ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಪ್ರೊಫೆಸರ್ ಮರಿದೇವರು ತಮ್ಮಲ್ಲಿ ಒಂದು ವಿಶಿಷ್ಟ ಶಕ್ತಿಯಿದೆಯೆಂದು ಬಲವಾಗಿ ನಂಬಿಕೊಂಡುಬಿಟ್ಟಿದ್ದರು. ಅದನ್ನು ಹಲವು ಬಾರಿ ಪರೀಕ್ಷಿಸಿ ಖಾತ್ರಿಮಾಡಿಕೊಂಡಿದ್ದರು. ಆ ನಂಬಿಕೆ ಅವರ ಮನಸ್ಸಿನಲ್ಲಿಯೇ ಗುಟ್ಟಾಗಿಯೂ, ಗಟ್ಟಿಯಾಗಿಯೂ ನೆಲೆಯೂರಿತ್ತು. ನಂಬಲಸಾಧ್ಯವಾದ ತಮ್ಮಲ್ಲಿದ್ದ ವಿಶಿಷ್ಟ ಶಕ್ತಿ ಸಿದ್ಧಿಸಿದ ಪ್ರತಿಯೊಂದು ಸಂದರ್ಭದಲ್ಲೂ ಮರಿದೇವರು ತಮ್ಮ ಯಾರಾದರೂ ಪರಿಚಿತ ಗೆಳೆಯರಿಗೆ, ಸಹೋದ್ಯೋಗಿಗಳಿಗೆ ಅದನ್ನು ಹೇಳಿಕೊಳ್ಳುವ ಆಸೆಯನ್ನು ಹತ್ತಿಕ್ಕುತ್ತಿದ್ದುದಕ್ಕೆ ಕಾರಣ, ಅವರು ತನ್ನನ್ನು ಒಬ್ಬ ಮೂಢಾತ್ಮ ಅಥವಾ ಐಲು ಎಂದು ಕರೆದಾರು ಎಂಬ ಹಿಂಜರಿಕೆ. ಗುರುತಿನ ಜನರ ಬಳಿ ಹೇಳುತ್ತಾ ಹೋಗಿ ಎಲ್ಲರ ನಡುವೆ ತನಗೆ ಹುಚ್ಚನೆಂಬ ಬಿರುದು ಶಾಶ್ವತವಾಗಿ ಅಂಟಿಕೊಳ್ಳಬಹುದೆಂಬ ಎಚ್ಚರ ಅವರಿಗಿತ್ತು. ಹಾಗಾಗಿ ಈ ಒಳಶಕ್ತಿಯ ವಿದ್ಯಮಾನಗಳನ್ನು ಎರಡು ಮೂರು ದಶಕಗಳಿಂದಲೂ ತಮ್ಮ ಅಂತರಾತ್ಮದಲ್ಲಿಯೇ ಪೋಷಿಸುತ್ತಾ ಬಂದಿದ್ದರು. ಹಾಗೆ ನೋಡಿದರೆ ಮರಿದೇವರಿಗೆ ಯಾವುದೇ ಧಾರ್ಮಿಕ ಶ್ರದ್ಧೆ, ಅಲೌಕಿಕ ಶಕ್ತಿ, ಮಾಟ-ಮಂತ್ರ, ಜೋತಿಷ್ಯ ಇತ್ಯಾದಿಗಳಲ್ಲಿ ಕಿಂಚಿತ್ತೂ ನಂಬಿಕೆಯಿರಲಿಲ್ಲ. ಇಂಥ ವೈಚಾರಿಕ, ನಾಸ್ತಿಕ ನಿಲುವಿನಿಂದಾಗಿಯೇ ತಮ್ಮೊಳಗಿನ ವಿಚಿತ್ರ ಶಕ್ತಿಯ ಬಗ್ಗೆ ಇತರರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಅಂಥ ಸೂಚನೆ ಅವರಿಗೆ ತಮ್ಮ ಮೊದಲ ಅನುಭವದಲ್ಲೇ ಆಗಿತ್ತು. ಆ ದಿನ ಬೆಳಗ್ಗೆ ಪೇಪರ್ ಓದುತ್ತಾ ಕುಳಿತಿದ್ದಾಗ ಕಾಫಿ ತಂದಿಟ್ಟ ತಮ್ಮ ಹೆಂಡತಿಗೆ, ‘ನೋಡು ಈ ಮನುಷ್ಯ ಸತ್ತನಂತೆ, ನಂಗೆ ಮೊದ್ದೇ ಗೊತ್ತಿತ್ತು ಇವ್ನು ಇಷ್ಟರಲ್ಲೇ ಸಾಯ್ತಾನೇಂತ’ ಎಂದು ತಮ್ಮಿಂದ ಯಾವುದೋ ಮಹತ್ತರ ಸಾಧನೆಯಾಗಿದೆಯೆಂಬ ಭಾವದಲ್ಲಿ ಪೇಪರಿನಲ್ಲಿ ಅಚ್ಚಾಗಿದ್ದ ನಿಧನ ವಾರ್ತೆಯನ್ನು ತೋರಿಸಿದ್ದರು. ಅದನ್ನು ಓದಿದ ಹೆಂಡತಿ ಇವರ ಮುಖವನ್ನೇ ದಿಟ್ಟಿಸಿ ನೋಡಿದಾಗ ಆಕೆಯ ಕಣ್ಣುಗಳಲ್ಲಿದ್ದ ಗಾಬರಿಯನ್ನು ಕಂಡು ಇವರಿಗೇ ದಿಗಿಲುಂಟಾಗಿತ್ತು. ಭಾನುವಾರವಾಗಿದ್ದ ಅಂದು ದಿನವಿಡೀ ಒಳಗೆ ಹೊರಗೆ ಓಡಾಡುತ್ತಿದ್ದ ಹೆಂಡತಿ ತಪ್ಪದೆ ಇವರ ಮುಖವನ್ನೇ ಒಂದು ನಿಗೂಢ ನಿಲುವಿನಲ್ಲಿ ನೋಡತೊಡಗಿದ್ದರು. ಅವತ್ತಿನ ದಿನ ಮಾತ್ರವಲ್ಲ. ಮುಂದೆ ಸುಮಾರು ದಿನಗಳ ಕಾಲ ಅವರು ಹತ್ತಿರ ಸುಳಿಯದೆ ದೂರದೂರದಲ್ಲೇ ಇರುತ್ತಿದ್ದು ಗಳಿಗೆಗೊಮ್ಮೆ ಇವರ ಮುಖ ನೋಡುತ್ತಾ ಓಡಾಡುತ್ತಿದ್ದರು. ಹೆಂಡತಿಯ ಈ ವಿಚಿತ್ರ ವರ್ತನೆ ಮರಿದೇವರಿಗೆ ಸಹಿಸಿಕೊಳ್ಳಲು ಯಾಕೋ ಕಷ್ಟವಾಗುತ್ತಿತ್ತು. ಆ ಘಟನೆ ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನೇ ಬೀರಿರಬೇಕು; ಇತರೆ ಯಾರ ಹತ್ತಿರವೂ ತಮ್ಮ ಶಕ್ತಿಪ್ರತಾಪದ ಪ್ರಸ್ತಾಪ ಮಾಡುವ ಯೋಚನೆಯನ್ನೇ ಮಾಡಲಿಲ್ಲ.
ಇದನ್ನು ಓದಿದ್ದೀರಾ?: ಬಾ.ಹ. ರಮಾಕುಮಾರಿ ಅವರ ಕತೆ | ನಿಯೋಗ
ಆದರೆ ಅನೇಕ ಮನುಷ್ಯ ಸಹಜಗುಣಗಳು ಅವರಲ್ಲೂ ಇದ್ದವು. ಅವರು ದಿಲ್ಲಿ, ಕೊಲ್ಕತ್ತಾ, ಮುಂಬೈ ಅಥವಾ ವಿದೇಶಗಳಿಗೆ ಸೆಮಿನಾರು, ಕಾನ್ಫರೆನ್ಸ್‌ಗಳಿಗೆ ಹೋದಾಗ ಅಲ್ಲಿ ಇತರ ಪ್ರಬಂಧ ಮಂಡನಕಾರರ ಜೊತೆಗಿನ ಸಂಜೆಯ ಪಾರ್ಟಿಗಳಲ್ಲಿ ತಮ್ಮ ವಿಶಿಷ್ಟ ಶಕ್ತಿಯ ಬಗ್ಗೆ ಮಾತಾಡುತ್ತಿದ್ದರು. ಬಹುತೇಕ ಒನ್-ಟು-ಒನ್ ಮಾತುಕತೆಯಲ್ಲಿ ಮರಿದೇವರು ತಮ್ಮೀ ವಿಚಿತ್ರ ವಿದ್ಯಮಾನವನ್ನು ಬಣ್ಣಿಸುವಾಗ ಹೊಸ ಪರಿಚಿತರ ಮನಸ್ಸಿಗೆ ತಾವು ಓರ್ವ ಅಲೌಕಿಕ ಸಾಧಕನ ಮುಂದೆ ಕುಳಿತಿರುವಂತೆ ಭಾಸವಾಗುತ್ತಿತ್ತು. ತಾವು ಭಾಗವಹಿಸಿದ ಸೆಮಿನಾರಿನ ವಿಶೇಷತೆಗಳ ಬಗ್ಗೆ ಯೋಚಿಸುವುದಕ್ಕಿಂತಲೂ ಹೆಚ್ಚಾಗಿ ಮರಿದೇವರ ಶಕ್ತಿಯ ಬಣ್ಣನೆಯನ್ನೇ ಮನದಲ್ಲಿ ತುಂಬಿಕೊಂಡು ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದರು. ಮರಿದೇವರು ತಮ್ಮದೇ ಊರಲ್ಲಿ ಇತರರ ಜೊತೆ ಹಂಚಿಕೊಳ್ಳಲಾಗದ ಅತೃಪ್ತಿಯಿಂದ ಮುಕ್ತರಾಗಿ ಖುಷಿ ಪಡುತ್ತಿದ್ದರು. ಅವರಲ್ಲಿ ಒಂದು ಬಗೆಯ ಹೆಮ್ಮೆಯೊ ಜಂಭವೊ ಉಂಟಾಗಿ ಅವರ ಮುಖದ ಮೇಲೆ ಓರ್ವ ಸಿದ್ಧಪುರುಷನ ಕಳೆ ಮೂಡುತ್ತಿತ್ತು. ಅದಕ್ಕೆ ತಿಲಕವಿಟ್ಟಂತೆ ಮರಿದೇವರು ತಮ್ಮ ಕನ್ನಡಕವನ್ನು ತೆಗೆಯುತ್ತಾ ಕತ್ತನ್ನು ತುಸು ಮೇಲೆತ್ತಿ ಎರಡೂ ಕಣ್ಣುಗಳನ್ನು ಒಂದೆರಡು ಗಳಿಗೆ ಮುಚ್ಚಿ ಕುಳಿತುಬಿಡುತ್ತಿದ್ದರು.
ಇಷ್ಟಕ್ಕೂ ಅವರಲ್ಲಿದ್ದ ಈ ವಿಚಿತ್ರ ಶಕ್ತಿ, ಒಂದು ಅಲೌಕಿಕ ಅಂಶ ತನ್ನಲ್ಲಿದೆ ಎಂಬ ಅರಿವು ಅವರಿಗೆ ಆದದ್ದು ಯಾವಾಗ? ತುಂಬ ಹಿಂದೆ ತಮ್ಮ ಕ್ಲಬ್ಬಿನಲ್ಲಿ ಒಂದು ಸಂಜೆ ರಾಜಕಾರಣಿಯೊಬ್ಬ ಮರಿದೇವರ ಯಾವುದೊ ಮಾತಿಗೆ ಇಡೀ ದೇಶದ ಸರ್ಕಾರಿ ನೌಕರರೆಲ್ಲಾ ತನ್ನ ಅಧೀನದಲ್ಲೇ ಇರುವಂಥವರು ಎಂಬ ಧಿಮಾಕಿನಲ್ಲಿ ಉತ್ತರಿಸುತ್ತಾ, ‘ಯು ವಿಲ್ ಲೂಸ್ ಯುವರ್ ಜಾಬ್’ ಅಂದಿದ್ದ. ಪರಿಸ್ಥಿತಿ ಬಿಗಡಾಯಿಸಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಆ ರಾತ್ರಿ ಮರಿದೇವರ ಮನಸ್ಸಿನಲ್ಲಿ ಇಂಥ ಅಹಂಕಾರಿ ಕೊಬ್ಬಿನ ಈ ಮನುಷ್ಯ ಸದ್ಯದಲ್ಲೇ ಸಾಯ್ತಾನೆ ಎಂಬ ಭಾವನೆ ಮೂಡಿತ್ತು. ಅದಾದ ವಾರಕ್ಕೋ ಹತ್ತು ದಿನಕ್ಕೋ ಆ ರಾಜಕಾರಣಿ ಅಪಘಾತದಲ್ಲಿ ಸತ್ತ ಸುದ್ದಿ ಪತ್ರಿಕೆಯಲ್ಲಿತ್ತು. ವಾಸ್ತವದಲ್ಲಿ ಅಂಥ ಒಂದು ಮೃತ್ಯುಶಾಪ ತನ್ನ ಮನಸ್ಸಿನಲ್ಲಿ ಮೊಳೆತದ್ದರ ಬಗ್ಗೆ ಮರಿದೇವರಿಗೆ ಅಪರಾಧ ಪ್ರಜ್ಞೆಯೂ ಕೆಲವು ಕಾಲ ಕಾಡಿದ್ದುಂಟು. ಆದರೆ ಮುಂದಿನ ದಿನಗಳಲ್ಲಿ ಘಟಿಸಿದ ಇನ್ನಷ್ಟು ಸಾವುಗಳು ಮರಿದೇವರ ಮನೋಕಾಮನೆಗಳೇ ಆಗಿದ್ದವು! ಮೊದಮೊದಲಿಗೆ ತಮಗೆ ಆಗದವರ, ತೊಂದರೆ ಕೊಟ್ಟವರ ಸಾವನ್ನು ಮಾತ್ರ ಬಯಸುತ್ತಿದ್ದ ಮರಿದೇವರಿಗೆ ಇದೊಂದು ಆಟವೇ ಆಯಿತೆನ್ನಬಹುದು. ಸಾಯಿಸೋ ಆಟ! ಇವರಿಗೆ ಕಾಟ ಕೊಟ್ಟ ಡೀನ್ ಒಬ್ಬರ ಬಗ್ಗೆ ಮರಿದೇವರ ಬಯಕೆ ತಿಂಗಳೊಪ್ಪತ್ತಿನಲ್ಲಿ ಈಡೇರಿತ್ತು. ಈ ಚೋದ್ಯಗಳು ಕಾಕತಾಳೀಯವೆಂದು ಮರಿದೇವರ ಒಂದು ಮನಸ್ಸು ಹೇಳುತ್ತಿದ್ದರೂ ಮೃತ್ಯುಶಾಪದ ಶಕ್ತಿಯನ್ನು ಹೆಚ್ಚೆಚ್ಚು ಸಂಚಯಗೊಳಿಸಿಕೊಳ್ಳುತ್ತಿದ್ದ ಇನ್ನೊಂದು ಮನಸ್ಸೂ ಅವರೊಳಗಿತ್ತು. ಮರಿದೇವರು ಪೋಷಿಸುತ್ತಿದ್ದುದು ಅದೇ ಮನಸ್ಸನ್ನು. ಸುತ್ತಮುತ್ತಲ ಜನ ತಮ್ಮ ವಿರೋಧಿಗಳಿರಲಿ ಇಲ್ಲದಿರಲಿ ಅವರ ನಡವಳಿಕೆ, ಸ್ವಭಾವ, ವ್ಯಕ್ತಿತ್ವಗಳನ್ನು ಸೂಕ್ತ ವಿಶೇಷತೆಯಿಂದ ಗಮನಿಸುವ ಪರಿಪಾಟ ಬೆಳೆಸಿಕೊಂಡ ಮರಿದೇವರು ತಮ್ಮ ಶಕ್ತಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಅವರು ಅಂದುಕೊಂಡಂತೆಯೇ ಆಗುತ್ತಿತ್ತು.
ಇದನ್ನು ಓದಿದ್ದೀರಾ?: ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ
ತಮ್ಮಲ್ಲಿರುವ ಈ ಶಕ್ತಿಯ ತಾರ್ಕಿಕತೆಯ ಬಗ್ಗೆ ಅನೇಕ ವರ್ಷಗಳ ಕಾಲ ಮರಿದೇವರು ಚಿಂತಿಸಿದ್ದುಂಟು. ಅದಕ್ಕೆ ಅಲೌಕಿಕ ಲೋಕದ ಪರಿಭಾಷೆಯನ್ನು ಹುಡುಕಿ ಸೋತಿದ್ದುಂಟು. ಮಾಟಮಂತ್ರ ಮಾಡಿಸಿ ಸಾವುನೋವುಗಳನ್ನುಂಟು ಮಾಡುವ ಅನೇಕ ಕತೆಗಳನ್ನು ಅವರು ಕೇಳಿದ್ದರು. ಶತ್ರುಗಳ ಸಮಾಪ್ತಿಗೆ ಯಾರಾದರೂ ಮೂರನೆಯವರ ಅಥವಾ ಮಾಟ ಮಾಡುವವರ ಮೊರೆ ಹೋಗಲೇಬೇಕು. ಅದಕ್ಕಾಗಿ ಸಾಕಷ್ಟು ಸಮಯ, ಹಣವನ್ನು ಖರ್ಚು ಮಾಡಲೇಬೇಕೆಂಬ ಎಲ್ಲ ಸಂಗತಿಗಳನ್ನು ಮರಿದೇವರು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಓದಿ ತಿಳಿದಿದ್ದರಾದರೂ ತಮಗೆ ಯಾವುದೇ ತಾಂತ್ರಿಕ, ಮಾಂತ್ರಿಕರ ಮೂಲಕ ಯಾವ ಕಲಿಕೆಯೂ ಇಲ್ಲದೆ ಅಯಾಚಿತವಾಗಿ ಒದಗಿ ಬಂದಿರುವ ಈ ಶಕ್ತಿಯ ಬಗ್ಗೆ ಅವರಿಗೆ ಒಮ್ಮೊಮ್ಮೆ ಭೀತಿಯೂ ಉಂಟಾಗುತ್ತಿತ್ತು. ಇದು ಎಲ್ಲಿಗೆ ಮುಟ್ಟೀತು ಎಂದು ಅನೇಕ ಬಾರಿ ಯೋಚಿಸುತ್ತಿದ್ದರು. ಮೂಲತಃ ಅವರಿಗೆ ಮಾಟ ಮಂತ್ರ ಇತ್ಯಾದಿಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ. ಅವರು ತಮ್ಮದೇ ಕೆಲವು ಕಾರಣಗಳನ್ನು ತಾಳೆ ಹಾಕಿ ಕಂಡುಕೊಂಡಿದ್ದರು. ಪರಿಚಿತರಿರಲಿ ಅಪರಿಚಿತರಿರಲಿ ತಮ್ಮ ಮೃತ್ಯುಶಾಪಕ್ಕೆ ಎರವಾದವರ ಗುಣ ಸ್ವಭಾವಗಳನ್ನು, ವರ್ತನೆಗಳನ್ನು ಗಮನಿಸಿದ್ದಂತೆ ತಮ್ಮ ಈ ಶಕ್ತಿಗೆ ತನ್ನದೇ ಆದ ಒಂದು ಸೂತ್ರವಿದೆ ಎಂಬುದನ್ನು ಕಂಡುಕೊಂಡಿದ್ದರು. ಮನುಷ್ಯನಲ್ಲಿರುವ ಮಹತ್ವಾಕಾಂಕ್ಷೆಯ ಪರದಾಟ, ವಿಘ್ನ ಸಂತೋಷ, ಬೆನ್ನಿಗೆ ಚೂರಿ ಹಾಕುವ ಗುಣ, ಗೋಮುಖ ವ್ಯಾಘ್ರತೆ, ಜಾತಿಮದ, ತಂದಿಕ್ಕಿ ತಮಾಷೆ ನೋಡುವುದು, ತೆರೆಮರೆಯಲ್ಲೇ ಸೂತ್ರಧಾರಿಗಳಂತಿದ್ದು ಕೆಡುಕುಂಟು ಮಾಡುವುದು, ಏನೂ ತಿಳಿಯದವರಂತೆ ವರ್ತಿಸುವ ಗುಮ್ಮನಗುಸುಕು, ದುರಹಂಕಾರ, ಅತಿಯಾದ ಈಗೊ ಇತ್ಯಾದಿ ನೂರೆಂಟು ದುಷ್ಟ ಪ್ರವೃತ್ತಿಗಳೇ ಆ ಸೂತ್ರದ ಹಿಂದಿರುವುದು ಅವರಿಗೆ ಗೋಚರಿಸುತ್ತಿದ್ದವು. ಆದ್ದರಿಂದ ತನ್ನಲ್ಲಿರುವುದು ಕೆಡುಕಿನ ವಿರುದ್ಧದ ಒಳಿತಿನ ಶಕ್ತಿಯೆಂದೇ ನಂಬಿದ್ದರು. ಅನಂತರ ಅವರು ಪ್ರಯೋಗಿಸಿದ ಮೃತ್ಯುಶಾಪಗಳಿಗಾಗಿ ಅವರು ಪಶ್ಚಾತ್ತಾಪ ಅಥವಾ ಅಪರಾಧಿ ಭಾವನೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಮುಕ್ತರಾಗಿದ್ದರು.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ
ಒಮ್ಮೆ ಅಹಮದಾಬಾದಿನಲ್ಲಿ ನಡೆದ ಸೆಮಿನಾರಿನಲ್ಲಿ ಭೆಟ್ಟಿಯಾದ ಡಾ. ಪ್ರಭೋದ್ ಪಾರೀಖ್ ಮರಿದೇವರಲ್ಲಿದ್ದ ಶಕ್ತಿಯ ಬಣ್ಣನೆಯನ್ನು ಅವರ ಬಾಯಿಯಿಂದಲೇ ಕೇಳಿ ದಂಗಾದರು. ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ತಮಗಿಂತ ಸೀನಿಯರ್ ಆಗಿದ್ದ ಡಾ. ತಿರುಮಲೇಶ್ವರ ಭಟ್ ಅವರನ್ನು ತುಳಿದು ಪ್ರಮೋಶನ್ ಪಡೆದಿರುವ ಸಂಗತಿ ಈ ಮನುಷ್ಯನಿಗೇನಾದರೂ ಗೊತ್ತಾಗಿದ್ದು ತಾನೆಲ್ಲಿ ಈತನ ಮೃತ್ಯುಶಾಪಕ್ಕೆ ಬಲಿಯಾಗುವೆನೊ ಎಂಬ ಭೀತಿ ಸಣ್ಣಗೆ ಶುರುವಾಗಿತ್ತು. ತಕ್ಷಣ ಪಾರೀಖ್ ಗುಜರಾತಿ ಇಂಗ್ಲಿಷಿನಲ್ಲಿ, ‘ಪ್ರೊಫೆಸರ್. ನಿಮಗೆ ದೇವರು ಒಂದು ಅಪರೂಪದ ವರವನ್ನು ದಯಪಾಲಿಸಿದ್ದಾನೆ. ನಿಜವಾಗಿಯೂ ಇದೊಂದು ದೊಡ್ಡ ಶಕ್ತಿ. ನೀವು ತಪ್ಪು ತಿಳಕೊಳ್ಳದಿದ್ದರೆ ಒಂದು ಮಾತು… ನಿಮ್ಮ ಶಕ್ತಿ ನಿಮಗೇ ಗೊತ್ತಿಲ್ಲದ ರೀತಿಯಲ್ಲಿ ನೆಗೆಟಿವ್ ವೇನಲ್ಲಿ ಸಾಗ್ತಾಯಿದೆ. ಅದನ್ನ ಪಾಸಿಟಿವ್ ವೇಗೆ ಯಾಕೆ ಟರ್ನ್ ಮಾಡಬಾರ್‍ದು?’ ಎಂದು ಸಣ್ಣಗೆ ನಡುಗುತ್ತಲೇ ಒಂದು ಸಲಹೆಯನ್ನು ಕೊಟ್ಟರು. ಮರಿದೇವರು ಕೆಲಕ್ಷಣ ಯೋಚಿಸಿ, ‘ಹೌದು, ನೀವು ಹೇಳೋದು ಸರಿಯಿದೆ. ಆದರೆ ನನಗೆ ದೇವರು, ವರ ಇವುಗಳಲ್ಲಿ ಯಾವ ನಂಬಿಕೆಯೂ ಇಲ್ಲ. ಅಲ್ಲದೆ ನಾನು ಯಾವುದನ್ನ ಮೃತ್ಯುಶಾಪ ಅಂತ ಕರೀತೀನೋ ಅದು ಯಾವ ದೇವತೆಗಳಿಂದಲೂ ಬಂದ ವರವೂ ಅಲ್ಲ. ಅದನ್ನ ಗಳಿಸಬೇಕು ಅಂತ ಎಂದೂ ಪ್ರಯತ್ನ ಪಟ್ಟವನೇ ಅಲ್ಲ. ಆದ್ದರಿಂದ ಈ ನೆಗೆಟೀವನ್ನ ಹೇಗೆ ಟರ್ನ್ ಮಾಡಿ ಪಾಸಿಟಿವ್ ಮಾಡೋದು? ನಾನು ಎಷ್ಟೋ ಸಲ ಕೆಲವು ಕೆಲಸಗಳಿಗಾಗಿ ಪಾಸಿಟಿವ್ ಆಗಿ ಯೋಚನೆ ಮಾಡಿದ್ದೀನಿ. ಅಂಥವು ಕೈಗೂಡಿದ್ದೇ ತುಂಬಾ ಅಪರೂಪ. ಇಲ್ಲವೇಯಿಲ್ಲ ಅಂದರೂ ನಡೆಯುತ್ತೆ. ಆದರೆ ನನಗೇ ಆಶ್ಚರ್ಯವಾಗೋ ರೀತೀಲಿ ಮೃತ್ಯುಶಾಪ ಕೆಲಸ ಮಾಡಿಬಿಡುತ್ತೆ. ಏನು ಮಾಡೋದು ಪಾರೀಖ್? ಹಾಗಂತ ನಾನು ಎಲ್ಲರ ಬಗ್ಗೆ ಹೀಗೆ ನೆಗೆಟಿವ್ ಆಗಿ ಯೋಚನೆ ಮಾಡ್ತೀನಿ ಅಂತೇನಿಲ್ಲ’ ಅಂದರು. ಡಾ. ಪಾರೀಖ್, ‘ನೋಡಿ ಪ್ರೊಫೆಸರ್, ನಾನ್ಯಾಕೆ ಹೇಳ್ತಿನಿ ಅಂದ್ರೆ, ನಿಮ್ಮಲ್ಲಿ ಒಂದು ದೊಡ್ಡ ಶಕ್ತಿ ಹೇಗೋ ಸೇರಿಬಿಟ್ಟಿದೆ. ಒಂದು ಪ್ರಯತ್ನ ಮಾಡಿನೋಡಿ. ನಾನು ಗುಜರಾತಿನ ಭುಜ್ ಪ್ರದೇಶದವನು. ನಮ್ಮ ಭುಜ್‌ನಲ್ಲಿ ಪ್ರಖ್ಯಾತವಾದ ಆಶಾಪೂರಾ ದೇವಿ ಮಂದಿರ ಇದೆ. ಆ ದೇವತೆ ಭಕ್ತರ ಮನಸ್ಸಿನಲ್ಲಿರುವ ಆಸೆಗಳನ್ನ ಪೂರೈಸುವ ದೇವತೆ ಅಂತ ತುಂಬಾ ಹೆಸರುವಾಸಿ. ನೀವ್ಯಾಕೆ ಒಂದು ಸಲ ನಮ್ಮಲ್ಲಿಗೆ ಬರಬಾರದು. ನನ್ನ ಸ್ವಂತ ಊರು ಅದು, ನಾನು ನಿಮಗೆ ಎಲ್ಲ ಏರ್ಪಾಡೂ ಮಾಡ್ತೀನಿ’ ಅಂದರು. ಮರಿದೇವರು, ‘ಓ! ತುಂಬಾ ಥ್ಯಾಂಕ್ಸ್ ಡಾ. ಪಾರೀಖ್ ನಿಮ್ಮ ಇನ್ವಿಟೇಶನ್‌ಗೆ, ನಿಮಗೆ ಪ್ರಮೋಷನ್ ಸಿಕ್ಕ ವಿಚಾರ ಗೊತ್ತಾಯ್ತು. ಅದರ ಸೆಲಬ್ರೇಶನ್‌ಗಾದರೂ ಭುಜ್‌ಗೆ ಬರ್‍ತೀನಿ’ ಅಂದಾಗ ಡಾ. ಪಾರೀಖ್ ಮನಸ್ಸಿನಲ್ಲಿ ತಾವು ಪ್ರಮೋಷನ್‌ಗಾಗಿ ನಡೆಸಿದ್ದ ಷಡ್ಯಂತ್ರದ ಬಗ್ಗೆ ಒಂದು ಪಾಸಿಟಿವ್ ಮಾಹಿತಿಯನ್ನು ತಕ್ಷಣ ಹೆಣೆದು ಮರಿದೇವರಿಗೆ ಹೇಳಿಬಿಡಬೇಕೆಂಬ ತುಡಿತ ತೀವ್ರವಾಗಿ ಕಾಡಿತಾದರೂ ಹೇಗೋ ಮನಸ್ಸನ್ನು ಸಮಾಧಾನ ಮಾಡಿಕೊಂಡರು. ಆದರೂ ಅವರಲ್ಲಿ ಗೊಂದಲ ಮುಂದುವರಿದಿತ್ತು. ವಾಸ್ತವವಾಗಿ ಪಾರೀಖ್ ಅವರ ಷಡ್ಯಂತ್ರದ ಬಗ್ಗೆ ಮರಿದೇವರಿಗೆ ಕಿಂಚಿತ್ತೂ ತಿಳಿದಿರಲಿಲ್ಲ. ಆದರೆ ಪಾರೀಖ್‌ರ ಮನಸ್ಸು ಹೇಗಾದರೂ ಮಾಡಿ ಮರಿದೇವರನ್ನು ಒಲಿಸಿಕೊಳ್ಳಬೇಕೆಂದು ಯೋಚಿಸುತ್ತಾ, ‘ಪ್ರೊಫೆಸರ್ ಹೇಗೂ ಅಹಮದಾಬಾದಿನವರೆಗೂ ಬಂದಿದೀರಿ, ಇನ್ನೊಂದೆರಡು ಮೂರು ದಿವಸ ಉಳಿದುಬಿಡಿ. ನಾನು ನಿಮ್ಮನ್ನ ಭುಜ್‌ಗೆ ಕರೆದೊಯ್ದು ಆಶಾಪೂರಾ ದೇವಿಯ ದರ್ಶನ ಮಾಡಿಸಿಬಿಡ್ತೀನಿ’ ಎಂದು ಒತ್ತಾಯದ ದನಿಯಲ್ಲಿ ಹೇಳಿದರು. ಮರಿದೇವರು ಒಪ್ಪಬೇಕಾಯಿತು.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
ಅವರು ಒಪ್ಪಿದ್ದು ನೆಗೆಟೀವನ್ನು ಪಾಸಿಟೀವ್ ಮಾಡಬೇಕೆಂಬ ಬೇಡಿಕೆಯನ್ನು ದೇವಿಯ ಮುಂದಿಡುವ ಕಾರಣಕ್ಕಂತೂ ಅಲ್ಲ. ಒಂದು ಹೊಸ ಪ್ರದೇಶವನ್ನು ನೋಡುವ ಅವಕಾಶ ಮತ್ತು ಕುತೂಹಲಕ್ಕಾಗಿ ಮಾತ್ರ.
ಭುಜ್ ಪ್ರವಾಸ ಸುಖಕರವಾಗಿಯೇ ಮುಗಿದಿತ್ತು. ಸ್ಥಳೀಕರಾದ ಪಾರೀಖ್ ತಮ್ಮ ಪ್ರಭಾವ ಬೀರಿ ವಿಶೇಷ ದರ್ಶನದ ವ್ಯವಸ್ಥೆಯನ್ನೇ ಮಾಡಿಸಿದ್ದರು. ಮರಿದೇವರು ಎಲ್ಲವನ್ನೂ ಯಾಂತ್ರಿಕವಾಗಿ ಮಾಡಿದರು. ಅವರು ಆಶಾಪೂರಾ ದೇವಿಯ ಮುಂದೆ ಕೈಮುಗಿದು ಚಣಕಾಲ ನಿಂತಿದ್ದರಾದರೂ ಯಾವುದೇ ಮನೋಕಾಮನೆಗಳನ್ನು ಪೂರೈಸುವ ಬೇಡಿಕೆ ಸಲ್ಲಿಸಲಿಲ್ಲ. ದೇವಿಯ ಮುಂದೆ ಕೈಜೋಡಿಸಿ ಪ್ರಾರ್ಥಿಸುತ್ತಿದ್ದ ನೂರಾರು ಜನರನ್ನು ಕಂಡು ಆಶ್ಚರ್ಯವನ್ನೂ ಪಡಲಿಲ್ಲ. ಆದರೆ ಡಾ. ಪ್ರಭೋದ್ ಪಾರೀಖ್ ತನ್ನ ಬಗೆಗೆ ಪ್ರೊಫೆಸರ್ ಮರಿದೇವರ ಮನಸ್ಸು ಒಳಿತಾಗಿ ಚಿಂತಿಸಲಿ ಎಂದು ಪ್ರಾರ್ಥಿಸಿದ್ದಂತೂ ನಿಜವಾಗಿತ್ತು. ಅವರ ಮನಸ್ಸಿನಲ್ಲಿ ತಾವು ಮಾಡಿದ್ದ ಷಡ್ಯಂತ್ರ ತಾತ್ಕಾಲಿಕವಾಗಿ ಮಾಯವಾಗಿತ್ತು. ರಾತ್ರಿ ಹಳೇಕಾಲದ ಮನೆತನದ ಮನೆಯಲ್ಲಿ ಒಂದು ಭರ್ಜರಿ ಗುಜರಾತಿ ಔತಣವಿತ್ತು. ಅತಿಥಿ ಅಭ್ಯಾಗತರು ಉಲ್ಲಸಿತರಾಗಿದ್ದರು. ಭುಜ್‌ನಿಂದಲೇ ಬೆಂಗಳೂರಿಗೆ ಹಿಂದಿರುಗುವ ಪ್ರಯಾಣದ ಬದಲಾವಣೆಗಳನ್ನು ಪಾರೀಖ್ ಖಚಿತಪಡಿಸಿದ್ದರು. ಹೀಗೆ ಪ್ರಾರಂಭವಾಗಿದ್ದ ಮರಿದೇವರ ಅಹಮದಾಬಾದಿನ ಸೆಮಿನಾರ್ ಪ್ರಯಾಣ ಭುಜ್‌ನ ಸುಖಕರ ಪ್ರವಾಸವಾಗಿ ಮುಗಿದಿತ್ತು.
ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…
ಆಗಿಂದಾಗ್ಗೆ ಪ್ರೊಫೆಸರ್ ಮರಿದೇವರ ಮೃತ್ಯುಶಾಪ ಚಾಲ್ತಿಯಲ್ಲಿತ್ತಾದರೂ ಬಹಳ ಕಾಲದಿಂದ ಬಚಾವಾಗಿದ್ದ ಒಬ್ಬಿಬ್ಬರ ಪಟ್ಟಿಯಲ್ಲಿ ಅವರ ಕಲೀಗ್ ಪ್ರೊಫೆಸರ್ ಶೇಖರಪ್ಪ ಹೇಗೋ ಉಳಿದುಬಿಟ್ಟಿದ್ದರು. ಅವರ ಬಗ್ಗೆ ಯೋಚಿಸುವಾಗೆಲ್ಲ ತಪ್ಪದೆ ಫಲ ನೀಡುತ್ತಿದ್ದ ತಮ್ಮ ಶಕ್ತಿಯ ಬಗ್ಗೆಯೇ ಒಮ್ಮೊಮ್ಮೆ ಅನುಮಾನ ಉಂಟಾಗುತ್ತಿತ್ತು. ಅವರು ತಮಗಷ್ಟೇ ಅಲ್ಲದೆ ಇತರ ಕೆಲವರಿಗೂ ಭಯಂಕರ ಕಿರುಕುಳ ಕೊಟ್ಟಿದ್ದ ಅಸಾಮಿಯೆಂಬುದನ್ನು ಬಹಳ ಕಾಲದಿಂದ ಮರಿದೇವರು ಗಮನಿಸಿದ್ದರು. ತಮಗೆ ಬರಬೇಕಾಗಿದ್ದ ನ್ಯಾಷನಲ್ ಫೆಲೋಶಿಪ್ಪನ್ನು ತಪ್ಪಿಸಿದ್ದು, ವಿದ್ಯಾರ್ಥಿನಿಯೊಬ್ಬರನ್ನು ಎತ್ತಿಕಟ್ಟಿ ಡಾ. ಗುಣಶೀಲ ಅವರ ಮಾನ ಕಳೆದದ್ದು ಇತ್ಯಾದಿ ಹಲವು ಹತ್ತು ಭಾನಗಡಿಗಳ ಹಿಂದೆ ಶೇಖರಪ್ಪನವರ ಕೈವಾಡವಿದ್ದರೂ ಯಾವ ಪುರಾವೆಗಳೂ ಸಿಕ್ಕದೆ ಬಚಾವಾಗುತ್ತಿದ್ದರು. ಜೊತೆಗೆ ಎಲ್ಲರ ಜೊತೆಗೆ ನಾಟಕವಾಡುತ್ತ ನಗುನಗುತ್ತಲೇ ಇರುತ್ತಿದ್ದರು. ಇವರ ಕಿರುಕುಳಕ್ಕೆ ಸೋತುಸುಣ್ಣವಾದ ಡಾ. ಶ್ಯಾಮಲಾ ಚಟರ್ಜಿ ರಾಜೀನಾಮೆಯನ್ನೇ ಕೊಟ್ಟು ಕೊಲ್ಕತ್ತಗೆ ಮರಳಿದ್ದರು
ಹೀಗೆಲ್ಲ ಇದ್ದ ಒಂದು ಸಂದರ್ಭದಲ್ಲೇ ಶೇಖರಪ್ಪನವರನ್ನು ಫೋರ್ಟಿಸ್ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದ್ದು, ಸದ್ಯ ಅವರು ಐಸಿಯುನಲ್ಲಿದ್ದಾರೆಂಬ ಸುದ್ದಿ ಬಂತು. ಮರಿದೇವರು ಮನಸ್ಸಿನಲ್ಲೇ ತಮ್ಮಲ್ಲಿರುವ ಶಕ್ತಿಗೆ ಮತ್ತಷ್ಟು ಶಕ್ತಿಧಾರಣೆ ಮಾಡಬಹುದಾದ ಯಾವುದಾದರೂ ಉಪಾಯವಿರಬಹುದೇ ಎಂದು ಯೋಚಿಸತೊಡಗಿದರು. ಹಿಂದಿನ ಯಾವ ಸಂದರ್ಭಗಳಲ್ಲೂ ಅವರು ಹೀಗೆ ಯೋಚಿಸಿರಲಿಲ್ಲ. ಸುದ್ದಿ ಬಂದ ಗಳಿಗೆಯಿಂದಲೇ ಜಾಗೃತಗೊಂಡ ಅವರ ದಿವ್ಯ ಚಕ್ಷುಗಳ ಮುಂದೆ ಐಸಿಯುನಲ್ಲಿ ಲೈಫ್ ಸಪೋರ್ಟ್ ಮೂಲಕ ಉಸಿರಾಡಲು ಒದ್ದಾಡುತ್ತಿರುವ ಶೇಖರಪ್ಪನವರ ಚಿತ್ರ. ಮರುಗಳಿಗೆಯಲ್ಲಿಯೇ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರೊಫೆಸರ್ ಶೇಖರಪ್ಪನವರ ಬಗ್ಗೆ ಒಂದು ಭಾವಪೂರ್ಣ ಶ್ರದ್ಧಾಂಜಲಿಯನ್ನು ಪೋಸ್ಟ್ ಮಾಡಿಬಿಟ್ಟರು. ಆದರೆ ಅವರಿನ್ನೂ ತೀರಿಕೊಂಡಿಲ್ಲವೆಂಬ ನೂರಾರು ಪ್ರತಿಕ್ರಿಯೆಗಳು ಬರತೊಡಗಿ ಮರಿದೇವರದ್ದು ವಿಕೃತ ಮನಸ್ಸು, ಅಮಾನವೀಯ, ನಿಷ್ಕರುಣಿ, ಸ್ಯಾಡಿಸ್ಟ್, ವೈಯಕ್ತಿಕ ದ್ವೇಷ ಈ ಮಟ್ಟಕ್ಕಿಳಿಯಬಾರದು ಮುಂತಾಗಿ ಭಯಂಕರ ಟ್ರೋಲಿಂಗ್ ಶುರುವಾಯಿತು. ಗಾಬರಿಗೊಂಡ ಮರಿದೇವರು ತಮ್ಮ ಪೋಸ್ಟನ್ನು ಡಿಲೀಟ್ ಮಾಡಿ ದಿಗ್ಮೂಢರಾಗಿ ಕೂತರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಆದರೂ ಅವರು ಸುಮ್ಮನೆ ಕೂರಲಿಲ್ಲ, ಇಟ್ ಈಸ್ ಎ ಮ್ಯಾಟರ್ ಆಫ್ ಎ ಡೇ ಆರ್ ಟೂ ಅಂದುಕೊಂಡ ಅವರು ಶೇಖರಪ್ಪನವರ ಸಾವಿನ ಸುದ್ದಿಗಾಗಿ ಕಾಯುತ್ತ ಕುಳಿತರು. ಎರಡು ದಿನ ಕಾದ ಅವರು ಟ್ರೋಲಿಂಗ್ ಕಡೆ ಕಣ್ಣು ಹಾಯಿಸಿದಾಗ ಇವರು ಡಿಲೀಟ್ ಮಾಡಿರುವ ಬಗ್ಗೆ ಒಬ್ಬಿಬ್ಬರ ಕಮೆಂಟ್ ಬಿಟ್ಟು ಬೇರೇನೂ ಕಾಣಲಿಲ್ಲ. ಶೇಖರಪ್ಪನವರ ಸ್ಥಿತಿಯ ಬಗ್ಗೆ ಯಾವ ಅಪ್ ಡೇಟೂ ಸಿಕ್ಕಲಿಲ್ಲ. ಎರಡು ಮೂರು ದಿನ ಚಡಪಡಿಸುತ್ತಾ ಟೀವಿ ಸುದ್ದಿ, ಪತ್ರಿಕೆಯ ನಿಧನ ವಾರ್ತೆಗಳ ಕಡೆ ಕಣ್ಣಾಡಿಸಿದರು. ತಮ್ಮ ಈ ಚಡಪಡಿಕೆ ಹೆಂಡತಿಯ ಅರಿವಿಗೆ ಬರುತ್ತಿದೆಯೋ ಎಂಬ ಭಾವದಲ್ಲಿ ಆಕೆಯ ಕಡೆ ನೋಡುತ್ತ ಟೈಂ ಪಾಸ್ ಮಾಡುತ್ತಿದ್ದರು.
ಒಂದು ವಾರ ಕಳೆಯಿತು. ಮರಿದೇವರು ಮೌನಿಯಾದರು. ಎರಡು ವಾರದ ನಂತರ ಗುರುತಿನ ಕೆಲವರಿಗೆ ಫೋನ್ ಮಾಡುವ ಆಲೋಚನೆ ಮಾಡಿದರು. ಮಾತಾಡುವಾಗ ಎಚ್ಚರಿಕೆಯಿಂದ ಸುತ್ತಿ ಬಳಸಿ ವಿಷಯಕ್ಕೆ ಬರುತ್ತಿದ್ದರು. ಶೇಖರಪ್ಪನವರ ಕ್ಷೇಮದ ಬಗ್ಗೆ ಅತೀವ ಕಾಳಜಿಯ ಮಾತುಗಳನ್ನಾಡುತ್ತಾ ಪ್ರಸ್ತುತ ಹೇಗಿದ್ದಾರೆಂಬ ಮಾಹಿತಿಯನ್ನು ನಿರೀಕ್ಷಿಸಿದರು. ಅವರ ಅತೀವ ಕಾಳಜಿಯ ಹಿಂದೆ ಟ್ರೋಲ್‌ಗೆ ಒಳಗಾಗಿದ್ದುದರ ಪರಿಣಾಮವಿತ್ತು. ಫೋನುಗಳಲ್ಲಿ ಅವರು ಆಸ್ಪತ್ರೆ ಸೇರಿದ್ದು, ಐಸಿಯುನಲ್ಲಿ ಇದ್ದದ್ದು ನಿಜ. ಹುಷಾರಾಗಿರಬಹುದೇನೋ ಇತ್ಯಾದಿ ಮಾತುಗಳನ್ನು ಕೇಳಿಸಿಕೊಂಡರೇ ವಿನಾ ಯಾವ ಸುದ್ದಿಯೂ ಖಚಿತವಾಗಲಿಲ್ಲ. ಫೋರ್ಟಿಸ್ ಆಸ್ಪತ್ರೆಗೆ ಫೋನ್ ಮಾಡಿದಾಗ ಅವರನ್ನು ಐಸಿಯುನಿಂದ ವಾರ್ಡಿಗೆ ಹಾಕಿರುವ ಖಚಿತ ಸಂಗತಿ ತಿಳಿಯಿತು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ತಿಂಗಳೆರಡು ಕಳೆದವು. ಮರಿದೇವರ ಮನಸ್ಸಿಗೆ ದಿನೇದಿನೇ ಕತ್ತಲು ಕವಿಯತೊಡಗಿತು. ಅವರ ಎಂದಿನ ಚಟುವಟಿಕೆಗಳು ಏರುಪೇರಾದದ್ದು ಅವರ ಹೆಂಡತಿಯ ಗಮನಕ್ಕೂ ಬಂತು. ಒಂದು ಬೆಳಿಗ್ಗೆ ಶೇಖರಪ್ಪನವರ ಆತ್ಮೀಯರೊಬ್ಬರಿಗೆ ಫೋನ್ ಮಾಡಿದಾಗ ಅವರು ಸಂಪೂರ್ಣ ಗುಣವಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿರುವ ವಿಷಯ ತಿಳಿಯಿತು. ಮನೆಯಲ್ಲೇ ಸಂಜೆಯವರೆಗೆ ಮಾತಿಲ್ಲದೆ ಮೌನವಾಗಿದ್ದ ಅವರು ಬಾಣಸವಾಡಿಯಲ್ಲಿದ್ದ ಪ್ರೊಫೆಸರ್ ಶೇಖರಪ್ಪನವರ ಮನೆಗೆ ಒಂದು ಊಬರ್ ಗಾಡಿ ಬುಕ್ ಮಾಡಿದರು. ದಾರಿಯ ಮೇಲೆ ಎಲ್ಲಿ ಹೂವಿನ ಬೊಕೆ ಸಿಗಬಹುದೆಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತ ಗಾಡಿಯಲ್ಲಿ ಕುಳಿತರು. ತಾವು ಭುಜ್‌ಗೆ ಹೋಗಿದ್ದಾಗ ಆಶಾಪೂರಾ ದೇವಿಯ ಮಂದಿರದಲ್ಲಿ ಯಾವ ಬೇಡಿಕೆಯನ್ನೂ ಸಲ್ಲಿಸದಿದ್ದುದ್ದು ಯಾಕೋ ನೆನಪಾಯಿತು.
(ಕೃಪೆ: ತುಂಬೆ ಹೂವು, ಸಂ: ಡಾ. ಕರೀಗೌಡ ಬೀಚನಹಳ್ಳಿ, ಪ್ರ: ಕಿರಂ ಪ್ರಕಾಶನ, ಬೆಂಗಳೂರು)

ಅಗ್ರಹಾರ ಕೃಷ್ಣಮೂರ್ತಿ(1953): ತಾಯಿಯ ತವರೂರಾದ ಹಾರೋಹಳ್ಳಿಯಲ್ಲಿ 1953ರಲ್ಲಿ ಜನಿಸಿದ ಇವರು, ಜೆಟ್ಟಿ ಸಮುದಾಯಕ್ಕೆ ಸೇರಿದವರು. ಸ್ಕೂಲ್ ಮಾಸ್ಟರ್ ಆಗಿದ್ದ ತಂದೆಯವರ ಊರಾದ ಕೊರಟಗೆರೆಯ ಜೆಟ್ಟಿ ಅಗ್ರಹಾರವನ್ನು ತಮ್ಮ ಹೆಸರಿನೊಂದಿಗೆ ಜೋಡಿಸಿಕೊಂಡವರು. ಕುಣಿಗಲ್, ತುಮಕೂರುಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ, ಜ್ಞಾನಭಾರತಿಯಿಂದ ಕನ್ನಡ ಸಾಹಿತ್ಯದಲ್ಲಿ ಎಂಎ ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಪ್ರಗತಿಪರ ಚಿಂತನೆ, ಜಾತ್ಯತೀತ ನಿಲುವು, ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡವರು. ಬೂಸಾ ಚಳವಳಿ, ಪೆರಿಯಾರ್ ವಿಚಾರಧಾರೆ, ಜಾತಿ ವಿನಾಶ ಚಳವಳಿ, ಕಾರ್ಮಿಕ ಹೋರಾಟಗಳು, ತುರ್ತು ಪರಿಸ್ಥಿತಿ ವಿರೋಧ, ಸಮಾಜವಾದಿ ಯುವಜನ ಸಭಾ, ಜೆಪಿ ಚಳವಳಿಗಳಲ್ಲಿ ಭಾಗಿಯಾದವರು. ಬನಾರಸ್ ಹಿಂದೂ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಂಶೋಧನೆ. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಭಾರತ ಸರ್ಕಾರದ ಆಕಾಶವಾಣಿಯಲ್ಲಿ ಪ್ರೋಗ್ರಾಂ ಎಕ್ಸಿಕ್ಯುಟಿವ್ ಆಫೀಸರ್ ಆಗಿ ಸೇವೆ. ಅಲ್ಲಿಂದ ದೆಹಲಿಯ ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಉಪಕಾರ್ಯದರ್ಶಿಯಾಗಿ, ತರುವಾಯ ಕಾರ್ಯದರ್ಶಿಯಾಗಿ ಸೇವೆ. ಆ ಸಂದರ್ಭದಲ್ಲಿ ದೇಶದ ಹಲವಾರು ಭಾಷೆಗಳನ್ನು, ಆ ಭಾಷೆಗಳ ವೈವಿಧ್ಯಮಯ ಸಾಹಿತ್ಯವನ್ನು ಸವಿದವರು. ಸೃಜನಶೀಲ ಸಾಹಿತಿಗಳನ್ನು ಗುರುತಿಸುವ, ಪ್ರಶಸ್ತಿ ನೀಡಿ ಪುರಸ್ಕರಿಸುವ, ಪ್ರಾದೇಶಿಕ ಭಾಷೆಗಳ ಬನಿಯನ್ನು ವಿಶ್ವದಾದ್ಯಂತ ವಿಸ್ತರಿಸುವ ಕೆಲಸವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಕನ್ನಡಕ್ಕೆ ಹೆಸರು ತಂದುಕೊಟ್ಟವರು. ಪ್ರಕಟಿತ ಕೃತಿಗಳು: ಬೆಳ್ದಿಂಗ್ಳಪ್ಪನ ಪೂಜೆ(ಜಾನಪದ), ನೀರು ಮತ್ತು ಪ್ರೀತಿ(ಕಾದಂಬರಿ), ಧ್ಯಾನ(ಕವನ ಸಂಕಲನ), ದಾರಶಿಖೋ, ರೆಕ್ಕೆಯಿಲ್ಲದ ಹಕ್ಕಿ(ಅನುವಾದ), ನಾಡವರ್ಗಳ್(ವ್ಯಕ್ತಿಚಿತ್ರ), ಬಹುವಚನ, ಜೀನ್ಸ್ ಪ್ಯಾಂಟ್-ಖಾದಿ ಷರ್ಟ್(ಅಂಕಣ ಬರಹ), ಕಾಲ್ದಾರಿ(ವಿಮರ್ಶೆ), ವಿಮೋಚನೆಯ ಹರಿಕಾರ(ಬಾಬು ಜಗಜೀವನ ರಾಮ್), ಸಾಂಗತ್ಯ (ಡಾ. ಕರೀಗೌಡ ಬೀಚನಹಳ್ಳಿ), ಸಂಸ್ಕೃತಿ ಚಿಂತನೆ (ಡಾ. ಡಿ.ಆರ್. ನಾಗರಾಜ್)(ಸಂಪಾದನೆ). ಇವರ ಕವಿತೆಗಳು ಇಂಗ್ಲಿಷ್ ಮತ್ತು ಸ್ವೀಡಿಷ್ ಭಾಷೆಗೆ ಅನುವಾದವಾಗಿದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ದೆಹಲಿ ಕನ್ನಡಿಗರ ಪ್ರಶಸ್ತಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ, ಕಿ.ರಂ. ಸಂಸ್ಕೃತಿ ಪ್ರಶಸ್ತಿಗಳು ದೊರೆತಿವೆ. ಸೇವೆಯಿಂದ ನಿವೃತ್ತರಾಗಿ, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.




