ಸಿನಿಮಾದಲ್ಲಿ ಮುಖ್ಯಮಂತ್ರಿ ಆಗೋದು ಸುಲಭ. ಸಿಎಂ ಆಗಿ ಕ್ರಾಂತಿಕಾರಿ ಭಾಷಣ ಮಾಡೋದು ಸುಲಭ. ಏಕೆಂದರೆ ಅಲ್ಲಿ ಎಲ್ಲವೂ ಸಿದ್ಧಪಡಿಸಿದ ಚಿತ್ರಕಥೆಯಂತೆಯೇ ಸಾಗಬೇಕು. ಆದರೆ ನಿಜಜೀವನದಲ್ಲಿ ಸಿಎಂ ಆಗಿ ಕೆಲಸ ನಿರ್ವಹಿಸುವುದು ಕಷ್ಟ. ಆಕರ್ಷಕ ಭಾಷಣ ಮಾಡಬಹುದು. ಆಡಳಿತದ ಸವಾಲುಗಳನ್ನು ಸ್ಕ್ರಿಪ್ಟ್ ಇಲ್ಲದೇ ನಿಭಾಯಿಸಬೇಕು.
ಜನಪ್ರಿಯ ಚಿತ್ರನಟ ಜೋಸೆಫ್ ವಿಜಯ್ ಕೊನೆಗೂ ಬಹುಮತ ಸಾಧಿಸಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಶುಭಾಶಯಗಳು ವಿಜಯ್.
ತಮಿಳುನಾಡಿನ ರಾಜಕೀಯ ಸಿನಿಮಾ ಪ್ರಭಾವಳಿಯಿಂದ ಯಾವತ್ತೂ ಮುಕ್ತವಾಗಿಲ್ಲ. ಎಂ.ಜಿ.ಆರ್ ಕಾಲದಿಂದಲೂ ಅದು ಢಾಳಾಗಿ ಕಾಣಿಸುತ್ತಾ ಇದೆ. ಈಗ ವಿಜಯ್ ಕಾಲದಲ್ಲೂ ಆ ಪ್ರಭಾವಳಿ ಮುಂದುವರಿದಿದೆ.
ನಾಸ್ತಿಕ ಮುಖ್ಯಮಂತ್ರಿ ಸ್ಟಾಲಿನ್ ಅವರ ಕೈಯಿಂದ ಈಗ ಅಧಿಕಾರದ ಚುಕ್ಕಾಣಿ ಸರ್ವಧರ್ಮಪ್ರಿಯ ವಿಜಯ್ ಕೈಗೆ ಬಂದಿದೆ. Practicing Christian ಆಗಿರುವ ವಿಜಯ್ ಚುನಾವಣೆಯಲ್ಲಿ, ಅತಿದೊಡ್ಡ ಪಕ್ಷದ ಫಲಿತಾಂಶ ಪಡೆದ ಬೆನ್ನಲ್ಲೇ ದೇವಸ್ಥಾನ, ದರ್ಗಾ ಮತ್ತು ಚರ್ಚ್‌ಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
ವಿಜಯ್ ಸೆಕ್ಯುಲರ್ ಆಡಳಿತ ನೀಡುತ್ತಾರೆ, ಯಾವ ಧಾರ್ಮಿಕ extremismಗೂ ಅವಕಾಶ ಕೊಡುವುದಿಲ್ಲ. ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ಕೂಡಾ ಬೆಂಬಲಕ್ಕೆ ನಿಂತಿದೆ. ಹೊಸ ಸರ್ಕಾರ ಓಕೆ- ಎಂದು ಎಡ, ಮಧ್ಯಮ ಉದಾರವಾದಿಗಳು ಸಂತೋಷ ಪಡುತ್ತಿದ್ದಾರೆ.
ವಿಜಯ್ ಸಂಪುಟದಲ್ಲಿ ನಿರ್ಮಲ ಕುಮಾರ್ ಎಂಬ ಸಚಿವರಿದ್ದಾರೆ. ಇವರು ಟಿವಿಕೆ ಪಕ್ಷದ ಐಟಿ ಸೆಲ್ ಮುಖ್ಯಸ್ಥರಾಗಿದ್ದವರು. ಹಿಂದೆ ಬಿಜೆಪಿಯಲ್ಲಿದ್ದರು. ಅಣ್ಣಾಡಿಎಂಕೆ ಗೆ ಕೆಲಸ ಮಾಡಿದ್ದಾರೆ. ಇವರು ಈಗಲೂ ಆರೆಸ್ಸೆಸ್ ಸಿದ್ಧಾಂತವಾದಿ. ಮಾತ್ರವಲ್ಲ ವಿಜಯ್ ವಿಚಾರಗಳ ಮೇಲೆ ಹೆಚ್ಚು ಪ್ರಭಾವ ಬೀರುವವರು- ಎಂದು ಆರೆಸ್ಸೆಸ್‌ನ ಬೆಂಬಲಿಗರು ಒಳಗಿಂದೊಳಗೇ ಖುಷಿಪಡುತ್ತಿದ್ದಾರೆ.
ಆಡಳಿತದ ವಿಷಯದಲ್ಲಿ ವಿಜಯ್ ಅನನುಭವಿ. ಇದರಲ್ಲಿ ಎರಡು ಮಾತಿಲ್ಲ. ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನದ ಮಧ್ಯೆಯೇ ವಿಜಯ್ ವೀರಾವೇಶದ ಭಾಷಣ ಶುರು ಮಾಡಿದ್ದು ಮತ್ತು ಅದಕ್ಕೆ ರಾಜ್ಯಪಾಲರು ಬ್ರೇಕ್ ಹಾಕಿದ್ದು ನೋಡಿದರೆ, ವಿಜಯ್ ಆಡಳಿತದಲ್ಲಿ ಸಾಗಬೇಕಾದ ದಾರಿ ಬಹಳ ದೂರವಿದೆ ಎನ್ನುವುದು ಸ್ಪಷ್ಟವಾಗಿದೆ.
ಈ ಮಧ್ಯೆ ಒಂದು interesting ಸುದ್ದಿಯೂ ಬಂದಿದೆ. ಪ್ರಮಾಣ ವಚನ ಸಮಾರಂಭದಲ್ಲಿ ‘ವಂದೇ ಮಾತರಂ’ ನ ಆರೂ ಚರಣಗಳನ್ನು ಹಾಡಿ ಬಳಿಕ ರಾಷ್ಟ್ರಗೀತೆ ಹಾಡಲಾಗಿದೆ. ಇದು ಬಿಜೆಪಿ/ಆರೆಸ್ಸೆಸ್ ನ ಐಡಿಯಾಲಜಿ ಮತ್ತು ರಾಜಕೀಯ ತಂತ್ರ. ಇದನ್ನೇ ವಿಜಯ್ ಫಾಲೊ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಕಾರ ಬಂದಿದೆ. ಸುವೇಂದು ಅಧಿಕಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲಿ ಸಮಾರಂಭದಲ್ಲಿ ರಾಷ್ಟ್ರಗೀತೆ ಮಾತ್ರ ಹಾಡಲಾಗಿದೆ. ವಂದೇ ಮಾತರಂ ಇರಲಿಲ್ಲ. ಆದರೆ ತಮಿಳುನಾಡಲ್ಲಿ ವಂದೇ ಮಾತರಂ ಪ್ರಾಮುಖ್ಯತೆ ಪಡೆಯಲು ಏನು ಕಾರಣ ಎಂದು ಈಗ ಹಲವರು ಪ್ರಶ್ನೆ ಎತ್ತಿದ್ದಾರೆ. ಇದರ ಹಿಂದೆ ಸಚಿವ ನಿರ್ಮಲ್ ಕುಮಾರ್ ಕೈವಾಡ ಇದೆ ಎನ್ನುವ ಅನುಮಾನಗಳಿವೆ.
ಸಿನಿಮಾದಲ್ಲಿ ಮುಖ್ಯಮಂತ್ರಿ ಆಗೋದು ಸುಲಭ. ಸಿಎಂ ಆಗಿ ಕ್ರಾಂತಿಕಾರಿ ಭಾಷಣ ಮಾಡೋದು ಸುಲಭ. ಏಕೆಂದರೆ ಅಲ್ಲಿ ಎಲ್ಲವೂ ಸಿದ್ಧಪಡಿಸಿದ ಚಿತ್ರಕಥೆಯಂತೆಯೇ ಸಾಗಬೇಕು. ಆದರೆ ನಿಜಜೀವನದಲ್ಲಿ ಸಿಎಂ ಆಗಿ ಕೆಲಸ ನಿರ್ವಹಿಸುವುದು ಕಷ್ಟ. ಆಕರ್ಷಕ ಭಾಷಣ ಮಾಡಬಹುದು. ಆಡಳಿತದ ಸವಾಲುಗಳನ್ನು ಸ್ಕ್ರಿಪ್ಟ್ ಇಲ್ಲದೇ ನಿಭಾಯಿಸಬೇಕು.
2018 ರಲ್ಲಿ ವಿಜಯ್ ಹೀರೋ ಆಗಿದ್ದ “ಸರ್ಕಾರ್” ಎನ್ನುವ ಒಂದು ಸಿನಿಮಾ ಬಂದಿತ್ತು. ಅದರಲ್ಲಿ ಇದೇ ರೀತಿಯ ಸನ್ನಿವೇಶ ಒಂದಿದೆ. ಆ ಸಿನಿಮಾದಲ್ಲಿ ಸುಂದರ್ ರಾಮಸ್ವಾಮಿ ಎನ್ನುವ ಅನಿವಾಸಿ ಉದ್ಯಮಿಯ ಪಾತ್ರವನ್ನು ವಿಜಯ್ ನಿರ್ವಹಿಸಿದ್ದಾರೆ.
ವಿದೇಶದಿಂದ ತಮಿಳ್ನಾಡಿಗೆ ಮರಳುವ ಈ ಅನಿವಾಸಿ ಉದ್ಯಮಿ, ಇಲ್ಲಿನ ರಾಜಕೀಯ ಭ್ರಷ್ಟಾಚಾರವನ್ನು ನೋಡಿ ರೋಸಿ ಹೋಗಿ ಹೊಸ ಪಕ್ಷ ಕಟ್ಟುತ್ತಾನೆ. ಆ ಪಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತದೆ. ಆದರೆ ಅಧಿಕಾರ ಕೈಗೆ ತೆಗೆದುಕೊಳ್ಳುವ ಸಂದರ್ಭ ಬಂದಾಗ ಆ ಉದ್ಯಮಿ ತಾನು ಸಿಎಂ ಆಗೋದಿಲ್ಲ. ಅದರ ಬದಲಾಗಿ ಚುನಾವಣೆಯಲ್ಲಿ ನಿಂತು ಗೆದ್ದ ನಿಷ್ಠಾವಂತ ಐಎಎಸ್ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುತ್ತಾನೆ. ಘಜನಿ ಖ್ಯಾತಿಯ ಎ.ಆರ್. ಮುರುಗಾದಾಸ್ ನಿರ್ದೇಶಿಸಿದ ಚಿತ್ರವದು.

ಸಿನಿಮಾದಲ್ಲಿ ಇದೆಲ್ಲವೂ ಸುಲಭ. ಏಕೆಂದರೆ ಅಲ್ಲೊಂದು ಸಿದ್ಧವಾದ ಚಿತ್ರಕಥೆ ಇರುತ್ತದೆ. ಆದರೆ ನೈಜ ರಾಜಕೀಯ ಜೀವನದ ಸವಾಲುಗಳೇ ಬೇರೆ ಇದೆ. ಅಲ್ಲಿ ರಾಜಕೀಯ ಐಡಿಯಾಲಜಿಯ ಸಂಘರ್ಷ ಇರುತ್ತದೆ. ಹೆಜ್ಜೆ ಹೆಜ್ಜೆಗೂ ಹುಳುಕು ಹುಡುಕುವ ವಿರೋಧ ಪಕ್ಷ ಇರುತ್ತದೆ. ವೋಟು ಹಾಕಿದ ಮತದಾರರ ಭಾರೀ ನಿರೀಕ್ಷೆಗಳಿರುತ್ತವೆ. ರಾಜ್ಯದ ಸ್ವಾಯತ್ತೆಗೆ ಸವಾಲು ಒಡ್ಡುವ ಕೇಂದ್ರ ಸರಕಾರ ಇರುತ್ತದೆ.
ತಮಿಳ್ನಾಡಿನಲ್ಲಿ ಆರು ದಶಕಗಳಿಂದ ರಾಜ್ಯವಾಳಿದ್ದು ಡ್ರಾವಿಡ ಸರಕಾರಗಳು. ಕೇಂದ್ರದ ಹಿಂದೀ ಸರ್ಕಾರದ ಜೊತೆಗೆ ಈವರೆಗೆ ನಡೆದಿರುವ ಡ್ರಾವಿಡ ಸಂಘರ್ಷಗಳು ಒಂದೆರಡಲ್ಲ. ದ್ವಿಭಾಷಾ ನೀತಿ ಮತ್ತು ಜನಗಣತಿ ಆಧಾರಿತ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಯ ಎರಡು ದೊಡ್ಡ ಸವಾಲುಗಳು ಈಗಲೂ ತಮಿಳ್ನಾಡಿನ ಎದುರಿಗೆ ಜೀವಂತವಾಗಿವೆ. ಈ ಸವಾಲುಗಳನ್ನು ವಿಜಯ್ ನೇತೃತ್ವದ ಟಿವಿಕೆ ಸಮ್ಮಿಶ್ರ ಸರಕಾರ ಹೇಗೆ ಎದುರಿಸುತ್ತದೆ ಎನ್ನುವುದು ಕುತೂಹಲಕರ ಸಂಗತಿ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ಈಗಾಗಲೇ ಘೋಷಿಸಿರುವ ಗ್ಯಾರಂಟಿ ಕೊಡುಗೆಗಳಿಗೆ ವಾರ್ಷಿಕ ಒಂದು ಲಕ್ಷ ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಮೊದಲ ದಿನವೇ 200 ಯುನಿಟ್ ಉಚಿತ ವಿದ್ಯುತ್ ಕಡತಕ್ಕೆ ಮುಖ್ಯಮಂತ್ರಿ ವಿಜಯ್ ಸಹಿ ಹಾಕಿದ್ದಾರೆ. ಹಣಕಾಸಿನ ಹೊರೆ ಹೆಚ್ಚಿಸುವ ಉಳಿದ ಘೋಷಣೆಗಳನ್ನು ಹೊಸ ಮುಖ್ಯಮಂತ್ರಿ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಆರ್ಥಿಕ ಪರಿಸ್ಥಿತಿ ಹೇಗಿದೆ?
2026-27ರ ಮಧ್ಯಂತರ ಬಜೆಟನ್ನು ಈಗಾಗಲೇ ಸ್ಟಾಲಿನ್ ಮಂಡಿಸಿದ್ದಾರೆ. ಅದರ ವಿವರಗಳನ್ನು ಗಮನಿಸಿದರೆ ತಮಿಳ್ನಾಡು ಸರಕಾರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ಎನ್ನುವುದು ಎದ್ದು ಕಾಣಿಸುತ್ತಿದೆ.
ತಮಿಳುನಾಡಿನ 2026-27 ನೇ ಸಾಲಿನ ಬಜೆಟ್ ಗಾತ್ರ 4.67 ಲಕ್ಷ ಕೋಟಿ ರೂಪಾಯಿ. ಸರಕಾರಕ್ಕೆ ಈ ಆರ್ಥಿಕ ವರ್ಷದಲ್ಲಿ ಬರಲಿರುವ ಅಂದಾಜು ಆದಾಯ 3.45 ಲಕ್ಷ ಕೋಟಿ ರೂಪಾಯಿ ಮಾತ್ರ.
ಇದರಲ್ಲಿ ಸರಕಾರ ನಡೆಸೋದಕ್ಕೆ (Revenue expenditure) 3.93 ಲಕ್ಷ ಕೋಟಿ ರೂಪಾಯಿ ಬೇಕು. ಅದರ ಜೊತೆಗೆ ಸ್ಟಾಲಿನ್ ಸರಕಾರ ಅಭಿವೃದ್ಧಿ ಖರ್ಚಿಗೆ (capital expenditure) 59 ಸಾವಿರ ಕೋಟಿ ರೂಪಾಯಿ ಬೇಕು ಎಂದು ತೆಗೆದಿಟ್ಟಿದೆ.
ಈ ಹಿನ್ನೆಲೆಯಲ್ಲಿ ಈ ವರ್ಷ 1.79 ಲಕ್ಷ ಕೋಟಿ ರೂಪಾಯಿ ಸಾಲ ಮಾಡುವುದಾಗಿ ಸ್ಟಾಲಿನ್ ಸರಕಾರ ಹೇಳಿದೆ. ಈಗಾಗಲೆ ರಾಜ್ಯ ಸರ್ಕಾರದ ಮೇಲಿನ ಒಟ್ಟು ಸಾಲದ ಮೊತ್ತ 10.71 ಲಕ್ಷ ಕೋಟಿ ರೂಪಾಯಿ ಇದೆ.
ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮಂಡಿಸಲಿರುವ ಪೂರ್ಣಾವಧಿ ಬಜೆಟ್ ಹೇಗಿರಲಿದೆ? ಹೊಸ ಆದಾಯ ಎಲ್ಲಿಂದ ತರುತ್ತಾರೆ? ಹೊಸ ಸರ್ಕಾರದ ಹೊಸ ಗ್ಯಾರಂಟಿಗಳ ಸಲುವಾಗಿ ಒಂದು ಲಕ್ಷ ಕೋಟಿ ರೂಪಾಯಿ ಹೇಗೆ ಹೊಂದಿಸುತ್ತಾರೆ? ಇದೆಲ್ಲವೂ ಮುಂದಿರುವ ಪ್ರಶ್ನೆಗಳು.
ಕೇಂದ್ರ ಸರ್ಕಾರವು ಹಿಂದೆ ಡಿಎಂಕೆ ಸರ್ಕಾರದ ಹಲವು ಅನುದಾನಗಳಿಗೆ ಕತ್ತರಿ ಹಾಕಿತ್ತು. ಬಿಜೆಪಿ ಆಡಳಿತದ ರಾಜ್ಯ ಸರಕಾರಗಳಿಗೆ ನೀಡಿದಂತೆ ತಮಿಳ್ನಾಡಿಗೆ ವಿಶೇಷ ಅನುದಾನವೇನೂ ನೀಡಿರಲಿಲ್ಲ. ಈಗ ವಿಜಯ್ ಸರಕಾರ ಕೇಂದ್ರದ ಮುಂದೆ ವಿಶೇಷ ಅನುದಾನಕ್ಕಾಗಿ ಕೈಚಾಚಲು ಸಿದ್ಧ ಇದೆಯೆ? ಮೋದಿ ಸ್ನೇಹ ಬೆಳೆಸಿ ವಿಶೇಷ ಅನುದಾನ ಪಡೆಯಬಹುದೆ? ಹಾಗೆ ಮಾಡಬೇಕಾದರೆ ಎನ್ ಡಿಎ ಒಕ್ಕೂಟಕ್ಕೆ ಬೆಂಬಲ ನೀಡಬೇಕಾಗುತ್ತದೆಯೆ?
ಟಿವಿಕೆ ಯ ಚುನಾವಣಾ ವಿಜಯವನ್ನು ಜೆನ್- ಜಿ ವಿಜಯ ಎನ್ನುವವರಿದ್ದಾರೆ. ಈ ಹೊಸ ಪೀಳಿಗೆಯ ಸಲುವಾಗಿ ಹೊಸ ಉದ್ಯೋಗ ಸೃಷ್ಟಿ ರಾಜ್ಯದಲ್ಲಿ ಬಹಳ ಮುಖ್ಯವಾಗಿ ಆಗಬೇಕಾದ ಕೆಲಸ. ಐಟಿ ಕ್ಷೇತ್ರದಲ್ಲಿ ಈ ವರ್ಷ ಸಾವಿರಾರು ಉದ್ಯೋಗಗಳ ಕಡಿತ ಮುಂದುವರಿದಿದೆ. ಯುವಪೀಳಿಗೆಯ ನಿರೀಕ್ಷೆ ಭಾರ ಅಗಾಧವಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಲೇಬೇಕಿದೆ. ಅದು ಬಿಟ್ಟು ಬೇರೆ ದಾರಿ ಇಲ್ಲ.
ಸಿನಿಮಾದ ಜನಪ್ರಿಯತೆಯೇನೋ ಸದ್ಯಕ್ಕೆ ಅಗಾಧವಾಗಿದೆ. ಬಹುದೊಡ್ಡ ಮತದಾರ ವರ್ಗವೇ ವಿಜಯ್ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ಆದರೆ ಸರಕಾರದ ಮುಂದಿರುವ ವಾಸ್ತವ ಸವಾಲುಗಳನ್ನು ಎದುರಿಸಲು ಇಲ್ಲಿ ಯಾವುದೇ ಮ್ಯಾಜಿಕ್ ಸೂತ್ರಗಳಿಲ್ಲ. ಮಂತ್ರದಂಡಗಳಿಲ್ಲ.
ಅದರಲ್ಲೂ ವೃತ್ತಿಪರ ರಾಜಕಾರಣಿಯಲ್ಲದ ಮುಖ್ಯಮಂತ್ರಿ, ಆಡಳಿತದ ಅನುಭವ ಇಲ್ಲದ ಹೊಸ ಶಾಸಕಾಂಗ ತಂಡ! ಮುಖ್ಯಮಂತ್ರಿ ಜೋಸೆಫ್ ವಿಜಯ್ ಈ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೀಗ ಎಲ್ಲರ ಮುಂದಿರುವ ಕುತೂಹಲ.

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ



