ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಇಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರವರ ಜೊತೆಗೆ ವಿವಿಧ ರಾಜ್ಯಗಳ ಕೃಷಿ ಸಚಿವರೊಂದಿಗೆ ಮುಂಗಾರು ಹಾಗೂ ಕೃಷಿ ಸಂಬಂಧಿತೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು, ರಾಜ್ಯದ ಯೋಜನೆಗಳಿಗೆ ಸಂಪೂರ್ಣ ಸಹಕಾರ ಕೋರಿದರು.
ಇದೇ ವೇಳೆ ಅವರು ರಾಜ್ಯದ ಮಳೆ ಬೆಳೆ, ಹಾಗೂ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಕರ್ನಾಟಕವು ದೇಶದ ದ್ವಿದಳ ಧಾನ್ಯ ಬೆಳೆಯ ಶೇ 11ರಷ್ಟು ಭೂ ಪ್ರದೇಶ ಮತ್ತು ಶೇ 8ರಷ್ಟು ಉತ್ಪಾದನೆ ಹೊಂದಿದೆ. ರಾಜ್ಯದ 31.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 19.83 ಲಕ್ಷ ಟನ್ ದ್ವಿದಳ ಧಾನ್ಯ ಬೆಳೆಯಲಾಗುತ್ತಿದೆ ಎಂದು ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ತೊಗರಿ ಬೇಳೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ 2ನೇ ಸ್ಥಾನದಲ್ಲಿದ್ದು, ಶೇ 31 ರಷ್ಟು ಕೊಡುಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಎರಡನ್ನೂ ಹೆಚ್ಚಿಸಲು ಕಾರ್ಯತಂತ್ರ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ಇದರಿಂದ ಬೇಳೆ ಕಾಳುಗಳ ಆಮದು ಅವಲಂಬನೆ ತಪ್ಪಿಸಲು ಸಹಾಯಕವಾಗುತ್ತದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಮನವರಿಕೆ ಮಾಡಿಕೊಟ್ಟರು.
ಪ್ರಸಕ್ತ ವರ್ಷ 2024-25 ತೊಗರಿ ಬೇಳೆ ಉತ್ಪಾದನೆ ಪ್ರದೇಶವನ್ನು 2 ಲಕ್ಷ ಹೆಕ್ಟೇರ್‌ನಷ್ಟು ಹೆಚ್ಚಳ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ‘ಅರಿವು ವಿದ್ಯಾಭ್ಯಾಸ ಸಾಲ ಯೋಜನೆ’ಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ರಾಜ್ಯದ 64.2 ಕೋಟಿ ರೂ ಮೊತ್ತದ ಬೇಳೆ ಕಾಳು ಅಭಿವೃದ್ಧಿಯ ಹೆಚ್ಚುವರಿ ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ಕೃಷಿ ಸಚಿವರಿಗೆ ವಿಶೇಷ ಧನ್ಯವಾದ ಸಮರ್ಪಿಸಿದ ಅವರು, ಶೀಘ್ರದಲ್ಲೇ ವೈಯಕ್ತಿಕವಾಗಿ ಬೇಟಿ ಮಾಡುವುದಾಗಿ ತಿಳಿಸಿ, ಮುಂದೆಯೂ ನಿರಂತರ ಸಹಕಾರಕ್ಕೆ ಮನವಿ ಮಾಡಿದರು.
