ಒಬ್ಬ ಮನುಷ್ಯನ ಅಹಂಕಾರ ಮತ್ತು ಅತಿರೇಕ ಪ್ರಾಮುಖ್ಯತೆ ಪಡೆದುಕೊಂಡಾಗ ವಿಜ್ಞಾನ, ಪಾರದರ್ಶಕತೆಗೆ ಹಿನ್ನಡೆ ಸಂಭವಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇಂದು(ಆಗಸ್ಟ್ 2) 9ನೇ ಚಿರತೆ ಮೃತಪಟ್ಟ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಸಾವುಗಳು ನಿರೀಕ್ಷಿತ ಮರಣ ಎಂಬ ವಾದವು ‘ಸಂಪೂರ್ಣ ಅಸಂಬದ್ಧವಾಗಿದೆ’ ಮತ್ತು ಅಂತಾರಾಷ್ಟ್ರೀಯ ಚಿರತೆ ತಜ್ಞರು ಇದನ್ನು ತಳ್ಳಿಹಾಕಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದರು.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಲ್ಲಿಯವರೆಗೂ ಒಟ್ಟು 9 ಚಿರತೆಗಳು ಸಾವನ್ನಪ್ಪಿವೆ. ಇವುಗಳಲ್ಲಿ ಆರು ಚಿರತೆಗಳು ಮತ್ತು ಮೂರು ಮರಿಗಳು ಸೇರಿವೆ. ಇಂದು ಸಾವನ್ನಪ್ಪಿದ ಚಿರತೆ ಮಾರ್ಚ್‌ನಿಂದ ಸಾವನ್ನಪ್ಪಿದ ಆರನೇ ಚಿರತೆಯಾಗಿದೆ.
ಏಳು ಗಂಡು, ಆರು ಹೆಣ್ಣು ಮತ್ತು ಒಂದು ಹೆಣ್ಣು ಮರಿ ಒಳಗೊಂಡ ಹದಿನಾಲ್ಕು ಚಿರತೆಗಳನ್ನು ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದೆ. ವನ್ಯ ಜೀವಿ ಪಶುವೈದ್ಯರು ಮತ್ತು ನಮೀಬಿಯಾದ ತಜ್ಞರನ್ನು ಒಳಗೊಂಡ ತಂಡ ಚಿರತೆಗಳ ಆರೋಗ್ಯವನ್ನು ಮೇಲ್ವಿಚಾರಣೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ದ್ವೇಷ ಭಾಷಣ ನಿಲ್ಲಿಸಿ, ಹೆಚ್ಚು ಸಿಸಿ ಟಿವಿ ಅಳವಡಿಸಿ: ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ
ಕಳೆದ ವರ್ಷ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚಿರತೆಗಳನ್ನು ಕರೆತಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಇದನ್ನು ಸರ್ಕಾರವು ಪ್ರತಿಷ್ಠೆಯ ವಿಷಯವಾಗಿ ಏಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದೆ. “ಚಿರತೆಗಳನ್ನು ಒಂದೇ ಸ್ಥಳದಲ್ಲಿ ಇರಿಸುವ ಬದಲು, ಅವು ಯಾವುದೇ ರಾಜ್ಯ ಅಥವಾ ಯಾವುದೇ ಸರ್ಕಾರದ ಅಡಿಯಲ್ಲಿರಲಿ. ಅವುಗಳಿಗೆ ಒಂದು ಅಥವಾ ಹೆಚ್ಚಿನ ಆವಾಸಸ್ಥಾನಗಳನ್ನು ಏಕೆ ನಿರ್ಮಿಸಲು ಸಾಧ್ಯವಿಲ್ಲ” ಎಂದು ಪ್ರಶ್ನಿಸಿತ್ತು.