ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಅವಕಾಶವಾದ ರಾಜಕಾರಣದ ಅಪ್ಪುಗೆಯನ್ನು ಮಾಡಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಸ್ವಯಂಘೋಷಿತ ಬಿಜೆಪಿ ನಾಯಕ ಸಿ.ಪಿ.ಯೋಗೀಶ್ವರ್ ಏಕವಚನದಲ್ಲಿ ಪರಸ್ಪರ ನಿಂದಿಸಿಕೊಳ್ಳುತ್ತಿದ್ದವರು ಈಗ ಒಂದಾಗುತ್ತಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಯೋಗೀಶ್ವರ್-ಹೆಚ್‌ಡಿಕೆ ಜನರಿಗೆ ಪುಕ್ಕಟೆ ಮನರಂಜನೆಯನ್ನು ನೀಡುತ್ತಿದ್ದು, ತಮ್ಮ ರಾಜಕೀಯದ ಅಸ್ತಿತ್ವಕ್ಕಾಗಿ ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಹಾಕುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರನ್ನು ಟೀಕಿಸುತ್ತಿದ್ದಾರೆ ಎಂದರು.
2022ರ ಅಕ್ಟೋಬರ್‌ನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳ ಶಂಕುಸ್ಥಾಪನೆಯ ಸಂದರ್ಭದಲ್ಲಿ ಯೋಗೀಶ್ವರ್-ಹೆಚ್‌ಡಿಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಜೆಡಿಎಸ್ ಕಾರ್ಯಕರ್ತರು ಯೋಗೀಶ್ವರ್ ಕಾರಿನ ಮೇಲೆ ಮೊಟ್ಟೆ ಎಸೆದು ಅಡ್ಡಿಪಡಿಸಿದ್ದನ್ನು ಬಸವರಾಜ ಬೊಮ್ಮಾಯಿಯವರೇ ಖಂಡಿಸಿದ್ದರು. ಇದೇ ಯೋಗೀಶ್ವರ್ ಬಿಜೆಪಿ ನಾಯಕ ಅಮಿತ್ ಷಾರವರನ್ನು ಗೂಂಡಾ ಎಂದು ಕರೆದ ಆಡಿಯೋ ಸದ್ದು ಮಾಡಿತ್ತು. ಕುಮಾರಸ್ವಾಮಿ ಹೊಂದಾಣಿಕೆ ರಾಜಕೀಯ ಕುರಿತು ಹಲವು ಬಾರಿ ಆರೋಪ ಮಾಡಿ, ಜೋಕರ್ ಎಂದು ಕರೆದಿದ್ದರು. ಯೋಗೀಶ್ವರ್‌ರವರನ್ನು ಒಬ್ಬ ಬಚ್ಚಾ ಎಂದು ಕರೆದು, ನೀಚತನದಲ್ಲಿ ಮಂತ್ರಿ ಆಗಿದ್ದಾನೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಈಗ ರಾಜಕೀಯ ಅಸ್ತಿತ್ವಕ್ಕಾಗಿ ಈಗ ಇಬ್ಬರೂ ಪರಸ್ಪರ ಅಪ್ಪಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದ್ದೆವು. ಈಗಾ ಬಿಜೆಪಿ ಬಿ ಟೀಂ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಅವರಿಗೆ ವಿಶ್ರಾಂತಿ ಕೊಡಲು ಕುಮಾರಸ್ವಾಮಿ ಅವರಿಗೆ ರೆಡ್ ಕಾರ್ಪೆಟ್ ಹಾಕಲಾಗಿದೆ. ಸಿಪಿ ಯೋಗೀಶ್ವರ್, ಕುಮಾರಸ್ವಾಮಿ ಅವರು ಒಳ್ಳೆ ಜೋಡಿಗಳಾಗಿ ಹೊರ ಹೊಮ್ಮಿದ್ದಾರೆ. ಒಂದಾಗಿ ಸೈದ್ದಾಂತಿಕವಾಗಿ ಪಕ್ಷ ಕಟ್ಟಿದ್ದಾರೆ ರಾಜಕಾರಣ ಮಾಡಿದರೆ ನಾವು ಬೇಡ ಅನ್ನುವುದಿಲ್ಲ. ಆದರೆ ಪದೇ ಪದೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ವಿಚಾರ ಮಾತಾನಾಡುವುದು ಸರಿ ಅಲ್ಲ ಎಂದರು.
ಸರ್ಕಾರ ತೆಗೆದವರು ಮತ್ತು ತೆಗೆಸಿಕೊಂಡವರು ಒಬ್ಬರಿಗೊಬ್ಬರು ಅಪ್ಪಿಕೊಂಡು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರ ಅಶ್ಲೀಲ ಸಿಡಿಗಳನ್ನು ಬಳಸಿಕೊಂಡು ಯೋಗೀಶ್ವರ್ ಬ್ಲಾಕ್‌ಮೇಲ್ ಮೂಲಕ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ ಎಂದು ಯತ್ನಾಳ್, ರೇಣುಕಾಚಾರ್ಯ ಮತ್ತು ಇತರೆ ನಾಯಕರು ಆರೋಪ ಮಾಡಿದ್ದರು. ಸಿಪಿ ಯೋಗೀಶ್ವರ್ ಅವರಂತ ಅವಕಾಶವಾದಿ ರಾಜಕಾರಣಿ ಯಾರು ಇಲ್ಲ ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಮಚಂದ್ರಪ್ಪ ಮತ್ತು ಜಿ.ಸಿ.ರಾಜು ಉಪಸ್ಥಿತರಿದ್ದರು.