- ಅತ್ತ ಬಿಜೆಪಿಯ ಅಭ್ಯರ್ಥಿಯ ಘೋಷಣೆ : ಇತ್ತ ಜೆಡಿಎಸ್‌ನಿಂದಲೂ ಬಿ ಫಾರಂ ವಿತರಣೆ!
- ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆ
ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಆರು ಸ್ಥಾನಗಳಿಗೆ ಜೂನ್ 3ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿಯು ತನ್ನ ಐದು ಅಭ್ಯರ್ಥಿಗಳನ್ನು ಕಳೆದ ಶನಿವಾರ(ಮೇ 11) ಪ್ರಕಟಿಸಿತ್ತು. ಈ ಐದು ಸ್ಥಾನಗಳ ಪೈಕಿ ಒಂದು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಈ.ಸಿ.ನಿಂಗರಾಜು ಅವರನ್ನು ಘೋಷಿಸಲಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ’ದಿಂದ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿ ‘ಒಮ್ಮತದ ಅಭ್ಯರ್ಥಿ’ ಆಯ್ಕೆ ಸಂಬಂಧ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
“ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ನಮಗೆ ಬಿಟ್ಟು ಕೊಡಲಾಗಿದೆ” ಎಂದು ಜೆಡಿಎಸ್ ಮುಖಂಡರು ಹೇಳಿಕೆ ನೀಡಿದ್ದಾರೆ. ಇದು ಗೊಂದಲ ಮೂಡಿಸಿದ್ದು, ಈ ಬೆಳವಣಿಗೆಯು ಅಚ್ಚರಿಗೂ ಕಾರಣವಾಗಿದೆ. ಸದ್ಯ ಬದಲಾದ ಸನ್ನಿವೇಶದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಮಂಡ್ಯದ ವಿವೇಕಾನಂದ ಅವರಿಗೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ ಫಾರಂ ಕೂಡ ವಿತರಿಸಿದ್ದಾರೆ.

ಈ ಬೆಳವಣಿಗೆಯಿಂದ ಬಿಜೆಪಿಯ ಘೋಷಿತ ಅಭ್ಯರ್ಥಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜ್ ಗೌಡ ಅವರಿಗೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, “ಬಿಜೆಪಿಯಲ್ಲಿ ಒಮ್ಮೆ ಘೋಷಿಸಿದ ಅಭ್ಯರ್ಥಿಯನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜೆಡಿಎಸ್ ನಾಯಕರು ಗೊಂದಲ ಮೂಡಿಸುತ್ತಿದ್ದಾರೆ. ನನಗೆ ಅಧಿಕೃತವಾಗಿ ಟಿಕೆಟ್ ಘೋಷಿಸಿದ್ದು, ಸ್ಪರ್ಧೆ ಮಾಡಿದ್ದೇನೆ” ಎಂದಿದ್ದಾರೆ. ಆದರೆ, ಈ ನಡುವೆಯೇ ಮಂಡ್ಯದ ವಿವೇಕಾನಂದ ಅವರು ಜೆಡಿಎಸ್‌ನಿಂದ ಬಿ ಫಾರಂ ಪಡೆದುಕೊಂಡಿದ್ದಾರೆ.

“ಲೋಕಸಭೆ ಚುನಾವಣೆಯಲ್ಲಿ ಇದ್ದಂತೆ ಈ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ, ಸೀಟುಗಳ ಹಂಚಿಕೆ ಮಾಡಿಕೊಳ್ಳಲಾಗುತ್ತದೆ” ಎಂದು ಎರಡೂ ಪಕ್ಷಗಳ ಮುಖಂಡರು ಹೇಳಿದ್ದರು. ಅದರಂತೆ, ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿ ಎಸ್ ಎಲ್ ಭೋಜೇಗೌಡ ಅವರು ಮೇ 13ರಂದು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಬಿಜೆಪಿಯ ಜೀವರಾಜ್ ಸೇರಿದಂತೆ ಹಲವರಿದ್ದರು.
ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿ ಇಂದು ಶ್ರೀ ಎಸ್ ಎಲ್ ಭೋಜೇಗೌಡ ಅವರು ನಾಮಪತ್ರ ಸಲ್ಲಿಸಿದರು. pic.twitter.com/u9d2RgX133
— Janata Dal Secular (@JanataDal_S) May 13, 2024
ದಕ್ಷಿಣ ಶಿಕ್ಷಕರ ಕ್ಷೇತ್ರದ ಬಗ್ಗೆ ಇಷ್ಟೆಲ್ಲ ಬೆಳವಣಿಗೆಯಾಗಿದ್ದರೂ, ಪ್ರಮುಖ ಬಿಜೆಪಿ ಮುಖಂಡರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವ ಬಗ್ಗೆಯಾಗಲೀ, ತಮ್ಮ ಪಕ್ಷದ ಅಭ್ಯರ್ಥಿ ಬದಲಾವಣೆ ಬಗ್ಗೆಯಾಗಲೀ ಬಿಜೆಪಿ ವರಿಷ್ಠರು ಅಧಿಕೃತ ಹೇಳಿಕೆ ಕೊಟ್ಟಿಲ್ಲ.
ಕ್ಷೇತ್ರ ಹಂಚಿಕೆಯ ವಿಷಯದಲ್ಲಿ ಹಾಗೂ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯು ಕುತೂಹಲದ ಘಟ್ಟ ತಲುಪಿದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಿಂಗೇಗೌಡ ನಾಮಪತ್ರ ಸಲ್ಲಿಸಲಿದ್ದಾರೆಯೇ ಎಂದು ಕಾದುನೋಡಬೇಕಿದೆ. ಈ ನಡುವೆ ಈ ಬಿಜೆಪಿ-ಜೆಡಿಎಸ್ ನಡುವಿನ ಬೆಳವಣಿಗೆಯ ಬಗ್ಗೆ ಈವರೆಗೆ ಏನೂ ಪ್ರತಿಕ್ರಿಯೆ ನೀಡದ ಕಾಂಗ್ರೆಸ್, ಮುಸಿಮುಸಿ ನಗುತ್ತಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಕಣಕ್ಕೆ
ಕಾಂಗ್ರೆಸ್ ಈ ಹಿಂದೆ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿ, ಒಂದು ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಬಾಕಿ ಉಳಿದಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಅವರನ್ನು ಆಯ್ಕೆ ಮಾಡುವ ಮೂಲಕ, ವಿಧಾನ ಪರಿಷತ್‌ನ ಆರೂ ಸ್ಥಾನಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಮರಿತಿಬ್ಬೇಗೌಡ ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿದ್ದರು.
ಉಳಿದಂತೆ ಕಾಂಗ್ರೆಸ್‌ನಿಂದ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ಕೆ ಮಂಜುನಾಥ್, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಿ.ಟಿ.ಶ್ರೀನಿವಾಸ್, ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಪಾಟೀಲ, ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ರಾಮೋಜಿ ಗೌಡ ಅಭ್ಯರ್ಥಿಗಳಾಗಿ, ಈ ಹಿಂದೆಯೇ ಆಯ್ಕೆಯಾಗಿದ್ದರು.
ಇದನ್ನು ಓದಿದ್ದೀರಾ? ಪರಿಷತ್ ಚುನಾವಣೆ | ಕೈತಪ್ಪಿದ ಬಿಜೆಪಿ ಟಿಕೆಟ್: ಪಕ್ಷೇತರ ಸ್ಪರ್ಧೆಗೆ ಮಾಜಿ ಶಾಸಕ ರಘುಪತಿ ಭಟ್ ನಿರ್ಧಾರ
ಜೂನ್ 3ರಂದು ಚುನಾವಣೆ
ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ. ಇನ್ನು ನಾಮಪತ್ರ ಹಿಂಪಡೆಯಲು ಮೇ 20 ಕೊನೆಯ ದಿನವಾಗಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
