ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಎಸ್‌ಐಆರ್ ರದ್ದಾಗಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ. ನಾವು ದೆಹಲಿಯಿಂದ ಕದಲುವುದಿಲ್ಲ. ಭಾನುವಾರವೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಸಿಜೆಪಿ ಉಸ್ತುವಾರಿ ಅಜಿಂಕ್ಯ ಶಿಂಧೆ ಹೇಳಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಮುಂದುವರಿಯಲಿದ್ದು, ಯುವಜನರು ಅಲ್ಲಿಗೆ ಬರಬೇಕೆಂದು ಕೃಕೊಟ್ಟಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಜಿಂಕ್ಯ ಶಿಂಧೆ, “ಎಷ್ಟೇ ಬಂಧಿಸಿದರೂ, ನಾವು ಹಿಂದೆ ಸರಿಯುವುದಿಲ್ಲ. ನಮ್ಮನ್ನು ಬಂಧಿಸಿದ ತಕ್ಷಣ ನಾವು ಮನೆಗೆ ವಾಪಸಾಗುತ್ತೇವೆ ಎಂದು ಸರ್ಕಾರ ಭಾವಿಸಿರಬಹುದು. ಆದರೆ, ಮೋದಿ ಮತ್ತು ಶಾ ಅವರ ಈ ಭಯವೇ ನಾವು ಅರ್ಧ ಹೋರಾಟವನ್ನು ಗೆದ್ದಿದ್ದೇವೆ ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ.
“ಗ್ಯಾನೇಶ್ ಕುಮಾರ್ ಅವರು ರಾಜೀನಾಮೆ ನೀಡುವವರೆಗೆ ಎಷ್ಟು ಜನರನ್ನು ಬೇಕಾದರೂ ಬಂಧಿಸಲಿ, ನಾವು ಹಿಂದೆ ಸರಿಯುವುದಿಲ್ಲ. ಭಾನುವಾರ ಬೆಳಿಗ್ಗೆ 10 ಗಂಟೆಗೆ ಮತ್ತೆ ಜಂತರ್ ಮಂತರ್‌ಗೆ ತೆರಳುತ್ತೇವೆ. ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಿ ಮತ್ತು ಪೊಲೀಸರು ತಡೆದ ಸ್ಥಳಗಳಲ್ಲೆಲ್ಲ ಪ್ರತಿಭಟನೆಯನ್ನು ಮುಂದುವರಿಸಬೇಕು” ಎಂದು ಕರೆ ನೀಡಿದ್ದಾರೆ.
ಸುಮಾರು 13 ಕೋಟಿ ಮತಗಳ ಅಕ್ರಮ ಅಳಿಸುವಿಕೆಗೆ ಹೊಣೆಗಾರಿಕೆ ನಿಗದಿಯಾಗುವವರೆಗೆ ದೇಶಾದ್ಯಂತ ನಾಗರಿಕ ಅಸಹಕಾರ ಚಳವಳಿ ಮತ್ತು ಬೀದಿ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಸಿಜೆಪಿ ತಿಳಿಸಿದೆ.
ಶಾಂತಿಯುತ ಸಭೆ ಸೇರುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರವು ‘ಅಘೋಷಿತ ತುರ್ತು ಪರಿಸ್ಥಿತಿ’ಯನ್ನು ಹೇರಿದೆ. ಅಲ್ಲದೆ, ದೆಹಲಿಯನ್ನು ಒಂದು ಕೋಟೆಯನ್ನಾಗಿ ಬದಲಾಯಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜಕೀಯ ವ್ಯಕ್ತಿಗಳು ಸೇರಿದಂತೆ 15,000ಕ್ಕೂ ಅಧಿಕ ಜನರು ಬಂಧನ ಹಾಗೂ ಪೊಲೀಸ್ ಕ್ರಮವನ್ನು ಎದುರಿಸಿದ್ದಾರೆ ಎಂದು ಅಜಿಂಕ್ಯಾ ಆರೋಪಿಸಿದ್ದಾರೆ.
ಸಾರ್ವಜನಿಕ ಸಾರಿಗೆಯ ಮೇಲಿನ ನಿರ್ಬಂಧಗಳು ಮತ್ತು ಸಿಗ್ನಲ್ ಜಾಮ್ಮರ್‌ಗಳ ಬಳಕೆ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದ್ದವು ಎಂದೂ ಅವರು ದೂರಿದ್ದಾರೆ.



