ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡ ಜೆ ಸಿ ಮಾಧುಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ತುಮಕೂರು ಕ್ಷೇತ್ರದ ಟಿಕೆಟ್ ವಿ.ಸೋಮಣ್ಣ ಅವರಿಗೆ ನೀಡಿರುವುದರಿಂದ ಆಕ್ರೋಶಗೊಂಡಿರುವ ಜೆಸಿ ಮಾಧುಸ್ವಾಮಿ, “ವಿ. ಸೋಮಣ್ಣ ನಮ್ಮ ಮನೆಗೆ ಬರಬೇಡಿ, ನಾನು ಪರ ಪ್ರಚಾರ ಮಾಡುವುದಿಲ್ಲ” ಎಂದು ಬಹಿರಂಗವಾಗಿಯೇ ಹೇಳಿದ್ದರು.
ಈ ಎಲ್ಲ ಬೆಳವಣಿಗೆಯ ನಡುವೆಯೇ ಇಂದು ಮಾಧುಸ್ವಾಮಿ ಮನೆಗೆ ತುಮಕೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ತುಮಕೂರು ಬಿಜೆಪಿ ಘಟಕದಲ್ಲಿನ ಭಿನ್ನಮತ ಶಮನವಾಗಿಲ್ಲವೆಂಬುವುದು ಎಂಬುದು ಸ್ಪಷ್ಟವಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಇಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜೆ.ಸಿ.ಪುರ ಗ್ರಾಮದಲ್ಲಿರುವ ಮಾಜಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಸೌಹಾರ್ದಯುತ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಮುಖಂಡರು ಉಪಸ್ಥಿತರಿದ್ದರು pic.twitter.com/cFCoge8TC2
— Muddahanumegowda official (@official84402) April 7, 2024
ಮುದ್ದಹನುಮೇಗೌಡ ತಮ್ಮ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧುಸ್ವಾಮಿ, “ಮುದ್ದಹನುಮೇಗೌಡ ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾನು ಮತ್ತು ಅವರು ಒಳ್ಳೆಯ ಸ್ನೇಹಿತರು. ಸ್ನೇಹಿತರು ಅಂತ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅಭ್ಯರ್ಥಿ ಆದವರು ಬೆಂಬಲ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು. ಬೆಂಬಲ ಕೊಡುವುದಕ್ಕೆ ಆಗುತ್ತಾ? ಅದೆಲ್ಲಾ ಚರ್ಚೆ ಮಾಡಿಲ್ಲ” ಎಂದು ಹೇಳಿದರು.
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಸಿ ಮಾಧುಸ್ವಾಮಿ ಅವರು ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತುರುವೇಕೆರೆ ಹೊರವಲಯದಲ್ಲಿರುವ ಮಾಜಿ ಶಾಸಕ ಮಸಾಲ ಜಯರಾಂ ತೋಟದ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾಧುಸ್ವಾಮಿ ಅವರನ್ನು ಸಮಾಧಾನಪಡಿಸಿದ್ದರು. ಇದರೊಂದಿಗೆ ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ತಡೆದಿದ್ದರು. ಆದರೆ ಮಾಧುಸ್ವಾಮಿ ಮುನಿಸು ಮಾತ್ರ ತಣ್ಣಗಾಗಿಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಜೆಸಿ ಮಾಧುಸ್ವಾಮಿ ಅವರು ರಾಜಕೀಯದಿಂದ ಸ್ವಲ್ಪ ದೂರ ಉಳಿದಿದ್ದರು. ಬಳಿಕ ಬಿಎಸ್ ಯಡಿಯೂರಪ್ಪ ಅವರ ಒತ್ತಡ ಮೇರೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು. ಆದರೆ ವಿ.ಸೋಮಣ್ಣ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಹಜವಾಗಿಯೇ ಜೆಸಿ ಮಾಧುಸ್ವಾಮಿ ಅಸಮಾಧಾನಗೊಂಡಿದ್ದಾರೆ.
