- ವಿಜಯೇಂದ್ರರ ಜೊತೆ ಸೇರಿ ಜನರ ಸಮಸ್ಯೆ ನಿವಾರಣೆಗೆ ದುಡಿಯುವೆ
- ‘ಜಮೀರ್ ಅವರು ಕರ್ನಾಟಕದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ’
ಸಿದ್ದರಾಮಯ್ಯನವರಂತೆ ನಮಗೆ ಅಧಿಕಾರದ ಆಸೆ ಇಲ್ಲ. ಕಾಂಗ್ರೆಸ್ ದುರಾಡಳಿತ, ಮೋಸದ ಯೋಜನೆಗಳ ಕುರಿತು ತಿಳಿಸಿ ಜನಜಾಗೃತಿ ಮೂಡಿಸುತ್ತೇವೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ವಿಜಯೇಂದ್ರ ಅವರ ಜೊತೆ ಸೇರಿ ಜನರ ಸಮಸ್ಯೆ ನಿವಾರಣೆಗೆ ಮತ್ತು ಪಕ್ಷ ಸಂಘಟನೆಗೆ ಜೋಡೆತ್ತಿನಂತೆ ದುಡಿಯುತ್ತೇವೆ” ಎಂದರು.
“ಜಮೀರ್ ಅವರು ಕರ್ನಾಟಕದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ. ಹತ್ತಾರು ತಪ್ಪುಗಳನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ನಾವು ಇವುಗಳ ವಿರುದ್ಧ ಹೋರಾಟ ಮಾಡುತ್ತೇವೆ. ಈ ಸಾರಿ ಇನ್ನೂ ಹೆಚ್ಚು ಹೋರಾಟ ಮಾಡಲಿದ್ದೇವೆ” ಎಂದು ಹೇಳಿದರು.
“ಮಂಗಳೂರು- ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರ ಗಡೀಪಾರು ಮಾಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 30-40 ಹಿಂದೂ ಕಾರ್ಯಕರ್ತರ ಕೊಲೆ ಆಗಿತ್ತು. ಟಿಪ್ಪುವಿನ ವೈಭವೀಕರಣ ನಡೆದಿತ್ತು. ಕಾಂಗ್ರೆಸ್ಸಿನ ಮತಾಂಧನಾದ ಟಿಪ್ಪು ಸಂಸ್ಕೃತಿಯನ್ನು ಪಕ್ಷ ಜನರಿಗೆ ತಿಳಿಸಲಿದೆ” ಎಂದು ತಿಳಿಸಿದರು.
“ಸಂಕಷ್ಟದಲ್ಲಿರುವ ರೈತರಿಗೆ ಅವರ ಪರಿಹಾರ ಕೊಡಬೇಕು. ಈಗಿನ ಸರಕಾರ ನಯಾಪೈಸೆ ಕೊಟ್ಟಿಲ್ಲ. ಈ ಸರಕಾರದ ಕಿವಿ ಹಿಂಡುವ ಕಾರ್ಯ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರ ನೇಮಕಾತಿಯಿಂದ ಕಾಂಗ್ರೆಸ್ಸಿಗರಿಗೆ ನಡುಕ ಉಂಟಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಆಟ ನಡೆಯುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?
“ರಾಜ್ಯದಲ್ಲಿ ಬಿಜೆಪಿ ಹೊಸದಾಗಿ ಯುವ ನಾಯಕತ್ವಕ್ಕೆ ಅವಕಾಶ ಕೊಟ್ಟಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಮತ್ತೆ ಬಿಜೆಪಿಯನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಕಟ್ಟುವ ದೃಷ್ಟಿಯಿಂದ ಕೇಂದ್ರದ ನಾಯಕರು, ಲೋಕಸಭಾ ಸದಸ್ಯರು, ಶಾಸಕರು, ಕಾರ್ಯಕರ್ತರು ತೀರ್ಮಾನ ಮಾಡಿ ವಿಜಯೇಂದ್ರರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಸಂಚಲನ ಉಂಟಾಗಿದೆ” ಎಂದು ವಿಶ್ಲೇಷಿಸಿದರು.
“ಉಳಿದ ಶಾಸಕರ ಜೊತೆ ಒಗ್ಗಟ್ಟಾಗಿ ಮುಂದಿನ ಅಧಿವೇಶನದಲ್ಲಿ ಕೆಲಸ ಮಾಡಲಿದ್ದೇನೆ. ಬೆಳಿಗ್ಗೆ ನಾನು ಬಸವರಾಜ ಬೊಮ್ಮಾಯಿ, ಡಾ. ಅಶ್ವತ್ಥನಾರಾಯಣ್ ಅವರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಒಂದಾಗಿ ಸತ್ತು ಹೋದ ಆಡಳಿತಕ್ಕೆ ಚುರುಕು ಮುಟ್ಟಿಸಲಿದ್ದೇವೆ” ಎಂದು ಎಚ್ಚರಿಸಿದರು.
“ಉಪ ಮುಖ್ಯಮಂತ್ರಿಯವರು ನಾನೇ ಶ್ಯಾಡೊ ಸಿಎಂ ಎಂದು ಎಲ್ಲ ಕಾರ್ಯಕ್ಕೆ ಅವರೇ ಮುಂದೆ ಹೋಗುತ್ತಿದ್ದಾರೆ. ಆಂತರಿಕ ಕಲಹ ನಡೆಯುತ್ತಿದೆ. ಮೊನ್ನೆ ದಾಳಿ ಆದಾಗ 100 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ಕೇಳಿದರೆ ನಂದಲ್ಲ, ನಂದಲ್ಲ ಎನ್ನುತ್ತಾರೆ” ಎಂದು ಟೀಕಿಸಿದರು.