ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವಂತೆ ಪಟ್ಟು ಹಿಡಿದಿದ್ದ ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ ಅವರನ್ನು ಅಶಿಸ್ತಿನ ವರ್ತನೆ ಆರೋಪದ ಮೇಲೆ ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ಮುಂಗಾರು ಅಧಿವೇಶನದ ಮುಂದಿನ ಎಲ್ಲ ಕಲಾಪದಿಂದ ಅಮಾನತು ಮಾಡುವುದಾಗಿ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್‌ಕರ್ ಘೋಷಿಸಿದರು. ಬಳಿಕ ಇದನ್ನು ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ನಾಯಕ ಪೀಯೂಷ್ ಗೋಯಲ್ ಮತಕ್ಕೆ ಹಾಕಿದರು. ಆ ಬಳಿಕ ಅನುಮೋದನೆ ನೀಡಲಾಯಿತು.
ಈ ಮೊದಲು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನು ಅಮಾನತು ಮಾಡಲಾಗಿತ್ತು. ಅವರು ದೆಹಲಿಯ ಸಂಸತ್ ಭವನದ ಎದುರು ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದಕ್ಕೂ ಮೊದಲು ಸಭಾಧ್ಯಕ್ಷರು ಹಾಗೂ ಡೆರೆಕ್ ಓಬ್ರಿಯಾನ್ ನಡುವೆ ವಾಗ್ವಾದ ನಡೆದಿತ್ತು. ಟಿಎಂಸಿ ಸದಸ್ಯ ಒಬ್ರಿಯಾನ್ ತಮ್ಮ ಭಾಷಣದಲ್ಲಿ ನವದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ, 2023 ಕ್ಕೆ ಸೀಮಿತಗೊಳಿಸಲು ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ಧ ಆರೋಪಗಳನ್ನು ಮಾಡಿದ ನಂತರ ರಾಜ್ಯಸಭಾ ಅಧ್ಯಕ್ಷರಾದ ಧನಕರ್ ಆಕ್ರೋಶಗೊಂಡಿದ್ದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು ಡೆರೆಕ್ ಓಬ್ರಿಯಾನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಮಂಡಿಸಿದರು. ನಂತರದಲ್ಲಿ ಅಶಿಸ್ತಿನ ವರ್ತನೆ ಆರೋಪದ ಮೇಲೆ ಓಬ್ರಿಯಾನ್ ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ. ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಕಲಾಪ ಇಂದು ಮಧ್ಯಾಹ್ನದವರೆಗೂ ಮುಂದೂಡಲಾಗಿದೆ.
ಇಂದು ಬೆಳಗ್ಗೆ ಪ್ರಧಾನಿ ವಿರುದ್ಧ ಟ್ವೀಟ್ ಮಾಡಿದ್ದ ಒಬ್ರಿಯಾನ್ ವಾಗ್ದಾಳಿ ನಡೆಸಿದ್ದರು. ಈಗ ಟಿಎಂಸಿ ಸಂಸದರನ್ನು ಅಮಾನತು ಮಾಡಿದ್ದು, ಇದೇ ವಿಚಾರ ಹಿಡಿದು ಆಡಳಿತ ಪಕ್ಷದ ವಿರುದ್ಧ ಹರಿಹಾಯಲು ವಿಪಕ್ಷಗಳು ಸಜ್ಜಾಗಿವೆ.