ಆಂಧ್ರಪ್ರದೇಶದ ಚುನಾವಣಾ ಲೆಕ್ಕಾಚಾರ ಬದಲಿಸುವರೇ ಪ್ರಶಾಂತ್ ಕಿಶೋರ್?

Date:

Advertisements

2014ರಲ್ಲಿ ನರೇಂದ್ರ ಮೋದಿಯಿಂದ ಹಿಡಿದು 2011ರಲ್ಲಿ ಮಮತಾ ಬ್ಯಾನರ್ಜಿವರೆಗೆ ಹಲವು ಪಕ್ಷಗಳಿಗೆ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಜ್ಞರಾಗಿದ್ದರು. ಒಂದು ಕಾಲದಲ್ಲಿ ಅವರು ಜೊತೆಗೂಡಿದರೆ ಆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಅದೇ ರೀತಿ, ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವ ಪಕ್ಷವನ್ನೇ ಅವರು ಆಯ್ದುಕೊಳ್ಳುತ್ತಾರೆ ಎನ್ನುವ ಆರೋಪವೂ ಇದೆ. 2024ರಲ್ಲಿ ಲೋಕಸಭಾ ಚುನಾವಣೆಯ ಜೊತೆಯಲ್ಲೇ ಆಂಧ್ರದ ವಿಧಾನಸಭಾ ಚುನಾವಣೆ ಕೂಡ ನಡೆಯಲಿರುವುದರಿಂದ ಚಂದ್ರಬಾಬು ನಾಯ್ಡು-ಪಿಕೆ ಭೇಟಿ ಅಲ್ಲಿನ ರಾಜಕಾರಣದಲ್ಲಿ ಸಣ್ಣ ಸಂಚಲನ ಉಂಟು ಮಾಡಿದೆ.  

ಆಂಧ್ರಪ್ರದೇಶದಲ್ಲಿ ಒಂದು ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದೆ. ದೇಶದ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (ಪಿಕೆ) ಅವರು ತೆಲುಗು ದೇಶಂ ಮುಖಂಡ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಖಾಸಗಿ ಜೆಟ್‌ನಲ್ಲಿ ವಿಜಯವಾಡದ ವಿಮಾನ ನಿಲ್ದಾಣಕ್ಕೆ ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಜೊತೆ ಬಂದ ಪ್ರಶಾಂತ್ ಕಿಶೋರ್, ನಂತರ ಚಂದ್ರಬಾಬು ನಾಯ್ಡು ಅವರ ಜೊತೆ ಸುಮಾರು 3 ಗಂಟೆ ಮಾತುಕತೆ ನಡೆಸಿದ್ದಾರೆ. ಇದೊಂದು ಸೌಜನ್ಯದ ಭೇಟಿ ಎಂದು ಅವರು ಹೇಳಿದ್ದರೂ, ಆಂಧ್ರಪ್ರದೇಶದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಅವರು ವಿಜಯವಾಡಕ್ಕೆ ಬಂದ ಖಾಸಗಿ ಜೆಟ್ ಬಿಜೆಪಿಯ ರಾಜ್ಯಸಭಾ ಸದಸ್ಯ ಸಿ ಎಂ ರಮೇಶ್ ಅವರಿಗೆ ಸೇರಿದ್ದು.

2024ರಲ್ಲಿ ಲೋಕಸಭಾ ಚುನಾವಣೆಯ ಜೊತೆಯಲ್ಲೇ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಕೂಡ ನಡೆಯಲಿರುವುದರಿಂದ ನಾಯ್ಡು-ಪಿಕೆ ಭೇಟಿ ಅಲ್ಲಿನ ರಾಜಕಾರಣದಲ್ಲಿ ಸಣ್ಣ ಸಂಚಲನ ಉಂಟು ಮಾಡಿದೆ. 2019ರಲ್ಲಿ ಹಾಲಿ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ ಅವರ ಪ್ರಚಾರದ ಉಸ್ತುವಾರಿ ಹೊತ್ತಿದ್ದವರು ಇದೇ ಪಿಕೆ. ಆಗ ನಾಯ್ಡು ಅವರ ಟಿಡಿಪಿ ಧೂಳೀಪಟವಾಗಿತ್ತು. 175 ವಿಧಾನಸಭಾ ಸ್ಥಾನಗಳ ಪೈಕಿ ಕೇವಲ 24 ಸ್ಥಾನಗಳನ್ನು ಗೆದ್ದಿದ್ದ ಟಿಡಿಪಿ, 25 ಲೋಕಸಭಾ ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಈಗ ಪ್ರಶಾಂತ್ ಕಿಶೋರ್ ತಮ್ಮ ಪರ ಕೆಲಸ ಮಾಡಲಿದ್ದು, ವೈಎಸ್‌ಆರ್‌ಸಿಪಿಗೆ ಸೋಲು ಖಚಿತ ಎಂದು ಟಿಡಿಪಿ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ಇಬ್ಬರ ಭೇಟಿ ಈಗಾಗಲೇ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Advertisements

ಪ್ರಶಾಂತ್ ಕಿಶೋರ್

ಸದ್ಯ ಟಿಡಿಪಿಯ ಚುನಾವಣಾ ತಂತ್ರಗಾರಿಕೆಯ ಉಸ್ತುವಾರಿಯನ್ನು ‘ಶೋ ಟೈಮ್ ಕನ್ಸಲ್ಟಿಂಗ್’ ಸಂಸ್ಥೆಯು ಹೊತ್ತಿದೆ. ಈ ಹಿಂದೆ ಪಿಕೆ ಜೊತೆ ಕೆಲಸ ಮಾಡುತ್ತಿದ್ದ ರಾಬಿನ್ ಶರ್ಮಾ ಮತ್ತು ಶಂತನು ಸಿಂಗ್ ಅವರ ಸಂಸ್ಥೆ ಅದು. ಪ್ರಶಾಂತ್ ಕಿಶೋರ್ ಕೂಡ ಅವರ ಜೊತೆ ಸೇರಿ ಟಿಡಿಪಿ ಪರವಾಗಿ ಚುನಾವಣಾ ತಂತ್ರಗಾರಿಕೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರ ‘ಯುವ ಗಳಂ’ ಪಾದಯಾತ್ರೆಯ ಚಿಂತನೆ ಕೂಡ ಪ್ರಶಾಂತ್ ಕಿಶೋರ್ ಅವರದ್ದೇ ಎನ್ನಲಾಗುತ್ತಿದೆ. ನಾರಾ ಲೋಕೇಶ್ ‘ಯುವ ಗಳಂ’ ಹೆಸರಿನಲ್ಲಿ 226 ದಿನಗಳಲ್ಲಿ 97 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 3000 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದರು.

ವಿಪಕ್ಷದ ಕಥೆ ಇದಾದರೆ, ಆಡಳಿತಾರೂಢ ಪಕ್ಷವಾದ ವೈಎಸ್‌ಆರ್‌ಸಿಪಿಯ ವಾದ ಭಿನ್ನವಾದದ್ದು. ಅವರು ಟಿಡಿಪಿ ಹಾಗೂ ವೈಎಸ್‌ಆರ್‌ಸಿಪಿಯ ಚುನಾವಣಾ ತಯಾರಿಯ ಹೋಲಿಕೆ ಮಾಡುತ್ತಿದ್ದಾರೆ. 2019ರಲ್ಲಿ ಜಗನ್‌ಮೋಹನ್ ರೆಡ್ಡಿ ಈಗ ನಾರಾ ಲೋಕೇಶ್ ಮಾಡಿದ ಪಾದಯಾತ್ರೆಗಿಂತ ಹೆಚ್ಚು, ಅಂದರೆ, 341 ದಿನಗಳಲ್ಲಿ 115 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 3600 ಕಿಮೀ ಪಾದಯಾತ್ರೆ ಮಾಡಿದ್ದರು.

ಯುವ ಗಳಂ

ವೈಎಸ್‌ಆರ್‌ಸಿಪಿಯ ವಿಧಾನಸಭಾ ಹಾಗೂ ಲೋಕಸಭಾ ಚುನಾವಣಾ ಪ್ರಚಾರದ ಹೊಣೆ ಹೊತ್ತಿರುವುದು ಐ-ಪ್ಯಾಕ್ (ದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ). ವಿಚಿತ್ರವೆಂದರೆ, ಪ್ರಶಾಂತ್ ಕಿಶೋರ್, ಐ ಪ್ಯಾಕ್‌ನ ಸಹಸಂಸ್ಥಾಪಕರು. ಅವರು ಮೇ 2022ರಲ್ಲಿ ‘ಜನ್ ಸುರಾಜ್’ ಪಕ್ಷವನ್ನು ಕಟ್ಟಿದ ನಂತರ ಐ ಪ್ಯಾಕ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ವೈಮನಸ್ಯ ಉಂಟಾಗಿತ್ತು. ಪ್ರಶಾಂತ್ ಕಿಶೋರ್ ಐ ಪ್ಯಾಕ್ ಹಣವನ್ನು ತನ್ನ ಪಕ್ಷಕ್ಕೆ ವಿನಿಯೋಗಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ನಂತರ ಅವರು ಐ ಪ್ಯಾಕ್‌ನಿಂದ ದೂರವಾಗಿದ್ದರು.

ಪ್ರಶಾಂತ್ ಕಿಶೋರ್ ವಿಚಿತ್ರ ಹವ್ಯಾಸಗಳಿರುವ ಮನುಷ್ಯ. ಅವರು ಟಿವಿ ನ್ಯೂಸ್ ನೋಡುವುದು, ಪತ್ರಿಕೆ ಓದುವುದು ಅಪರೂಪ. ಅವರು ಇ ಮೇಲ್ ಬಳಸುವುದಿಲ್ಲ; ಲ್ಯಾಪ್‌ಟಾಪ್ ಮುಟ್ಟುವುದಿಲ್ಲ. ಅವರು ಬಳಸುವ ಏಕೈಕ ಗ್ಯಾಜೆಟ್ ಅಂದರೆ, ಅದು ಫೋನ್ ಮಾತ್ರ.

2014ರಲ್ಲಿ ಮೋದಿಯಿಂದ ಹಿಡಿದು 2011ರಲ್ಲಿ ಮಮತಾ ಬ್ಯಾನರ್ಜಿವರೆಗೆ ಹಲವು ಪಕ್ಷಗಳಿಗೆ, ಹಲವು ನಾಯಕರಿಗೆ ಅವರು ಚುನಾವಣಾ ತಂತ್ರಜ್ಞರಾಗಿದ್ದರು. ಒಂದು ಕಾಲದಲ್ಲಿ ಅವರು ಜೊತೆಗೂಡಿದರೆ ಆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಅದೇ ರೀತಿ, ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವ ಪಕ್ಷವನ್ನೇ ಅವರು ಆಯ್ದುಕೊಳ್ಳುತ್ತಾರೆ ಎನ್ನುವ ಆರೋಪವೂ ಇದೆ. ಇದರಾಚೆಗೂ ಜನರನ್ನು ಪ್ರಭಾವಿಸುವ ಹಾಗೂ ಚುನಾವಣೆ ಗೆಲ್ಲುವ ಕಲೆ ಕರಗತ ಮಾಡಿಕೊಂಡಿರುವ ವ್ಯಕ್ತಿ ಎನ್ನುವ ಖ್ಯಾತಿ ಅವರಿಗಿದೆ.

prashanth kishor

ಹಿಂದೊಮ್ಮೆ ಚಂದ್ರಬಾಬು ನಾಯ್ಡು ಅವರು ಪಿಕೆ ಅವರನ್ನು ‘ಬಿಹಾರದ ಡಕಾಯಿತ’ ಎಂದಿದ್ದರು. ಜಗನ್‌ ಸರ್ಕಾರದಿಂದ ಹಲವು ರೀತಿ ಪೆಟ್ಟು ತಿಂದು, ಅಧಿಕಾರ ಗದ್ದುಗೆ ಹಿಡಿಯಲೇಬೇಕೆನ್ನುವ ಜಿದ್ದಿಗೆ ಬಿದ್ದಿರುವ ನಾಯ್ಡು ಈಗ ಅವರನ್ನೇ ತಮ್ಮ ಪಕ್ಷದ ಗೆಲುವಿಗಾಗಿ ಆಶ್ರಯಿಸಿದ್ದಾರೆ. ಅವರ ಸಲಹೆಯ ಮೊರೆ ಹೋಗಿದ್ದಾರೆ. ತೆಲಂಗಾಣದ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಶಾಂತ್ ಕಿಶೋರ್, ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಸಿಆರ್ ಅವರನ್ನು ಭೇಟಿ ಮಾಡಿದ್ದರು. ಆದರೆ, ನಂತರ ಅವರು ಕೆಸಿಆರ್‌ ಪರವಾಗಿ ಕೆಲಸ ಮಾಡಿದ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ. ಈಚೆಗೆ ನಡೆದ ಚುನಾವಣೆಯಲ್ಲಿ ಕೆಸಿಆರ್ ಅವರ ಬಿಆರ್‌ಎಸ್ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.

ಚಂದ್ರಬಾಬು ನಾಯ್ಡು ಹಾಗೂ ಪ್ರಶಾಂತ್ ಕಿಶೋರ್ ಭೇಟಿಯಿಂದ ಆಂಧ್ರದ ರಾಜಕಾರಣದಲ್ಲಿಯೂ ಹೆಚ್ಚೇನೂ ಬದಲಾವಣೆಯಾಗುವುದಿಲ್ಲ ಎಂದು ಐ ಪ್ಯಾಕ್ ವಿಶ್ವಾಸ ವ್ಯಕ್ತಪಡಿಸಿದೆ. ‘ಕಳೆದೊಂದು ವರ್ಷದಿಂದ ಐ ಪ್ಯಾಕ್ ವೈಎಸ್‌ಆರ್‌ಸಿಪಿ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿದೆ. ನಾವು ಜಗನ್ ಅವರನ್ನು 2024ರಲ್ಲಿ ಮತ್ತೆ ಅಧಿಕಾರಕ್ಕೆ ತರಲು ಅವಿರತ ಶ್ರಮಿಸುತ್ತಿದ್ದು, ರಾಜ್ಯದ ಜನರ ಜೀವನವನ್ನು ಉತ್ತಮ ಪಡಿಸಲು ಅಚಲ ಪ್ರಯತ್ನಗಳನ್ನು ಮುಂದುವರೆಸುತ್ತಾ ದಣಿವರಿಯದೇ ಕೆಲಸ ಮಾಡುತ್ತಿದ್ದೇವೆ’ ಎಂದು ಐ ಪ್ಯಾಕ್ ಪ್ರತಿಕ್ರಿಯೆ ನೀಡಿದೆ.

ಈ ಸುದ್ದಿ ಓದಿದ್ದೀರಾ: ‘ಸಲಾರ್’ ಕನ್ನಡ ಚಿತ್ರದ ರೀಮೇಕ್ ಎಂದ ಪ್ರೇಕ್ಷಕರು; ಸಕ್ಸಸ್ ಮುಖ್ಯ ಎಂದ ಪ್ರಶಾಂತ್ ನೀಲ್

ಟಿಡಿಪಿ ವಲಯದಲ್ಲಿ ಮಾತ್ರ ಹೊಸ ಹುಮ್ಮಸ್ಸು ಕಾಣುತ್ತಿದೆ. ಟಿಡಿಪಿಯ ಸಾಧ್ಯತೆಗಳನ್ನು ಪಿಕೆ ಹೆಚ್ಚಿಸುತ್ತಾರೆ, ಅವರ ಅನುಭವ ಹಾಗೂ ಪರಿಣತಿ ಚುನಾವಣಾ ಸಮಯದಲ್ಲಿ ಹೆಚ್ಚು ಕೆಲಸಕ್ಕೆ ಬರಲಿದೆ ಎನ್ನುವ ವಿಶ್ವಾಸ ಆ ಪಕ್ಷದ ನಾಯಕರಲ್ಲಿದೆ. ಈ ಭೇಟಿ ಬಗ್ಗೆ ಸಹಜವಾಗಿಯೇ ವೈಎಸ್‌ಆರ್‌ಸಿಪಿ ವ್ಯಂಗ್ಯವಾಡಿದೆ. ಆಂಧ್ರದ ನೀರಾವರಿ ಸಚಿವ ಎ ರಾಮಬಾಬು ಈ ಬಗ್ಗೆ ಪ್ರತಿಕ್ರಿಯಿಸಿ, ‘ಕಟ್ಟಡ ಸಾಮಗ್ರಿಯ ಗುಣಮಟ್ಟವೇ ಸರಿಯಿಲ್ಲದೇ ಇದ್ದರೆ ಮೇಸ್ತ್ರಿ ತಾನೇ ಏನು ಮಾಡಲು ಸಾಧ್ಯ’ ಎಂದು ನುಡಿದಿದ್ದಾರೆ.

ಇಷ್ಟರ ನಡುವೆಯೂ, ಪ್ರಶಾಂತ್ ಕಿಶೋರ್, ಮುಂಬರುವ ಚುನಾವಣೆಯಲ್ಲಿ ಟಿಡಿಪಿ ಪರವಾಗಿ ಕೆಲಸ ಮಾಡುವರೇ, ಆಂಧ್ರಪ್ರದೇಶದ ಚುನಾವಣಾ ಲೆಕ್ಕಾಚಾರವನ್ನು ಬದಲಾಯಿಸುವರೇ ಎನ್ನುವ ಕುತೂಹಲವಂತೂ ರಾಜಕೀಯ ವಲಯದಲ್ಲಿದೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ಲೇಖನದಲ್ಲಿ ಪ್ರಶಾಂತ್ ಕಿಶೋರ್ ಅವರ ಆಂಧ್ರಪ್ರದೇಶದ ರಾಜಕೀಯದಲ್ಲಿ ಪಾತ್ರವನ್ನು ವಿಶ್ಲೇಷಿಸಲಾಗಿದೆ 🤔. ಅವರ ಚುನಾವಣಾ ತಂತ್ರಗಳು ಹೇಗೆ ಆ ರಾಜ್ಯದ ಚುನಾವಣಾ ವಾತಾವರಣವನ್ನು ಬದಲಿಸಬಹುದು ಎಂಬುದರ ಕುರಿತು ಚರ್ಚೆ ನಡೆದಿದೆ. ಈ ಲೇಖನವು ಕೇವಲ ಒಂದು ಭೇಟಿಯ ವಿವರಣೆಯನ್ನು ಮೀರಿ ಆಂಧ್ರಪ್ರದೇಶದ ರಾಜಕೀಯ ವ್ಯವಸ್ಥೆಯ ಮುಂದಿನ ಚಲನವಲನಗಳ ಸಾಧ್ಯತೆಗಳನ್ನು ತಿಳಿಯಪಡಿಸುತ್ತದೆ. ಈ ಚುನಾವಣಾ ರಣತಂತ್ರಗಳು ಹೇಗೆ ಆಂಧ್ರಪ್ರದೇಶದ ರಾಜಕೀಯವನ್ನು ಬದಲಿಸಬಹುದು ಎಂಬುದು ಓದುಗರಿಗೆ ತಿಳಿಯಲು ಪ್ರಚೋದನೀಯವಾಗಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X