ಉತ್ತರಾಖಂಡ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಿನ್ನೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಡಿಸಿದ್ದ ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಯು ಇಂದು ಅಂಗೀಕಾರಗೊಂಡಿದೆ.
ಏಕರೂಪ ನಾಗರಿಕ ಸಂಹಿತೆಯನ್ನು ಅಂಗೀಕರಿಸುವಂತೆ ವಿಧಾನಸಭೆಯ ಸ್ಪೀಕರ್ ಆಗಿರುವ ಶ್ರೀಮತಿ ರಿತು ಖಂಡೂರಿ ಭೂಷಣ್ ಅವರಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದರು. ಈ ವೇಳೆ ಪರವಿರುವವರು ಹೌದು ಎಂದು ಓಗೊಡಬೇಕು, ವಿರೋಧವಿರುವವರು ‘ಇಲ್ಲ’ ಎಂದು ತಿಳಿಸುವಂತೆ ಸ್ಪೀಕರ್ ಹೇಳಿದರು.
ಆಡಳಿತ ಪಕ್ಷದ ಸದಸ್ಯರು ಓಗೊಟ್ಟರೆ, ಪ್ರತಿಪಕ್ಷಗಳ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆ ಬಳಿಕ ಏಕರೂಪ ನಾಗರಿಕ ಸಂಹಿತೆ ಉತ್ತರಾಖಂಡ- 2024 ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಘೋಷಿಸಿದರು. ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಯನ್ನು ಅಂಗೀಕರಿಸಿದ ಮೊದಲ ರಾಜ್ಯ ಉತ್ತರಾಖಂಡವಾಗಿದೆ.
ऐतिहासिक समान नागरिक संहिता विधेयक-2024 विधानसभा में पारित..
माँ गंगा व यमुना की उद्गम स्थली देवभूमि उत्तराखण्ड से निकली UCC के रूप में समानता और समरूपता की यह अविरल धारा संपूर्ण देश का पथ प्रदर्शित करेगी। यह विधेयक मातृशक्ति के सम्मान एवं उनकी सुरक्षा के प्रति हमारी सरकार की… pic.twitter.com/0nfGBA3L3C
— Pushkar Singh Dhami (@pushkardhami) February 7, 2024
ನಿನ್ನೆ ಸಂವಿಧಾನದ ಮೂಲ ಪ್ರತಿಯೊಂದಿಗೆ ಸದನಕ್ಕೆ ಆಗಮಿಸಿದ್ದ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಸೂದೆ ಮಂಡಿಸಿದ್ದರು. ಈ ವೇಳೆ ಸದನದಲ್ಲಿದ್ದ ಆಡಳಿತ ಪಕ್ಷದ ಶಾಸಕರು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿದರೆ, ವಿಪಕ್ಷಗಳ ಸದಸ್ಯರು ಚರ್ಚೆ ನಡೆಸುವಂತೆ ಪಟ್ಟು ಹಿಡಿದಿದ್ದರು.
ಇಂದು ಮಸೂದೆ ಅಂಗೀಕಾರಗೊಂಡ ಬಳಿಕ ಟ್ವೀಟ್ ಮಾಡಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ, “ಐತಿಹಾಸಿಕ ಏಕರೂಪ ನಾಗರಿಕ ಸಂಹಿತೆ ಮಸೂದೆ-2024 ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.. ಗಂಗಾಮಾತೆ ಮತ್ತು ಯಮುನೆಯ ಮೂಲಸ್ಥಾನವಾದ ಉತ್ತರಾಖಂಡದಿಂದ ಆರಂಭವಾಗಿರುವ ಈ ಏಕರೂಪ ನಾಗರಿಕ ಸಂಹಿತೆ ಸಮಾನತೆ ಮತ್ತು ಏಕರೂಪತೆ ಪ್ರತೀಕವಾಗಿ ದೇಶಕ್ಕೆ ಹಾದಿ ತೋರಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಏಕ್ ಭಾರತ್-ಶ್ರೇಷ್ಠ ಭಾರತ್’ ಎಂಬ ದೂರದೃಷ್ಟಿಗೆ ಅನುಗುಣವಾಗಿ ಇರಲಿದೆ” ಎಂದು ತಿಳಿಸಿದ್ದಾರೆ.
BREAKING | Uttarakhand Legislative Assembly Passes Bill On ‘#UniformCivilCode‘, Becomes First State To Do So #UCCBill #UCC2024 @pushkardhami@ukcmo #UniformCivilCodeBill #UniformCivilCodehttps://t.co/gVrJk5SU8S
— Live Law (@LiveLawIndia) February 7, 2024
“ರಾಜ್ಯದ ಜನರ ಆಶೋತ್ತರಗಳಿಗೆ ಅನುಗುಣವಾಗಿ ನಮ್ಮ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಯುಸಿಸಿಯ ಕರಡನ್ನು ತಯಾರಿಸಿದ ಸಮಿತಿಯ ಎಲ್ಲ ಸದಸ್ಯರಿಗೆ ಮತ್ತು ಬೆಂಬಲ ನೀಡಿದ ದೇವಭೂಮಿಯ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಸಿಎಂ ಧಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತ್ವತ್ವದ ಐವರು ಸದಸ್ಯರ ಸಮಿತಿ ಸಲ್ಲಿಸಿದ ಯುಸಿಸಿ ಕುರಿತ ಕರಡು ಸಮಿತಿ ವರದಿಯನ್ನು ಉತ್ತರಾಖಂಡ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿತ್ತು.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ತರುವ ಉದ್ದೇಶದಿಂದಲೇ ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನ ಸೋಮವಾರ ಆರಂಭವಾಗಿತ್ತು. ಅಧಿವೇಶನದ ಎರಡನೇ ದಿನವಾದ ಮಂಗಳವಾರ ಈ ಮಸೂದೆಯನ್ನು ಮಂಡಿಸಲಾಗಿತ್ತು. ಫೆ.8ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದೆ.