ಚುನಾವಣೆ ವಿಶೇಷ | ಸಾಮಾನ್ಯ ಅಶೋಕ್ ರನ್ನು ಸಾಮ್ರಾಟನನ್ನಾಗಿ ಬೆಳೆಸಿದವರಾರು?

Date:

ಪದ್ಮನಾಭನಗರ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ಅಶೋಕ್, 25 ವರ್ಷಗಳಲ್ಲಿ ಸಾಮಾನ್ಯನಿಂದ ಸಾಮ್ರಾಟನ ಸ್ಥಾನಕ್ಕೇರಿದ್ದಾರೆ. ಅವರ ರಾಜಕೀಯ ಹೊಂದಾಣಿಕೆ, ಪಕ್ಷಾತೀತ ಸ್ನೇಹ, ಆಸ್ತಿ-ಪಾಸ್ತಿ ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಮಾಧ್ಯಮದವರೂ ಮೈ ಮುಟ್ಟುವುದಿಲ್ಲ. ಸಂಘ ಪರಿವಾರದ ಆಸಾಮಿಯಾದ್ದರಿಂದ, ಉರಿ-ನಂಜು ಕಾರುವುದರಿಂದ ಸಂಘದೊಂದಿಗೂ ಸಂಘರ್ಷವಿಲ್ಲ. ಪ್ರಶ್ನೆಗಳಿರುವುದು, ಉತ್ತರ ಬೇಕಾಗಿರುವುದು ಮತದಾರರಿಗೆ ಮಾತ್ರ

ಬೆಂಗಳೂರಿನ ಪದ್ಮನಾಭನಗರ ಎಂದಾಕ್ಷಣ ನೆನಪಾಗುವುದು ಎಚ್.ಡಿ.ದೇವೇಗೌಡ. ಮಾಜಿ ಪ್ರಧಾನಿಗಳ ಅಧಿಕೃತ ನಿವಾಸ ಇರುವುದು ಪದ್ಮನಾಭನಗರದಲ್ಲಿಯೇ. ಜೊತೆಗೆ ಹಿರಿಯ ಮಗನ ಮನೆ, ಪೆಟ್ರೋಲ್ ಬಂಕ್, ಅಳಿಯಂದಿರ ಮನೆಗಳು, ಕಿರಿಯ ಮಗನ ಆಸ್ಪತ್ರೆ, ಬಂಧು ಬಾಂಧವರು, ಜಾತ್ಯಸ್ಥರು ಎಲ್ಲವೂ ಇಲ್ಲಿ ಸಂಚಯಗೊಂಡಿದೆ. ಹೀಗಾಗಿ ಕೆಲವರು ಈ ಭಾಗಕ್ಕೆ ದೇವ ಮೂಲೆ ಎಂದು ಕರೆಯುವುದೂ ಉಂಟು!

ಇಂತಹ ಪ್ರಸಿದ್ಧ ಪದ್ಮನಾಭನಗರದಲ್ಲಿ, ಇತ್ತೀಚಿನ ವರ್ಷಗಳಲ್ಲಿ ದೇವೇಗೌಡರ ಹೆಸರು ಹಿನ್ನಲೆಗೆ ಸರಿಯುವಂತಾಗಿದೆ. ಹಾಗೆಯೇ ಪದ್ಮನಾಭನಗರ ಮತ್ತೊಬ್ಬ ಒಕ್ಕಲಿಗ ನಾಯಕ ಅಶೋಕ್ ರ ಹಿಡಿತಕ್ಕೊಳಗಾಗಿದೆ. ದೇವ ಮೂಲೆ ಹೋಗಿ ಅಶೋಕವನವಾಗುತ್ತಿದೆ. ಪದ್ಮನಾಭನಗರ ಕ್ಷೇತ್ರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲೆಲ್ಲ ಆರ್.ಅಶೋಕ್ ರ ಭಾವಚಿತ್ರಗಳು, ಫ್ಲೆಕ್ಸ್ ಗಳು, ಕಟೌಟುಗಳು ರಾರಾಜಿಸುತ್ತಿವೆ. ಬೇಂದ್ರೆ ಹೆಸರಿನ ಸಾರ್ವಜನಿಕ ಪಾರ್ಕಿನ ದ್ವಾರದಲ್ಲಿ, ಬೇಂದ್ರೆ ಬದಲಿಗೆ ಅಶೋಕ್ ಫೋಟೋ ಬಂದು ಕೂತಿದೆ. ಪುನೀತ್ ರಾಜಕುಮಾರ್ ರಿಂಗ್ ರಸ್ತೆ ನೆಪಮಾತ್ರಕ್ಕಿದ್ದು, ಅಲ್ಲಿ ಅಶೋಕ್ ಚಿತ್ರ ಎದ್ದು ಕಾಣುತ್ತಿದೆ. ಇದು ಸಾಲದೆಂಬಂತೆ, ಆರು ಬಾರಿ ಗೆದ್ದಿರುವ ಅಶೋಕ್ ಏಳನೇ ಬಾರಿಗ ಗೆಲ್ಲಲು ತಯಾರಿ ನಡೆಸುತ್ತಿದ್ದಾರೆ. ಪದ್ಮನಾಭನಗರದಲ್ಲಿ ವಿರೋಧಪಕ್ಷಗಳಾದ ಕಾಂಗ್ರೆಸ್ -ಜೆಡಿಎಸ್ ಗಳಿವೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

1994ರಿಂದ 2018ರವರೆಗೆ, ನಿರಂತರವಾಗಿ ಏಳು ಬಾರಿ ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದಾರೆ. 1962ರಿಂದ 1994ರವರೆಗೆ ಈ ಕ್ಷೇತ್ರ ಉತ್ತರಹಳ್ಳಿ ಕ್ಷೇತ್ರವಾಗಿತ್ತು. ಒಕ್ಕಲಿಗ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಇದು ಏಷ್ಯಾದ ಅತಿದೊಡ್ಡ ವಿಧಾನಸಭಾ ಕ್ಷೇತ್ರ ಎಂದು ಹೆಸರಾಗಿತ್ತು. ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ್ದ ವೈ.ರಾಮಕೃಷ್ಣ, ಬಿ.ಬಸವಲಿಂಗಪ್ಪ ಮತ್ತು ಎಂ.ವಿ.ರಾಜಶೇಖರನ್ ಥರದ ನಾಯಕರು ಇಲ್ಲಿಂದ ಗೆದ್ದು ಬಂದು ನಾಡಿನಾದ್ಯಂತ ಹೆಸರಾಗಿದ್ದರು. ಜನತಾ ಪಕ್ಷದ ಎಂ.ಶ್ರೀನಿವಾಸ್, 1983 ಮತ್ತು 85ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು. 1994ರ ವೇಳೆಗೆ ಬಿಜೆಪಿಗೆ ಬಂದ ಶ್ರೀನಿವಾಸ್, ಬಿಜೆಪಿಯಿಂದಲೂ ಜಯ ಗಳಿಸಿ, ದಾಖಲೆ ಬರೆದಿದ್ದರು.  

ಆನಂತರ, 1998ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ, ಎಂ.ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಲೋಕಸಭೆಗೆ ಸ್ಪರ್ಧಿಸಿದರು. ತೆರವಾದ ಶಾಸಕ ಸ್ಥಾನಕ್ಕೆ, ಎಂ.ಶ್ರೀನಿವಾಸ್ ಅವರ ಮನೆಯಲ್ಲಿ ಓಡಾಡಿಕೊಂಡಿದ್ದ ಅಶೋಕ್, 1998ರಲ್ಲಿ ನಡೆದ ಮರುಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಭ್ಯರ್ಥಿಯಾದರು. ಕಾಂಗ್ರೆಸ್ಸಿನ ಎಸ್.ರಮೇಶ್ ವಿರುದ್ಧ 20 ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕರಾದರು. 1999ರಲ್ಲಿ ಕಾಂಗ್ರೆಸ್ಸಿನ ಅದೇ ಎಸ್. ರಮೇಶ್ ವಿರುದ್ಧ 23 ಸಾವಿರ ಮತಗಳ ಅಂತರದಿಂದ ಗೆದ್ದರು. ಎಸ್. ರಮೇಶ್ ತೀರಿಹೋದ ಮೇಲೆ ಆ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಸ್.ಟಿ. ಸೋಮಶೇಖರ್(ಸದ್ಯ ಬಿಜೆಪಿ ಸರ್ಕಾರದ ಸಹಕಾರ ಸಚಿವ) 2004ರ ಚುನಾವಣೆಯಲ್ಲಿ ಅಭ್ಯರ್ಥಿಯಾದರು. ಸೋಮಶೇಖರ್ ವಿರುದ್ಧ ಅಶೋಕ್ 84 ಸಾವಿರ ಮತಗಳ ಅಂತರದ ಗೆಲುವು ದಾಖಲಿಸಿದರು. ಈ ಭಾರೀ ಅಂತರ ಮತ್ತು ಹ್ಯಾಟ್ರಿಕ್ ಗೆಲುವು ಅಶೋಕರಿಗೆ ಪಕ್ಷದೊಳಗೆ ಮಣೆ-ಮನ್ನಣೆಗೆ ದಾರಿ ಮಾಡಿಕೊಟ್ಟಿತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಗೆಲ್ಲುತ್ತಿದ್ದ ಬಿಜೆಪಿಯ ಅನಂತಕುಮಾರ್ ಬಲ ಹೆಚ್ಚಿಸಿತು, ಸ್ನೇಹಕ್ಕೆ ದಾರಿ ಮಾಡಿಕೊಟ್ಟಿತು. ಅವರ ಗೆಲುವಲ್ಲಿ ಪದ್ಮನಾಭನಗರದ ಲೀಡ್ ಪ್ರಮುಖ ಪಾತ್ರ ವಹಿಸುತ್ತಿದ್ದುದರಿಂದ, ಅನಂತಕುಮಾರ್ ಗೆ ಆಪ್ತರಾಗಿ, ವ್ಯವಹಾರಗಳಲ್ಲಿ ಪಾಲುಗಾರರಾಗಿ, ದಿಲ್ಲಿ ನಾಯಕರ ಒಡನಾಟ ಸುಲಭವಾಯಿತು. ಜೊತೆಗೆ ಬ್ರಾಹ್ಮಣರ ಅಗ್ರಹಾರದಲ್ಲಿ ಅಡ್ಡಾಡುವ, ಸಂಘದಲ್ಲಿ ಸಲೀಸಾಗಿ ಬೆರೆಯುವ ಪರವಾನಿಗೆ ಪ್ರಾಪ್ತವಾಯಿತು.

ಇಲ್ಲಿಂದ ಮುಂದಕ್ಕೆ, ಅಶೋಕ್ ರ ಅದೃಷ್ಟ ಖುಲಾಯಿಸಿತು. ಅದೇ ಸಂದರ್ಭದಲ್ಲಿ, 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಟ್ವೆಂಟಿ ಟ್ವೆಂಟಿ ಸರ್ಕಾರ ರಚನೆಯಾದಾಗ, ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಯಾಬಿನೆಟ್ ನಲ್ಲಿ ಮೊದಲ ಬಾರಿಗೆ ಅಶೋಕ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದರು. ಎಚ್ಡಿಕೆ ಸ್ನೇಹ ಸಂಪಾದಿಸಿ, ಅವರ ಕುಟುಂಬಕ್ಕೆ ಹತ್ತಿರವಾದರು. ಅಲ್ಲಿಯವರೆಗೂ ಕೇವಲ ಶಾಸಕರಾಗಿ ಅಲ್ಪ ಅನುದಾನಗಳಿಗಷ್ಟೇ ಸಂತೃಪ್ತರಾಗಿದ್ದ ಅಶೋಕ್, ಮೊದಲ ಬಾರಿಗೆ ಸಚಿವಸ್ಥಾನದಲ್ಲಿ ಕೂತು ಅಧಿಕಾರದ ರುಚಿ ಉಂಡರು. ಹಣ-ಅಧಿಕಾರ ಜೊತೆಗೂಡಿದಾಗ, ಕುಮಾರಸ್ವಾಮಿಗಳ ಕೃಪಾಶೀರ್ವಾದ ದೊರೆತಾಗ, ಜೆಡಿಎಸ್ ವರಿಷ್ಠ ದೇವೇಗೌಡ ದೇವರಂತೆ ಕಂಡು ಕೈಮುಗಿದರು.

ದೇವೇಗೌಡರಿಗೆ ಕೈಮುಗಿದ ಕಾರಣಕ್ಕೋ ಏನೋ, 2006ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ, ಪದ್ಮನಾಭನಗರ-ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಾಗಿ(ಎರಡಲ್ಲ, ಐದು ಕ್ಷೇತ್ರಗಳಿಗೆ ಹಂಚಿಕೆಯಾಯಿತು) ವಿಂಗಡಿಸಲ್ಪಟ್ಟವು. ದೊಡ್ಡ ಕ್ಷೇತ್ರದಲ್ಲಿಯೇ ಗೆದ್ದಿದ್ದ ಬಿಜೆಪಿಯ ಅಶೋಕ್ ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಡಿಲಿಮಿಟೇಷನ್ ಕೃಪೆಯಿಂದ, ಗೆಲುವು ನೀರು ಕುಡಿದಷ್ಟು ಸಲೀಸಾಯಿತು. ಸಾಲದು ಎಂದು, 2008ರ ಚುನಾವಣೆಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಎಂ.ವಿ.ಪ್ರಸಾದ್ ಬಾಬು(ಕಬಡ್ಡಿ ಬಾಬು) ಎಂಬ ದುರ್ಬಲ ಅಭ್ಯರ್ಥಿಯನ್ನು ಜೆಡಿಎಸ್ ನಿಂದ ಕಣಕ್ಕಿಳಿಸಲಾಯಿತು. ಅಷ್ಟೇ ಅಲ್ಲ, ಕಾಂಗ್ರೆಸ್ ಕೂಡ ಗುರಪ್ಪ ನಾಯ್ಡು ಎಂಬ ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸಿತು. ಈ ನಾಯ್ಡು ರಾಮಲಿಂಗಾರೆಡ್ಡಿಯವರಿಗೆ ಆಪ್ತ. ಬಿಜೆಪಿಯ ಅಶೋಕ್ ಮತ್ತು ಕಾಂಗ್ರೆಸ್ಸಿನ ರಾಮಲಿಂಗಾರೆಡ್ಡಿ ಸ್ನೇಹಿತರು, ಹಲವಾರು ವ್ಯವಹಾರಗಳಲ್ಲಿ ಪಾಲುದಾರರು. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್- ಎರಡೂ ಪಕ್ಷಗಳು ಅಶೋಕ್ ಮುಂದೆ ಡಮ್ಮಿ ಕ್ಯಾಂಡಿಡೇಟ್ ಗಳನ್ನು ಫೀಲ್ಡ್ ಮಾಡಿ, ಅಶೋಕ್ ಗೆಲುವಿಗೆ ಸಹಕರಿಸಿದರು.

2008ರಲ್ಲಿ ನಾಲ್ಕನೇ ಬಾರಿಗೆ ಗೆದ್ದು ಶಾಸಕರಾದ ಅಶೋಕ್, ಯಡಿಯೂರಪ್ಪನವರ ಕ್ಯಾಬಿನೆಟ್ ನಲ್ಲಿ ಸಾರಿಗೆ ಸಚಿವರಾದರು. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, 2010ರಲ್ಲಿ ಸದಾನಂದಗೌಡ ಮುಖ್ಯಮಂತ್ರಿಯಾದಾಗ ಅಶೋಕ್ ಗೃಹ ಸಚಿವರಾದರು. ಸದಾನಂದಗೌಡರು ಅಧಿಕಾರದಿಂದ ಕೆಳಗಿಳಿದು 2012ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ, ಅಶೋಕ್ ಪಕ್ಷದಲ್ಲಿ ಹಿರಿಯ ನಾಯಕನ ಸ್ಥಾನಕ್ಕೆ ಬಡ್ತಿ ಪಡೆದರು. ಒಕ್ಕಲಿಗ ಕೋಟಾ ಮುಂದೆ ಮಾಡಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಭಾರೀ ತೂಕದ ಖಾತೆಗಳಾದ ಗೃಹ ಮತ್ತು ಸಾರಿಗೆ ಸಚಿವರಾಗಿ ಮೆರೆದರು.

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇತ್ತು. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳಿದ್ದವು. ಆಗಲೂ ಕಾಂಗ್ರೆಸ್ ಪಕ್ಷ ಎಲ್.ಎಸ್.ಚೇತನ್ ಗೌಡ(ಎಲ್.ಆರ್.ಶಿವರಾಮೇಗೌಡರ ಮಗ) ಎಂಬ ಚಿಲ್ಟಾರಿಯನ್ನು ಅಶೋಕ್ ಮುಂದೆ ಅಭ್ಯರ್ಥಿಯನ್ನಾಗಿಸಿತು. ಜೊತೆಗೆ ಜೆಡಿಎಸ್ ಗೌಡರ ಕುಟುಂಬ ಕೂಡ ಡಾ. ಪ್ರಸಾದ್ ಎಂಬ ರಾಜಕಾರಣವೇ ಗೊತ್ತಿಲ್ಲದ ಗಿರಾಕಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ರಾಜ್ಯದಾದ್ಯಂತ ಕಾಂಗ್ರೆಸ್ ಅಲೆ ಇದ್ದಾಗ, ಈ ಬಾರಿ ಅಶೋಕ್ ಖಂಡಿತ ಸೋಲಲಿದ್ದಾರೆ ಎಂದುಕೊಂಡಿದ್ದವರಿಗೆ ಶಾಕ್ ಆಗುವಂತೆ 20 ಸಾವಿರ ಮತಗಳ ಅಂತರದಿಂದ ಗೆದ್ದು ಐದನೇ ಬಾರಿಗೆ ಶಾಸಕರಾದರು.

ಇನ್ನು 2018ರಲ್ಲಿ ಬಿಜೆಪಿಯಿಂದ ಅಶೋಕ್ ಮತ್ತೆ ಅಭ್ಯರ್ಥಿಯಾದರೆ, 20 ವರ್ಷಗಳ ಹಿಂದೆ ಅಶೋಕ್ ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ 75 ವರ್ಷಗಳ ಎಂ.ಶ್ರೀನಿವಾಸ್, ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿದ್ದರು. ಆ ಸಂದರ್ಭದಲ್ಲಿ ಪದ್ಮನಾಭನಗರದ ಕಾಂಗ್ರೆಸ್ ಕಾರ್ಯಕರ್ತರು, `ಇದು ಹೊಂದಾಣಿಕೆ ರಾಜಕಾರಣ. ಪ್ರತಿಬಾರಿ ಅಭ್ಯರ್ಥಿಗಳನ್ನೇ ಖರೀದಿಸಿ ಗೆಲ್ಲುತ್ತಾ ಬಂದಿರುವ ಅಶೋಕ್ ಎದುರು ಅವರ ಸಂಬಂಧಿಕರಾದ ಶ್ರೀನಿವಾಸರಿಗೆ ಟಿಕೆಟ್ ಕೊಟ್ಟಿರುವುದು ಸರಿಯಲ್ಲ’ ಎಂದು ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟಿಸಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನೆಗೆ ಮುತ್ತಿಗೆ ಹಾಕಿದ್ದರು. ಕಾರ್ಯಕರ್ತರ ಕೂಗು ಕೇಳುವವರಾರು? ಕೊನೆಗೂ ಕಾಂಗ್ರೆಸ್ ಶ್ರೀನಿವಾಸರನ್ನೇ ಕಣಕ್ಕಿಳಿಸಿತು. ಯಥಾಪ್ರಕಾರ ಜೆಡಿಎಸ್ ರಾಜಕಾರಣಿಯಲ್ಲದ ವಿ.ಕೆ.ಗೋಪಾಲ್ ಎಂಬ ರಿಯಲ್ ಎಸ್ಟೇಟ್ ಕುಬೇರನನ್ನು ಅಭ್ಯರ್ಥಿಯನ್ನಾಗಿಸಿತು. ಬಿಜೆಪಿಯ ಅಶೋಕ್, ಮತ್ತೊಮ್ಮೆ 32 ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕರಾದರು.

ಸಾಲದು ಎಂದು, 2019ರಲ್ಲಿ ಬಿಜೆಪಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಾಗ, ತೂಕದ ಕಂದಾಯ ಖಾತೆ ಸಚಿವರೂ ಆದರು. ಮುಂದುವರೆದು, ತಮಗಿಂತ ಕಿರಿಯರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ, ತಮಗಿಂತ ಹಿರಿಯರಾದ ಯಡಿಯೂರಪ್ಪ-ಈಶ್ವರಪ್ಪಗಳು ನೇಪಥ್ಯಕ್ಕೆ ಸರಿದಾಗ, ಪಕ್ಷ ಮತ್ತು ಸರ್ಕಾರದಲ್ಲಿ ಅಶೋಕ್ ನಿಜಕ್ಕೂ ಸಾಮ್ರಾಟನೇ ಆದರು. ಬೆಂಗಳೂರು ನಗರದ ಉಸ್ತುವಾರಿಗಾಗಿ ಸಚಿವರಾದ ಅಶ್ವತ್ಥನಾರಾಯಣ-ಸೋಮಣ್ಣರೊಂದಿಗೆ ಜಗಳಕ್ಕೂ ಬಿದ್ದರು. ಲಿಂಬಾವಳಿ-ಸುರೇಶಕುಮಾರ್ ರನ್ನು ಸೈಡಿಗೆ ಸರಿಸಿದರು. ಸಂಘಪರಿವಾರದ ಸಂತೋಷರಿಗೆ ಸಂತೋಷವನ್ನುಂಟುಮಾಡಲು, ತಾನು ಬೆಳೆದುಬಂದ ಒಕ್ಕಲಿಗ ಜಾತಿಯನ್ನೇ ಹೀಯಾಳಿಸಿ, ಉರಿ-ನಂಜು ಕಾರಿಕೊಂಡರು.  

ಅಶೋಕರ ಈ ರಾಜಕೀಯ ನಡೆಗಳನ್ನು, ಬೆಳವಣಿಗೆಯನ್ನು ಕುರಿತು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು, `ಅಶೋಕ್ ಒಕ್ಕಲಿಗ, ಜಾತಿಯೊಂದೇ ಆತನಿಗಿರುವ ಕ್ವಾಲಿಫಿಕೇಷನ್ನು. ಆತ ನಿರಂತರವಾಗಿ ಗೆಲ್ಲುತ್ತಿರುವುದರಿಂದ ಪಕ್ಷಕ್ಕೆ ಬೇಕಾದ ವ್ಯಕ್ತಿಯಾದರು. ಬೆಂಗಳೂರು ಸೌತ್ ಗೆಲ್ಲಲು ಅನಂತಕುಮಾರ್-ಸೂರ್ಯಗೆ; ಒಕ್ಕಲಿಗರು ನಮ್ಮಲ್ಲೂ ಇದಾರೆ ಎಂದು ತೋರಲು ಯಡಿಯೂರಪ್ಪರಿಗೆ; ಸಂಘದಲ್ಲಿ ಶೂದ್ರರೂ ಇದ್ದಾರೆಂದು ಬಿಂಬಿಸಲು ಸಂತೋ‍ಷರಿಗೆ ಅಶೋಕ್ ಬೇಕಾಗಿದೆ. ಇವರೆಲ್ಲರಿಗೆ ಬೇಕಾದ ವ್ಯಕ್ತಿಯಾಗಿ, ಅವರೆಲ್ಲರ ಬೆಂಬಲದಿಂದ ಪಕ್ಷದಲ್ಲಿ ಹಂತಹಂತವಾಗಿ ಬೆಳೆದರು. ಹಾಗೆಯೇ ಬೇರೆ ಪಕ್ಷಗಳ ನಾಯಕರೊಂದಿಗೆ ಸ್ನೇಹ ಬೆಳೆಸಿ, ರಾಜಕೀಯವನ್ನು ವ್ಯವಹಾರದೊಂದಿಗೆ ತಳುಕು ಹಾಕಿದರು. ಇವತ್ತು ಅಶೋಕ್ ಕಂದಾಯ ಮಂತ್ರಿ. ಕಂದಾಯ ಎಂದರೆ ಭೂಮಿಗೆ ಸಂಬಂಧಿಸಿದ್ದು. ಅಶೋಕರಿಗೆ ಭೂಮಿ ಮೇಲೆ ಭಾರೀ ಪ್ರೀತಿ. ಕೋಲಾರದಿಂದ ಬೀದರ್ ವರೆಗೆ, ಸ್ನೇಹಿತರು-ಸಂಬಂಧಿಕರ ಬೇನಾಮಿ ಹೆಸರಲ್ಲಿ ಅದೆಷ್ಟು ಭೂಮಿ ಇದೆಯೋ ಆ ದೇವರಿಗೇ ಗೊತ್ತು. ಅದೆಷ್ಟು ಕೋಟಿಗೆ ಬಾಳುತ್ತಾರೋ ಮೋದಿಯೇ ಹೇಳಬೇಕು’ ಎಂದರು.

ಇದನ್ನು ಓದಿದ್ದೀರಾ? ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ; ಕಾಂಗ್ರೆಸ್ ಕೈವಾಡವಿದೆ ಎಂದ ಸಿಎಂ ಬೊಮ್ಮಾಯಿ

ಪದ್ಮನಾಭನಗರ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿರುವ ಅಶೋಕ್, ಕಳೆದ 25 ವರ್ಷಗಳಲ್ಲಿ ಬೆಟ್ಟದಂತೆ ಬೆಳೆದಿದ್ದಾರೆ. ಸಾಮಾನ್ಯನಿಂದ ಸಾಮ್ರಾಟನ ಸ್ಥಾನಕ್ಕೇರಿದ್ದಾರೆ. ಹಾಗಂತ ಅವರು ಕ್ಷೇತ್ರ ಕಡೆಗಣಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಆದರೆ ಅವುಗಳಲ್ಲಿ 40% ಕಮಿಷನ್ ವಾಸನೆ ಹೊಡೆಯುತ್ತಿದೆ ಎಂಬ ಆರೋಪವೂ ಇದೆ. ಇದರಲ್ಲೆಲ್ಲ ಅವರೆಷ್ಟು ನಾಜೂಕಿನ ರಾಜಕಾರಣಿ ಎಂದರೆ, ಅವರ ರಾಜಕೀಯ ಹೊಂದಾಣಿಕೆ, ಪಕ್ಷಾತೀತ ಸ್ನೇಹ, ಆಸ್ತಿ-ಪಾಸ್ತಿ ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಬಿಜೆಪಿ ಕಾರಣಕ್ಕೆ ಮಾಧ್ಯಮದವರೂ ಇವರ ಮೈ ಮುಟ್ಟುವುದಿಲ್ಲ. ಸಂಘ ಪರಿವಾರದ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುವುದರಿಂದ, ಅದರ ಅಂಗಸಂಸ್ಥೆಗಳಿಗೆ ಸರ್ಕಾರದಿಂದ ಅನುಕೂಲ ಕಲ್ಪಿಸಿಕೊಡುವುದರಿಂದ, ಸಂಘದೊಂದಿಗೂ ಸಂಘರ್ಷವಿಲ್ಲ.

ಹೀಗೆ ಎಲ್ಲರಿಂದಲೂ ಸೈ ಎನಿಸಿಕೊಂಡಿರುವ ಅಶೋಕ್ ಆಡಳಿತದಲ್ಲಾದರೂ ದಕ್ಷತೆ ತೋರಿದ್ದಾರ? ಒಂದೆರಡು ಉದಾಹರಣೆಗಳತ್ತ ನೋಡೋಣ. ಸಂಘ ಪರಿವಾರದ ಅಂಗಸಂಸ್ಥೆಯಾದ ಜನಸೇವಾ ಟ್ರಸ್ಟ್, ಜನಸೇವಾ ವಿಶ್ವಸ್ಥ ಮಂಡಳಿ ಎನ್ನುವ ಹೆಸರಿನ ಸಂಸ್ಥೆಗೆ ಬೆಂಗಳೂರು ನಗರದ ಸುತ್ತಮುತ್ತಲಿನ ಬೆಲೆಬಾಳುವ ಭೂಮಿಯನ್ನು ಕನಿಷ್ಠ ಬೆಲೆಗೆ ಬಿಜೆಪಿ ಸರ್ಕಾರ ಬಿಕರಿ ಮಾಡಿದೆ. ಈ ಟ್ರಸ್ಟ್ ಗೆ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರೂಪಾಯಿ ಬೆಲೆಬಾಳುವ 40 ಎಕರೆ ಜಮೀನು ಇದೆ. ಇದಲ್ಲದೆ, ಇನ್ನೂ ಬೇಕು ಎಂದು 35 ಎಕರೆ ಕೇಳಿದಾಗ ಕುರುಬರಹಳ್ಳಿಯ 25 ಎಕರೆಯನ್ನು ಬಿಜೆಪಿ ಸರ್ಕಾರ ಮಂಜೂರು ಮಾಡಿದೆ. ಇದೂ ಸಾಲದೆಂದು ಟ್ರಸ್ಟ್ ಇತ್ತೀಚೆಗೆ ಮತ್ತೆ 15 ಎಕರೆ ಬೇಕೆಂದು ಬೇಡಿಕೆ ಇಟ್ಟಿತ್ತು. ಅದಕ್ಕೆ ಸರ್ಕಾರ 10.33 ಎಕರೆ ಗೋಮಾಳವನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡುವ ಮೂಲಕ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದೆ.

ಕಳೆದ ವರ್ಷ ಬೆಂಗಳೂರು ನಗರ ಭಾರೀ ಮಳೆಯಿಂದಾಗಿ ಜಲಾವೃತವಾಗಿತ್ತು. ಮನೆಗಳಿಗೆ ನುಗ್ಗಿ ಬಡವರ ಬದುಕು ದುರ್ಭರವಾಗಿತ್ತು. ಆಗ ಕಂದಾಯ ಸಚಿವ ಅಶೋಕ್, `ಅಕ್ರಮ ಕೆರೆ ಒತ್ತುವರಿಯೇ ಇದಕ್ಕೆಲ್ಲ ಕಾರಣ’ ಎಂದು ಕೂಗಾಡಿ ಮಾಧ್ಯಮಗಳ ಮುಂದೆ ಹೀರೋ ಆಗಿದ್ದರು. ಆದರೆ, ಕಳೆದ ಫೆಬ್ರವರಿಯಲ್ಲಿ 72 ಎಕರೆ ವಿಸ್ತೀರ್ಣದ ಮಲ್ಲತ್ತಳ್ಳಿ ಕೆರೆಯನ್ನು ತಮ್ಮದೇ ಸರ್ಕಾರದ ಮಂತ್ರಿ ಮುನಿರತ್ನ ಮುಚ್ಚಿಸಿ, ಅಲ್ಲಿ ಶಿವನ ಪ್ರತಿಮೆ, ಆಟದ ಮೈದಾನ, ರಂಗಮಂದಿರ ಕಟ್ಟುವಾಗ ಕಂದಾಯ ಮಂತ್ರಿ ಅಶೋಕ್ ಮೌನವಾಗಿದ್ದರು. ಕೆರೆಯಲ್ಲಿ ಕಾಮಗಾರಿ ನಡೆಸಬಾರದು ಎಂದು ಕೋರ್ಟಿನ ಆದೇಶವನ್ನು ಉಲ್ಲಂಘಿಸಿದ್ದರೂ ಸುಮ್ಮನಿದ್ದರು. ಇದು ಏನನ್ನು ಸೂಚಿಸುತ್ತದೆ. ಈ ಬಿಜೆಪಿ ಸರ್ಕಾರ ಯಾರ ಪರವಿದೆ?

ಇಂತಹ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳುವ, ಉತ್ತರ ಪಡೆಯುವ ಕಾಲ ಬಂದಿದೆ. ನಮ್ಮ ನಿಮ್ಮಂತೆ ಸಾಮಾನ್ಯ ವ್ಯಕ್ತಿಯಾಗಿ ನಮ್ಮೊಂದಿಗೇ ಇದ್ದ ಅಶೋಕ್ ಇಂದು ಸಾಮ್ರಾಟರಾಗಿದ್ದಾರೆ. ಈಗಲಾದರೂ, ಪದ್ಮನಾಭನಗರದ ಪ್ರಜ್ಞಾವಂತ ಮತದಾರರು ಪ್ರಶ್ನಿಸುವ ಧೈರ್ಯ ತೋರಬೇಕಾಗಿದೆ. ಪ್ರಶ್ನಿಸಲಾರದವರು ಮತದ ಮೂಲಕ ತಕ್ಕ ಉತ್ತರ ನೀಡಬೇಕಿದೆ. ಮೋದಿಯ ಮೋಡಿಗೋ, ಜಾತಿಪ್ರೀತಿಗೋ, ಧರ್ಮದ ಅಮಲಿಗೋ ಒಳಗಾಗದೆ, ಜನರ ಹಿತ ಬಯಸುವ, ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾಗುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದು ಪ್ರಜಾಪ್ರಭುತ್ವ. ಪ್ರಜೆಗಳೇ ಪ್ರಭುಗಳು. ಹಾಗಾಗಿ ಸಾಮ್ರಾಟರನ್ನು ಸಾಮಾನ್ಯರನ್ನಾಗಿಸಬೇಕಾಗಿದೆ.  

+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಲಿತರ ನ್ಯಾಯಯುತ ಬೇಡಿಕೆಗಳ ಅನುಷ್ಠಾನಕ್ಕೆ ‍ಸರ್ಕಾರ ಬದ್ಧ, ನಿಮ್ಮ ಋಣ ತೀರಿಸುತ್ತೇವೆ: ಡಿಕೆ ಶಿವಕುಮಾರ್

ಅಂಬೇಡ್ಕರ್ ಅಂದರೆ ಶಕ್ತಿ-ಸ್ವಾಭಿಮಾನ ಅವರು ನೀಡಿರುವ ಸಂವಿಧಾನ ಶಕ್ತಿಯನ್ನು ಉಳಿಸಿಕೊಂಡು ಹೋಗಬೇಕಿದೆ....

ನಮ್ಮಲ್ಲಿನ ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು: ಸ್ವಪಕ್ಷಿಯರ ವಿರುದ್ಧ ಸಿ ಟಿ ರವಿ ಕಿಡಿ

ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿಗೆ ಸೋಲಾಗಿದೆ ಪಕ್ಷದೊಳಗಿನ...

ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ: ಸಿಎಂ ಸಿದ್ದರಾಮಯ್ಯ

ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್ ಎಸ್ ಎಸ್ ನವರು ಸಂವಿಧಾನ ವಿರೋಧಿಗಳು ಟೌನ್‌ಹಾಲ್...

ಪಠ್ಯ ಪರಿಷ್ಕರಣೆ | ಕಾಂಗ್ರೆಸ್‌ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ, ಸಿ ಟಿ ರವಿ ವಾಗ್ದಾಳಿ

ಬನ್ನಂಜೆ ಗೋವಿಂದಾಚಾರ್ಯರ ಪಾಠ ಹಿಂಪಡೆದಿದ್ದು ಖಂಡನಾರ್ಹ: ಕೋಟಾ ಶ್ರೀನಿವಾಸ ಪೂಜಾರಿ ಕಾರ್ಲ್ ಮಾರ್ಕ್ಸ್...