನಿಖಿಲ್ ಕುಮಾರಸ್ವಾಮಿಯವರು, ‘ತಾತ ಹೇಳಿದ್ದು ನಿಜ, ಅಪ್ಪ ಯಾಕ್ ಅಳ್ತಾರೆ ಅಂತ ಈಗ ಗೊತ್ತಾಯ್ತು’ ಎಂದು ಸ್ವಗತದಲ್ಲಾಡಿಕೊಂಡು, ಕೊರಳಲ್ಲಿದ್ದ ಪಕ್ಷದ ಬಾವುಟದಿಂದಲೇ ಕಣ್ಣೀರೊರೆಸಿಕೊಂಡು, ಮತದಾರರತ್ತ ಮಂದಹಾಸ ಬೀರಿದ್ದಾರೆ.
ಹರದನಹಳ್ಳಿಯ ಬಡ ಕೃಷಿಕ ಕುಟುಂಬದಿಂದ ಬಂದ ಎಚ್.ಡಿ. ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಯಾದರು. ದೇಶದ ಪ್ರಧಾನಮಂತ್ರಿಗಳೂ ಆದರು. ಹಳ್ಳಿಯ ಬಡ ರೈತನ ಮಗ ಈ ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಮಂತ್ರಿ ಹುದ್ದೆಗೇರುವುದು, ಇವತ್ತಿನ ರಾಜಕೀಯ ಸಂದರ್ಭದಲ್ಲಿ ಸಾಮಾನ್ಯ ಸಂಗತಿಯಲ್ಲ. ಅದನ್ನು ಆಗುಮಾಡಿದ್ದು ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಅಂಬೇಡ್ಕರ್ ರಚಿತ ಸಂವಿಧಾನ.
ಆದರೆ, ದೇವೇಗೌಡರು ಅದನ್ನು ದೇವರಿಚ್ಛೆ ಎನ್ನುತ್ತಾರೆ. ‘ನನ್ನ ಹಣೆಬರಹದಲ್ಲಿ ಬರೆದಿತ್ತು, ಆದೆ’ ಎಂದು ಆಕಾಶದತ್ತ ಕಣ್ಣು ಕೀಲಿಸಿ ಕೈ ಎತ್ತಿ ತೋರುತ್ತಾರೆ. ಈಗಲೂ ಮುದ್ದೆ ಸೊಪ್ಪು ಸಾರು ತಿನ್ನುವ, ಖಾದಿ ಬಿಳಿ ಬಟ್ಟೆ ಧರಿಸುವ, ಜೇಬುಗಳಿದ್ದರೂ ಐದು ರೂಪಾಯಿ ಕೂಡ ಇಟ್ಟುಕೊಳ್ಳದ ಸರಳಾತಿ ಸರಳ ಗೌಡರು, ಮುಖ್ಯಮಂತ್ರಿಯಾಗಿ 17 ತಿಂಗಳು 20 ದಿನಗಳು ಹಾಗೂ ಪ್ರಧಾನ ಮಂತ್ರಿಗಳಾಗಿ 10 ತಿಂಗಳು 10 ದಿನಗಳ ಅಧಿಕಾರಾವಧಿಯನ್ನು ಆಗಾಗ್ಗೆ ನೆನಪು ಮಾಡಿಕೊಳ್ಳುತ್ತಾರೆ. ಪೂರ್ಣಾವಧಿ ಸಿಕ್ಕಿದ್ದಿದ್ದರೆ, ಈ ದೇಶದ ಹಣೆಬರಹವನ್ನೇ ಬದಲಿಸುತ್ತಿದ್ದೆ ಎನ್ನುತ್ತಾರೆ.
ಹಾಗೆಯೇ, ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿಯವರು, 2004ರಲ್ಲಿ, ಮೊದಲ ಬಾರಿಗೆ ಶಾಸಕರಾಗಿ ಗೆದ್ದ ಅವಧಿಯಲ್ಲಿಯೇ 20 ತಿಂಗಳು ಮುಖ್ಯಮಂತ್ರಿಯಾದರು. 2018ರಲ್ಲಿ ಗೆದ್ದಾಗ 11 ತಿಂಗಳಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಮೊನ್ನೆ ಮಂಡ್ಯ ಲೋಕಸಭೆಗೆ ಸ್ಪರ್ಧಿಸುವಾಗ, 217 ಕೋಟಿಯ ಆಸ್ತಿವಂತ ಎಂದು ಅಫಿಡವಿಟ್ ಸಲ್ಲಿಸಿದರು. ಇವರ ಪತ್ನಿ ಅನಿತಾ ಕುಮಾರಸ್ವಾಮಿಯವರ ಒಟ್ಟು ಆಸ್ತಿ ₹154 ಕೋಟಿ ಎಂದು ದಾಖಲೆಗಳನ್ನು ಕೊಟ್ಟರು.

ಹರದನಹಳ್ಳಿಯ ಮಣ್ಣಿನ ಮಗನಾದ ದೇವೇಗೌಡರ ಕುಟುಂಬದ ಒಟ್ಟು ಆಸ್ತಿ ಎಷ್ಟು ಎನ್ನುವುದನ್ನು ತೆಗೆದು ಪಕ್ಕಕಿಡಿ. ಅವರ ಪುತ್ರ ಕುಮಾರಸ್ವಾಮಿಯವರ ಕುಟುಂಬದ ಆಸ್ತಿಯನ್ನಷ್ಟೇ ನೋಡಿ. ಕುಮಾರಸ್ವಾಮಿ(217) ಮತ್ತು ಅನಿತಾ(154) ಹಾಗೂ ನಿಖಿಲ್(113) ಮತ್ತು ರೇವತಿ(5) ಅವರ ಅಧಿಕೃತ(ಬೇನಾಮಿ ಬೇಡ) ಆಸ್ತಿ ಘೋಷಣೆಯನ್ನಷ್ಟೇ ತೆಗೆದುಕೊಂಡರೂ, ಅದು ಬರೋಬ್ಬರಿ ₹489 ಕೋಟಿ ರೂಪಾಯಿಗಳಾಗುತ್ತದೆ.
ಮೂರು ತಲೆಮಾರುಗಳನ್ನು ಪೊರೆದ, ಪೋಷಿಸಿದ ಗೌಡರ ಕುಟುಂಬದ ವಿಶ್ವಾಸಾರ್ಹ ಕಣ್ಣೀರಿಗೆ ಇಷ್ಟೆಲ್ಲ ಶಕ್ತಿ ಇದೆಯೇ? ಆ ಕಣ್ಣೀರಿಗೆ ಇಷ್ಟೆಲ್ಲ ಆಸ್ತಿ ಗಳಿಸುವ ತಾಕತ್ತಿದೆಯೇ? ಇದು ನಿಖಿಲ್ ಕುಮಾರಸ್ವಾಮಿಯವರ ದುರದೃಷ್ಟವೇ ಅಥವಾ ಇವರನ್ನು ಪಡೆದ ನಾಡಿನ ಜನತೆಯ ಅದೃಷ್ಟವೇ!?

ಲೇಖಕ, ಪತ್ರಕರ್ತ