- ಪ್ರಧಾನಿ ಭೇಟಿಯ ವೇಳೆ ಬಿಜೆಪಿಯಿಂದ ರೋಡ್ ಶೋ ಆಯೋಜನೆಗೆ ಸಿದ್ಧತೆ ಎಂದು ಸುದ್ದಿ
- ‘ವಿಮಾನ ನಿಲ್ದಾಣದಲ್ಲಿ ಸ್ವಾಗತವಷ್ಟೇ ಇರಲಿದೆ’ ಎಂದ ಕೇಂದ್ರ ಸಚಿವೆ
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಯಾವುದೇ ರೀತಿಯ ರೋಡ್ ಶೋ ಆಯೋಜಿಸಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ರೀತಿ ರೋಡ್ ಶೋ ಆಯೋಜಿಸಿಲ್ಲ. ಗ್ರೀಸ್ ಪ್ರವಾಸವನ್ನು ಮುಗಿಸಿ ನಾಳೆ ಬೆಳಗ್ಗೆ ನೇರವಾಗಿ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ವಾಗತವಷ್ಟೇ ಇರಲಿದೆ ಎಂದು ತಿಳಿಸಿದರು.
‘ಇಸ್ರೋಗೆ ಭೇಟಿ ನೀಡಿ, ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಆ ಬಳಿಕ ಇಸ್ರೋ ಹಮ್ಮಿಕೊಂಡಿರುವ ಆದಿತ್ಯ ಯೋಜನೆಯ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಇದನ್ನು ಹೊರತುಪಡಿಸಿ ಯಾವುದೇ ರೋಡ್ ಶೋ ಆಯೋಜಿಸಿಲ್ಲ. ಬೆಂಗಳೂರಿನ ಕಾರ್ಯಕರ್ತರು ಪ್ರಧಾನಿಗೆ ಸ್ವಾಗತ ಕೋರಲಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಬೆಂಗಳೂರು ಭೇಟಿಯ ವೇಳೆ ಬಿಜೆಪಿ ವತಿಯಿಂದ ರೋಡ್ ಶೋ ಆಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿದ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.