ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಒಡೆದು ನೂರೆಂಟು ಚೂರಾಗಿರುವುದು ಸುಳ್ಳಲ್ಲ!

Date:

Advertisements
ಬಿಜೆಪಿಯಲ್ಲೀಗ ಅತೃಪ್ತರು, ಭಿನ್ನಮತೀಯರು, ಬಂಡಾಯಗಾರರು ಎದ್ದು ನಿಂತಿದ್ದಾರೆ. ಬಿಜೆಪಿ ಎಂಬುದು ನೂರೆಂಟು ಚೂರಾಗಿದೆ. ಸರಿಪಡಿಸಬೇಕಾದ ಆರ್‍ಎಸ್ಎಸ್‌ನ ಸಂತೋಷ್, ಪ್ರಲ್ಹಾದ ಜೋಶಿಗೆ ಮಂತ್ರಿ ಸ್ಥಾನ ಸಿಗುವಂತೆ ನೋಡಿಕೊಂಡು, ಪಕ್ಷಕ್ಕೂ ನಮಗೂ ಸಂಬಂಧವಿಲ್ಲವೆಂಬಂತಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿರುವ ಮೋದಿಯವರು, ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

‘ನಮ್ಮ ಸಭೆಯನ್ನು ಭಿನ್ನಮತೀಯ ಚಟುವಟಿಕೆ, ಅತೃಪ್ತರ ಸಭೆ ಎಂದು‌ ಬಿಂಬಿಸಲಾಗುತ್ತಿದೆ. ಆದರೆ, ಇದು ಅತೃಪ್ತರ ಸಭೆಯಲ್ಲ’ ಎಂದು ಭಾರತೀಯ ಜನತಾ ಪಕ್ಷದ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಬೆಳಗಾವಿಯ ಕಿಣಯೇ ಗ್ರಾಮದ ಹತ್ತಿರದಲ್ಲಿರುವ ರೆಸಾರ್ಟ್‌ನಲ್ಲಿ ಭಾನುವಾರ ಬಿಜೆಪಿಯ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಒಂದಷ್ಟು ನಾಯಕರು- ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ ಸಿಂಹ, ಜಿ.ಎಂ. ಸಿದ್ಧೇಶ್ವರ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಸೇರಿ ಹನ್ನೆರಡು ಮಂದಿ ಸಭೆ ಸೇರಿದ್ದರು. ಅವರು ಸಹಜವಾಗಿಯೇ ಬಿಜೆಪಿಯಲ್ಲಿದ್ದೂ, ಬಿಜೆಪಿಯನ್ನು ‘ಸರಿದಾರಿಗೆ’ ತರಲು ಹೋರಾಟ ಮಾಡುತ್ತಿರುವ ನಾಯಕರು.

‘ಸರಿದಾರಿಗೆ’ ಎಂದಾಕ್ಷಣ ಓದುಗರು ಬಿಜೆಪಿಯಲ್ಲಿ ಭಿನ್ನಮತ, ಬಂಡಾಯ ಅಂತೆಲ್ಲ ಭಾವಿಸಬೇಕಾದ್ದಿಲ್ಲ. ಅತೃಪ್ತರಿಂದ ಅಸಮಾಧಾನ ಎಂದು ಯೋಚಿಸಬೇಕಾದ್ದಿಲ್ಲ. ಅದನ್ನು ಅವರೂ ಒಪ್ಪುವುದಿಲ್ಲ. ಆದರೆ, ಆ ಹನ್ನೆರಡು ಮಂದಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವವನ್ನು ಒಪ್ಪಿದವರಲ್ಲ. ವಿಜಯೇಂದ್ರರನ್ನು ರಾಜ್ಯರಾಜಕಾರಣದ ಮುಂಚೂಣಿ ನಾಯಕನನ್ನಾಗಿ ಪ್ರತಿಷ್ಠಾಪಿಸಲು ಹವಣಿಸುತ್ತಿರುವ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದನ್ನು ಕೇಳುವವರೂ ಅಲ್ಲ.

Advertisements

‘ಅತೃಪ್ತ’ರಲ್ಲ ಎಂದು ಹೇಳಿಕೊಳ್ಳುವ ನಾಯಕರು ಹೇಳುವ ಪ್ರಕಾರ, ಮುಡಾ ಹಗರಣ ವಿರೋಧಿಸಿ ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಪಾದಯಾತ್ರೆ, ಮೈಸೂರಿಗಷ್ಟೇ ಸೀಮಿತವಾಗಿತ್ತು. ನಾವು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ದುರ್ಬಳಕೆಗೆ ಸಂಬಂಧಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಗಣೇಶ ಚತುರ್ಥಿ ನಂತರ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳುತ್ತಿದ್ದಾರೆ.

ಇದನ್ನು ಓದಿದ್ದೀರಾ?: ರೈತರ ಜೀವನಾಡಿ ತುಂಗಭದ್ರಾ ಅಣೆಕಟ್ಟೆ ಬಗ್ಗೆ ಗೊತ್ತಿರಬೇಕಾದ ಕುತೂಹಲಕಾರಿ ಸಂಗತಿಗಳು

ಅಂದರೆ, ಬಿಜೆಪಿ ನಡೆಸಿದ ಪಾದಯಾತ್ರೆಗೆ ಪರ್ಯಾಯವಾಗಿ ಮತ್ತೊಂದು ಪಾದಯಾತ್ರೆ ನಡೆಸಲು ಬಿಜೆಪಿಗರೇ ಮುಂದಾಗಿದ್ದಾರೆ. ಬೆಂಗಳೂರು-ಮೈಸೂರು ಪಾದಯಾತ್ರೆ ವಿಜಯೇಂದ್ರ ನೇತೃತ್ವದಲ್ಲಿ ನಡೆದರೆ; ಕೂಡಲಸಂಗಮ-ಬಳ್ಳಾರಿ ಪಾದಯಾತ್ರೆ ಯತ್ನಾಳ್ ಮತ್ತು ಜಾರಕಿಹೊಳಿ ನೇತೃತ್ವದ ಪಾದಯಾತ್ರೆಯಾಗಿದೆ. ಜೊತೆಗೆ ‘ಇದು ಯಾರೋ ಒಬ್ಬರನ್ನು ಹೀರೋ ಮಾಡಲು ಮಾಡುತ್ತಿರುವ ಹೋರಾಟವಲ್ಲ’ ಎಂದು ಶಾಸಕ ಯತ್ನಾಳ್ ಹೇಳಿರುವುದು ಮಾರ್ಮಿಕವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ‘ಪಾದಯಾತ್ರೆಗೆ ಅನುಮತಿ ಕೊಟ್ಟಿಲ್ಲ. ಭಿನ್ನಮತ ಶಮನಕ್ಕೆ ಆರ್‍ಎಸ್ಎಸ್ ಎಂಟ್ರಿಯಾಗಲಿದೆ’ ಎಂದಿದ್ದಾರೆ.

ಇವುಗಳ ನಡುವೆಯೇ ದಾವಣಗೆರೆಯಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮರುಚುನಾವಣೆ ಎದುರಿಸಬೇಕು. ಚುನಾವಣೆಯ ಗೆಲುವು ಕಾಂಗ್ರೆಸ್‌ ಭಿಕ್ಷೆಯಲ್ಲ ಬಿಜೆಪಿಯ ಶಕ್ತಿ ಎಂಬುದನ್ನು ನಿರೂಪಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಮುಂದುವರೆದು, ‘ಪಕ್ಷ ಸಂಘಟನೆಯಿಂದ ವಿಮುಖರಾಗಿರುವ ಬಿ.ಎಸ್.ಯಡಿಯೂರಪ್ಪ ಶ್ರೀಮಂತ ಕುಟುಂಬಗಳ ಸಖ್ಯ ಬಯಸುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವಿನ ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ಇದು ಪುಷ್ಟಿ ನೀಡಿದೆ’ ಎಂದು ಆರೋಪಿಸಿದ್ದಾರೆ.

ಬೆಳಗಾವಿಯ ಅತೃಪ್ತರ ಸಭೆ ಕಂಡು ಕಂಗಾಲಾಗಿರುವ ಬಿಜೆಪಿಯ ಹಿರಿಯ ನಾಯಕರಾಗಿದ್ದ ಕೆ.ಎಸ್. ಈಶ್ವರಪ್ಪನವರು ಶಿವಮೊಗ್ಗದಲ್ಲಿ, ಕೇಂದ್ರ ನಾಯಕರು ಮಧ್ಯಪ್ರವೇಶಿಸದಿದ್ದರೆ ಪಕ್ಷ ಎರಡಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ರೆಸಾರ್ಟ್‌ನಲ್ಲಿ ಸಭೆ ನಡೆಸಿದ ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರ ನೋವುಗಳನ್ನು ಕೇಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಒಂದಂತೂ ಸ್ಪಷ್ಟ: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ನಾಯಕರೆನ್ನಿಸಿಕೊಂಡವರು ಯಾರು ಇಲ್ಲ. ಯಾರು ಯಾರ ಮಾತನ್ನೂ ಕೇಳುತ್ತಿಲ್ಲ. ಗುಂಪುಗಳಿಗೆ ಲೆಕ್ಕವಿಲ್ಲ. ಆದರೂ, ನಾಯಕರು ಹೋದಲ್ಲಿ ಬಂದಲ್ಲಿ ಹೇಳ್ತಾನೆ ಇದಾರೆ, ಭಿನ್ನಮತವಿಲ್ಲ.

ಕರ್ನಾಟಕದಲ್ಲಿ ನೆಲೆಯೇ ಇಲ್ಲದ ಭಾರತೀಯ ಜನತಾ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಬಿ.ಎಸ್. ಯಡಿಯೂರಪ್ಪನವರು, ಮಗನನ್ನು ಮುಂಚೂಣಿಗೆ ತರಲು ಲಿಂಗಾಯತರನ್ನೇ ಹಿನ್ನೆಲೆಗೆ ಸರಿಸಿದ್ದಾರೆ. ಅಂದರೆ, ಲಿಂಗಾಯತ ನಾಯಕರಾದ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಸೊಗಡು ಶಿವಣ್ಣ, ಬಿ.ಡಿ. ಬಸವರಾಜು, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಬಸವರಾಜ ಬೊಮ್ಮಾಯಿ, ಜಿ.ಎಂ. ಸಿದ್ದೇಶ್ವರ, ನಿರಾಣಿ, ಕೋರೆ, ಅಂಗಡಿ, ಕತ್ತಿ, ಜೊಲ್ಲೆ ಕುಟುಂಬಗಳನ್ನು ಮುಗಿಸಲು ಹವಣಿಸಿದ್ದರು. ಇವರಲ್ಲಿ ಕೆಲವರು, ಸೋಮಣ್ಣ ಮತ್ತು ಬೊಮ್ಮಾಯಿ ಮಾತ್ರ ಸ್ವಂತ ಶಕ್ತಿಯಿಂದ ಗೆದ್ದರು. ಮಿಕ್ಕವರು ಮೂಲೆ ಗುಂಪಾದರು. ಈಗ ಇವರೆಲ್ಲ ಯಡಿಯೂರಪ್ಪನವರ ಕುಟುಂಬ ರಾಜಕಾರಣದ ವಿರುದ್ಧ ತಿರುಗಿಬಿದ್ದಿದ್ದಾರೆ.  

ಮತ್ತೊಮ್ಮೆ ಪ್ರಧಾನಿಯಾಗಲು ಮೋದಿಯವರು ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡರು. ಇದರಿಂದಾಗಿ ಬಿಜೆಪಿಯಲ್ಲಿ ಈಗಾಗಲೇ ಇದ್ದ ಒಕ್ಕಲಿಗ ನಾಯಕರಾದ ಆರ್. ಅಶೋಕ್, ಅಶ್ವತ್ಥನಾರಾಯಣ, ಸಿ.ಟಿ. ರವಿ, ಸದಾನಂದಗೌಡ, ಶೋಭಾ ಕರಂದ್ಲಾಜೆ, ಯೋಗೇಶ್ವರ್, ಪ್ರತಾಪ್ ಸಿಂಹ, ಪ್ರೀತಂ ಗೌಡ, ಡಾ.ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್‍‌ಗಳು ಚೆದುರಿ ಚೆಲ್ಲಾಪಿಲ್ಲಿಯಾದರು. ಡಾ.ಸುಧಾಕರ್ ಮತ್ತು ಶೋಭಾ ಕರಂದ್ಲಾಜೆ ಗೆದ್ದು ಬಚಾವಾದರೆ, ಆರ್. ಅಶೋಕ್ ವಿಪಕ್ಷ ನಾಯಕನಾಗಿದ್ದೂ ಇಲ್ಲವಾಗಿದ್ದಾರೆ. ಅದರಲ್ಲೂ ಈಗ ಬಿಜೆಪಿ ಕಾರ್ಯಕ್ರಮ ಎಂದಾಕ್ಷಣ, ಒಕ್ಕಲಿಗರ ಪ್ರಾತಿನಿದ್ಯವನ್ನು ಕೇಂದ್ರ ಸಚಿವ ಸ್ಥಾನದ ಬಲದಿಂದ ಎಚ್.ಡಿ. ಕುಮಾರಸ್ವಾಮಿಯವರೇ ತುಂಬುತ್ತಿರುವುದರಿಂದ, ಮಿಕ್ಕವರಿಗೆ ನೆಲೆ ಇಲ್ಲದಂತಾಗಿದೆ. ಅಲ್ಲಿಗೆ ಲಿಂಗಾಯತರಿಂದ ವಿಜಯೇಂದ್ರ, ಒಕ್ಕಲಿಗರಿಂದ ಕುಮಾರಸ್ವಾಮಿ ಎಂಬಂತಾಗಿದೆ.

ಅಷ್ಟೇ ಅಲ್ಲ, ಅವರಿಬ್ಬರ ನಡುವೆಯೂ ಕಾಳಗ ಏರ್ಪಟ್ಟಿದೆ. ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ವಿಜಯೇಂದ್ರ ಮುನ್ನೆಲೆಗೆ ಬರಲು ಹವಣಿಸಿದರು. ಕುಮಾರಸ್ವಾಮಿ, ಪ್ರೀತಂ ಗೌಡರ ಮೇಲೆ ಕೆಂಡ ಕಾರಿ ಪಾದಯಾತ್ರೆಗೆ ಬರುವುದಿಲ್ಲವೆಂದು ಗುಟುರು ಹಾಕಿದರು. ಆಮೇಲೆ ಏನೂ ಆಗಿಯೇ ಇಲ್ಲವೆಂಬಂತೆ ಇಬ್ಬರೂ ಕೈ ಜೋಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಿಳಿದರು. ಇದು ಕರ್ನಾಟಕದ ಜನತೆಗಲ್ಲ, ಬಿಜೆಪಿಗರಿಗೇ ಅಸಹ್ಯ ಹುಟ್ಟಿಸಿದೆ.

ಇನ್ನು ದಲಿತರ ಪೈಕಿ ಏಳು ಸಲ ಗೆದ್ದ, ಬಲಗೈಗೆ ಸೇರಿದ ರಮೇಶ್ ಜಿಗಜಿಣಗಿಯವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಬಿಎಸ್ವೈ ಆಪ್ತರು ಎಂಬ ಕಾರಣಕ್ಕೆ ಎಡಗೈ ಸಮುದಾಯದ ಗೋವಿಂದ ಕಾರಜೋಳರಿಗೂ ಮಂತ್ರಿಗಿರಿ ಇಲ್ಲ. ಅಂದಮೇಲೆ ದಲಿತ ನಾಯಕರಿಗೂ ಬಿಜೆಪಿಯಲ್ಲಿ ಬೆಲೆ ಇಲ್ಲ. ಹಿಂದುಳಿದ ವರ್ಗ ಮತ್ತು ಮುಸ್ಲಿಮರನ್ನಂತೂ ಪಕ್ಷ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ ಬಿಜೆಪಿಯಲ್ಲಿ ದಲಿತರು, ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರು ಕೂಡ ಅಸಮಾಧಾನದಿಂದ ಕುದಿಯುತ್ತಿದ್ದಾರೆ.

ಬಿಜೆಪಿಯಲ್ಲೀಗ ಅತೃಪ್ತರು, ಭಿನ್ನಮತೀಯರು, ಬಂಡಾಯಗಾರರು ಎದ್ದು ನಿಂತಿದ್ದಾರೆ. ಬಿಜೆಪಿ ಎಂಬುದು ದಳಗಳಿಂದ ಕೂಡಿದ ಕಮಲವಾಗಿತ್ತು. ಈಗ ವಿದಳವಾಗಿದೆ. ನೂರೆಂಟು ಚೂರಾಗಿದೆ. ಸರಿಪಡಿಸಬೇಕಾದ ಆರ್‍ಎಸ್ಎಸ್‌ನ ಸಂತೋಷ್, ಪ್ರಲ್ಹಾದ ಜೋಶಿಗೆ ಮಂತ್ರಿ ಸ್ಥಾನ ಸಿಗುವಂತೆ ನೋಡಿಕೊಂಡು, ಪಕ್ಷಕ್ಕೂ ನಮಗೂ ಸಂಬಂಧವಿಲ್ಲವೆಂಬಂತಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿರುವ ಮೋದಿಯವರು, ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

ಪ್ರತಿಪಕ್ಷ ಬಿಜೆಪಿಯ ಈ ಆಂತರಿಕ ಕಚ್ಚಾಟ ಆಡಳಿತಾರೂಢ ಕಾಂಗ್ರೆಸ್‌ಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸಿದೆ. ಸರ್ಕಾರದ ಹಗರಣಗಳನ್ನು ಹೊರಗೆಳೆದರೂ, ತಾರ್ಕಿಕ ಅಂತ್ಯ ಕಾಣದೆ ತಪ್ಪಿತಸ್ಥರು ಯಾರು ಎನ್ನುವುದು ತಿಳಿಯದಾಗಿದೆ. ಒಟ್ಟಿನಲ್ಲಿ, ಇದು ನಾಡಿನ ಜನತೆಗೆ ಎಸಗುತ್ತಿರುವ ಮೋಸವಾಗಿದೆ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X