ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಯಾರು ಹೇಳಿದ್ದರೋ, ಅವರನ್ನು ನೇಣಿಗೆ ಹಾಕಿ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಹೊಸಬರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್‌ಗೆ ಯಾರು ಸಲಹೆ ಕೊಟ್ಟಿದ್ದರೋ ಗೊತ್ತಿಲ್ಲ. ಅವರನ್ನು ನೇಣಿಗಾದರೂ ಹಾಕಿ, ಅವರ ಕಾಲನ್ನಾದರೂ ಕಡಿಯಿರಿ” ಎಂದು ಕಿಡಿಕಾರಿದ್ದಾರೆ.
“ಈ ಬಾರಿಯ ಚುನಾವಣೆಯಲ್ಲಿ 70ಕ್ಕೂ ಹೆಚ್ಚು ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಅವರಲ್ಲಿ ಗೆದ್ದವರು ಮಾತ್ರ ಬೆರಳೆಣಿಕೆಯಷ್ಟು ಮಂದಿ. ಹಿರಿಯರಿಗೆ ಟಿಕೆಟ್ ನೀಡಿದ್ದರೆ, ಎಲ್ಲರೂ ಗೆಲ್ಲುತ್ತಿದ್ದರು. ಬಿಜೆಪಿ ಮತ್ತೆ ಅಧಿಕಾರ ಹಿಡಿಯುತ್ತಿತ್ತು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಲಿಂಗಾಯತ ಸಮುದಾಯದ ಮುಖಂಡ ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟಿದ್ದು, ಪಕ್ಷಕ್ಕೆ ನಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಅವರ ಹೇಳಿಕೆಯ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ”ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ ಬಿಜೆಪಿಗರೇ? ಅಮಿತ್ ಷಾರವರನ್ನೋ? ಬಿ ಎಲ್ ಸಂತೋಷರನ್ನೊ? ಪ್ರಹ್ಲಾದ್ ಜೋಶಿಯವರನ್ನೋ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?” ಎಂದು ವ್ಯಂಗ್ಯವಾಡಿದೆ.