ಭಾರತ ಮಾತ್ರವಲ್ಲ, ಯಾವುದೇ ರಾಷ್ಟ್ರದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸುವ ಸರ್ಕಾರಗಳಿಗೆ ಆರಂಭದ ವರ್ಷಗಳಲ್ಲಿ ಭವ್ಯ ಯಶಸ್ಸು, ಗರಿಷ್ಠ ಜನಪ್ರಿಯತೆ ಹಾಗೂ ವಿರೋಧ ರಹಿತ ವಾತಾವರಣ ಇರುವುದು ಸಾಮಾನ್ಯ. ಆದರೆ, ಒಂದು ದಶಕದ ಆಡಳಿತದ ನಂತರ, ಜಾಗತಿಕ ಮತ್ತು ದೇಶೀಯ ವಿದ್ಯಮಾನಗಳು ಕೈಮೀರಿದಾಗ ಆಡಳಿತಾತ್ಮಕ ದೌರ್ಬಲ್ಯಗಳು ಎದ್ದು ಕಾಣತೊಡಗುತ್ತವೆ. ನಿಯಂತ್ರಣ ತಪ್ಪಿ ಕೆಳಕ್ಕೆ ಜಾರುವ (on the skids) ಹಂತಕ್ಕೆ ದೀರ್ಘಾವಧಿ ಸರ್ಕಾರಗಳು ತಲುಪುವುದು ರಾಜಕೀಯ ಇತಿಹಾಸದಲ್ಲಿ ಬೆಳೆದುಬಂದಿದೆ. ಇದು, ವಾಡಿಕೆಯಂತೆಯೂ ಕಾಣುತ್ತದೆ. ಭಾರತದಲ್ಲಿ ಕಳೆದ 12 ವರ್ಷಗಳಿಂದ ನಿರಂತರವಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಸ್ತುತ ಅಂತಹದೇ ಒಂದು ಕಠಿಣ ಮತ್ತು ಅತ್ಯಂತ ಸಂಕೀರ್ಣ ಸವಾಲನ್ನು ಎದುರಿಸುತ್ತಿದೆ. ಅಂತಹ ಸಂದಿಗ್ಧತೆ ಇಲ್ಲವೆಂದು ಬಿಜೆಪಿಗರು ತೇವೆ ಸವರಲು ಯತ್ನಿಸಿದರೂ, ನೆಲದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ.
ಕಳೆದ ಹಣಕಾಸು ವರ್ಷದ (2025-26) ಅಂತಿಮ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 7.8%ರಷ್ಟು ಆರೋಗ್ಯಕರ ವೇಗವನ್ನು ದಾಖಲಿಸಿತ್ತು. ಪೂರ್ಣ ವರ್ಷದ ಬೆಳವಣಿಗೆ 7.7% ಇದೆ ಎಂದು ಸರ್ಕಾರ ಹೇಳಿಕೊಂಡಿತು. ಈ ಆರ್ಥಿಕ ಬೆಳವಣಿಗೆಯು ಮೇಲ್ನೋಟಕ್ಕೆ ಆಶಾದಾಯಕವಾಗಿ ಕಾಣಬಹುದು. ಆದರೆ, ಈ ಆರ್ಥಿಕ ಪ್ರಗತಿಯು ಮುಖ್ಯವಾಗಿ ಸೇವಾ ವಲಯದ ಬಲದ ಮೇಲೆ ನಿಂತಿತ್ತೇ ಹೊರತು ದೇಶದ ನೈಜ ಆರ್ಥಿಕತೆಯನ್ನು ತೋರಿಸಿರಲಿಲ್ಲ. ಆರ್ಥಿಕತೆಯ ನೈಜ ಪರಿಸ್ಥಿತಿಯನ್ನು ಬಿಂಬಿಸುವ ‘Nominal’ ಜಿಡಿಪಿ ಬೆಳವಣಿಗೆಯು 8.9%ಗೆ ಕುಸಿದಿದೆ. ಇದು ಕೇಂದ್ರ ಬಜೆಟ್ನಲ್ಲಿ ಅಂದಾಜಿಸಲಾಗಿದ್ದ 10.1%ಗಿಂತ ಗಣನೀಯವಾಗಿ ಕಡಿಮೆ ಇದೆ.
ಈ ಆರ್ಥಿಕ ಮಂದಗತಿಯ ಮುನ್ಸೂಚನೆಯ ಬೆನ್ನಲ್ಲೇ, ಪ್ರಸಕ್ತ ಹಣಕಾಸು ವರ್ಷದಲ್ಲಿ (2026-27) ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕ ಬೆಳವಣಿಗೆಯ ದರವನ್ನು 6.6%ಗೆ ಇಳಿಸಿದೆ. ಈ ಆರ್ಥಿಕ ಇಕ್ಕಟ್ಟಿಗೆ ಕೇವಲ ದೇಶೀಯ ಕಾರಣಗಳಷ್ಟೇ ಅಲ್ಲದೆ, ಜಾಗತಿಕ ರಾಜಕಾರಣದ ದಿಢೀರ್ ಬದಲಾವಣೆಗಳು ಮತ್ತು ಅನಿರೀಕ್ಷಿತ ಅಂತರರಾಷ್ಟ್ರೀಯ ಬಿಕ್ಕಟ್ಟುಗಳು ಪ್ರಮುಖ ಕಾರಣವಾಗಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಸುಂಕ ನೀತಿಗಳು ಭಾರತೀಯ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿವೆ. ಪಾಕಿಸ್ತಾನದೊಂದಿಗಿನ ಅಲ್ಪಾವಧಿಯ ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತವು ತಮಗೆ ಯಾವುದೇ ರಾಜಕೀಯ ಕ್ರೆಡಿಟ್ ನೀಡುತ್ತಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡ ಟ್ರಂಪ್, ದಿಢೀರನೆ ಭಾರತದ ವಿರುದ್ಧ ಆರ್ಥಿಕ ಅಸ್ತ್ರ ಪ್ರಯೋಗಿಸಿದ್ದರು. ಭಾರತೀಯ ರಫ್ತುಗಳ ಮೇಲೆ ವಿವೇಚನಾ ರಹಿತವಾಗಿ ಸುಂಕಗಳನ್ನು ಹೆಚ್ಚಿಸಿರುವುದು ಒಮ್ಮೆಗೆ ಭಾರತದ ಆಡಳಿತ ವ್ಯವಸ್ಥೆಯನ್ನು ಆಘಾತಕ್ಕೀಡು ಮಾಡಿದೆ.
ಇದರ ಬೆನ್ನಲ್ಲೇ ಜಗತ್ತನ್ನು ಆವರಿಸಿದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಮಧ್ಯಪ್ರಾಚ್ಯ ಯುದ್ಧವು ಜಾಗತಿಕ ಇಂಧನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ಕೊರತೆಯು ಭಾರತದಂತಹ ಇಂಧನ ಆಮದು ಅವಲಂಬಿತ ದೇಶದ ಬೆನ್ನುಮೂಳೆಗೆ ಪೆಟ್ಟು ನೀಡಿದೆ. ಈ ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಟ್ರಂಪ್ ಸುಂಕಗಳ ಜಂಟಿ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಬಂಡವಾಳವು ಭಾರೀ ಪ್ರಮಾಣದಲ್ಲಿ ಹೊರಹೋಗುತ್ತಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 25 ಶತಕೋಟಿ ಡಾಲರ್ ಮೊತ್ತದ ವಿದೇಶಿ ಹೂಡಿಕೆಯು ಭಾರತದಿಂದ ವಾಪಸ್ ಹೋಗಿದೆ (ಹಿಂಪಡೆಯಲಾಗಿದೆ). ಇದು ಭಾರತೀಯ ರೂಪಾಯಿ ಮೌಲ್ಯವನ್ನು ತೀವ್ರವಾಗಿ ಕುಸಿಯುವಂತೆ ಮಾಡಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು 10%ಗಿಂತಲೂ ಹೆಚ್ಚು ಅಪಮೂಲ್ಯಗೊಂಡಿದೆ. ಇದನ್ನು ನಿಯಂತ್ರಿಸಲು ಮತ್ತು ಮಾರುಕಟ್ಟೆಯ ಅಸ್ಥಿರತೆಯನ್ನು ತಡೆಯಲು ರಿಸರ್ವ್ ಬ್ಯಾಂಕ್ ಹರಸಾಹಸ ಪಡುತ್ತಿದೆ. ಈ ಪರಿಸ್ಥಿತಿಯು 1990ರ ಭೀಕರ ಆರ್ಥಿಕ ಬಿಕ್ಕಟ್ಟು ಮತ್ತು 2013ರ ಆರ್ಥಿಕ ಮಂದಗತಿಯ ದಿನಗಳನ್ನು ನೆನಪಿಸುವಂತಿದೆ.
ಗಮನಾರ್ಹವಾಗಿ, ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರವು ವಿದೇಶಿ ಬಂಡವಾಳದ ಮೇಲಿನ ನಿಯಮಗಳನ್ನು ಸಡಿಲಗೊಳಿಸುತ್ತಿರುವುದು ಮತ್ತು ವಿನಾಯಿತಿಗಳನ್ನು ನೀಡುತ್ತಿರುವುದು ಈ ಇಕ್ಕಟ್ಟಿನ ಸ್ಥಿತಿಗೆ ಸಾಕ್ಷಿಯಾಗಿದೆ. ದೇಶದ ಒಳಗೆ ಇಷ್ಟೆಲ್ಲ ಆರ್ಥಿಕ ಯಾತನೆಗಳು ಇರುವಾಗಲೇ, ಪ್ರಕೃತಿಯೂ ಸಹ ಸರ್ಕಾರಕ್ಕೆ ಸಾಥ್ ನೀಡುತ್ತಿಲ್ಲ. ಈ ವರ್ಷದ ಮುಂಗಾರು ಮಾರುತಗಳು ದುರ್ಬಲವಾಗಿರುವ ಮುನ್ಸೂಚನೆ ಇದೆ. ಜೊತೆಗೆ, ‘ಎಲ್ ನಿನೊ’ ಪ್ರಭಾವ ತೀವ್ರಗೊಳ್ಳುತ್ತಿದೆ. ಈ ಹವಾಮಾನ ವೈಪರಿತ್ಯವು ಗ್ರಾಮೀಣ ಆರ್ಥಿಕತೆಯ ಮೇಲೆ ಜ್ವಾಲಾಮುಖಿಯಂತೆ ಪರಿಣಮಿಸಿದೆ. ರಸಗೊಬ್ಬರ, ಕೃಷಿ ಪರಿಕರಗಳು ಹಾಗೂ ಇಂಧನದ ತೀವ್ರ ಕೊರತೆಯು ದೇಶದಲ್ಲಿ ಭಾರೀ ಪ್ರಮಾಣದ ಹಣಕಾಸು ಯಾತನೆ ಮತ್ತು ಅಗತ್ಯ ವಸ್ತುಗಳ ಅಭೂತಪೂರ್ವ ಬೆಲೆ ಏರಿಕೆಗೆ ದಾರಿ ಮಾಡಿಕೊಡುತ್ತಿದೆ.
ಇಂತಹ ಆರ್ಥಿಕ ಸಂಕಷ್ಟಗಳು ಮತ್ತು ದೈನಂದಿನ ಜೀವನದ ಯಾತನೆಗಳು ಸಾರ್ವಜನಿಕರ ತಳ್ಮೆಯನ್ನು ಪರೀಕ್ಷಿಸುತ್ತಿವೆ. ದೀರ್ಘಕಾಲದಿಂದ ದೇಶವನ್ನು ಆಳುತ್ತಿರುವ ಸರ್ಕಾರದ ಮೇಲಿನ ಜನರ ಆಕ್ರೋಶವನ್ನು ಇಮ್ಮಡಿಗೊಳಿಸುತ್ತಿವೆ. ಜನರು ಆರ್ಥಿಕವಾಗಿ ಕಂಗೆಟ್ಟಾಗ ಆಡಳಿತಾರೂಢ ನಾಯಕರ ಭಾಷಣಗಳು ಅಥವಾ ಭರವಸೆಗಳು ಕೆಲಸ ಮಾಡುವುದಿಲ್ಲ. ಇತ್ತೀಚೆಗಷ್ಟೇ ಪ್ರಾದೇಶಿಕ ಮಟ್ಟದಲ್ಲಿ ತಮಿಳುನಾಡಿನ ಡಿಎಂಕೆ ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷಗಳು ಇಂತಹದೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಿದ್ದವು. ಅದನ್ನು ಬಳಸಿಕೊಂಡು ಎಸ್ಐಆರ್ ಕೃತ್ಯಗಳ ಮೂಲಕ ಸರ್ಕಾರಗಳು ಬದಲಾಗುವಂತೆ ಬಿಜೆಪಿ ಮಾಡಿತು. ಆದರೆ, ಕೇಂದ್ರದಲ್ಲಿ ಬಿಜೆಪಿಗೆ ಅಂತಹ ಅವಕಾಶವಿಲ್ಲ. ಯಾಕೆಂದರೆ, ಅಧಿಕಾರದಲ್ಲಿರುವುದೇ ಬಿಜೆಪಿ.
ಈ ಲೇಖನ ಓದಿದ್ದೀರಾ?: ಬಂಗಾರ ಸಾಮ್ರಾಜ್ಯ ಪತನ: ರಾಜೇಶ್ ಎಕ್ಸ್ಪೋರ್ಟ್ಸ್ನ 15.15 ಲಕ್ಷ ಕೋಟಿ ರೂ. ಮಹಾ ಹಗರಣ
ಸಾರ್ವಜನಿಕರಲ್ಲಿ ಆಡಳಿತದ ಮೇಲಿನ ಬೇಸರ ಅಥವಾ ಸಿಟ್ಟು ತಕ್ಷಣಕ್ಕೆ ಸ್ಫೋಟಗೊಳ್ಳುವುದಿಲ್ಲ; ಅದು ನಿಧಾನವಾಗಿ ಜನರ ಮನಸ್ಸಿನಲ್ಲಿ ನೆನೆಯುತ್ತಾ ಹೋಗಿ, ಅಂತಿಮವಾಗಿ ಚುನಾವಣೆಯ ಸಮಯದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸುತ್ತದೆ. ಭಾರತದ ರಾಜಕೀಯ ಇತಿಹಾಸವನ್ನು ತಿರುವಿ ಹಾಕಿದರೆ, ಇಂದಿರಾ ಗಾಂಧಿ ಅಥವಾ ರಾಜೀವ್ ಗಾಂಧಿಯವರಂತಹ ಅತ್ಯಂತ ಪ್ರಭಾವಶಾಲಿ, ಜನಪ್ರಿಯ ಹಾಗೂ ಸರ್ವಶಕ್ತ ನಾಯಕರೂ ಸಹ ಸಾರ್ವಜನಿಕರ ಆಕ್ರೋಶ/ಅಸಮಾಧಾನಕ್ಕೆ ತುತ್ತಾಗಿ, ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸಿ ಧೂಳೀಪಟವಾಗಿದ್ದಾರೆ. 1964 – ನೆಹರೂ ಅವರ ನಿಧನರಾದ ಸಮಯದಲ್ಲಿ ಕಾಂಗ್ರೆಸ್ ಪ್ರಬಲವಾಗಿತ್ತಾದರೂ, 1967ರ ಚುನಾವಣೆಯಲ್ಲಿ ಬಹುತೇಕ ರಾಜ್ಯಗಳನ್ನು ಕಳೆದುಕೊಂಡಿತು. ಹಾಗೆಯೇ, 2011ರ ಹೊತ್ತಿಗೆ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರು, 2014ರಲ್ಲಿ ಅತಿರಥ ಮಹಾರಥರಿದ್ದ ಕಾಂಗ್ರೆಸ್ ಪಕ್ಷವನ್ನು ಕೇವಲ 44 ಸ್ಥಾನಗಳಿಗೆ ಕುಸಿಯುವಂತೆ ಮಾಡಿದರು.
ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳನ್ನು ಹೊಂದಿದೆ. ನಿರಂತರವಾಗಿ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದ ಆಸರೆಯಲ್ಲಿದೆ. ಈ ಬಿಜೆಪಿಗೆ ಮುಂಬರುವ ದಿನಗಳಲ್ಲಿ ಜನಸಾಮಾನ್ಯರ ಆರ್ಥಿಕ ನೋವು ದೊಡ್ಡ ಸವಾಲಾಗಲಿದೆ. ವಿರೋಧ ಪಕ್ಷಗಳು ಪ್ರಬಲವಾಗಿಲ್ಲ ಎಂದೋ, ದೇಶದಲ್ಲಿ ತಮಗೆ ಸದ್ಯಕ್ಕೆ ಪರ್ಯಾಯ ಇಲ್ಲ ಎಂದೋ ಅಥವಾ ಸಾಂಪ್ರದಾಯಿಕ ಹಿಂದುತ್ವದ ಮತಬ್ಯಾಂಕ್ ಇದೆ ಎಂದೋ ಅತಿಯಾದ ಆತ್ಮವಿಶ್ವಾಸ ಹೊಂದುವುದು ಮೋದಿ ಮತ್ತು ಅವರ ಪಕ್ಷಕ್ಕೆ ಸ್ವಯಂಘೋಷಿತ ಅಪಾಯವನ್ನು ತಂದೊಡ್ಡತ್ತದೆ.
ಏಕೆಂದರೆ, ಮತದಾರರು ಒಂದು ಸರ್ಕಾರದ ಹಳೆಯ ಮುಖಗಳಿಂದ, ದಿನನಿತ್ಯದ ಭಾಷಣಗಳಿಂದ ಬೇಸತ್ತಾಗ ಹಾಗೂ ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿದಾಗ, ಅವರು ಸರ್ಕಾರದ ವಿರುದ್ಧ ಮತ ಚಲಾಯಿಸುತ್ತಾರೆ ಮತ್ತು ಇರುವ ಪರ್ಯಾಯವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸಾರ್ವಜನಿಕರಲ್ಲಿನ ಈ ಅತೃಪ್ತಿ ಮತ್ತು ಆಕ್ರೋಶವೇ ಹೊಸ ರಾಜಕೀಯ ಶಕ್ತಿಗಳ ಉದಯಕ್ಕೂ ಕಾರಣವಾಗುತ್ತದೆ. ಪ್ರಸ್ತುತ ರಾಜಕೀಯ ರಂಗದಲ್ಲಿ ರಾಷ್ಟ್ರಮಟ್ಟಕ್ಕೆ ಬೆಳೆಯಲು ಯತ್ನಿಸುತ್ತಿರುವ ಆಮ್ ಆದ್ಮಿ ಪಾರ್ಟಿ (AAP) ಅಥವಾ ದಕ್ಷಿಣದಲ್ಲಿ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ನಟ ವಿಜಯ್ ಅವರ ಟಿವಿಕೆಯಂತಹ ಹೊಸ ಶಕ್ತಿಗಳು ಇಂತಹ ಅತೃಪ್ತ ಮತದಾರರಿಗೆ ಸುಲಭ ಪರ್ಯಾಯವಾಗಿ ಕಾಣ ಸಿಗುತ್ತವೆ.
ಹನ್ನೆರಡು ವರ್ಷಗಳ ಸುದೀರ್ಘ ಆಡಳಿತದ ನಂತರ ಮೋದಿ ಸರ್ಕಾರವು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಬಳಲಿಕೆ, ನವೀನತೆಯ ಕೊರತೆ ಹಾಗೂ ನಿರಾಸಕ್ತಿಯನ್ನು ಎದುರಿಸುತ್ತಿದೆ. ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆಡಳಿತದ ಕೊನೆಯ ಹಂತದಲ್ಲಿ ಸಚಿವರು ಮತ್ತು ಅಧಿಕಾರಿಗಳಲ್ಲೇ ಒಂದು ರೀತಿಯ ಆಯಾಸ ಕಾಣಿಸಿಕೊಳ್ಳುತ್ತದೆ. ಇದು ದೇಶದ ಪ್ರಗತಿಯ ವೇಗವನ್ನು ಕುಂಠಿತಗೊಳಿಸುತ್ತದೆ.
ಮುಂಬರುವ ದಿನಗಳಲ್ಲಿ ಹಣದುಬ್ಬರ, ಜಾಗತಿಕ ಇಂಧನ ಬಿಕ್ಕಟ್ಟು, ಅಮೆರಿಕದ ಆರ್ಥಿಕ ನಿರ್ಬಂಧಗಳು ಹಾಗೂ ಮುಂಗಾರು ವೈಫಲ್ಯದಂತಹ ಗಂಭೀರ ಸವಾಲುಗಳು ಸರ್ಕಾರದ ಮುಂದಿವೆ. ಈ ಬಿಕ್ಕಟ್ಟುಗಳನ್ನು ಸರ್ಕಾರವು ಅತ್ಯಂತ ಸೂಕ್ಷ್ಮ ಹಾಗೂ ಕಟು ವಾಸ್ತವ ಆಧಾರಿತ ಜನಪರ ನೀತಿಗಳ ಮೂಲಕ ನಿಭಾಯಿಸಬೇಕು. ಇಲ್ಲದಿದ್ದರೆ, ಜನಸಾಮಾನ್ಯರು ಬದಲಾವಣೆಯನ್ನು ಬಯಸಿ ಪರ್ಯಾಯ ರಾಜಕೀಯ ಶಕ್ತಿಗಳಿಗೆ ಮಣೆ ಹಾಕುವುದು ಅನಿವಾರ್ಯವಾಗಲಿದೆ. ಆರ್ಥಿಕ ಯಾತನೆ ಮಿತಿಮೀರಿದಾಗ ಮತದಾರರು ಹಳೆಯ ಮೈತ್ರಿಗಳನ್ನು ಮುರಿದು ಹೊಸ ಪ್ರಯೋಗಗಳಿಗೆ ಕೈಹಾಕುತ್ತಾರೆ. ಈ ಎಲ್ಲ ಲಕ್ಷಣಗಳು ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ಆಡಳಿತಾವಧಿಗೆ ನಿಜಕ್ಕೂ ಅತ್ಯಂತ ಕಠಿಣ ಮತ್ತು ಕೆಟ್ಟ ದಿನಗಳು ಎದುರಾಗಲಿವೆ ಎಂಬ ಕಹಿ ರಾಜಕೀಯ ಸತ್ಯವನ್ನು ಸಾರುತ್ತಿವೆ.




