ಸದ್ಯ ರಾಜ್ಯ ರಾಜಕೀಯದಲ್ಲಿ ಸುದ್ದಿ ಮಾಡುತ್ತಿರುವ ಹುಲಿ ಉಗುರು ಪ್ರಕರಣ ದಿನದಿಂದ ದಿನಕ್ಕೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
‘ಹುಲಿ ಉಗುರು’ ಪ್ರಕರಣದಲ್ಲಿ ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ 10ನೇ ಸೀಸನ್ನ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನ ಬಳಿಕ ಸ್ವಾಮೀಜಿ, ಸೆಲೆಬ್ರಿಟಿಗಳು, ರಾಜಕಾರಣಿಗಳು ಧರಿಸಿರುವ ತಮ್ಮ ಕೊರಳಲ್ಲಿ ಧರಿಸಿರುವ ಫೋಟೋಗಳು ವೈರಲ್ ಆಗುತ್ತಿದೆ. ಆ ಮೂಲಕ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹುಲಿ ಉಗುರು ಪ್ರಕರಣ ಈಗ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹತ್ತಿರ ಬಂದು ನಿಂತಿದೆ.
ಅಮಾಯಕ ಅರ್ಚಕರನ್ನು ಬಂಧಿಸಿದ ಅರಣ್ಯ ಇಲಾಖೆಯವರು ಮಂತ್ರಿ ಲಕ್ಷ್ಮೀಹೆಬ್ಬಾಳ್ಕರ್ ಅವರ ಅಳಿಯನನ್ನು ಬಂಧಿಸುವ ಧೈರ್ಯ ತೋರುವರೇ? pic.twitter.com/Tlk2SMZlIK
— Kuberappa P H (@Kuberappaph) October 26, 2023
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಅಳಿಯ, ಹುಬ್ಬಳ್ಳಿ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೊರಳಲ್ಲೂ ಹುಲಿ ಉಗುರು ಪೆಂಡೆಂಟ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ, ಮತ್ತಿತರೆ ಸಮಾರಂಭಗಳಲ್ಲಿ ಮೃಣಾಲ್ ಹಾಗೂ ರಜತ್ ಉಳ್ಳಾಗಡ್ಡಿ ಹುಲಿ ಉಗುರು ಇರುವ ಲಾಕೆಟ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋ ವೈರಲ್ ಆಗುತ್ತಿದ್ದಂತೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು, ಸಂತೋಷ್ ಬಂಧನವಾಯ್ತು. ಇವರ ಬಂಧನ ಯಾವಾಗ? ಕಾನೂನು ಎಲ್ಲರಿಗೂ ಒಂದೇ ಎಂದು ಸಚಿವರು ಹೇಳುತ್ತಿದ್ದಾರೆ. ಇವರಿಗೂ ಅನ್ವಯವಾಗುತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ರಜತ್ ಉಳ್ಳಾಗಡ್ಡಿ
ವರ್ತೂರು ಸಂತೋಷ್ ಅವರಿಂದ ಆರಂಭಗೊಂಡ ಈ ಪ್ರಕರಣ ಸದ್ಯ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವವರೆಗೆ ತಲುಪಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇಲಾಖೆಯ ಅಧಿಕಾರಿಗಳೊಂದಿಗೆ ಉನ್ನತಮಟ್ಟದ ಸಭೆಯನ್ನು ನಡೆಸಿದ್ದಾರೆ.
‘ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೆಯ ಒಂದು ಅವಕಾಶ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಈ ಕುರಿತು ತಜ್ಞರ ಜೊತೆ ಚರ್ಚಿಸಿ ವರದಿ ಸಲ್ಲಿಸಲು ಈಗಾಗಲೇ ತಂಡ ರಚಿಸಲಾಗಿದೆ. ವರದಿ ಬಂದ ಬಳಿಕ ಸಾರ್ವಜನಿಕರಿಗೆ ಮಾಹಿತಿ ಕೊಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಬದ್ಧವಾಗಿದೆ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಜಯಪುರದಲ್ಲಿ ದಾಳಿ
ಇಂದು(ಗುರುವಾರ) ವಿಜಯಪುರದಲ್ಲಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಶಾಶ್ವತ ಗೌಡ ಪಾಟೀಲ್ ಧರಿಸುತ್ತಿದ್ದ ಹುಲಿ ಉಗುರಿನ ಲಾಕೆಟ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಅದನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.