ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈ ಬಣ್ಣದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ನಿಯೋಗವೊಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದ ನಿಯೋಗವು ದೂರು ನೀಡಿದ್ದು, ‘ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅರಣ್ಯ ಇಲ್ಲ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆಯವರು ಕಪ್ಪಾಗಿರ್ತಾರೆ. ಸುಟ್ಟು ಕರಕಲಾಗಿರ್ತಾರೆ. ಸ್ವಲ್ಪ ತಲೆ ಕೂದಲು ಮುಚ್ಚಿದ್ರಿಂದ ಉಳಿದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಆರಗ ಜ್ಞಾನೇಂದ್ರ ಮೈ ಬಣ್ಣದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಉಲ್ಲೇಖಿಸಿದ್ದಾರೆ.
‘ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಪ್ರಸ್ತಾಪಿಸುವ ಅರ್ಹತೆ ಆರಗ ಜ್ಞಾನೇಂದ್ರ ಅವರಿಗೆ ಇಲ್ಲ. ರಾಷ್ಟ್ರಮಟ್ಟದ ನಾಯಕರ ಬಗ್ಗೆ ಮಾತನಾಡುವಾಗ ಅವರ ವ್ಯಕ್ತಿತ್ವವನ್ನು ಅರಿತು ಮಾತನಾಡುವ ಸೌಜನ್ಯವೂ ಮಾಜಿ ಸಚಿವರಿಗೆ ಇಲ್ಲ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
‘ಒಬ್ಬ ದಲಿತ ನಾಯಕ, ಕನ್ನಡಿಗ ರಾಷ್ಟ್ರಮಟ್ಟದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಅವರ ಹೆಸರನ್ನು ಪ್ರಸ್ತಾಪಿಸುವಾಗ ಪರಿಜ್ಞಾನವಿಲ್ಲದೆ ಮಾತನಾಡಿರುವ ವ್ಯಕ್ತಿಯನ್ನು ಬಿಜೆಪಿ, ಇನ್ನೂ ಪಕ್ಷದಿಂದ ವಜಾಗೊಳಿಸಿದೆ ಇರುವುದು ಆಶ್ಚರ್ಯ ತಂದಿದೆ’ ಎಂದು ಕಾಂಗ್ರೆಸ್ ತಿಳಿಸಿದೆ.
ಪೊಲೀಸರಿಗೆ ದೂರು ನೀಡುವ ಮೊದಲು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂದೆ ಆರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿ, ಪ್ರತಿಕೃತಿ ದಹಿಸಿದರು.
ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಆರಗ ಜ್ಞಾನೇಂದ್ರ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.