ದೇವೇಗೌಡರದು ಪಕ್ಷ, ಜಾತಿ, ಪಂಥಗಳನ್ನು ಮೀರಿದ ಮುತ್ಸದ್ದಿತನ. ಎದುರಾಳಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ಮಾತು – ನಡವಳಿಕೆ ಅವರಿಂದ ಬರಬೇಕಿತ್ತು. ಅದರಿಂದ ರಾಜ್ಯಕ್ಕೂ ಒಳ್ಳೆಯದಾಗುತ್ತಿತ್ತು. ಆದರೆ, ಅವರು ತಮ್ಮ ಕುಟುಂಬದ ಕುಡಿಗಳಿಗೆ ಅಧಿಕಾರ ಪಡೆದುಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲೆ ಎಂಬ ಸಂದೇಶವನ್ನಷ್ಟೇ ಕೊಡುತ್ತಿದ್ದಾರೆ.
91ರ ಹರೆಯದ ಎಚ್.ಡಿ. ದೇವೇಗೌಡರು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ, ತಮ್ಮ ವಯಸ್ಸು, ಆರೋಗ್ಯವನ್ನು ಪಣಕ್ಕಿಟ್ಟು ಚನ್ನಪಟ್ಟಣದ ಹಳ್ಳಿ ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಗೌಡರು ನಿಜಕ್ಕೂ ಹಣ್ಣಾಗಿದ್ದಾರೆ. ಕೂತರೆ ಎದ್ದು ನಿಲ್ಲಲಾಗದ, ನಿಂತರೆ ಯಾರಾದರೂ ಹಿಡಿದುಕೊಳ್ಳದೆ ಇರಲಾಗದ ಅವರ ಸ್ಥಿತಿ ಕಂಡರೆ ಕನಿಕರ ಹುಟ್ಟುತ್ತದೆ. ಅಂತಹ ಸ್ಥಿತಿಯಲ್ಲೂ ಹಳ್ಳಿಯ ಜನರನ್ನು ನೋಡಿ ಕೈ ಎತ್ತಿ ಮುಗಿಯುತ್ತಾರೆ, ‘ನೀವೇ ನಮ್ಮ ತಂದೆ-ತಾಯಂದಿರು’ ಎಂದು ಕಣ್ಮುಚ್ಚಿ ತಲೆ ಬಾಗುತ್ತಾರೆ. ‘ನಿಮ್ಮಿಂದಲೇ ಈ ದೊಡ್ಡೇಗೌಡ ಎಂಬ ಬಡ ರೈತನ ಮಗ ಪ್ರಧಾನಿಯಾಗಲು ಸಾಧ್ಯವಾಗಿದ್ದು’ ಎಂದು ಒತ್ತಿ ಹೇಳುತ್ತಾರೆ.
ಗೌಡರು ಹೇಳುತ್ತಿರುವುದೆಲ್ಲವೂ ನಿಜವೇ. ಅವರ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಅಸಲಿಗೆ ದೇವೇಗೌಡರ ನಕ್ಷತ್ರವೇ ಚುನಾವಣಾ ನಕ್ಷತ್ರ. ಚುನಾವಣೆ ಎಂದಾಕ್ಷಣ ಅವರು ಎದ್ದುನಿಲ್ಲುತ್ತಾರೆ. ಮುದುಡಿದ್ದ ಮನಸ್ಸು ಅರಳುತ್ತದೆ. ಮೈಗೆ ಸಿಡಿಲಿನಂತಹ ಶಕ್ತಿ ಸಂಚಲನವಾಗುತ್ತದೆ. ವಯಸ್ಸು ಮರೆತುಹೋಗುತ್ತದೆ. ನರಗಳಲ್ಲಿ ಹರಿಯುತ್ತಿರುವ ರಕ್ತ ಹೇಮಾವತಿ ನದಿಯಾಗುತ್ತದೆ (ಈ ನದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಅನಾಹುತಗಳಿಗೆ ಕಾರಣವಾಗುವುದಕ್ಕೆ ಹೆಸರುವಾಸಿ). ಎದುರಾಳಿಗಳನ್ನು ಸದೆಬಡಿಯಲು, ಹೀಯಾಳಿಸಲು, ನೀರಿಳಿಸಲು ಉತ್ಸುಕರಾಗುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ- ಚಕ್ರವೇ ನಾಚುವಂತೆ!
ಚುನಾವಣೆಯೇ ಅವರ ಆರೋಗ್ಯ. ತಮ್ಮ ಸುತ್ತ ಜನ ಗಿಜಿಗಿಡುವುದನ್ನು, ಕಾರ್ಯಕರ್ತರು ಕೈ ಕಾಲುಗಳಿಗೆ ಸಿಕ್ಕಿ, ಬಿದ್ದು, ಎದ್ದು, ಒದ್ದಾಡುವುದನ್ನು, ಒಂದರೆಗಳಿಗೆಯೂ ಪುರುಸೊತ್ತು ಕೊಡದಂತೆ ಜನ ಬಂದು ಪೀಡಿಸುವುದನ್ನು, ಒಲೈಸುವುದನ್ನು, ವಂದಿಸುವುದನ್ನು ದೇವೇಗೌಡರು ಬಯಸುತ್ತಾರೆ. ಹಿಂದೊಮ್ಮೆ ದೇವೇಗೌಡರ ಈ ದೈತ್ಯ ಶಕ್ತಿಯನ್ನು ಲಂಕೇಶರು, ‘ರಾಕ್ಷಸ ನಿದ್ರಿಸುವುದಿಲ್ಲ’ ಎಂದು ರೂಪಕ ಬಳಸಿ ಬಣ್ಣಿಸಿದ್ದರು.
ಇಂತಹ ದೈತ್ಯ ದೇವೇಗೌಡರು, ಅವರ ಸುದೀರ್ಘ ರಾಜಕೀಯ ಬದುಕನ್ನು, ಅನುಭವವನ್ನು, ಮುತ್ಸದ್ದಿತನವನ್ನು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ವಿನಿಯೋಗವಾಗುತ್ತಿರುವುದು ಈ ಕಾಲದ ವ್ಯಂಗ್ಯ ಮತ್ತು ದುರಂತ. ನಿಖಿಲ್ ಗೆಲುವಿನ ಸಲುವಾಗಿ ವಯಸ್ಸಿಗೆ ಮೀರಿದ, ‘ಈ ಕೆಟ್ಟ ಸರ್ಕಾರವನ್ನು ತೆಗೆಯದೆ ಉಸಿರು ಎಳೆಯುವುದಿಲ್ಲ’ ಎಂಬ ಮಾತುಗಳನ್ನಾಡುತ್ತಿರುವುದು ಅವರ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.
ಯಾಕಿಷ್ಟು ಸಿಟ್ಟು, ದ್ವೇಷ, ಆಕ್ರೋಶ, ಅಸಹನೆ? ಅವರ ಕಣ್ಣಮುಂದೆ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಕಾಣುತ್ತಿದ್ದಾರೆ. ಒಬ್ಬರು, ತಮ್ಮಿಂದಲೇ ಬೆಳೆದು, ಈಗ ತಮ್ಮ ವಿರುದ್ಧವೇ ನಿಂತಿರುವುದಕ್ಕೆ. ಮತ್ತೊಬ್ಬರು ತಮ್ಮದೇ ಜಾತಿಯ ಮತ್ತೊಬ್ಬ ತಮ್ಮನ್ನು ಹಿಂದಕ್ಕೆ ಹಾಕಿ, ಮೀರಿ ಬೆಳೆಯುತ್ತಿರುವುದಕ್ಕೆ. ಹಾಗಾಗಿ ಅವರಿಬ್ಬರೂ ಮುಖ್ಯಸ್ಥರಾಗಿರುವ ಸರ್ಕಾರವನ್ನು ಕತ್ತೊಗೆಯುವ ಶಪಥ ಮಾಡಿದ್ದಾರೆ.
ದೇವೇಗೌಡರನ್ನು ಬಹಳ ಹತ್ತಿರದಿಂದ ಬಲ್ಲವರಿಗೆ ಈ ಸಿಟ್ಟು, ದ್ವೇಷ, ಆಕ್ರೋಶಗಳು ಹೊಸದೇನಲ್ಲ. ಇವೆಲ್ಲ ಗೌಡರಿಗೆ ಹುಟ್ಟಿನಿಂದಲೇ ಜೊತೆಯಾಗಿ ಬಂದಂತಹ ಗುಣಗಳು. ಹೊಳೆನರಸೀಪುರದಲ್ಲಿದ್ದಾಗ ಪುಟ್ಟಸ್ವಾಮಿಗೌಡರ ವಿರುದ್ಧ, ಹಾಸನಕ್ಕೆ ಬಂದಾಗ ಶ್ರೀಕಂಠಯ್ಯನವರ ವಿರುದ್ಧ, ಬೆಂಗಳೂರಿಗೆ ಬಂದಾಗ ರಾಮಕೃಷ್ಣ ಹೆಗಡೆಯ ವಿರುದ್ಧ, ಜೆ.ಎಚ್. ಪಟೇಲರ ವಿರುದ್ಧ, ಆನಂತರ ಎಸ್.ಎಂ. ಕೃಷ್ಣರ ವಿರುದ್ಧ ಹೀಗೆಯೇ ಸಿಟ್ಟು, ದ್ವೇಷ, ಆಕ್ರೋಶ ಹರಿಯುತ್ತಲೇ ಇತ್ತು. ಇದನ್ನು ಕಾಲಕಾಲಕ್ಕೆ ಈ ನಾಡು ಧಾರಾವಾಹಿಯಂತೆ ಕಂಡಿದೆ. ಅದೀಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಡೆ ತಿರುಗಿದೆ, ಮುಂದುವರೆದಿದೆ.
ಇದನ್ನು ಓದಿದ್ದೀರಾ?: ಗೌಡರ ಕುಟುಂಬದ ಕತೆ | ಮೂರು ತಲೆಮಾರುಗಳ ವಿಶ್ವಾಸಾರ್ಹ ಸಂಗಾತಿ- ಕಣ್ಣೀರು!
ಚನ್ನಪಟ್ಟಣದ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ದೇವೇಗೌಡರನ್ನು ನೋಡಲು ಮುದುಕರು, ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ಬೀದಿಗೆ ಬಂದಿದ್ದರು. ಈ ವಯಸ್ಸಿನಲ್ಲೂ ಇಷ್ಟೊಂದು ಚಟುವಟಿಕೆಯಿಂದಿರುವ ಗೌಡರನ್ನು, ಕೆಲವರು ಅಭಿಮಾನದಿಂದ, ಹಲವರು ಅಸೂಯೆಯಿಂದ ನೋಡುತ್ತಿದ್ದರು. ಜಾತ್ಯತೀತ ಪಕ್ಷದಲ್ಲಿ ಜಾತಿಪ್ರೀತಿಯೂ ಇಣುಕುತ್ತಿತ್ತು. ಕುಟುಂಬಪ್ರೀತಿಯಿಂದ ಕಾರ್ಯಕರ್ತರು ಕಂಗಾಲಾಗಿರುವುದೂ ಕಾಣುತ್ತಿತ್ತು.
ಹಳ್ಳಿಯ ಜನರ ಹರ್ಷೋದ್ಗಾರಕ್ಕೆ ಅರಳಿದ ದೇವೇಗೌಡರು, ‘ಕಾಂಗ್ರೆಸ್ ಸರ್ಕಾರಕ್ಕೆ ತಿಂದು ತಿಂದು ತೇಗಿ ತೇಗಿ ಅಜೀರ್ಣ ಆಗಿದೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ರು. ಈ ಸರ್ಕಾರ ತೆಗೆಯೋವರೆಗೂ ನಾನು ಮನೆಯಲ್ಲಿ ಮಲಗಲ್ಲ’ ಎಂದು ಶಪಥ ಮಾಡಿದರು.
ಭಾರತದ ರಾಜಕಾರಣ ನೈತಿಕವಾಗಿ ಎಷ್ಟೊಂದು ಅಧಃಪತನ ಕಂಡಿದೆ ಎನ್ನುವುದಕ್ಕೆ ದೇವೇಗೌಡರ ಇವತ್ತಿನ ಸ್ಥಿತಿ ಅಧ್ಯಯನಯೋಗ್ಯ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಹೊರಗೆಳೆದು ಜನರ ಮುಂದಿಡಲಿ, ತಪ್ಪಲ್ಲ. ಆದರೆ ಕಾಂಗ್ರೆಸ್ ಗಿಂತ ಅತಿಯಾದ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಮೋದಿ ಸರ್ಕಾರವನ್ನು ಟೀಕಿಸುವುದಿಲ್ಲವೇಕೆ? ಮೋದಿಯವರ ಸುಳ್ಳುಗಳು ದೇಶವನ್ನು ಅಧೋಗತಿಗೆ ತಂದು ನಿಲ್ಲಿಸಿದ್ದರೂ; ಬೆಲೆಏರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆ ಮಿತಿ ಮೀರಿದರೂ; ಆ ಬಗ್ಗೆ ಗೌಡರು ಮಾತನಾಡದಿರುವುದೇಕೆ? ತತ್ವ-ಸಿದ್ಧಾಂತಗಳನ್ನು ಗಾಳಿಗೆ ತೂರಿ, ಗುಜರಾತಿನ ಗುಜರಿ ವ್ಯಾಪಾರಿಗಳಾದ ಮೋದಿ-ಶಾರನ್ನು ಬಾಯ್ತುಂಬ ಹೊಗಳುತ್ತಿರುವುದೇಕೆ? ಇಡಿ, ಸಿಬಿಐ, ಐಟಿ ದಾಳಿಗೆ ದೇವೇಗೌಡರು ಹೆದರಿದರೇ? ತಮ್ಮನ್ನು ಪ್ರಧಾನಿಯನ್ನಾಗಿ ಮಾಡಿದ ಜನರಿಗಿಂತ ತಮ್ಮ ಕುಟುಂಬ ರಕ್ಷಣೆಯೇ ಗೌಡರಿಗೆ ಮುಖ್ಯವಾಯಿತೇ?
ಕುಟುಂಬದ ಕುಡಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದಾರೆಂಬ ಕಾರಣಕ್ಕೆ ವಯಸ್ಸು, ಆರೋಗ್ಯವನ್ನು ಬದಿಗಿಟ್ಟು ಓಡಾಡುತ್ತಿರುವ ದೇವೇಗೌಡರು, ‘ಎರಡು ಬಾರಿ ಸೋತಿದ್ದಾನೆ, ನಿಮ್ಮ ಮನೆ ಮಗನೆಂದು ಭಾವಿಸಿ, ಗೆಲ್ಲಿಸಿ’ ಎಂದು ಮಹಿಳೆಯರಿಗೆ ಕೈ ಮುಗಿಯುತ್ತಿದ್ದಾರೆ. ಆದರೆ ಮತ್ತೊಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣನ ಕೃತ್ಯದ ಬಗ್ಗೆ, ನೊಂದ ತಾಯಂದಿರ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ? ನಿಖಿಲ್, ಕುಮಾರಸ್ವಾಮಿ-ಅನಿತಾ ಅವರ ಮಗ. ಪ್ರಜ್ವಲ್, ರೇವಣ್ಣ-ಭವಾನಿಯವರ ಮಗ. ಇಬ್ಬರೂ ಗೌಡರ ಕುಟುಂಬದ ಮೂರನೇ ತಲೆಮಾರಿನ ಕುಡಿಗಳೇ ಅಲ್ಲವೇ?
ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರನ್ನು ದೌರ್ಜನ್ಯಕ್ಕೊಳಪಡಿಸಿದ್ದಾನೆ. ದೇವೇಗೌಡರೂ ಸೇರಿದಂತೆ ರೇವಣ್ಣ, ಕುಮಾರಸ್ವಾಮಿ ಮತ್ತು ಕುಟುಂಬದ ಹಿರಿಯರೆಲ್ಲರಿಗೂ ಈ ಸಂಗತಿ ಗೊತ್ತಿದ್ದೂ ಏಕೆ ಅದನ್ನು ತಡೆಯಲಿಲ್ಲ, ಕಡಿವಾಣ ಹಾಕಲಿಲ್ಲ? ಕುಟುಂಬದ ಕುಡಿಯ ರಕ್ಷಣೆಗೋಸ್ಕರ ಮಹಿಳಾ ಸಂತ್ರಸ್ತೆಯರಿಗೆ, ಇಡೀ ಸ್ತ್ರೀ ಕುಲಕ್ಕೇ ದ್ರೋಹವೆಸಗುತ್ತಿದ್ದರೂ- ಈಗಲೂ ಆ ಕುಟುಂಬ ರಾಜಕಾರಣವನ್ನೇ ಜನ ಅಪ್ಪಿಕೊಳ್ಳುವುದೇಕೆ, ಮತ ನೀಡಿ ಗೆಲ್ಲಿಸುವುದೇಕೆ, ಜಾತಿ ಪ್ರೀತಿಯೇ? ಪ್ರಜ್ವಲ್ ಕೃತ್ಯವನ್ನು ಪೆನ್ ಡ್ರೈನ್ ಗಳ ಮೂಲಕ ಬಯಲಿಗೆಳೆದ ವಕೀಲ ದೇವರಾಜೇಗೌಡ, ಇಂದು ನಿಖಿಲ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಪ್ರಜ್ವಲ್, ರೇವಣ್ಣ ಮತ್ತು ಭವಾನಿಯವರಿಗೆ ಯಾವ ಸಂದೇಶ ರವಾನಿಸಬಹುದು?
ಪ್ರಜ್ವಲ್ ರೇವಣ್ಣನ ಕೃತ್ಯ ಬರೀ ಕಾಮುಕತನದ್ದಲ್ಲ, ಮಾನವ ಕುಲಕ್ಕೇ ಅಪಮಾನ ಮಾಡುವಂತಹ ರಾಕ್ಷಸತನದ್ದು. ಇಂತಹ ವಿಕೃತಿಯನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಆತನಿಗೆ ಇದೆಲ್ಲ ಹೇಗೆ ಸಾಧ್ಯವಾಯಿತು? ಹಣ, ಅಧಿಕಾರ, ಪ್ರಭಾವ ಇದ್ದರೆ ಹೀಗೆಲ್ಲಾ ಮಾಡಬಹುದೇ? ಅದೂ ಇಷ್ಟು ಸಣ್ಣ ಹರೆಯದಲ್ಲಿ ಅನಾಯಾಸವಾಗಿ ಪಾರ್ಲಿಮೆಂಟ್ ಸದಸ್ಯನಾಗುವುದೆಂದರೆ ಸಣ್ಣ ಮಾತೇ? ಯಾವ ಅರ್ಹತೆ, ಯೋಗ್ಯತೆ ಮೇಲೆ ಈತ ಸಂಸದನಾದ? ಕೇವಲ ದೇವೇಗೌಡರ ಕುಟುಂಬದ ಕುಡಿ ಎಂಬ ಕಾರಣಕ್ಕಲ್ಲವೇ? ಪ್ರಜ್ವಲ್‍ನ ಕೃತ್ಯಕ್ಕೆ ದೇವೇಗೌಡರನ್ನೂ ಕುಮಾರಸ್ವಾಮಿಯನ್ನೂ ದೂಷಿಸಬಾರದೆಂದು ಹಲವರು ಹಲುಬುತ್ತಿದ್ದಾರೆ. ಅಷ್ಟಕ್ಕೂ ಪ್ರಜ್ವಲ್‍ನ ದುರಹಂಕಾರಕ್ಕೆ, ವಿಕೃತಿಗೆ ಮೂಲ ಕಾರಣ- ಇವರ ಹಣ, ಅಧಿಕಾರ, ಜಾತಿಯಲ್ಲವೇ?

ಪ್ರಜ್ವಲ್ ಎಂಬ ಮೊಮ್ಮಗನಿಂದ ಮಾನ ಹರಾಜು ಆದದ್ದನ್ನು ಮರೆತು, ಈಗ ಮತ್ತೊಬ್ಬ ಮೊಮ್ಮಗನ ಗೆಲುವಿಗಾಗಿ ಗೌಡರು ಊರೂರು ಸುತ್ತುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಇಲ್ಲಿಯವರೆಗೆ ಎರಡು ಚುನಾವಣೆಯಲ್ಲಿ ಸೋತಿದ್ದರೂ ಅಧಿಕೃತವಾಗಿ 113 ಕೋಟಿಗಳ ಒಡೆಯನಾಗಿರುವುದನ್ನು ಪ್ರಜ್ಞಾಪೂರ್ವಕವಾಗಿ ಮರೆತು, ಮತಯಾಚಿಸುತ್ತಿದ್ದಾರೆ.
ಇದೆಲ್ಲ ದೊಡ್ಡ ಕುಟುಂಬದ ಕತೆ ಎಂದು ಜನ ಸುಮ್ಮನಾಗಬೇಕೇ? ಪ್ರಶ್ನಿಸಿದರೆ ತಪ್ಪಾಗುತ್ತದೆಯೇ? ವಾಸ್ತವದಲ್ಲಿ ಇಷ್ಟು ಹಣ್ಣಾಗಿರುವ ಹಿರಿಯ ರಾಜಕಾರಣಿಯೊಬ್ಬರಿಂದ ಈ ನಾಡು ನಿರೀಕ್ಷಿಸುವುದೇನು?
ದೇವೇಗೌಡರದು ಪಕ್ಷ, ಜಾತಿ, ಪಂಥಗಳನ್ನು ಮೀರಿದ ಮುತ್ಸದ್ದಿತನ. ಎದುರಾಳಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ಮಾತು – ನಡವಳಿಕೆ ಅವರಿಂದ ಬರಬೇಕಿತ್ತು. ಅದರಿಂದ ರಾಜ್ಯಕ್ಕೂ ಒಳ್ಳೆಯದಾಗುತ್ತಿತ್ತು. ಏಕೆಂದರೆ, ಇಂದಿನ ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳಾಚೆಗೆ ಈ ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡುತ್ತಿಲ್ಲ. ಬಿಜೆಪಿಯ ದುರಾಡಳಿತವನ್ನು ವಿರೋಧಿಸಿ ಅಧಿಕಾರಕ್ಕೆ ಬಂದವರು ಆಡಳಿತದಲ್ಲಿ ಬಿಗಿ, ಅಧಿಕಾರಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಗೆ ಮನ್ನಣೆ, ಮುನ್ನೋಟವಿರುವ ಯೋಜನೆಗಳು- ಕಾಂಗ್ರೆಸ್ ಸರ್ಕಾರದಲ್ಲಿ ಕಾಣುತ್ತಿಲ್ಲ. ಹೀಗಿರುವಾಗ, ದೇವೇಗೌಡರು ಪಕ್ಷವನ್ನು ಮೀರಿದ ಹಿರಿತನದಿಂದ ಬುದ್ಧಿ ಹೇಳುವ ಸ್ಥಾನದಲ್ಲಿ ನಿಂತಿರಬೇಕಿತ್ತು. ಆದರೆ, ಅವರು ತಮ್ಮ ಕುಟುಂಬದ ಕುಡಿಗಳಿಗೆ ಅಧಿಕಾರ ಪಡೆದುಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲೆ ಎಂಬ ಸಂದೇಶವನ್ನಷ್ಟೇ ಕೊಡುತ್ತಿದ್ದಾರೆ. ಇದು ಅವರಿಗೂ ಶೋಭೆಯಲ್ಲ, ಕರ್ನಾಟಕದ ಏಕೈಕ ಮಾಜಿ ಪ್ರಧಾನಿ ಎಂಬ ಹೆಮ್ಮೆಗೂ ಕಳಂಕ ತರದೆ ಇರುವುದಿಲ್ಲ.

ಲೇಖಕ, ಪತ್ರಕರ್ತ