ಪ್ರೀಮಿಯಂ ಲೇಖನ | ಮುಸ್ಲಿಮರಿಗೆ ಇರುವ ಪರ್ಯಾಯ ಆಯ್ಕೆಗಳೇನು?

Date:

ಯಾವುದೇ ಪಂಚತಾರಾ ಹೋಟೆಲಿನ ಕೋಣೆಗಳಲ್ಲಿ ಕುಳಿತು ಪವರ್ ಪಾಯಿಂಟ್‌ ಪ್ರೆಸೆಂಟೇಶನ್ ಮೂಲಕ ಪರ್ಯಾಯ ಪಕ್ಷಗಳನ್ನು ಕಟ್ಟಲಾಗುವುದಿಲ್ಲ. ರಾಜಕೀಯ ಸಂಘರ್ಷದಲ್ಲಿ ಚುನಾವಣಾ ಕಣದಲ್ಲೇ ಪರ್ಯಾಯ ಪಕ್ಷಗಳು ಹುಟ್ಟುತ್ತವೆ. ಅಥವಾ ದುರ್ಬಲ ಹಳೇ ಪಕ್ಷಗಳೇ ಹೊಸ ಶಕ್ತಿಶಾಲಿ ಪರ್ಯಾಯವಾಗಿ ಉದಯಿಸುತ್ತವೆ.

ದಾವಣಗೆರೆ ವಿಧಾನಸಭಾ ಉಪಚುನಾವಣೆಯ ವಿದ್ಯಮಾನಗಳು ಕಾಂಗ್ರೆಸ್‌ ಪಕ್ಷ ಮತ್ತು ಅದರ ಪ್ರಮುಖ ‘ವೋಟ್‌ ಬ್ಯಾಂಕ್‌’ ಆದ ಮುಸ್ಲಿಂ ಸಮುದಾಯದ ಮಧ್ಯೆ ಸಂಘರ್ಷವೊಂದನ್ನು ಹುಟ್ಟು ಹಾಕಿದೆ. ದಾವಣಗೆರೆ ಉಪಚುನಾವಣೆಯ ರಾಜಕೀಯ ಸಮರವನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‌ ಪಕ್ಷ ಆರಂಭದಿಂದಲೇ ಎಡವಿದೆ. ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಮೊದಲ ಪ್ರಕ್ರಿಯೆಯಲ್ಲೇ ಕಾಂಗ್ರೆಸ್‌ ಎಡವಿರುವುದು ಸ್ಪಷ್ಟವಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬವನ್ನು ಹೊರತುಪಡಿಸಿ ದಾವಣಗೆರೆಯ ಬಹುತೇಕ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಅಹಿಂದ ವರ್ಗದವರಿಗೆ ಟಿಕೆಟ್‌ ನೀಡಿ ಎಂದು ಸ್ಪಷ್ಟವಾಗಿ ಒತ್ತಾಯ ಮಾಡಿದ್ದರು. ‘ಶಾಮನೂರು ಕುಟುಂಬದಲ್ಲಿ ಪತಿ ಸಚಿವರಾಗಿದ್ದಾರೆ, ಪತ್ನಿ ಲೋಕಸಭಾ ಸದಸ್ಯರಾಗಿದ್ದಾರೆ. ಅವರ ಮಗನಿಗೆ ಎಮ್ಮೆಲ್ಲೆ ಟಿಕೆಟ್ ನೀಡಬೇಡಿ. ಪಕ್ಷದ ಯಾವುದೇ ಮುಸ್ಲಿಂ ಕಾರ್ಯಕರ್ತರಿಗೆ ನೀಡಿ. ಅಥವಾ ಅಹಿಂದ ಸಮುದಾಯಕ್ಕೆ ನೀಡಿ. ಅದು ಸಾಧ್ಯವಿಲ್ಲ ಎಂದಾದರೆ ಲಿಂಗಾಯತ ಸಮುದಾಯಕ್ಕೆ ನೀಡಿ’ ಎಂದು ಅಬ್ದುಲ್‌ ಜಬ್ಬಾರ್‌ ಸಹಿತ ದಾವಣಗೆರೆಯ ಅಹಿಂದ ನಾಯಕರು ಪತ್ರಿಕಾಗೋಷ್ಠಿ ಮಾಡಿ ಬಹಿರಂಗವಾಗಿಯೇ ಒತ್ತಾಯಿಸಿದ್ದರು. ಮುಸ್ಲಿಂ ಸಮುದಾಯದಲ್ಲಿ ಅಬ್ದುಲ್‌ ಜಬ್ಬಾರ್‌ ಮಾತ್ರವಲ್ಲ ಇತರ ಹಲವು ಸ್ಥಳೀಯ ಮುಸ್ಲಿಂ ನಾಯಕರೂ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

- Advertisement -

ಪಕ್ಷದ ಒಳಗಿನ ಈ ಆಗ್ರಹದ ಬಗ್ಗೆ ಕಾಂಗ್ರೆಸ್ ಇನ್ನೂ ನಿರ್ಧಾರ ಕೈಗೊಂಡಿರಲಿಲ್ಲ. ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಹೈಕಮಾಂಡ್‌ ಪ್ರತಿನಿಧಿಯ ಸಮ್ಮುಖದಲ್ಲಿ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ಸಭೆ ನಿಗದಿಯಾಗಿತ್ತು. ಅದಕ್ಕೂ ಎರಡು ದಿನ ಮೊದಲೇ, ಶನಿವಾರದಂದು ಕಾಂಗ್ರೆಸ್‌ ಸಂಸದೆ ಪ್ರಭಾ ಮಲ್ಲಿಕಾರ್ಜುನ ತಮ್ಮ ಮಗ ಸಮರ್ಥನನ್ನು ಕರೆದೊಯ್ದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಎರಡು ನಾಮಪತ್ರಗಳನ್ನು ಸಮರ್ಥ ಶಾಮನೂರು ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಇದನ್ನು ಓದಿದ್ದೀರಾ? ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಬಿರುಸಿನ ಮತದಾನ ಆರಂಭ

ಇದು ಪಕ್ಷದ ನಾಯಕತ್ವದ ವಿರುದ್ಧದ ಮೊದಲ ಬಂಡಾಯವಾಗಿತ್ತು. ಪಕ್ಷದ ಜವಾಬ್ದಾರಿಯುತ ಸಂಸತ್‌ ಸದಸ್ಯರೇ ಈ ಬಂಡಾಯದ ನಾಯಕತ್ವ ವಹಿಸಿದ್ದರು. ಸಂಪುಟ ದರ್ಜೆಯ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ ಈ ಬಂಡಾಯಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ಪಕ್ಷದ ಶಿಸ್ತಿನ ಬಗ್ಗೆ ಈಗ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗಲೀ, ಹೈಕಮಾಂಡಿನ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಆಗಲಿ ಆಗ ಉಸಿರೆತ್ತಲಿಲ್ಲ. ಈ ಬಂಡಾಯದ ವಿರುದ್ಧ ಒಂದು ಶಬ್ದವನ್ನೂ ಮಾತನಾಡಲಿಲ್ಲ. ಶಾಮನೂರು ಕುಟುಂಬ ಬಹಿರಂಗವಾಗಿ ಹೈಕಮಾಂಡಿಗೆ ಈ ಮೂಲಕ ಸವಾಲು ಹಾಕಿತ್ತು. ಪಕ್ಷದ ಹೈಕಮಾಂಡ್‌ ಅನ್ನು ಬ್ಲ್ಯಾಕ್‌ಮೇಲ್‌ ಮಾಡುವ ಪ್ರಯತ್ನ ಎಂಬಂತೆ ಇದು ಎದ್ದು ಕಾಣುತ್ತಿತ್ತು.
ಶಾಮನೂರು ಕುಟುಂಬದ ಈ ಬ್ಲ್ಯಾಕ್‌ಮೇಲ್‌ ತಂತ್ರಕ್ಕೆ ಕೊನೆಗೂ ಹೈಕಮಾಂಡ್‌ ಮಣಿಯಿತು. ಸಮರ್ಥ ಶಾಮನೂರ್‌ಗೆ ಟಿಕೆಟ್‌ ಪ್ರಕಟಿಸಿತು.

ಆ ಬಳಿಕ ನಡೆದದ್ದು ಎರಡನೇ ಬಂಡಾಯ. ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರೇ ಈ ಬಂಡಾಯದ ನೇತೃತ್ವ ವಹಿಸಿದ್ದರು. 84 ಸಾವಿರ ಮತದಾರರನ್ನು ಹೊಂದಿದ್ದ ಅತಿ ದೊಡ್ಡ ಸಮುದಾಯ– ಮುಸ್ಲಿಂ ಸಮುದಾಯ ಟಿಕೆಟ್‌ ಕೇಳಿದ್ದು ಸಹಜವೇ ಆಗಿತ್ತು. ಅದಕ್ಕೂ ಮೊದಲು 30 ವರ್ಷಗಳ ಕಾಲ ಇದೇ ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಹಿಂದೆ ಬಂಡೆಯಂತೆ ನಿಂತಿತ್ತು. ಅವರ ಗೆಲುವಿಗೆ ಅಹರ್ನಿಶಿ ದುಡಿದಿತ್ತು. ಅವರ ನಿಧನದ ಬಳಿಕವಷ್ಟೇ ಮುಸ್ಲಿಂ ಸಮುದಾಯ ಮೊದಲ ಬಾರಿಗೆ ಸಮುದಾಯಕ್ಕೆ ಟಿಕೆಟ್‌ ಕೇಳಿತ್ತು. ಮುಸ್ಲಿಮರಿಗೆ ಕೊಡುವುದಿಲ್ಲ ಎಂದಾದರೆ ಅಹಿಂದ ನಾಯಕರಿಗೆ ಕೊಡಿ ಎಂದೂ ಸಮಾಧಾನದಿಂದ ಹೇಳಿತ್ತು.

ಚುನಾವಣೆ ನಡೆಯಿತು. 12ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ನಾಮಪತ್ರ ಸಲ್ಲಿಸಿ ಕಣಕ್ಕಿಳಿದರು. ಅದರಲ್ಲಿ 7 ಮಂದಿ ಕೊನೆಯವರೆಗೂ ಗಟ್ಟಿಯಾಗಿ ನಿಂತು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗೆ ಸ್ಪರ್ಧೆ ಒಡ್ಡಿದರು. ಮುಸ್ಲಿಂ ಸಮುದಾಯದ ನೂರಾರು ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದರು. ಎಸ್‌ಡಿಪಿಐ ಕೂಡಾ ತನ್ನ ಅಭ್ಯರ್ಥಿಯನ್ನು ಹಾಕಿ ಚುನಾವಣೆಯನ್ನು ಕುತೂಹಲದ ಕಣವಾಗಿಸಿತು. ಕಾಂಗ್ರೆಸ್ಸಿನ ನಡೆಯಿಂದ ಸಿಟ್ಟಿಗೆದ್ದಿದ್ದ ಸಹಸ್ರಾರು ಮುಸ್ಲಿಮರು ಈ ಪಕ್ಷೇತರ ಅಭ್ಯರ್ಥಿಗಳು ಮತ್ತು ಎಸ್‌ಡಿಪಿಐ ಅಭ್ಯರ್ಥಿಗೆ ಮತ ಹಾಕಿದರು.

ಉಗುರು ಕೀಳಲು ಕೊಡಲಿ ತಂದರು!

ಚುನಾವಣೆಯಲ್ಲಿ ಇದೆಲ್ಲ ಸಹಜ ವಿದ್ಯಮಾನ. ಈ ಹಿಂದೆ ಇಂತಹ ಹಲವು ಅನಧಿಕೃತ ಮತ್ತು ಅಧಿಕೃತ ಬಂಡಾಯಗಳನ್ನು ಕಾಂಗ್ರೆಸ್‌ ಪಕ್ಷ ಸಮಾಧಾನದಿಂದಲೇ ಎದುರಿಸಿದೆ. ಕೆಲವು ಕಡೆ ಗೆದ್ದಿದೆ, ಕೆಲವು ಕಡೆ ಸೋತಿದೆ.
ಆದರೆ ದಾವಣಗೆರೆಯ ಚುನಾವಣೆ ಮುಗಿದು ಇನ್ನೂ ಎರಡು ದಿನಗಳಾಗಿಲ್ಲ, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲೇ ಕಾಂಗ್ರೆಸ್ಸಿನ ಮುಸ್ಲಿಂ ಮುಖಂಡರಾದ ಸಲೀಂ ಅಹ್ಮದ್‌ ಮತ್ತು ರಿಜ್ವಾನ್‌ ಅರ್ಷದ್‌ ಪತ್ರಿಕಾಗೋಷ್ಠಿ ಮಾಡಿದರು. ದಾವಣಗೆರೆಯಲ್ಲಿ ಪಕ್ಷದ ಕೆಲವು ಮುಸ್ಲಿಂ ಮುಖಂಡರೇ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ತಕ್ಷಣ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಕೆಲವು ಮುಸ್ಲಿಂ ನಾಯಕರ ವಿರುದ್ಧ ಕಾರ್ಯಾಚರಣೆ ಶುರು ಮಾಡಿತು. ಮೊದಲ ತಲೆದಂಡ ಅಬ್ದುಲ್‌ ಜಬ್ಬಾರ್‌ ಅವರದ್ದು. ಎರಡನೇ ಬಾರಿ ವಿಧಾನ ಪರಿಷತ್‌ ಸದಸ್ಯರಾಗಿರುವ ಅಬ್ದುಲ್‌ ಜಬ್ಬಾರ್‌, ದಾವಣಗೆರೆಯಲ್ಲಿ ಹಿಂದೆ ಶಿವಶಂಕರಪ್ಪ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರೂ ಆಗಿದ್ದು ಪಕ್ಷದೊಳಗೆ ಮುಸ್ಲಿಂ ಸಮುದಾಯದ ಗಟ್ಟಿ ಧ್ವನಿಯಾಗಿದ್ದವರು. ಅಧ್ಯಕ್ಷತೆಗೆ ಅವರು ರಾಜೀನಾಮೆ ನೀಡಿದರು. ಅದರ ಬೆನ್ನಲ್ಲೇ ಇಡೀ ಅಲ್ಪಸಂಖ್ಯಾತ ಘಟಕವನ್ನೇ ಕೆಪಿಸಿಸಿ ಅಧ್ಯಕ್ಷರು ವಿಸರ್ಜಿಸಿದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅಬ್ದುಲ್‌ ಜಬ್ಬಾರ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಲಾಯಿತು.

ಅದರ ಬೆನ್ನಲ್ಲೇ ಪಕ್ಷದ ಇನ್ನೊಬ್ಬ ರಾಜ್ಯ ಮಟ್ಟದ ಮುಸ್ಲಿಂ ನಾಯಕ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ವಿರುದ್ಧ ಕೆಪಿಸಿಸಿ ಕಾರ್ಯಾಚರಣೆ ನಡೆಯಿತು. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಯಿಂದ ಅವರನ್ನು ವಜಾ ಮಾಡಲಾಯಿತು. ಅಷ್ಟಕ್ಕೇ ಕೆಪಿಸಿಸಿ ಸುಮ್ಮನಾಗಲಿಲ್ಲ. ಪಕ್ಷದ ಪ್ರಭಾವಶಾಲಿ ಮುಖಂಡ ಸಚಿವ ಜಮೀರ್‌ ಅಹ್ಮದ್‌ ವಿರುದ್ಧವೂ ಕ್ರಮ ಕೈಗೊಳ್ಳುವ ಸುದ್ದಿ ಹಬ್ಬಿತು. ಈ ಲೇಖನ ಬರೆಯುವ ಹೊತ್ತಿಗೆ ಜಮೀರ್‌ ಮೇಲಿನ ತೂಗುಕತ್ತಿ ಇನ್ನೂ ತೂಗಾಡುತ್ತಿದೆ.

ಚುನಾವಣೆಯ ಫಲಿತಾಂಶ ಇನ್ನೂ ಬಂದಿಲ್ಲ. ಕಾಂಗ್ರೆಸ್‌ ಭಯಂಕರ ಶಿಸ್ತಿನ ಪಕ್ಷದಂತೆ ಮುಸ್ಲಿಂ ಮುಖಂಡರ ವಿರುದ್ಧ ಕತ್ತಿ ಜಳಪಿಸುತ್ತಿದೆ! ಪಕ್ಷದಲ್ಲಿ ಶಿಸ್ತು ಮುಖ್ಯ; ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ ಯಾರನ್ನೂ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಘೋಷಿಸಿದ್ದಾರೆ. ಒಂದು ರೀತಿಯಲ್ಲಿ ಅಮೆರಿಕದ ವಾಯುಪಡೆ ಇರಾನಿನ ಮೇಲೆ ಮುಗಿಬಿದ್ದಂತೆ ಕೆಪಿಸಿಸಿ ಮುಸ್ಲಿಂ ನಾಯಕರ ಮೇಲೆ ಮುಗಿಬಿದ್ದಿದೆ.

ಇದರ ಬೆನ್ನಲ್ಲೇ ರಾಜ್ಯದಾದ್ಯಂತ ಮುಸ್ಲಿಮರು ಕಾಂಗ್ರೆಸ್‌ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ಸಿನ ಈ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಧರ್ಮಗುರುಗಳೂ ಪ್ರೆಸ್‌ಮೀಟ್‌ ಮಾಡಿ ನಸೀರ್‌ ಅಹ್ಮದ್‌ ಮತ್ತು ಜಬ್ಬಾರ್‌ ವಿರುದ್ಧದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಕಾಂಗ್ರೆಸ್‌ಗೆ ನಿಷ್ಠಾವಂತ ಸೇವೆ ಸಲ್ಲಿಸುತ್ತಿರುವ ಹಲವು ಜಿಲ್ಲೆಗಳ ಮುಸ್ಲಿಂ ಕಾರ್ಯಕರ್ತರು ಪಕ್ಷದ ಈ ಕ್ರಮಗಳನ್ನು ಮುಸ್ಲಿಮರ ವಿರುದ್ಧ ಸೇಡಿನ ಕ್ರಮ ಎಂದು ಬಣ್ಣಿಸುತ್ತಿದ್ದಾರೆ. ಕಾಂಗ್ರೆಸ್‌ನ ಸದೃಢ ವೋಟ್‌ ಬ್ಯಾಂಕ್‌ ಆಗಿರುವ ಮುಸ್ಲಿಂ ಸಮುದಾಯದಲ್ಲಿ ಕಾಂಗ್ರೆಸ್ಸಿನ ವಿರುದ್ಧ ಅತೃಪ್ತಿ, ಅಸಮಾಧಾನ ಮಡುಗಟ್ಟಿದೆ. ಮುಸ್ಲಿಂ ಸಮುದಾಯದ ಒಳಗೇ ಪರ್ಯಾಯ ರಾಜಕೀಯ ಪಕ್ಷಗಳನ್ನು ಬಲಪಡಿಸುವ ಕುರಿತು ಚರ್ಚೆ ಶುರುವಾಗಿದೆ.

ಇದನ್ನು ಓದಿದ್ದೀರಾ? ದಾವಣಗೆರೆ | ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಎಂಎಲ್ಸಿ ಜಬ್ಬಾರ್ ಸಾಬ್ ಅಮಾನತು

ಉಪಚುನಾವಣೆಯ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರೇ ಕೆಪಿಸಿಸಿಯ ಈ ಉಗ್ರ ಕ್ರಮಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮುಸ್ಲಿಂ ಮುಖಂಡರ ವಿರುದ್ಧದ ಈ ಏಕಪಕ್ಷೀಯ ಹಠಾತ್‌ ಕ್ರಮಗಳ ಬಗ್ಗೆ ಹಿರಿಯ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಪ್ರಭಾವಶಾಲಿ ಸಚಿವ ಪ್ರಿಯಾಂಕ್‌ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿಗೆ ಒಂದು ಶಿಸ್ತು ಸಮಿತಿ ಇದೆ. ಪಕ್ಷದ ಹಿರಿಯ ನಾಯಕ ಕೆ. ರೆಹ್ಮಾನ್‌ ಖಾನ್‌ ಈ ಶಿಸ್ತು ಸಮಿತಿಯ ಅಧ್ಯಕ್ಷರು. ಈ ಇಡೀ ಪ್ರಕರಣದಲ್ಲಿ ಅವರನ್ನು ಯಾರೂ ಕ್ಯಾರೇ ಅಂದ ಹಾಗೆ ಕಾಣಿಸುತ್ತಿಲ್ಲ. ಶಿಸ್ತು ಸಮಿತಿಯ ಗಮನಕ್ಕೂ ತರದೆ ಈ ಎಲ್ಲ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗಿದೆ!

ಕಾಂಗ್ರೆಸ್ಸಿನಲ್ಲಿ ಇರುವುದೇ ಹತ್ತು ಮಂದಿ ಮುಸ್ಲಿಂ ಶಾಸಕರು. ಸದ್ಯಕ್ಕೆ ಕೆಪಿಸಿಸಿ ಯ ಅತಿದೊಡ್ಡ ಸಾಧನೆಯೆಂದರೆ ಈ ಶಾಸಕರನ್ನು ಮೂರು ಗುಂಪುಗಳನ್ನಾಗಿ ಒಡೆದಿರುವುದು. ಪರಸ್ಪರ ಮುಸ್ಲಿಂ ಮುಖಂಡರನ್ನೇ ಒಡೆದಾಳುವ ಮೂಲಕ ಮುಸ್ಲಿಂ ವೋಟ್‌ ಬ್ಯಾಂಕನ್ನು ಸ್ವತಃ ಪಕ್ಷವೇ ದುರ್ಬಲಗೊಳಿಸುತ್ತಿದೆ!

ಮುಸ್ಲಿಮರ ಪರ್ಯಾಯ ಹುಡುಕಾಟ:

ಸದ್ಯಕ್ಕೆ ಮುಸ್ಲಿಂ ಸಮುದಾಯದಲ್ಲಿ ಪರ್ಯಾಯ ರಾಜಕೀಯ ಹುಡುಕಾಟದ ಪ್ರಕ್ರಿಯೆ ಶುರುವಾಗಿದೆ. ಮುಖ್ಯವಾಗಿ ಯುವಜನಾಂಗ ಈ ಬಗ್ಗೆ ಸೋಶ್ಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನು ಆರಂಭಿಸಿದೆ. ಕಾಂಗ್ರೆಸ್‌ ಪಕ್ಷಕ್ಕೇ ಜೋತು ಬೀಳುವ ಬದಲು, ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ನಾಯಕರನ್ನು ಬೆಳೆಸುವ ಬಗ್ಗೆ ಯೋಚನೆ ಶುರುವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಪ್ರಯೋಗ ಆರಂಭವಾಗುವ ಸೂಚನೆಗಳಿವೆ.

ಈ ಪರ್ಯಾಯ ನಾಯಕತ್ವದ ಹುಡುಕಾಟ ಬಹಳ ಹಿಂದೆಯೇ ಶುರುವಾಗಬೇಕಿತ್ತು. ಆದರೆ ಬಿಜೆಪಿಯ ಉಗ್ರ ಹಿಂದುತ್ವದ ಭಯದಿಂದಾಗಿ ಬಹುತೇಕ ಮುಸ್ಲಿಮರು ಅನಿವಾರ್ಯವಾಗಿ ಕಾಂಗ್ರೆಸ್ಸಿಗೇ ವೋಟ್ ಹಾಕುತ್ತಾ ಬಂದಿದ್ದರು. ನಡುವೆ ಜೆಡಿಎಸ್‌ ಒಂದು ಪರ್ಯಾಯವಾಗಿ ಸ್ವಲ್ಪ ಮಾನ್ಯತೆ ಪಡೆದಿತ್ತು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಿಜೆಪಿಯ ಸಖ್ಯ ಸಾಧಿಸಿದ ಹಿನ್ನೆಲೆಯಲ್ಲಿ ಮುಸ್ಲಿಮರು ಈಗ ಆ ಪಕ್ಷವನ್ನು ಪರ್ಯಾಯವಾಗಿ ಪರಿಗಣಿಸುವ ಸಾಧ್ಯತೆ ಕಾಣಿಸುತ್ತಿಲ್ಲ.

ದಾವಣಗೆರೆಯಲ್ಲಿ ಕಾಂಗ್ರೆಸ್ ಮೇಲಿನ ಸಿಟ್ಟಿನಿಂದಾಗಿ ಸಾವಿರಾರು ಕಾಂಗ್ರೆಸ್‌ ಬೆಂಬಲಿಗರು ಎಸ್‌ಡಿಪಿಐ ಅಭ್ಯರ್ಥಿಗೆ ಮತ ಚಲಾಯಿಸಿದ್ದು ಕಂಡು ಬಂದಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಕೇವಲ 1900 ಮತಗಳನ್ನು ಪಡೆದಿತ್ತು. ಆದರೆ ಈ ಸಲ ಅದರ ಅಭ್ಯರ್ಥಿಯ ಮತ ಗಳಿಕೆಯ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿರುವುದು ಮತದಾನದ ದಿನ ಕಂಡು ಬಂದಿದೆ.

ರಾಜ್ಯದಲ್ಲಿ ಮುಸ್ಲಿಂ ಮತದಾರರನ್ನು ಸೆಳೆಯಲು ಒವೈಸಿ ಅವರ ಎಂಐಎಂ ಪಕ್ಷ ಪ್ರಯತ್ನಿಸುತ್ತಿದೆ. ಒಂದೆರಡು ಪಾಲಿಕೆಗಳಲ್ಲಿ ಒವೈಸಿ ಪಕ್ಷ ಕೆಲವು ಸ್ಥಾನಗಳನ್ನೂ ಗೆದ್ದಿದೆ. ಇನ್ನುಳಿದಂತೆ ಮುಸ್ಲಿಮರು ಮುಸ್ಲಿಂ ಲೀಗ್‌, ಕಮ್ಯುನಿಸ್ಟ್‌ ಪಕ್ಷಗಳು, ಆಮ್‌ ಆದ್ಮಿ ಪಕ್ಷ, ಕೆಆರ್‌ಎಸ್‌ ಬಗ್ಗೆಯೂ ಯೋಚಿಸುತ್ತಿದ್ದಾರೆ. ಸಿಎಂ ಇಬ್ರಾಹಿಂ ನೇತೃತ್ವದ ಹೊಸ ಪಕ್ಷವೂ ಮುಸ್ಲಿಮರ ಮತಗಳಿಕೆಗೆ ಕಣ್ಣು ಹಾಕಿದೆ.

ರಾಜ್ಯದ ಮುಸ್ಲಿಮರಿಗೆ ಕಾಂಗ್ರೆಸ್‌ ಅನಿವಾರ್ಯ ಎಂದು ಮುಸ್ಲಿಮರ ಒಂದು ವರ್ಗ ಈಗಲೂ ಹೇಳುತ್ತಿದೆ. ಅದಕ್ಕೆ ಅವರು ನೀಡುತ್ತಿರುವ ಕಾರಣಗಳು ಹಲವಾರಿವೆ. ಮುಖ್ಯವಾಗಿ ತಮಿಳ್ನಾಡು, ಉತ್ತರಪ್ರದೇಶ, ಕೇರಳ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಇರುವಂತೆ ಬಲಿಷ್ಠ ಪರ್ಯಾಯ ಪಕ್ಷಗಳು ಯಾವುದೂ ಕರ್ನಾಟಕದಲ್ಲಿ ಇಲ್ಲ. ಅಂತಹ ಯಾವುದಾದರೂ ಪಕ್ಷ ಇದ್ದರೆ ಮುಸ್ಲಿಮರು ಕಾಂಗ್ರೆಸ್ಸನ್ನು ಕಸದ ಬುಟ್ಟಿಗೆ ಎಸೆಯುವುದು ಖಂಡಿತಾ ಎಂದು ಅವರು ಹೇಳುತ್ತಿದ್ದಾರೆ.

ನಾವು ಗಮನಿಸಬೇಕಾದ ಸಂಗತಿಯೆಂದರೆ, ಯಾವುದೇ ಪಂಚತಾರಾ ಹೋಟೆಲ್ಲಿನ ಕೋಣೆಗಳಲ್ಲಿ ಕುಳಿತು ಪವರ್ ಪಾಯಿಂಟ್‌ ಪ್ರೆಸೆಂಟೇಶನ್ ಮೂಲಕ ಪರ್ಯಾಯ ಪಕ್ಷಗಳನ್ನು ಕಟ್ಟಲಾಗುವುದಿಲ್ಲ. ರಾಜಕೀಯ ಸಂಘರ್ಷದಲ್ಲಿ ಚುನಾವಣಾ ಕಣದಲ್ಲೇ ಪರ್ಯಾಯ ಪಕ್ಷಗಳು ಹುಟ್ಟುತ್ತವೆ. ಅಥವಾ ದುರ್ಬಲ ಹಳೇ ಪಕ್ಷಗಳೇ ಹೊಸ ಪರ್ಯಾಯವಾಗಿ ಉದಯಿಸುತ್ತವೆ.

ಕರ್ನಾಟಕದ ಮುಸ್ಲಿಮರು ಹೊಸ ರಾಜಕೀಯ ಪರ್ಯಾಯವೊಂದರ ಹುಡುಕಾಟ ಆರಂಭಿಸಿರುವುದು ಸ್ವಾಗತಾರ್ಹ ಸಂಗತಿಯೇ. ರಾಜ್ಯದ ಒಕ್ಕಲಿಗ ಸಮುದಾಯ ಮತ್ತು ಕುರುಬ ಸಮುದಾಯ ಈಗಾಗಲೇ ಹಲವು ಪಕ್ಷಗಳಲ್ಲಿ ನೆಲೆ ಕಂಡುಕೊಂಡು ಗರಿಷ್ಠ ರಾಜಕೀಯ ಲಾಭವನ್ನು ಪಡೆದುಕೊಂಡಿವೆ. ಆದರೆ ಈ ಸಮುದಾಯಗಳು ಬಿಜೆಪಿಯನ್ನು ಅಪ್ಪಿಕೊಂಡಂತೆ ಮುಸ್ಲಿಮರು ಒಪ್ಪಿಕೊಳ್ಳಲು ತಯಾರಿಲ್ಲ. ಹಾಗಾಗಿ ಅವರಿಗೆ ಆಯ್ಕೆಗಳು ಕಡಿಮೆಯೇ ಇವೆ. ಆದರೆ ಒಂದು ಮಾತು ಈ ಸಂದರ್ಭದಲ್ಲಿ ಗಟ್ಟಿಯಾಗಿ ಹೇಳಬಹುದು. ಮುಸ್ಲಿಮರು ಕಾಂಗ್ರೆಸ್‌ ಜೊತೆಗೇ ಇತರ ಪರ್ಯಾಯ ಪಕ್ಷಗಳಿಗೂ ಮತ ಹಾಕಿದರೆ ಅದರಿಂದ ಕಾಂಗ್ರೆಸ್ಸಿಗೂ ಲಾಭವಿದೆ; ಮುಸ್ಲಿಮರಿಗೂ ಲಾಭವಿದೆ.

ಬಿಜೆಪಿಯು ಕಾಂಗ್ರೆಸ್‌ ಕುರಿತು ಒಂದು ಜನಪ್ರಿಯ ನೆರೇಷನ್‌ ಅನ್ನು ಇತ್ತೀಚಿನ ವರ್ಷಗಳಲ್ಲಿ ಬಲವಾಗಿ ಪ್ರಚಾರ ಮಾಡುತ್ತಿದೆ. ‘ಕಾಂಗ್ರೆಸ್‌ ಮುಸ್ಲಿಮರ ಪಕ್ಷ’ ಎನ್ನುವುದೇ ಆ ನೆರೇಷನ್‌. ಬಿಜೆಪಿಯ ಈ ತಪ್ಪು ಪ್ರಚಾರ ಹಿಂದೂ ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರಲು ಮುಸ್ಲಿಂ ಸಮುದಾಯದ ರಾಜಕೀಯ ನಡೆಗಳೂ ಒಂದು ಕಾರಣವಾಗಿದೆ. ಕಾಂಗ್ರೆಸ್ಸಿನ ಮೆರವಣಿಗೆ ಮತ್ತು ಸಭೆಗಳಲ್ಲಿ ಮುಸ್ಲಿಮರೇ ದೊಡ್ಡ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿ ನಿಂತಿರುತ್ತಾರೆ. ಹೀಗಾಗಿ ಬಿಜೆಪಿಯ ಈ ತಪ್ಪು ಪ್ರಚಾರ ಹೆಚ್ಚು ಬಲ ಪಡೆದುಕೊಳ್ಳುತ್ತಿದೆ. ಮುಸ್ಲಿಮರು 224 ಅಸೆಂಬ್ಲಿ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಹಾಕುವುದು ರಾಜಕೀಯವಾಗಿ ವ್ಯರ್ಥ ಕಸರತ್ತು. ಗೆಲ್ಲಿಸಬೇಕಾದ ಕಡೆ ಕಾಂಗ್ರೆಸ್‌ ಮತ ಹಾಕುವುದರ ಜೊತೆಗೇ, ಬಿಜೆಪಿ ಹೊರತಾದ ಬೇರೆ ಪಕ್ಷಗಳು ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಮುಸ್ಲಿಮರು ಆ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಹೊಸ ಪರ್ಯಾಯದ ಹುಡುಕಾಟಗಳನ್ನು ಸಮರ್ಥವಾಗಿ ನಡೆಸಬಹುದು. ಇದರಿಂದ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯವೂ ಹೆಚ್ಚಾಗಲಿದೆ.

ಶೀಘ್ರ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಮರು ಇದರ ಪ್ರಯೋಗವನ್ನು ಮಾಡಬಹುದು. ಉದಾಹರಣೆಗೆ ಬೆಂಗಳೂರಿನ ಪಾಲಿಕೆಗಳಲ್ಲಿ ಸುಮಾರು 35 ವಾರ್ಡ್‌ಗಳಲ್ಲಿ ಮುಸ್ಲಿಮರು ತಮಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ. 50ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ತಮಗೆ ಬೇಡವಾದವರನ್ನು ಸೋಲಿಸುವ ಸಾಮರ್ಥ್ಯವೂ ಮುಸ್ಲಿಂ ಸಮುದಾಯಕ್ಕಿದೆ. ಆದರೆ ಈ ಕುರಿತು ಸೂಕ್ತ ರಾಜಕೀಯ ಶಿಕ್ಷಣ ಮುಸ್ಲಿಮರಲ್ಲಿ ಇಲ್ಲವಾಗಿದೆ. ಹಾಗೆಯೇ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ ಪಾಲಿಕೆಗಳಲ್ಲೂ ಈ ರೀತಿಯ ಪರ್ಯಾಯ ರಾಜಕೀಯ ಆಯ್ಕೆಯ ಪ್ರಯೋಗಗಳನ್ನು ನಡೆಸುವ ಸಾಧ್ಯತೆಗಳು ಮುಸ್ಲಿಮರ ಎದುರಿಗಿದೆ.

ಮುಸ್ಲಿಮರು ಕಾಂಗ್ರೆಸನ್ನು ಪೂರ್ಣವಾಗಿ ತಿರಸ್ಕರಿಸಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಕಾಂಗ್ರೆಸ್‌ ಮೂರನೇ ಅಥವಾ ನಾಲ್ಕನೇ ಸ್ಥಾನದಲ್ಲಿರುವ ಪಾಲಿಕೆ ವಾರ್ಡ್‌ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರು ಕಣ್ಣುಮುಚ್ಚಿ ಕಾಂಗ್ರೆಸ್‌ಗೆ ವೋಟ್‌ ಹಾಕುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಜಾತ್ಯತೀತ ಮನೋಭಾವದ, ಸಾಮಾಜಿಕ ನ್ಯಾಯದ ಪರವಾಗಿರುವ ಬೇರೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆಗೂ ಮುಸ್ಲಿಮರು ಗಮನ ಹರಿಸಬೇಕಿದೆ. ಇದರಿಂದ ಕಾಂಗ್ರೆಸ್ಸಿಗೂ, ಮುಸ್ಲಿಮರಿಗೂ ರಾಜಕೀಯವಾಗಿ ಒಳಿತಾಗಲಿದೆ.

b m hanif
ಬಿ ಎಂ ‌ ಹನೀಫ್
+ posts

ಹಿರಿಯ ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಬಿ ಎಂ ‌ ಹನೀಫ್
ಬಿ ಎಂ ‌ ಹನೀಫ್
ಹಿರಿಯ ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ ಸಂಸದರ ಧ್ವನಿ ಕ್ಷೀಣ!

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು...