ಕೇಂದ್ರ ಸರ್ಕಾರ ಜಾರಿಗೆ ತರಬೇಕೆನ್ನುವ ವಕ್ಫ್ ತಿದ್ದುಪಡಿ ಬಿಲ್ ಜಾರಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಅಧ್ಯಕ್ಷ ಜಗದಾಂಬಿಕಾ ಪಾಲ್ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆದರೆ, ಈ ಭೇಟಿಗೆ ಸಮಿತಿಯ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ.
ಕೇಂದ್ರ ಸರಕಾರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡಂತೆಯೇ ಈಗ ಜೆಪಿಸಿ ಸಮಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದರು. ಇದರ ಬೆನ್ನಲ್ಲೇ ಜಂಟಿ ಸಂಸದೀಯ ಸಮಿತಿಯಲ್ಲಿರುವ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಸೈಯ್ಯದ್ ನಾಸಿರ್ ಹುಸೇನ್, “ಜೆಪಿಸಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರ ನಡೆ ರಾಜಕೀಯ ಪ್ರೇರಿತವಾದದ್ದು. ಈ ಹಿಂದೆ ಯಾವತ್ತೂ ಜೆಪಿಸಿಯಲ್ಲಿ ಈ ರೀತಿಯ ಬೆಳವಣಿಗೆ ಆಗಿರಲಿಲ್ಲ. ಇದು ದುರದೃಷ್ಟಕರ ಬೆಳವಣಿಗೆ” ಎಂದು ತಿಳಿಸಿದ್ದಾರೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಸಂಸದ ಸೈಯ್ಯದ್ ನಾಸಿರ್ ಹುಸೇನ್, “ಜೆಪಿಸಿ ಸಮಿತಿಯು ಹೊರಗಡೆ ಹೋಗಬೇಕೆಂದರೆ ಇಡೀ ಸಮಿತಿ ಒಟ್ಟಿಗೆ ಹೋಗುತ್ತದೆ. ಈ ಬಾರಿಯ ಪ್ರವಾಸದ ವಿವರವನ್ನು ಯಾರಿಗೂ ಹೇಳಿಲ್ಲ. ಇದು ರಾಜಕೀಯ ಪ್ರೇರಿತ ಪ್ರವಾಸ. ಜೆಪಿಸಿಯ ಸ್ಥಾಯಿ ಸಮಿತಿಯಲ್ಲಿ ಕೂಡ ಯಾರನ್ನು ಕರೆಯಬೇಕು, ಯಾವೆಲ್ಲ ಸಾಕ್ಷಿಗಳನ್ನು, ಸಾಕ್ಷ್ಯಗಳನ್ನು ಕಲೆ ಹಾಕಬೇಕು ಅನ್ನೋದು ತೀರ್ಮಾನ ಆಗುತ್ತದೆ. ಆದರೆ, ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿಯಲ್ಲಿ ಇಲ್ಲದವರನ್ನೂ ಸೇರಿಸಿಕೊಂಡು ಕರೆದುಕೊಂಡು ಹೋಗಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಒಂದು ಮಸೂದೆ ಅಥವಾ ತಿದ್ದುಪಡಿಗೆ ಸಂಬಂಧಿಸಿದಂತೆ ಅದರ ಪರವಾಗಿರಲು ಯಾವತ್ತೂ ಜೆಪಿಸಿಯಲ್ಲಿ ಈ ಥರ ಆಗಿಲ್ಲ. ಮೊದಲನೇ ಬಾರಿಗೆ ಈ ರೀತಿಯ ಬೆಳವಣಿಗೆ ಆಗಿದೆ. ಶೇ. 98% ಜನರು ಇದಕ್ಕೆ ವಿರೋಧ ಮಾಡಿದವರೇ ಬಂದು ಹೇಳಿಕೆ ನೀಡಿ, ಹೋಗಿರುವಾಗಿ ತಿಳಿದುಬಂದಿದೆ. ಬಿಜೆಪಿ ಪರವಾಗಿ ಈ ಹೇಳಿಕೆಗಳು ಇದ್ದಂತಿದೆ” ಎಂದು ನಾಸಿರ್ ಹುಸೇನ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್; ಭವಿಷ್ಯದ ಯುವ ಭಾರತಕ್ಕೂ ಮಾರಕ
“ಕರ್ನಾಟಕದ ಶಿಗ್ಗಾವಿ, ಸಂಡೂರು, ಚನ್ನಪಟ್ಟಣದ ವಿಧಾನಸಭಾ ಮತಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿವೆ. ಇದರ ಮಧ್ಯೆಯೇ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಕರ್ನಾಟಕಕ್ಕೆ ಭೇಟಿ ನೀಡಿದ್ದಲ್ಲದೇ, ಸುದ್ದಿಗೋಷ್ಠಿ ಕೂಡ ನಡೆಸಿದ್ದಾರೆ. ಸಮಿತಿಯಲ್ಲಿರುವ ಹಲವು ಸದಸ್ಯರಿಗೆ ಮಾಹಿತಿಯೇ ನೀಡಿಲ್ಲ. ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಈವರೆಗೆ ನಡೆದಿರುವ ಎಲ್ಲ ಬೆಳವಣಿಗೆಯ ಬಗ್ಗೆ ಸ್ಪೀಕರ್ ಅವರ ಗಮನಕ್ಕೆ ತಂದಿದ್ದೇವೆ. ಅಲ್ಲದೇ, ಮನವಿ ಕೂಡ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಎಲ್ಲ ಪ್ರವಾಸಕ್ಕೆ ನಾವು ಬಹಿಷ್ಕಾರ ಹಾಕುತ್ತಿದ್ದೇವೆ” ಎಂದು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಜಂಟಿ ಸಂಸದೀಯ ಸಮಿತಿಯಲ್ಲಿರುವ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಸೈಯ್ಯದ್ ನಾಸಿರ್ ಹುಸೇನ್ ತಿಳಿಸಿದ್ದಾರೆ.
