ಈ ದಿನ ವಿಶೇಷ | ದೇವೇಗೌಡರೇ, ನರೇಂದ್ರ ಮೋದಿಯವರಂಥ ಪ್ರಧಾನ ಮಂತ್ರಿಯನ್ನು ಭಾರತ ಕಂಡಿಲ್ಲವೇ?

Date:

Advertisements
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸುದೀರ್ಘ ರಾಜಕಾರಣವನ್ನು ಮತ್ತು ಪ್ರಧಾನಮಂತ್ರಿಗಳಾಗಿದ್ದ 324 ದಿನಗಳ ಕಾರ್ಯಶೈಲಿಯನ್ನು ಮಂಡ್ಯದ ನಾಗರಿಕರೊಬ್ಬರು ನೆನಪು ಮಾಡಿಕೊಂಡಿದ್ದಾರೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಕುರಿತು “ಇಂತಹ ಪ್ರಧಾನ ಮಂತ್ರಿಯನ್ನು ಭಾರತ ಕಂಡಿಲ್ಲ” ಎಂದು ಹೊಗಳುತ್ತಿರುವ ದೇವೇಗೌಡರು ಮುಟ್ಟಿರುವ ‘ಮಟ್ಟ’ವನ್ನು ಕುರಿತು ಕನಿಕರ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಕಾಲದಲ್ಲಿ ದೇವೇಗೌಡರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಓದಬೇಕಾದ ಬರೆಹ…

”ಹಿಂಸೆಯಿಂದ ಗಳಿಸಿದ್ದು ರಕ್ತಕ್ಕೆ ಸಮ, ಬೇಡಿ ಪಡೆದದ್ದು ನೀರಿಗೆ ಸಮ, ತಾನಾಗಿಯೇ ದೊರೆತದ್ದು ಹಾಲಿಗೆ ಸಮ” ಎಂಬ ಸಂತ ಕಬೀರರ ವಾಣಿಯಂತೆ, ಬದುಕಿನಲ್ಲಿ ಉತ್ತಮ ಅವಕಾಶವು ತಾನಾಗಿಯೇ ದೊರಕಬೇಕಾದರೆ, ಅದು ಅಪಾರ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಹಿನ್ನೆಲೆಯನ್ನು ಹೊಂದಿರುತ್ತದೆ. ಜಗತ್ತಿನಲ್ಲಿ ಶ್ರೇಷ್ಠತೆಯನ್ನು ಗಳಿಸಿರುವ ಪ್ರತಿಯೊಬ್ಬ ಸಾಧಕರಿಗೂ ಈ ಸಂತವಾಣಿ ಅನ್ವಯವಾಗುತ್ತದೆ. ಭಾರತದಲ್ಲಿ ಮಹಾತ್ಮ ಬುದ್ಧನಿಂದ ಮೊದಲ್ಗೊಂಡು ಅಶೋಕ, ಅಕ್ಬರ್ ಮಹಾಶಯರ ಆದಿಯಾಗಿ, ಫುಲೆ ದಂಪತಿಗಳು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಜಯಪ್ರಕಾಶ ನಾರಾಯಣ, ರಾಮಮನೋಹರ ಲೋಹಿಯಾ ಮುಂತಾದ ಮಹನೀಯರು ತಮ್ಮ ನಿರಂತರ ಪರಿಶ್ರಮದ ಮೂಲಕ ಉನ್ನತ ಅವಕಾಶಗಳು ತಾವಾಗಿಯೇ ತಮ್ಮೆಡೆಗೆ ಧಾವಿಸಿ ಬರುವಂತಹ ಐತಿಹಾಸಿಕ ಸಾಧನೆಗೈದಿದ್ದಾರೆ.

ಹಾಗೆಯೇ ಒಂದು ಸಹಕಾರ ಬ್ಯಾಂಕ್‌ನಿಂದ ತಮ್ಮ ರಾಜಕೀಯ ಯಾನವನ್ನು ಪ್ರಾರಂಭಿಸಿದ, ಎಚ್.ಡಿ ದೇವೇಗೌಡರು ಕೇವಲ 324 ದಿನಗಳು ಮಾತ್ರ ದೇಶದ ಪ್ರಧಾನ ಮಂತ್ರಿಯಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೆ ಆದ ಹೆಜ್ಜೆ ಗುರುತುಗಳೊಂದಿಗೆ ಇತಿಹಾಸವನ್ನು ನಿರ್ಮಿಸಿದ್ದಾರೆ. ಇಂತಹ ಓರ್ವ ಹಿರಿಯ ರಾಜಕಾರಣಿ, ಕಳೆದ ಹತ್ತು ವರ್ಷಗಳಿಂದಲೂ ಪ್ರಧಾನಮಂತ್ರಿಯಾಗಿ ತಾವು ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ನರೇಂದ್ರ ಮೋದಿಯವರನ್ನು “ಇಂತಹ ಪ್ರಧಾನ ಮಂತ್ರಿಯನ್ನು ಭಾರತ ಕಂಡಿಲ್ಲ” ಎಂದು ಕರೆದಿರುವುದು ಕನ್ನಡಿಗರಾದ ನಮಗೆ ಆಶ್ಚರ್ಯಕರವೆನಿಸುತ್ತದೆ.

ಪ್ರಧಾನಿಯಾದ ಹದಿನೈದು ದಿನಗಳ ಅವಧಿಯಲ್ಲಿಯೇ ದೇವೇಗೌಡರು, ಈಶಾನ್ಯ ರಾಜ್ಯಗಳ ಸ್ಥಿತಿ-ಗತಿಗಳು ಹಾಗೂ ಅಲ್ಲಿನ ಜ್ವಲಂತ ಸಮಸ್ಯೆಗಳ ಬಗೆಗೆ ಖುದ್ದು ತಿಳಿಯಲು ನಿರಂತರ ಆರು ದಿನಗಳ ಕಾಲ ಪ್ರವಾಸ ಕೈಗೊಂಡು ಅಲ್ಲಿನ ಸಾಮಾನ್ಯ ಜನರ ಜೊತೆ ಪ್ರಧಾನಿಯವರು ಮಾತನಾಡಲು, ಅವರ ಅಹವಾಲನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಕಾರ್ಯಯೋಜನೆಯನ್ನು ರೂಪಿಸಿಕೊಂಡಿದ್ದರು. ದೇವೇಗೌಡರ ಭೇಟಿಯ ವೇಳೆಯಲ್ಲಿ ಮಣಿಪುರ ರಾಜ್ಯದಲ್ಲಿ ಉಗ್ರಗಾಮಿ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಯಾವುದಕ್ಕೂ ಧೃತಿಗೆಡದ ಪ್ರಧಾನಿಯವರು ಆ ರಾಜ್ಯದ ಮುಖ್ಯಮಂತ್ರಿ ರಿಷಾಂಗ್ ಕೀಶಿಂಗ್ ಮತ್ತು ಅವರ ಮಂತ್ರಿಮಂಡಲದ ರಾಜಕೀಯ ನಾಯಕರು, ಸಾರ್ವಜನಿಕ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಮತ್ತು ಉದ್ಯಮಿಗಳ ಜೊತೆ ಸಭೆ ನಡೆಸುವುದರ ಜೊತೆಗೆ ಎರಡು ಡಜನ್‌ಗೂ ಹೆಚ್ಚು ಉಗ್ರ ಸಂಘಟನೆಗಳು ಮಣಿಪುರದ ಅಭಿವೃದ್ಧಿಗೆ ತೊಡಕಾಗಿರುವುದನ್ನು ಅರಿತು ಅದರ ಪರಿಹಾರಕ್ಕೆ ಆದ್ಯತೆ ನೀಡಿದ್ದರು. ಜೊತೆಗೆ 1997ರಲ್ಲಿ ಇಂಫಾಲ್‌ನಲ್ಲಿ ನಡೆಯಬೇಕಿದ್ದ ‘ರಾಷ್ಟ್ರೀಯ ಕ್ರೀಡೆ’ಗೆ ಅವಶ್ಯಕವಾದ ಸೌಲಭ್ಯಗಳು ಮತ್ತು ಕ್ರೀಡಾ ಗ್ರಾಮದ ಸ್ಥಾಪನೆಗೆ ಬೇಕಾದ ಅನುದಾನವನ್ನು ತಕ್ಷಣ ಮಂಜೂರು ಮಾಡಿದುದು ಹಾಗೂ ಧಿಮಾಪುರ ಮತ್ತು ಜಿರಿಬಾಮ್‌ನಿಂದ ಇಂಫಾಲ್‌ಗೆ ರಾಷ್ಟೀಯ ಹೆದ್ದಾರಿ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದುದು ಸ್ತುತ್ಯಾರ್ಹ.

Advertisements

ಆದರೆ ಇದೇ ರಾಜ್ಯದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂಗೀಯ ಘರ್ಷಣೆಗಳು ಭೀಕರ ಸ್ವರೂಪವನ್ನು ತಾಳಿ ಅಪಾರ ಸಾವು-ನೋವುಗಳಿಗೆ ಕಾರಣವಾಯಿತು. ಸಾವಿರಾರು ಮಂದಿ ನಿರಾಶ್ರಿತರಾದರು. ಭಾರತೀಯ ಸಂಸ್ಕೃತಿಯು ಅಪಾರವಾಗಿ ಗೌರವಿಸುವ ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಿಂಸಿಸುವ ಅಮಾನವೀಯ ಸ್ಥಿತಿಯನ್ನು ತಲುಪಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಕನಿಷ್ಠ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸಮಸ್ಯೆಗೆ ಪರಿಹಾರ ನೀಡುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕೊನೆ ಪಕ್ಷ ಈ ಘಟನೆಗಳ ಕುರಿತು ತಿಂಗಳುಗಟ್ಟಲೇ ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಇಂತಹ ವ್ಯಕ್ತಿಯನ್ನು, ಅನುಭವಿ ರಾಜಕಾರಣಿ ಗೌಡರು “ಇಂತಹ ಪ್ರಧಾನಮಂತ್ರಿಯನ್ನು ಭಾರತ ಕಂಡಿಲ್ಲ” ಎಂದಿರುವುದು ಹಾಸ್ಯಾಸ್ಪದವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ನಾಲ್ಕು ಸಲ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಸ್ವಾತಂತ್ರ್‍ಯ ಬಂದಾಗಿನಿಂದಲೂ ಈ ರಾಜ್ಯವನ್ನು ಕಾಡುತ್ತಿದ್ದ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ವಾಸ್ತವ ಪರಿಹಾರವನ್ನು ಹುಡುಕುವ ಅಜೆಂಡ ಗೌಡರದ್ದಾಗಿತ್ತು. ಯಾವುದೇ ರಾಜಕೀಯ ಲಾಭವನ್ನು ನಿರೀಕ್ಷಿಸದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳನ್ನು ನಡೆಸುವುದು ಗೌಡರ ಸ್ವತಃ ರಾಜಕೀಯ ಮುತ್ಸದ್ದಿತನದ ಹೊಸ ಶೋಧನೆ ಹಾಗೂ ಅನಿರೀಕ್ಷಿತ ಉತ್ಸಾಹ ಭಾವನೆಯ ಪ್ರತೀಕವಾಗಿತ್ತು. ಗೌಡರಿಗೆ ಕಾಶ್ಮೀರ ಎಂಬುದು ರಾಜಕೀಯವನ್ನು ಮೀರಿದ ವಿಷಯವಾಗಿತ್ತು. ಜಮ್ಮು-ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರುಗಳು, ಪ್ರತ್ಯೇಕತಾವಾದಿ ಗುಂಪುಗಳಿಗೆ ಮುಕ್ತವಾಗಿ ಆಹ್ವಾನ ನೀಡಿ, ತಮ್ಮ ಮುಂದೆ ಅವರೆಲ್ಲರ ಅಹವಾಲನ್ನು ತಿಳಿಸಲು ಸೂಚಿಸಿದ್ದರು. ಭಯೋತ್ಪಾದನೆಯ ಪ್ರಕ್ಷುಬ್ಧ ಸ್ಥಿತಿಯಿಂದ ಕೂಡಿದ್ದ ರಾಜ್ಯದಲ್ಲಿ ಭಾರತದ ಪ್ರಧಾನ ಮಂತ್ರಿಯೊಬ್ಬರು ತಮ್ಮನ್ನು ಮುಕ್ತವಾಗಿ ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದ ವಿಷಯ ರಾಜ್ಯದ ಒಳಗೆ ಮತ್ತು ಹೊರಗೆ ಊಹೆಗೂ ಮೀರಿದ ವಿಷಯವಾಗಿತ್ತು.

1996 ಆಗಸ್ಟ್, 5ರಂದು ಲೇಹ್, ಕಾರ್ಗಿಲ್ ಮತ್ತು ಜಮ್ಮುಗಳಿಗೆ ಭೇಟಿ ನೀಡಿ, ರಾಜೌರಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದ ನಂತರ ರಾಜೌರಿ ವಿಮಾನ ನಿಲ್ದಾಣದಿಂದ ತಾವು ಭಾಷಣ ಮಾಡಿದ ಪ್ರದೇಶದವರೆಗೆ ಸುಮಾರು ಎರಡು ಕಿ.ಮೀ. ದೂರ ತೆರೆದ ವಾಹನದಲ್ಲಿ ಸಾಗುತ್ತಾರೆ. ಆತಂಕಪೀಡಿತ ಜಮ್ಮು-ಕಾಶ್ಮೀರದಲ್ಲಿ ತೆರೆದ ವಾಹನದಲ್ಲಿ ಪ್ರಯಾಣಿಸಿದ ಭಾರತದ ಏಕೈಕ ಪ್ರಧಾನಮಂತ್ರಿ ದೇವೇಗೌಡರು ಮಾತ್ರ ಎಂಬ ಐತಿಹಾಸಿಕ ಹೆಜ್ಜೆ ಗುರುತುಗಳನ್ನು ಉಳಿಸಿದ್ದಾರೆ. ಇಂತಹ ಯಾವುದೇ ಗುರುತರವಾದ ಕೆಲಸವನ್ನೂ ಮಾಡದ ಪ್ರಧಾನಿ ಮೋದಿಯವರನ್ನು ಹೊಗಳುವುದು ಯಾಕೆ?

ಇತ್ತೀಚೆಗೆ ಲಡಾಖ್‌ ಗೆ ರಾಜ್ಯದ ಸ್ಥಾನಮಾನ ಮತ್ತು ದುರ್ಬಲವಾದ ಹಿಮಾಲಯದ ಪರಿಸರದ ರಕ್ಷಣೆಗಾಗಿ ಆಗ್ರಹಿಸಿ ಸೋನಮ್ ವಾಂಗ್ ಚುಕ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಕೈಗಾರಿಕೀಕರಣದಿಂದಾಗಿ ಹಿಮಾಲಯ ಪ್ರದೇಶಕ್ಕೆ ಹಾನಿ ಕುರಿತು ಅರಿವು ಮೂಡಿಸಲು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜನಪ್ರಿಯ ಹವಾಮಾನ ಹೋರಾಟಗಾರ ಹಾಗೂ ಶಿಕ್ಷಣ ಸುಧಾರಣಾವಾದಿ ಸೋನಮ್ ವಾಂಗ್‌ಚುಕ್ ಅವರಿಗೆ ನಗರದಲ್ಲಿನ ನಿಸರ್ಗ ಪ್ರೇಮಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾರ್ವತ್ರಿಕ ಚುನಾವಣಾ ಪ್ರಚಾರಗಳಲ್ಲಿ ತೊಡಗಿದ್ದಾರೆಯೇ ವಿನಃ ಅವರ ಯಾವ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ.

ಬಾಲಕೃಷ್ಣ, ರೇವಣ್ಣ, ಮೋದಿ, ಕುಮಾರಸ್ವಾಮಿ, ಪ್ರಜ್ವಲ್ ಮತ್ತು ದೇವೇಗೌಡ
ಬಾಲಕೃಷ್ಣ, ರೇವಣ್ಣ, ಮೋದಿ, ಕುಮಾರಸ್ವಾಮಿ, ಪ್ರಜ್ವಲ್ ಮತ್ತು ದೇವೇಗೌಡ

ಭಾರತದ ಅತೀ ಉದ್ದನೆಯ ಮತ್ತು ಏಷ್ಯಾ ಖಂಡದ ಎರಡನೇ ಅತೀ ಉದ್ದವಾದ ಸೇತುವೆ ಎಂದು ಪರಿಗಣಿಸಲ್ಪಟ್ಟಿರುವ ಬೋಗೀಬೀಲ್ ಸೇತುವೆಗೆ ಗೌಡರ ಅಧಿಕಾರಾವಧಿಯಲ್ಲಿ ಅಡಿಗಲ್ಲು ಹಾಕಿ ಮಂಜೂರಾತಿ ನೀಡಿದ್ದರು. ಡಿಸೆಂಬರ್ 2018ರಲ್ಲಿ ಈ ಸೇತುವೆ ನರೇಂದ್ರ ಮೋದಿಯವರ ಮೂಲಕ ಲೋಕಾರ್ಪಣೆಗೊಂಡಾಗ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡುವಷ್ಟು ಕನಿಷ್ಠ ಸೌಜನ್ಯ ತೋರದಿರುವುದಕ್ಕೆ ತಮ್ಮ ಸಾತ್ವಿಕ ಬೇಸರವನ್ನು ವ್ಯಕ್ತಪಡಿಸಿದ ಗೌಡರು ಇಂದು ಮೋದಿಯವರಂತ ಪ್ರಧಾನಮಂತ್ರಿಯನ್ನು ನಾನು ಕಂಡಿಲ್ಲ ಎನ್ನುತ್ತಿದ್ದಾರೆ.

ದೇವೇಗೌಡರ ಅಧಿಕಾರಾವಧಿಯಲ್ಲಿ ರೈತರು ತಮಗೆ ದೊರಕಬೇಕಾದ ಕಬ್ಬಿನ ಕನಿಷ್ಠ ಬೆಂಬಲ ಬೆಲೆ(M.S.P)ಯ ಬಾಕಿ ಮೊತ್ತವನ್ನು ಪಾವತಿಸದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಾರೆ. ತಕ್ಷಣ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಪ್ರಧಾನಿ ದೇವೇಗೌಡರು ಪ್ರತಿಭಟನೆಯಲ್ಲಿ ತೊಡಗಿದ್ದ ರೈತ ನಾಯಕರು, ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಭೆ ಕರೆದು ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದರು. ಕೇವಲ ಒಂದು ತಿಂಗಳ ಒಳಗೆ ಕಾರ್ಖಾನೆ ಮಾಲೀಕರು ರೈತರಿಗೆ 1,368 ಕೋಟಿ ರೂಪಾಯಿಗಳ ಬಾಕಿ ಪಾವತಿಸುತ್ತಾರೆ.

ಆದರೆ ದೇಶದ ರೈತರು ಕೇಂದ್ರ ಸರ್ಕಾರ ರೂಪಿಸಿದ್ದ ಅವೈಜ್ಞಾನಿಕ ಕೃಷಿ ನೀತಿಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಲೆಕ್ಕಕ್ಕೆ ಇಟ್ಟುಕೊಳ್ಳದ, ಇಂದಿಗೂ ಕೂಡ ರೈತರು ಕನಿಷ್ಠ ಬೆಂಬಲ ಬೆಲೆಗಾಗಿ ಮಾಡುತ್ತಿರುವ ಒತ್ತಾಯಕ್ಕೆ ಕಿವಿಗೊಡದೆ ರಸ್ತೆಗಳಿಗೆ ಮೊಳೆ ಹೊಡೆದು, ತಡೆಗೋಡೆ ನಿರ್ಮಿಸಿ ದೆಹಲಿಯನ್ನು ಪ್ರವೇಶಿಸದಂತೆ ನಿರ್ಬಂಧಿಸಿರುವ ಪ್ರಧಾನಿ ನರೇಂದ್ರ ಮೋದಿಯವರೆಲ್ಲಿ? ರೈತರ ಅವಶ್ಯಕತೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣದಿಂದ, ಪಂಜಾಬಿನ ರೈತರು ತಾವು ಬೆಳೆದ ಭತ್ತದ ತಳಿಯೊಂದಕ್ಕೆ ‘ದೇವೇಗೌಡ ಭತ್ತದ ತಳಿ’ ಎಂಬ ಹೆಸರಿನಿಂದ ಗುರುತಿಸುವಂತೆ ಇತಿಹಾಸ ನಿರ್ಮಿಸಿದ ಅಂದಿನ ಪ್ರಧಾನಿ ದೇವೇಗೌಡರೆಲ್ಲಿ? ಎಂಬ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗರಲ್ಲಿ ಮೂಡದೇ ಇರದು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!

ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ತಮ್ಮ ಅಲ್ಪಾವಧಿಯ ಅಧಿಕಾರದಲ್ಲಿ ಸಾಧಿಸಿ ತೋರಿಸಿರುವ ಕ್ರಿಯಾತ್ಮಕ ರಾಜಕಾರಣಿ ದೇವೇಗೌಡರು ಪ್ರಧಾನಿಯಾಗಿದ್ದಾಗ, ನರೇಂದ್ರ ಮೋದಿಯವರಿಗೆ ದೆಹಲಿಯ ಗಂಧವೇ ಗೊತ್ತಿರಲಿಲ್ಲ. ಆದರೂ ಒಮ್ಮೆಯೂ ಸಂಸತ್ತಿನ ಸದಸ್ಯತ್ವವನ್ನು ಹೊಂದದೇ ನೇರವಾಗಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಬಂದಂತಹ ನರೇಂದ್ರ ಮೋದಿಯವರನ್ನು ದೇವೇಗೌಡರು ಹೊಗಳುವುದು ಏಕೆ? ಅವರೊಡನೆ ಮೈತ್ರಿ ಮಾಡಿಕೊಂಡಿದ್ದು ಏಕೆ? ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು ಇದೇ ಮೋದಿ ಅಧ್ಯಕ್ಷತೆಯ ಪ್ರಾಧಿಕಾರ ಪದೇ ಪದೇ ಹೇಳಿದ್ದೇಕೆ? ಇದನ್ನು ದೇವೇಗೌಡರು ಪ್ರಶ್ನಿಸಬೇಕಲ್ಲವೆ? ಕರ್ನಾಟಕದ ರೈತರು ಬರಪರಿಹಾರ ಕೇಳುತ್ತಿದ್ದಾರೆ. ಆದರೆ ಮೋದಿ ಸರ್ಕಾರ ನೀಡುತ್ತಿಲ್ಲ. ಇಂತಹ ಪಕ್ಷದೊಂದಿಗೆ ಚುನಾವಣೆ ಎದುರಿಸುವುದು ಮಣ್ಣಿನ ಮಗ ಎನಿಸಿಕೊಂಡ ದೇವೇಗೌಡರಿಗೆ ಥರವೆ?

ಇಷ್ಟಾದರೂ, “ಇಂತಹ ಪ್ರಧಾನಮಂತ್ರಿಯನ್ನು ಭಾರತ ಕಂಡಿಲ್ಲ” ಎಂದು ದೇವೇಗೌಡರು ಕರೆದಿರುವುದು ತಮ್ಮ ಆಡಳಿತವನ್ನು ತಾವೇ ಅಣಕಿಸಿದಂತಲ್ಲವೇ?

-ಪೃಥ್ವಿರಾಜ್ ಬಿ.ಎಲ್. ಬೊಪ್ಪಸಮುದ್ರ, ಮಂಡ್ಯ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ಲೇಖನವನ್ನು ಮಂಡ್ಯದ ಸ್ವಾಭಿಮಾನಿ ಜನರಿಗೆ ಕರಪತ್ರದ ಮೂಲಕ ಹಂಚುವ ವ್ಯವಸ್ಥೆ ಮಾಡಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X